ಕುತೂಹಲ ಹುಟ್ಟಿಸಿದ ಸಮೀಕ್ಷೆಗಳು

Team Udayavani, May 21, 2019, 6:15 AM IST

ಚುನಾವಣೋತ್ತರ ಸಮೀಕ್ಷೆಗಳ ಭವಿಷ್ಯ ನಿಜವಾದರೆ ಎನ್‌ಡಿಎ ಅಭೂತಪೂರ್ವ ಬಹುಮತದೊಂದಿಗೆ ಮರಳಿ ಅಧಿಕಾರಕ್ಕೇರಲಿದೆ. ಪ್ರಧಾನಿ ಯಾರು ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅದು ಎಂದೋ ಇತ್ಯರ್ಥವಾಗಿರುವ ವಿಚಾರ. ಹತ್ತಕ್ಕೂ ಹೆಚ್ಚು ಸಮೀಕ್ಷೆಗಳು ಬಿಜೆಪಿ ನೇತೃತ್ವದ ಸರಕಾರವೇ ಮರಳಿ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿವೆ. ಇದು ಎಷ್ಟರ ಮಟ್ಟಿಗೆ ನಿಜವಾಗುತ್ತದೆ ಎಂದು ತಿಳಿಯಲು ನಾವು ಮೇ 23ರ ತನಕ ಕಾಯಬೇಕು. ಆದರೆ ಸಮೀಕ್ಷೆಗಳು ದೇಶಾದ್ಯಂತ ಸಂಚಲನ ಮೂಡಿಸಿರುವುದು ಸುಳ್ಳಲ್ಲ ಮತ್ತು ಅವುಗಳಲ್ಲಿ ವ್ಯಕ್ತವಾಗಿರುವ ಒಲವು ಕೂಡಾ ಸ್ಪಷ್ಟವಾಗಿದೆ.

ಮತದಾರ ಪ್ರಭು ಹಿಂದೆಂದಿಗಿಂತಲೂ ಹೆಚ್ಚು ಬುದ್ಧಿವಂತನಾಗಿದ್ದಾನೆ ಮತ್ತು ತನ್ನನ್ನು ಯಾರು ಆಳಬೇಕು ಎಂಬ ಸ್ಪಷ್ಟ ಕಲ್ಪನೆ ಅವನಿಗಿದೆ ಎನ್ನುವುದು ಸಮೀಕ್ಷೆಗಳಿಂದ ತಿಳಿದು ಬರುವ ಪ್ರಧಾನ ಅಂಶ. ಚುನಾವಣೋತ್ತರ ಸಮೀಕ್ಷೆಗಳು ಮಾತ್ರವಲ್ಲದೆ ಚುನಾವಣಾಪೂರ್ವದಲ್ಲಿ ನಡೆಸಿದ ಸಮೀಕ್ಷೆಗಳು ಕೂಡಾ ಬಿಜೆಪಿ ಮರಳಿ ಅಧಿಕಾರಕ್ಕೇರುವ ಸುಳಿವು ನೀಡಿದ್ದವು.

ಚುನಾವಣೋತ್ತರ ಸಮೀಕ್ಷೆ ಹೆಚ್ಚು ವಿಶ್ವಾಸಾರ್ಹ ಏಕೆಂದರೆ ಇದನ್ನು ಜನರು ಮತ ಚಲಾವಣೆ ಮಾಡಿ ವಾಪಾಸು ಬರುವಾಗ ಅಭಿಪ್ರಾಯ ಸಂಗ್ರಹಿಸಿ ರೂಪಿಸಲಾಗಿರುತ್ತದೆ.

ಎಲ್ಲ ಸಮೀಕ್ಷೆಗಳು ನಿಜವಾಗಬೇಕೆಂದೇನೂ ಇಲ್ಲ. ಹಾಗೆಯೇ ಎಲ್ಲ ಸಮೀಕ್ಷೆಗಳು ಸುಳ್ಳಾಗುತ್ತವೆ ಎಂದು ಹೇಳುವುದು ಕೂಡಾ ಅಸಾಧ್ಯ. 2014ರಲ್ಲಿ ಬಹುತೇಕ ಸಮೀಕ್ಷೆಗಳು ಬಿಜೆಪಿ ಪರವಾಗಿ ಇದ್ದವು. ಆದರೆ ಯಾರಿಗೂ ಬಿಜೆಪಿಯ ಸ್ಥಾನ ಗಳಿಕೆಯನ್ನು ಅಂದಾಜಿಸಲು ಸಾಧ್ಯವಾಗಿರಲಿಲ್ಲ.

