ಮುಗಿದ ಪ್ರಜಾತಂತ್ರದ ಹಬ್ಬ

Team Udayavani, May 20, 2019, 6:58 AM IST

ಏಳನೇ ಸುತ್ತಿನ ಮತದಾನ ಪ್ರಕ್ರಿಯೆ ಮುಕ್ತಾಯವಾಗುವುದರೊಂದಿಗೆ ಸುದೀರ್ಘ‌ ಮೂರು ತಿಂಗಳ ಕಾಲ ನಡೆದ ಪ್ರಜಾತಂತ್ರದ ಹಬ್ಬ ಒಂದು ಮುಖ್ಯ ಭಾಗಕ್ಕೆ ಬಿದ್ದಂತಾಗಿದೆ. ಮೇ 23ಕ್ಕೆ ಫ‌ಲಿತಾಂಶ ಪ್ರಕಟವಾಗುವುದರೊಂದಿಗೆ ಮುಂದಿನ ಐದು ವರ್ಷದ ಅವಧಿಗೆ ನಮ್ಮನ್ನಾಳುವವರು ಯಾರು ಎಂದು ತಿಳಿಯಲಿದೆ. ಕಾಲಕಾಲಕ್ಕೆ ಚುನಾವಣೆ ನಡೆಯುವುದು ಪ್ರಜಾತಂತ್ರದ ಮೂಲತತ್ವ. ಸ್ವಾತಂತ್ರ್ಯ ಬಂದಾಗಿನಿಂದ ದೇಶದಲ್ಲಿ ಚುನಾವಣೆಗಳು ನಿಗದಿತವಾಗಿ ನಡೆದುಕೊಂಡು ಬಂದಿವೆ. ಸರ್ಕಾರಗಳು ಬಂದಿವೆ, ಹೋಗಿವೆ. ಅಧಿಕಾರ ಹಸ್ತಾಂತರವಾಗಿದೆ. ಹೀಗೆ ಪ್ರಜಾತಂತ್ರ ಜೀವಂತವಾಗಿ ಉಳಿದಿದೆ. ಆದರೆ ಅದು ಆರೋಗ್ಯಕರವಾಗಿ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಲು ತಡವರಿಸಬೇಕಾಗುತ್ತದೆ. ಚುನಾವಣೆಯಿಂದ ಚುನಾವಣೆಗೆ ದೇಶದ ಪ್ರಜಾತಂತ್ರದ ಆರೋಗ್ಯ ಹದಗೆಡುತ್ತಿರುವುದನ್ನು ನಾವು ಕಾಣುತ್ತಿದ್ದೇವೆ.

