ಇವಿಎಂ ಬಗ್ಗೆ ಸಂದೇಹ ಜನಾದೇಶಕ್ಕೇ ಅವಮಾನ

Team Udayavani, May 22, 2019, 6:00 AM IST

ಮತ ಎಣಿಕೆಯ ಹೊಸ್ತಿಲಲ್ಲಿ ಇರುವಾಗಲೇ ಇಪ್ಪತ್ತೂಂದು ರಾಜಕೀಯ ಪಕ್ಷಗಳು ಇವಿಎಂ ಬಗ್ಗೆ ತಗಾದೆ ಎತ್ತಿವೆ. ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿ ಪ್ರತಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 5 ಮತಗಟ್ಟೆಗಳ ವಿವಿಪ್ಯಾಟ್‌ಗಳನ್ನು ಪ್ರಥಮವಾಗಿ ಕೈಗೆತ್ತಿಕೊಳ್ಳಬೇಕು ಎಂದು ಆಗ್ರಹಿಸಿವೆ ಮತ್ತು ಅದರಲ್ಲೇನಾದರೂ ವ್ಯತ್ಯಯ ಕಂಡು ಬಂದರೆ ನಿಗದಿತ ವಿಧಾನಸಭಾ ಕ್ಷೇತ್ರದ ವಿವಿಪ್ಯಾಟ್‌ಗಳ ಜತೆಗೆ ಮತ್ತು ಇವಿಎಂಗಳ ಜತೆಗೆ ತುಲನೆ ಮಾಡಬೇಕು ಎಂದು ಒತ್ತಾಯಿಸಿವೆ. ಕೆಲ ದಿನಗಳ ಹಿಂದಷ್ಟೇ ಸುಪ್ರೀಂಕೋರ್ಟ್‌ನಲ್ಲಿ 21 ರಾಜಕೀಯ ಪಕ್ಷಗಳು ಸಲ್ಲಿಸಿದ್ದ ಅರ್ಜಿ ಮಾನ್ಯ ಮಾಡಿ, 5 ಕ್ಷೇತ್ರಗಳ ವಿವಿಪ್ಯಾಟ್‌ಗಳ ಎಣಿಕೆ ಮಾಡುವ ಬಗ್ಗೆ ಆದೇಶ ನೀಡಿತ್ತು.

ಪ್ರತಿಪಕ್ಷಗಳ ಆರೋಪ-ಆತಂಕಕ್ಕೆ ಕಾರಣವಾಗಿರುವ ಅಂಶವೆಂದರೆ ಅಜಮಾಸು 14 ಚುನಾವಣೋತ್ತರ ಸಮೀಕ್ಷೆಗಳಲ್ಲಿ ಹಾಲಿ ಕೇಂದ್ರ ಸರ್ಕಾರವೇ ಅಧಿಕಾರದಲ್ಲಿ ಮುಂದುವರಿಯಲಿದೆ ಎಂಬ ಅಂಶ ಪ್ರಕಟವಾದದ್ದು. ಮೇ.20ರಂದು ಕೂಡ ಎಸ್‌ಪಿ, ಬಿಎಸ್‌ಪಿ, ಟಿಎಂಸಿ, ಟಿಡಿಪಿ ನಾಯಕರು ಬಿರುಸಿನ ಸಮಾಲೋಚನೆ ನಡೆಸಿದ್ದರು.

ಅವರ ಕಳವಳಕ್ಕೆ ಪೂರಕವೋ ಎಂಬಂತೆ ಉತ್ತರಪ್ರದೇಶದ ಘಾಝಿಪುರ ಕ್ಷೇತ್ರದ ಎಸ್‌ಪಿ-ಬಿಎಸ್‌ಪಿ ಮೈತ್ರಿ ಕೂಟದ ಅಭ್ಯರ್ಥಿ ಅಫ‌lಲ್ ಅನ್ಸಾರಿ ‘ರಾತ್ರೋರಾತ್ರಿ ಭದ್ರತೆ ಇಲ್ಲದೆ ಸ್ಟ್ರಾಂಗ್‌ ರೂಂನಿಂದ ಇವಿಎಂಗಳನ್ನು ಸಾಗಣೆ ಮಾಡಲಾಗುತ್ತಿದೆ’ ಎಂದು ಆರೋಪಿಸಿ, ಪ್ರತಿಭಟನೆ ಕೂಡ ನಡೆಸಿದ್ದಾರೆ. ಚಂದೌಲಿಯಲ್ಲಿನ ಇವಿಎಂಗಳನ್ನು ಬೇರೆಡೆ ಸಾಗಿಸಲಾಗಿದೆ ಎಂಬ ಆರೋಪಗಳಿವೆ. ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ಅಂಶಗಳ ಬಗ್ಗೆ ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಕಳವಳವನ್ನೂ ಪ್ರತಿಪಕ್ಷಗಳು ತಮ್ಮ ಆರೋಪಗಳು ಸರಿ ಎಂದು ಸಾರಲು ಉಲ್ಲೇಖೀಸಿವೆ. ಆದರೆ ಇವಿಎಂ ಸಾಗಣೆ ವಿಚಾರವನ್ನು ಚುನಾವಣಾ ಆಯೋಗ ಸಾರಾಸಗಟಾಗಿ ತಿರಸ್ಕರಿಸಿದೆ.