ಬಿಜೆಪಿಯೇ ಬಹುಮತ ಗಳಿಸಲಿದೆ ಎಂದು ಯಾವ ಸಮೀಕ್ಷೆಯೂ ಹೇಳಿರಲಿಲ್ಲ. ಅದೇ ರೀತಿ 2009ರಲ್ಲಿ ಯುಪಿಎ ಮರಳಿ ಅಧಿಕಾರಕ್ಕೆ ಬರುವ ವಿಶ್ವಾಸ ಯಾವ ಸಮೀಕ್ಷೆಗೂ ಇರಲಿಲ್ಲ. 2004ರಲ್ಲಿ ಎಲ್ಲ ಸಮೀಕ್ಷೆಗಳು ಸುಳ್ಳಾಗಿದ್ದವು. ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರವೇ ಮರಳಿ ಅಧಿಕಾರಕ್ಕೇರುತ್ತದೆ ಎಂದು ಸಮೀಕ್ಷೆಗಳು ಹೇಳಿದ್ದರೆ ಅಚ್ಚರಿ ಎಂಬಂತೆ ಕಾಂಗ್ರೆಸ್‌ ನೇತೃತ್ವದ ಯುಪಿಎ ಬಹುಮತ ಗಳಿಸಿ ಸರಕಾರ ರಚಿಸಿತ್ತು.

ವಾಜಪೇಯಿ ಆಡಳಿತದ ಬಗ್ಗೆ ಜನರಲ್ಲಿ ಉತ್ತಮ ಅಭಿಪ್ರಾಯ ಇದ್ದರೂ ಏಕೆ ಸೋಲಾಯಿತು ಎನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಯಾವ ಸಮೀಕ್ಷೆಯಿಂದಲೂ ಇನ್ನೂ ಸಾಧ್ಯವಾಗಿಲ್ಲ. ಹೀಗಾಗಿ ಸಮೀಕ್ಷೆಗಳು ನೀಡಿದ ಫ‌ಲಿತಾಂಶವನ್ನು ಆಧರಿಸಿ ವಿಶ್ಲೇಷಣೆ ಮಾಡುವುದು ಅವಸರದ ಕ್ರಮವಾದೀತು. ಆದರೆ ರವಿವಾರ ಪ್ರಕಟವಾಗಿರುವ ಸಮೀಕ್ಷೆಗಳು ಪ್ರತಿಪಕ್ಷ ಪಾಳಯದಲ್ಲಿ ನಡುಕ ಉಂಟು ಮಾಡಿರುವುದಂತೂ ಸತ್ಯ. ಪ್ರತಿಯೊಬ್ಬರು ಸಮೀಕ್ಷೆಗಳನ್ನು ತಮ್ಮ ಮೂಗಿನ ನೇರಕ್ಕೆ ವಿಮರ್ಶಿಸುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಬಿರುಸಿನಿಂದ ನಡೆಯುತ್ತಿದ್ದ ವಿಪಕ್ಷಗಳನ್ನೆಲ್ಲ ಒಗ್ಗೂಡಿಸುವ ಕಾರ್ಯ ಸಮೀಕ್ಷೆಗಳು ಪ್ರಕಟವಾದ ಬಳಿಕ ತುಸು ನಿಧಾನವಾಗಿದೆ. ಇಷ್ಟರ ತನಕ ಎನ್‌ಡಿಎ ಕೂಟಕ್ಕೆ ಬಹುಮತ ಸಿಗುವುದಿಲ್ಲ ಎಂಬ ಆಧಾರದಲ್ಲಿ ಸೋನಿಯಾ ಗಾಂಧಿ ಮತ್ತು ಚಂದ್ರಬಾಬು ನಾಯ್ಡು ವಿಪಕ್ಷಗಳನ್ನು ಒಗ್ಗೂಡಿಸುವ ಸಲುವಾಗಿ ಓಡಾಡುತ್ತಿದ್ದರು. ಇದೀಗ ಸಮೀಕ್ಷೆಗಳು ಸ್ಪಷ್ಟ ಬಹುಮತದ ಸುಳಿವು ನೀಡಿರುವುದರಿಂದ ವಿಪಕ್ಷ ನಾಯಕರು ಮೇ 23ರ ತನಕ ಕಾದು ನೋಡಲು ನಿರ್ಧರಿಸಿದಂತಿದೆ.