ಈ ಸಲದ ಚುನಾವಣೆ ನಕರಾತ್ಮಕತೆಯ ಪರಮಾವಧಿಯನ್ನು ತಲುಪಿತು. ಚುನಾವಣಾ ಕಣದಲ್ಲಿ ಸಾಕಷ್ಟು ರಾಜಕೀಯ ಪಕ್ಷಗಳಿದ್ದವು, ಧಾರಾಳ ಅಭ್ಯರ್ಥಿಗಳಿದ್ದರು. ಭರಪೂರ ರ್ಯಾಲಿಗಳು, ರೋಡ್‌ಶೋಗಳನ್ನು ನಡೆಸಲಾಯಿತು. ಅಪಾರ ಪ್ರಮಾಣದ ಹಣ ಹರಿಯಿತು. ಟೀಕೆ, ನಿಂದನೆಗಳು ಎಲ್ಲೆಯಿಲ್ಲದಾಯಿತು. ಇಲ್ಲದೆ ಹೋದದ್ದು ನೀತಿಗಳು ಮತ್ತು ಆರೋಗ್ಯಪೂರ್ಣ ಚರ್ಚೆ. ಯಾವ ರಾಜಕೀಯ ಪಕ್ಷಕ್ಕೂ ಮತ್ತು ಅಭ್ಯರ್ಥಿಗೂ ಪ್ರಜಾತಂತ್ರದ ಜೀವಾಳವಾಗಿರುವ ಚರ್ಚೆ ಮತ್ತು ತತ್ವಗಳು ಮುಖ್ಯ ಎಂದು ಅನ್ನಿಸದೆ ಇರುವುದೇ ನಮ್ಮ ಪ್ರಜಾಪ್ರಭುತ್ವದ ಆರೋಗ್ಯ ಹದಗೆಡುತ್ತಿರುವುದರ ಲಕ್ಷಣ. ಚರ್ಚೆಗಳ ಬದಲು ಬೈದಾಡಿಕೊಂಡರು, ತತ್ವಗಳನ್ನು ಪ್ರತಿಪಾದಿಸುವ ಬದಲು ವೈಯಕ್ತಿಕ ವಿಚಾರಗಳನ್ನೆತ್ತಿ ಕಾಲೆಳೆದರು, ಸಾಧನೆಗಳನ್ನು ಹೇಳಿಕೊಳ್ಳುವ ಬದಲು ಎದುರಾಳಿಗಳ ವೈಫ‌ಲ್ಯಗಳನ್ನು ವೈಭವೀಕರಿಸಿದರು. ಐತಿಹಾಸಿಕ ,ಪೌರಾಣಿಕ ಪುರುಷರು, ಸೇನೆ, ದೇಶಪ್ರೇಮವೆಲ್ಲ ಚುನಾವಣಾ ವಿಷಯಗಳಾದವು. ಸಾರ್ವಜನಿಕ ಚರ್ಚೆ ಹಳಿ ತಪ್ಪಿದಾಗಲೆಲ್ಲ ಸರ್ವೋಚ್ಚ ನ್ಯಾಯಾಲಯ ಮಧ್ಯ ಪ್ರವೇಶ ಮಾಡಿ ಎಚ್ಚರಿಕೆ ನೀಡಬೇಕಾಯಿತು. ಹೀಗೆ ಪ್ರಜಾಪ್ರಭುತ್ವ ವಿರುದ್ಧ ದಿಕ್ಕಿನಲ್ಲಿ ಚಲಿಸುವಂತೆ ಮಾಡಿದ ಎಲ್ಲ ಕೀರ್ತಿ ನಮ್ಮ ನಾಯಕರಿಗೆ ಸಲ್ಲುತ್ತದೆ.

ಎಲ್ಲ ಚುನಾವಣೆಗಳಂತೆ ಈ ಚುನಾವಣೆಯಲ್ಲೂ ಹಣ ಮತ್ತು ಹೆಂಡದ ಹೊಳೆ ಹರಿದಿದ್ದರೂ ಅದರ ಅಬ್ಬರ ಹಿಂದಿನ ಚುನಾವಣೆಗಳಷ್ಟು ಇರಲಿಲ್ಲ ಎನ್ನುವುದು ಗಮನಾರ್ಹವಾದ ಅಂಶ. ಚುನಾವಣಾ ಆಯೋಗದ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ದೇಶದ ಬಹುತೇಕ ರಾಜ್ಯಗಳಲ್ಲಿ ಎಲ್ಲ ಏಳು ಹಂತಗಳಲ್ಲಿ ಶಾಂತಿಯುತ ಮತದಾನ ನಡೆದಿದೆ. ಈ ಮಟ್ಟಿಗೆ ದೇಶದ ಮತದಾರರು ಪ್ರಬುದ್ಧರಾಗಿರುವಂತೆ ಕಂಡು ಬಂದರು. ಹಿಂದಿನಂತೆ ಮತಗಟ್ಟೆ ವಶೀಕರಣ, ಗೂಂಡಾಗಿರಿ ಇತ್ಯಾದಿಗಳು ಇರಲಿಲ್ಲ. ಆದರೆ ಇದಕ್ಕೊಂದು ಅಪವಾದ ಪಶ್ಚಿಮ ಬಂಗಾಳ. ಇಲ್ಲಿ ನಡೆದ ಏಳು ಹಂತಗಳ ಮತದಾನದಲ್ಲೂ ಹಿಂಸಾಚಾರ ತಾಂಡವವಾಡಿದೆ. ರಕ್ತಪಾತವಿಲ್ಲದೆ ಒಂದೇ ಒಂದು ಮತದಾನ ನಡೆಯಲಿಲ್ಲ. ಶಾಂತಿಯುತ ಮತದಾನ ವಿಚಾರದಲ್ಲಿ ಇಡೀ ದೇಶ ಮುಂದಕ್ಕೆ ಹೋಗಿದ್ದರೆ ಪಶ್ಚಿಮ ಬಂಗಾಳ ಮಾತ್ರ ಹಿಮ್ಮುಖವಾಗಿ ಚಲಿಸಿರುವುದು ಆಘಾತಕಾರಿ ವಿಷಯ. 15-20 ವರ್ಷಗಳ ಹಿಂದೆ ಬಿಹಾರ, ಉತ್ತರ ಪ್ರದೇಶಗಳಲ್ಲಿ ಕಾಣಸಿಗುತ್ತಿದ್ದ ದೃಶ್ಯ ಈ ಸಲ ಪಶ್ಚಿಮ ಬಂಗಾಳದಲ್ಲಿ ಕಾಣಸಿಕ್ಕಿದೆ. ಇಡೀ ಚುನಾವಣಾ ಪ್ರಕ್ರಿಯೆಯಲ್ಲಿ ಪಶ್ಚಿಮ ಬಂಗಾಳವೊಂದು ಕಪ್ಪುಚುಕ್ಕೆಯಾಯಿತು. ಇದಕ್ಕೆ ಹೊಣೆ ಯಾರೇ ಆಗಿರಬಹುದು. ಆದರೆ ಪರಿಸ್ಥಿತಿ ಇಷ್ಟು ಹದಗೆಡಲು ಏನು ಕಾರಣ ಎಂದು ಆತ್ಮವಲೋಕನ ಮಾಡಿಕೊಳ್ಳುವ ಅಗತ್ಯವಿದೆ.

