ಆಹಾರ ವಿತರಣೆ ವ್ಯವಸ್ಥೆ ಬದಲಾಗಬೇಕು

Team Udayavani, Oct 19, 2019, 5:58 AM IST

ಇತ್ತೀಚೆಗೆ ಬಿಡುಗಡೆಯಾಗಿರುವ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತ ಹೊಂದಿರುವ ಸ್ಥಾನ ತಲೆ ತಗ್ಗಿಸುವಂತಿದೆ. 117 ದೇಶಗಳ ಪೈಕಿ ಭಾರತ 102ನೇ ಸ್ಥಾನದಲ್ಲಿದೆ. ನೆರೆ ದೇಶಗಳಾದ ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ ಕೂಡ ನಮ್ಮಿಂದ ಮೇಲಿನ ಸ್ಥಾನದಲ್ಲಿವೆ. ದೇಶದ ಪ್ರತಿ ಐದು ಮಕ್ಕಳಲ್ಲಿ ಒಂದು ಮಗು ಕಡಿಮೆ ತೂಕ ಮತ್ತು ಎತ್ತರವನ್ನು ಹೊಂದಿದೆ. ಇದು ಜಗತ್ತಿನ ಯಾವುದೇ ದೇಶಕ್ಕಿಂತ ಗರಿಷ್ಠ. ಮಕ್ಕಳನ್ನು ಭವಿಷ್ಯದ ಜನಾಂಗ ಎನ್ನುತೇವೆ. ಆದರೆ ನಾವು ಭವಿಷ್ಯದ ಜನಾಂಗವನ್ನು ಬೆಳೆಸುತ್ತಿರುವ ರೀತಿ ಸರಿಯಿಲ್ಲ ಎನ್ನುವುದನ್ನು ಜಾಗತಿಕ ಹಸಿವು ಸೂಚ್ಯಂಕ ಢಾಳಾಗಿಯೇ ಹೇಳುತ್ತಿದೆ. ದಕ್ಷಿಣ ಏಷ್ಯಾದ ದೇಶಗಳಲ್ಲೇ ನಾವು ಕೊನೆಯ ಸ್ಥಾನದಲ್ಲಿದ್ದೇವೆ ಎನ್ನುವುದು ನಮಗೆ ಎಚ್ಚರಿಕೆಯ ಕರೆಗಂಟೆಯಾಗಬೇಕು. ಪೌಷ್ಟಿಕಾಂಶ ಕೊರತೆಯನ್ನು ನೀಗಿಸಲು ಈಗಲಾದರೂ ಸರಕಾರ ಸದೃಢವಾದ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ.