ಕಾಂಗ್ರೆಸ್‌ ಆಳ್ವಿಕೆಯಿರುವ ಕರ್ನಾಟಕ, ಮಧ್ಯ ಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ರಾಜ್ಯಗಳಲ್ಲೂ ಬಿಜೆಪಿ ಮೇಲ್ಗೆ„ ಸಾಧಿಸಲಿದೆ ಎಂಬ ಅಂಶ ಮತದಾರ ಪ್ರಬುದ್ಧನಾಗಿರುವುದನ್ನು ತೋರಿಸುತ್ತದೆ. ಕೆಲ ತಿಂಗಳ ಹಿಂದೆಯಷ್ಟೇ ವಿಧಾನಸಭೆಗೆ ಚುನಾವಣೆ ನಡೆದು ಮತದಾರ ಕಾಂಗ್ರೆಸ್‌ನ ಕೈ ಹಿಡಿದಿದ್ದ. ಇದೀಗ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯತ್ತ ಒಲವು ತೋರಿಸಿರುವುದು ತನಗೆ ಎಲ್ಲಿ ಯಾರು ಹಿತವರು ಎನ್ನುವುದನ್ನು ಅವನು ಚೆನ್ನಾಗಿ ಅರಿತುಕೊಂಡಿದ್ದಾನೆ ಎನ್ನುವುದರ ಸಂಕೇತ.

ಈಶಾನ್ಯದ ರಾಜ್ಯಗಳಲಿ, ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಸಮೀಕ್ಷೆಗಳು ಹೇಳಿರುವ ಭವಿಷ್ಯ ನಿಜವಾದರೆ ಬಿಜೆಪಿ ದೇಶಾದ್ಯಂತ ಬಲಿಷ್ಠವಾಗುತ್ತಿದೆ ಎನ್ನಲಡ್ಡಿಯಿಲ್ಲ. ಅದರಲ್ಲೂ ಒಡಿಶಾ ವಿಧಾನಸಭೆಯಲ್ಲಿ ಬಿಜೆಡಿ ಮತ್ತು ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂಬ ಭವಿಷ್ಯ ನಿಜಕ್ಕೂ ಕುತೂಹಲಕಾರಿಯಾಗಿದೆ. ಇಷ್ಟರ ತನಕ ವಿಧಾನಸಭೆ ಮತ್ತು ಲೋಕಸಭೆಗೆ ಜತೆಯಾಗಿ ಚುನಾವಣೆ ನಡೆದರೆ ಸಾಮಾನ್ಯವಾಗಿ ಒಂದೇ ಪಕ್ಷ ಗೆಲ್ಲುತ್ತಿತ್ತು. ಈ ಟ್ರೆಂಡ್‌ನ್ನು ಬಿಜೆಪಿ ಬದಲಾಯಿಸಿದರೆ ನಿಜಕ್ಕೂ ಅದು ಒಂದು ಐತಿಹಾಸಿಕ ಸಾಧನೆಯಾಗಿ ದಾಖಲಾಗಲಿದೆ. ಅದೇ ರೀತಿ ಉತ್ತರ ಪ್ರದೇಶದ ಮಟ್ಟಿಗೆ ಎಸ್‌ಪಿ-ಬಿಎಸ್‌ಪಿ ಮೈತ್ರಿಕೂಟ ಯಶಸ್ವಿಯಾಗಲಿದೆ ಎಂಬ ಭವಿಷ್ಯವೂ ಬಹಳ ನಿರೀಕ್ಷೆಯನ್ನು ಹುಟ್ಟುಹಾಕಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳ ಅಂತರ ಕಡಿಮೆಯಾಗಿದೆ ಎನ್ನುವುದು ಸಮೀಕ್ಷೆಗಳಲ್ಲಿ ವ್ಯಕ್ತವಾಗಿರುವ ಇನ್ನೊಂದು ಪ್ರಮುಖ ಅಂಶ. ಇದು ನಿಜವಾಗಿಯೂ ಆಗಿದ್ದರೆ ಅದರ ಶ್ರೇಯ ಬಿಜೆಪಿಗೆ ಸಲ್ಲಬೇಕು. ಯಾವುದಕ್ಕೂ ಗುರುವಾರದ ತನಕ ಕಾಯಬೇಕು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