ಸ್ವಾಯತ್ತ ಸಂಸ್ಥೆಯಾಗಿರುವ ಚುನಾವಣಾ ಆಯೋಗ ನಿಷ್ಪಕ್ಷಪಾತವಾಗಿ ನಡೆದುಕೊಂಡರೂ ಅದರ ಒಂದೆರಡು ತೀರ್ಮಾಗಳು ವಿವಾದಕ್ಕೆಡೆಯಾಯಿತು. ಪ್ರಧಾನಿ ಮೋದಿಗೆ ಕ್ಲೀನ್‌ಚಿಟ್‌ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಅನುಮಾನಗಳು ಎದ್ದಿವೆ. ಅಂತೆಯೇ ಕಡೇ ಕ್ಷಣಗಳಲ್ಲಿ ಆಯೋಗದೊಳಗೆ ಎದ್ದ ಅಪಸ್ವರ ಗಂಭೀರವಾದ ವಿಚಾರ. ಪ್ರಜಾಪ್ರಭುತ್ವ ಆರೋಗ್ಯಕರವಾಗಿ ಇರಬೇಕಾದರೆ ಚುನಾವಣೆ ನಡೆಸುವ ಜವಾಬ್ದಾರಿ ಹೊಂದಿರುವ ವ್ಯವಸ್ಥೆ ನಿಷ್ಕಳಂಕವಾಗಿರುವುದು ಅಗತ್ಯ. ಈ ನಿಟ್ಟಿನಲ್ಲಿ ಆಯೋಗ ತನ್ನನ್ನು ತಾನು ಸುಧಾರಿಸಿಕೊಳ್ಳುವ ಅಗತ್ಯವಿದೆ. ಯಾರೇ ಗೆದ್ದರೂ ಆ ಗೆಲುವು ಪ್ರಾಮಾಣಿಕವಾಗಿರಲಿಲ್ಲ ಎಂಬ ಭಾವನೆ ಮತದಾರರಲ್ಲಿ ಉಂಟಾದರೆ ಪ್ರಜಾತಂತ್ರದ ಆಶಯವೇ ಭಂಗವಾಗಬಹುದು.