ನಮ್ಮ ಮಕ್ಕಳು ಈ ಪರಿಯಾಗಿ ಪೌಷ್ಟಿಕಾಂಶ ಕೊರತೆಯಿಂದ ಬಳಲುತ್ತಿರು ವುದಕ್ಕೆ ದೇಶದಲ್ಲಿ ಆಹಾರ ಅಭಾವ ಇರುವುದಂತೂ ಕಾರಣವಲ್ಲ. ವಿದೇಶಗಳಿಂದ ಹಡಗುಗಳಲ್ಲಿ ಬರುತ್ತಿದ್ದ ಆಹಾರ ಧಾನ್ಯಗಳನ್ನು ಕಾದು ಕುಳಿತುಕೊಂಡಿದ್ದ ದೇಶವಿಂದು ವಿದೇಶಗಳಿಗೆ ಆಹಾರ ರಫ್ತು ಮಾಡುವಷ್ಟು ಸ್ವಾವಲಂಬನೆಯನ್ನು ಸಾಧಿಸಿದೆ. ದೋಷವಿರುವುದು ಆಹಾರವನ್ನು ಸಮರ್ಪಕವಾಗಿ ವಿತರಿಸಲು ವಿಫ‌ಲಗೊಂಡಿರುವ ನಮ್ಮ ವ್ಯವಸ್ಥೆಯಲ್ಲಿ. ಒಂದೆಡೆ ಎರಡೊತ್ತಿನ ತುತ್ತಿಗೆ ಪರದಾಡುತ್ತಿರುವ ಬಡ ವರ್ಗ ಇನ್ನೊಂದೆಡೆ ತಿನ್ನಲು ಸಾಧ್ಯವಾಗದೆ ಕಸದ ಬುಟ್ಟಿಗೆ ಆಹಾರ ವಸ್ತುಗಳನ್ನು ಚೆಲ್ಲುತ್ತಿರುವ ಶ್ರೀಮಂತ ವರ್ಗ. ಹೀಗೆ ವಿರೋಧಾಭಾಸಗಳಿಂದ ಕೂಡಿದ ವ್ಯವಸ್ಥೆ ನಮ್ಮದು. ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮಗಳ ವರದಿ ಪ್ರಕಾರ ಭಾರತದಲ್ಲಿ ಉತ್ಪಾದನೆಯಾಗುವ ಶೇ. 40 ಆಹಾರ ವಸ್ತುಗಳು ವ್ಯರ್ಥವಾಗಿ ಹೋಗುತ್ತವೆ ಹಾಗೂ ಇದರಿಂದ ದೇಶ ಪ್ರತಿ ವರ್ಷ 1 ಲಕ್ಷ ಕೋ. ರೂ. ನಷ್ಟ ಅನುಭವಿಸುತ್ತಿದೆ. ಈ ಒಂದು ಅಂಕಿಅಂಶವೇ ಸಾಕು ನಮ್ಮ ಆಹಾರ ಹಂಚಿಕೆ ವ್ಯವಸ್ಥೆ ಎಷ್ಟು ಅಸಮರ್ಪಕವಾಗಿದೆ ಎನ್ನಲು.

2012ರಿಂದ 2015ರ ನಡುವೆ 63 ದಶಲಕ್ಷ ಟನ್‌ ಆಹಾರ ಧಾನ್ಯಗಳನ್ನು ನಾವು ರಫ್ತು ಮಾಡಿದ್ದೇವೆ. ಇದಕ್ಕೂ ಮಿಗಿಲಾಗಿ ದೇಶದಲ್ಲಿ ವ್ಯವಸ್ಥಿತವಾದ ತುರ್ತು ದಾಸ್ತಾನು ವ್ಯವಸ್ಥೆ ಇದೆ. ಇಷ್ಟಿದ್ದೂ ಹಸಿವು ಸೂಚ್ಯಂಕದಲ್ಲಿ ನಮ್ಮ ಸ್ಥಾನ ನಿರಂತರವಾಗಿ ಕುಸಿಯುತ್ತಿರುವುದೇಕೆ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಅಗತ್ಯವಿದೆ. ಆಹಾರ ವಸ್ತುಗಳು ಕೊಳೆತು ಹೋಗುವುದನ್ನು ತಡೆದರೆ ಪೌಷ್ಟಿಕಾಂಶ ಕೊರತೆ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿವಾರಿಸಿಕೊಳ್ಳಬಹುದು. ಪ್ರತಿವರ್ಷ ಟನ್‌ಗಟ್ಟಲೆ ಆಹಾರ ಧಾನ್ಯಗಳು ಮತ್ತು ಹಣ್ಣು ಹಂಪಲುಗಳು ಗೋದಾಮುಗಳಲ್ಲಿ ಕೊಳೆತು ವ್ಯರ್ಥವಾಗುತ್ತಿರುವುದು ರಾಷ್ಟ್ರೀಯ ನಷ್ಟ. ಅಗತ್ಯವಿರುವವರಿಗೆ ಸಾಕಷ್ಟು ಆಹಾರ ಸಿಗುವುದಿಲ್ಲ, ಅಗತ್ಯವಿಲ್ಲದವರಿಗೆ ಬೇಡದಿದ್ದರೂ ಧಾರಾಳ ಆಹಾರ ಸಿಗುತ್ತದೆ. ಇದು ನಮ್ಮ ಸಮಸ್ಯೆ. ಇದನ್ನು ನಿವಾರಿಸಬೇಕಾದರೆ ಸಮಸ್ಯೆಯ ಮೂಲಕ್ಕಿಳಿಯುವ ಅಗತ್ಯವಿದೆ. ಇದಕ್ಕೆ ನೀತಿಗಳಲ್ಲಿ ಸಮಗ್ರ ಮಾರ್ಪಾಡಿನ ಜೊತೆಗೆ ಪ್ರಬಲ ರಾಜಕೀಯ ಇಚ್ಛಾಶಕ್ತಿಯೂ ಇರಬೇಕಾಗುತ್ತದೆ.