ಇವಿಎಂಗಳ ಮೇಲಿನ ಆರೋಪ ಈಗಿನದ್ದಲ್ಲ, ಹಿಂದೆ ಇದರ ವಿರುದ್ಧ ಸಮರ ಸಾರಿದ ನಾಯಕರಲ್ಲಿ ಮುಂಚೂಣಿಯಲ್ಲಿದ್ದರು ಕೇಜ್ರಿವಾಲ್. ಆಗ ಇವಿಎಂಗಳನ್ನು ಹ್ಯಾಕ್‌ ಮಾಡಲು ಸಾಧ್ಯ ಎಂದು ಪ್ರತಿಪಕ್ಷಗಳು ಆರೋಪಿಸಿದ್ದ ಸಂದರ್ಭದಲ್ಲಿ, ಆರೋಪ ಸಾಬೀತುಪಡಿಸಲು ಚುನಾವಣಾ ಆಯೋಗ ಇವುಗಳಿಗೆಲ್ಲ ಬಹಿರಂಗ ಅವಕಾಶ ಕೊಟ್ಟಿತ್ತು. ಈಗ ಏರು ಧ್ವನಿಯಲ್ಲಿ ಆರೋಪ ಮಾಡುತ್ತಿರುವ ಯಾವುದೇ ನಾಯಕರೂ ಅಂದು ಸವಾಲು ಸ್ವೀಕರಿಸಲಿಲ್ಲ. ಅದರ ಹೊರತಾಗಿ ಜನವರಿಯಲ್ಲಿ ದೂರದ ಲಂಡನ್‌ನಲ್ಲಿ ಕುಳಿತು ಭಾರತದ ಚುನಾವಣಾ ಆಯೋಗ ಹೊಂದಿರುವ ಇವಿಎಂಗಳನ್ನು ಸುಲಭವಾಗಿ ಹ್ಯಾಕ್‌ ಮಾಡಲು ಸಾಧ್ಯ ಎಂದು ಪ್ರಪಂಚಕ್ಕೆ ಬಿಂಬಿಸಲು ಯತ್ನಿಸಲಾಗಿತ್ತು. ಆ ಅಂಶ ನಗೆಪಾಟಲಿಗೆ ಈಡಾಗಿದ್ದು ಬೇರೆ ವಿಚಾರ.

ಉತ್ತರ ಪ್ರದೇಶದ 2 ಕ್ಷೇತ್ರಗಳಲ್ಲಿ ಸ್ಟ್ರಾಂಗ್‌ರೂಂನಿಂದ ಸಾಗಿಸಲಾಗಿದೆ ಎನ್ನಲಾಗಿರುವುದು ಇವಿಎಂ ಯಂತ್ರಗಳನ್ನು ಹೌದೋ ಅಲ್ಲವೋ ಎಂದು ಪರಿಶೀಲಿಸಿದವರು ಯಾರೂ ಇಲ್ಲ. ಕೆಲವೊಂದು ಚಾನೆಲ್ಗಳಲ್ಲಿ ಪ್ರಸಾರವಾದ ದೃಶ್ಯಾವಳಿಗಳ ಪ್ರಕಾರ ಅದು ವಿದ್ಯುನ್ಮಾನ ಮತಯಂತ್ರ ಎನ್ನಲಾಗುತ್ತಿದೆ. ಸಂಬಂಧಿಸಿದ ಕ್ಷೇತ್ರಗಳ ಜಿಲ್ಲಾಡಳಿತಗಳ ಪ್ರಕಾರ ಅಂಥ ಘಟನೆಯೇ ನಡೆದಿಲ್ಲ. ಗುರುವಾರ ನಡೆಯಲಿರುವ ಮತಎಣಿಕೆಯಲ್ಲಿ ಶೇ.100ರಷ್ಟು ವಿವಿಪ್ಯಾಟ್‌ಗಳ ಎಣಿಕೆ ಮಾಡಬೇಕು ಎಂದು ಸಲ್ಲಿಕೆ ಮಾಡಲಾಗಿರುವ ಅರ್ಜಿಯನ್ನು ಸುಪ್ರೀಂಕೋರ್ಟ್‌ ತಿರಸ್ಕರಿಸಿದೆ. ಹೊಸ ಅರ್ಜಿಯನ್ನು ತೊಂದರೆ ಎಂದು ಟೀಕಿಸಿದೆ. ಜತೆಗೆ ಹೊಸ ಸರ್ಕಾರ ಆಯ್ಕೆಯಾಗಲಿ ಆಮೇಲೆ ಈ ಅಂಶಗಳನ್ನೆಲ್ಲ ಪರಿಶೀಲಿಸೋಣವೆಂದು ಹೇಳಿದೆ.