ಮತದಾರರಲ್ಲಿ ರಾಜಕೀಯ ಅರಿವು ಹೆಚ್ಚುತ್ತಿರುವುದು ಒಂದು ಸಕಾರಾತ್ಮಕ ಬೆಳವಣಿಗೆ. ಇದಕ್ಕೆ ನವ ಮಾಧ್ಯಮಗಳ ಕೊಡುಗೆ ಬಹಳಷ್ಟಿದೆ. ಹಿಂದಿನ ಸಲಕ್ಕಿಂತ ಈ ಸಲ ಮತದಾನ ಪ್ರಮಾಣದಲ್ಲಿ ಹೆಚ್ಚಳವಾಗಿರುವುದು ರಾಜಕೀಯ ಅರಿವು ಹೆಚ್ಚಿರುವುದರ ದ್ಯೋತಕ. ಆದರೂ ಮತ ಚಲಾವಣೆ ನಿರೀಕ್ಷಿತ ಮಟ್ಟಕ್ಕೆ ತಲುಪಿಲ್ಲ ಎನ್ನುವ ಕೊರಗು ಕೂಡಾ ಇದೆ. ಈ ನಿಟ್ಟಿನಲ್ಲಿ ಆಡಳಿತ ಮತ್ತು ಚುನಾವಣಾ ಆಯೋಗ ಇನ್ನಷ್ಟು ಶ್ರಮಪಡುವ ಅಗತ್ಯವಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಪೌರತ್ವ ಕಾಯಿದೆ ವಿರೋಧಿ ಪ್ರತಿಭಟನೆಗಳಲ್ಲಿ ಅನೇಕ ಬಾರಿ ಪಾಕ್‌ ಪರವಾದ ಘೋಷಣೆ, ಪಾಕ್‌ ಗುಣಗಾನಗಳು ನಡೆದಿರುವುದು ಪ್ರತಿಭಟನೆಯ ನೈಜ ಉದ್ದೇಶವನ್ನು ಪ್ರಶ್ನಿಸುವಂತೆ...

  • ಹಲವು ಪ್ರಮುಖ ಪ್ರಕರಣಗಳನ್ನು ತನಿಖೆ ನಡೆಸಿದ ಪೊಲೀಸ್‌ ಅಧಿಕಾರಿ ರಾಕೇಶ್‌ ಮಾರಿಯಾ ಅವರ ದಕ್ಷತೆ ಬಗ್ಗೆ ಯಾರೂ ಅನುಮಾನ ಪಡುವಂತಿಲ್ಲ. ಭಯೋತ್ಪಾದನಾ ಪ್ರಕರಣಗಳ...

  • ಬ್ರಿಟಿಶ್‌ ಸಂಸದೆ ಡೆಬ್ಬಿ ಅಬ್ರಹಾಂ ಅವರ ವಿಸಾ ರದ್ದುಗೊಳಿಸಿ ಹಾಗೂ ಟರ್ಕಿಯ ಅಧ್ಯಕ್ಷ ಎರ್ಡೊಗನ್‌ ಕಾಶ್ಮೀರಕ್ಕೆ ಸಂಬಂಧಿಸಿದಂತೆ ನೀಡಿರುವ ಹೇಳಿಕೆಗೆ ತಿರುಗೇಟು...

  • ಮಹಿಳೆಯರನ್ನು ಏಕೆ ಕಮಾಂಡ್‌ ಆಗಿ ನೇಮಿಸುತ್ತಿಲ್ಲ ಎನ್ನುವ ವಿಚಾರಕ್ಕೆ ಕೇಂದ್ರ ಎದುರಿಟ್ಟ ತರ್ಕ. ಮಹಿಳೆಯರನ್ನು ಕಮಾಂಡ್‌ ಆಗಿ ಸ್ವೀಕರಿಸಲು ಸೇನೆಯಲ್ಲಿರುವ...

  • ಪ್ರತಿಸಲ ಚುನಾವಣೆ ಮುಗಿದ ಕೂಡಲೇ ಚುನಾವಣಾ ಆಯೋಗ ಚಲಾವಣೆಯಾದ ಒಟ್ಟು ಮತಗಳ ಪ್ರಮಾಣವನ್ನು ಬಹಿರಂಗಪಡಿಸುತ್ತದೆ. ಒಂದು ವೇಳೆ ಮತದಾನ ಪ್ರಮಾಣ ಶೇ.80 ಆಗಿದ್ದರೆ ಅತ್ಯುತ್ತಮ...

ಹೊಸ ಸೇರ್ಪಡೆ