ಕೊಯ್ಲು, ಸಾಗಾಟ, ಸಂಸ್ಕರಣೆ, ಪ್ಯಾಕೇಜಿಂಗ್‌ ಮತ್ತು ಬಳಕೆ ಸೇರಿ ಎಲ್ಲ ಹಂತಗಳಲ್ಲಿ ಆಹಾರ ವಸ್ತುಗಳು ವ್ಯರ್ಥವಾಗುವುದನ್ನು ತಡೆಯಬೇಕು. ಭಾರೀ ಪ್ರಮಾಣದ ಆಹಾರ ವಸ್ತುಗಳು ವ್ಯರ್ಥವಾಗುವುದು ಸಾಗಾಟ ಮತ್ತು ದಾಸ್ತಾ ನಿನಲ್ಲಿ. ಈ ಎರಡು ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹರಿಸುವ ಅಗತ್ಯವಿದೆ.

ಮಕ್ಕಳಲ್ಲಿ ಪೌಷ್ಟಿಕಾಂಶ ವೃದ್ಧಿಸುವ ಅನೇಕ ಕಾರ್ಯಕ್ರಮಗಳು ಜಾರಿಯ ಲ್ಲಿವೆ ನಿಜ. ಆದರೆ ಅವುಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ. ದೇಶವನ್ನು ಹಸಿವು ಮುಕ್ತಗೊಳಿಸುವ ಉದ್ದೇಶದಿಂದ ಆಹಾರ ಭದ್ರತೆ ಕಾಯಿದೆಯನ್ನು ಜಾರಿಗೆ ತರಲಾಗಿದ್ದರೂ ವಾಸ್ತವ ಚಿತ್ರಣದಲ್ಲಿ ಹೆಚ್ಚೇನೂ ಬದಲಾವಣೆಯಾಗಿಲ್ಲ. ಅರ್ಹರಿಗೆ ಆಹಾರ ಧಾನ್ಯಗಳು ಸಿಗದೆ ಅನರ್ಹರು ಫ‌ಲಾನುಭವಿಗಳಾಗಿರುವ ಅನೇಕ ಪ್ರಕರಣಗಳಿವೆ. ಇದನ್ನೆಲ್ಲ ಪತ್ತೆಹಚ್ಚಿ ಒಟ್ಟು ವ್ಯವಸ್ಥೆಯನ್ನು ಸರಿಪಡಿಸಬೇಕಾದ ಅಗತ್ಯವಿದೆ. ನಮ್ಮಲ್ಲಿರುವ ಅಗಾಧ ಜನಸಂಖ್ಯೆಯನ್ನು ಸಂಪನ್ಮೂಲ ಎಂದು ನಾವು ಹೆಮ್ಮೆಯಿಂದ ಬಣ್ಣಿಸುತ್ತೇವೆ. ಆದರೆ ಈ ಸಂಪನ್ಮೂಲ ಆರೋಗ್ಯಕರವೂ ಆಗಿರಬೇಕಾದ ಅಗತ್ಯವಿದೆ. ಆಳುವವರು ಇದನ್ನು ಅರ್ಥ ಮಾಡಿಕೊಳ್ಳಬೇಕು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