ಈ ಎಲ್ಲಾ ಅಂಶಗಳಿಂದ ವೇದ್ಯವಾಗುವ ವಿಚಾರವೇನೆಂದರೆ ಪ್ರತಿಪಕ್ಷಗಳಿಗೆ ನಿಜವಾಗಿ ನಡೆದ ಮತದಾನದ ಮೇಲೆ ನಂಬಿಕೆ ಇಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಶೇ.100ರಷ್ಟು ವಿವಿಪ್ಯಾಟ್‌ಗಳನ್ನೂ ವಿದ್ಯುನ್ಮಾನ ಮತಯಂತ್ರಗಳಲ್ಲಿ ದಾಖಲಾಗಿರುವ ಮತಗಳ ಜತೆಗೆ ಎಣಿಕೆ ಮಾಡಬೇಕು ಎಂದರೆ ದೇಶದ ಅಷ್ಟೂ ಅರ್ಹ ಮತದಾರರು ಚಲಾಯಿಸಿದ ಹಕ್ಕಿಗೆ ಯಾವುದೇ ಅರ್ಥ ಇಲ್ಲ ಮತ್ತು ಅದರ ಮೇಲೆ ನಂಬಿಕೆ ಇಲ್ಲ ಎನ್ನುವುದನ್ನು ವಿಚಾರ ಪ್ರಸ್ತಾಪ ಮಾಡಿದ ಪಕ್ಷಗಳ ನಾಯಕರ ಇರಾದೆಯಿಂದ ಜಾಹೀರಾಗುತ್ತದೆ.

ಒಂದು ವೇಳೆ ಎಲ್ಲಾ ವಿವಿಪ್ಯಾಟ್‌ಗಳನ್ನು ಎಣಿಕೆ ಮಾಡುವುದೇ ಆದರೆ, ಇವಿಎಂ ಏಕೆ ಬೇಕು? ತಾಂತ್ರಿಕವಾಗಿ ಹೊಸ ವ್ಯವಸ್ಥೆ ಜಾರಿಗೆ ಬಂದಾಗ, ಭಾರತದಂಥ ದೇಶದಲ್ಲಿ ತೊಡಕುಗಳು ಸಾಮಾನ್ಯ. ಅವುಗಳನ್ನು ಸುಧಾರಿಸುವ ಬಗ್ಗೆ ಚುನಾವಣಾ ಆಯೋಗ, ಕೇಂದ್ರ ಸರ್ಕಾರ ಪರಿಶೀಲನೆ ಮಾಡಬೇಕು. ಆ ರೀತಿ ಮಾಡದೇ ಇದ್ದರೆ, ಸದ್ಯ ಎದ್ದಿರುವ ಸಂಶಯಗಳು ಸರಿ ಎಂಬ ಆರೋಪಗಳಿಗೆ ಪುಷ್ಟಿ ನೀಡಿದಂತೆ ಆಗುತ್ತದೆ.

ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ದೆಹಲಿಯಲ್ಲಿ ಈ ಹಿಂದೆ ನಡೆದಿದ್ದ ವಿಧಾನಸಭೆ ಚುನಾವಣೆ ವೇಳೆ ಹಕ್ಕು ಚಲಾಯಿಸಲು ಇವಿಎಂಗಳನ್ನೇ ಬಳಕೆ ಮಾಡಲಾಗಿತ್ತು. ಈಗ ಅಧಿಕಾರದಲ್ಲಿರುವ ಪಕ್ಷಗಳೇ ಅಂದು ಇವಿಎಂನಿಂದ ಆಯ್ಕೆಯಾಗಿದ್ದವು. ಎರಡು ವರ್ಷಗಳ ಹಿಂದೆ ಪಂಜಾಬ್‌ನಲ್ಲಿ ಚುನಾವಣೆ ನಡೆದಿದ್ದಾಗ ಕಾಂಗ್ರೆಸ್‌ ಗೆದ್ದಿತ್ತು. ಅಷ್ಟೇ ಏಕೆ ಕೇವಲ ಆರು ತಿಂಗಳ ಹಿಂದೆ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢಗಳಲ್ಲಿ ವಿಧಾನಸಭೆ ಚುನಾವಣೆ ನಡೆದು, ಫ‌ಲಿತಾಂಶ ಪ್ರಕಟವಾದಾಗ ಗೆದ್ದದ್ದು ಕಾಂಗ್ರೆಸ್‌.

ಆಗ ಇವಿಎಂ ಸರಿ ಇಲ್ಲ ಎಂದು ಈ ಯಾವ ಪಕ್ಷಗಳೂ ದೂರಿರಲಿಲ್ಲ. ಹೀಗಾಗಿ, 21 ಪ್ರತಿಪಕ್ಷಗಳ ನಾಯಕರು ಉಲ್ಲೇಖೀಸುವ ‘ದೋಷಯುಕ್ತ’, ‘ಹ್ಯಾಕ್‌ ಮಾಡಲು ಸಾಧ್ಯ’ ಎಂಬ ಪದ ಪ್ರಯೋಗಗಳ ಬಗ್ಗೆ ವಿಷಾದ ವ್ಯಕ್ತಪಡಿಸಬೇಕಾಗುತ್ತದಷ್ಟೇ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ರಾಜ್ಯ ವಿಧಾನಮಂಡಲದ ಅಧಿವೇಶನ ರಜಾ ದಿನವಾದ ಎರಡನೇ ಶನಿವಾರವೂ ಸೇರಿ ಮೂರು ದಿನಗಳ ಕಾಲ ನಡೆದು ನಿರೀಕ್ಷೆಯಂತೆ ಪ್ರವಾಹ ಪರಿಹಾರವೇ ಪ್ರಮುಖವಾಗಿ ಚರ್ಚೆಯಾಗಿ ಸರಕಾರದ...

  • ಜೆರೆಮಿ ಕಾರ್ಬಿನ್‌ ಕಾಶ್ಮೀರಕ್ಕೆ ಸಂಬಂಧಿಸಿದಂತೆ ಭಾರತ ವಿರೋಧಿ ನಿಲುವು ಹೊಂದಿದ್ದಾರೆ ಹಾಗೂ ಬ್ರಿಟನ್‌ ಸಂಸತ್ತಿನಲ್ಲಿ ಭಾರತದ ವಿರುದ್ಧ ಗೊತ್ತುವಳಿಯನ್ನೂ...

  • ಕಪ್ಪುಹಣವನ್ನು ವಾಪಸು ತರುವ ವಾಗ್ಧಾನವನ್ನು 2014ರ ಚುನಾವಣೆಯಲ್ಲೇ ಮೋದಿ ನೀಡಿದ್ದರು. ಆದರೆ ಮೊದಲ ಅವಧಿಯಲ್ಲಿ ಈ ನಿಟ್ಟಿನಲ್ಲಿ ವಿಶೇಷ ಸಾಧನೆ ಮಾಡಲು ಸಾಧ್ಯವಾಗಿರಲಿಲ್ಲ....

  • ತಮಿಳುನಾಡಿನ ಮಮ್ಮಲ್ಲಪುರಂನಲ್ಲಿ ಶುಕ್ರವಾರ ಮತ್ತು ಶನಿವಾರ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ನಡುವಿನ ಶೃಂಗ...

  • ವಾಯುಸೇನೆ ಬತ್ತಳಿಕೆಯಲ್ಲಿ ಸುಖೋಯ್‌, ಮಿಗ್‌-21 ಬೈಸನ್‌ ಮತ್ತು ಜಾಗ್ವಾರ್‌ನಂಥ ಯುದ್ಧ ವಿಮಾನಗಳೇ ಪ್ರಮುಖವಾಗಿದ್ದವು. ಈಗ ರಫೇಲ್‌ ನಮ್ಮ ವಾಯು ಸೇನೆಯ ಪ್ರಮುಖ...

ಹೊಸ ಸೇರ್ಪಡೆ