ಯುಲಿಪ್‌ ಮತ್ತು ಮ್ಯೂಚುವಲ್‌ ಫ‌ಂಡುಗಳ ತೌಲನಿಕ ಅಧ್ಯಯನ

Team Udayavani, Sep 16, 2019, 5:52 AM IST

ಒಂದು ಯುಲಿಪ್‌ ಹೂಡಿಕೆಯಿಂದ ಅಲೋಕೇಶನ್‌ ಚಾರ್ಜ್‌, ಪಾಲಿಸಿ ಅಡ್ಮಿನಿಸ್ಟ್ರೇಷನ್‌ ಚಾರ್ಜ್‌, ಫ‌ಂಡ್‌ ಮ್ಯಾನೇಜ್ಮೆಂಟ್ ಚಾರ್ಜ್‌ ಇತ್ಯಾದಿಗಳು ಕಳೆಯಲ್ಪಡುತ್ತವೆ. ಅದರ ಎದುರಿಗೆ ಒಂದು ಮ್ಯೂಚುವಲ್‌ ಫ‌ಂಡಿನಲ್ಲಿ ಹೂಡಿಕೆ ಮಾಡಿದರೆ ಫ‌ಂಡ್‌ ಮ್ಯಾನೇಜ್ಮೆಂಟ್ ಚಾರ್ಜ್‌ ಮಾತ್ರವೇ ಕಳೆಯಲ್ಪಡುತ್ತದೆ. ಯುಲಿಪ್‌ ಒಳಗಣ ಮಾರ್ಟಾಲಿಟಿ ಚಾರ್ಜ್‌ ಮತ್ತು ವಿಮಾ ಪಾಲಿಸಿಯ ಮಾರ್ಟಾಲಿಟಿ ಚಾರ್ಜ್‌ ನಲ್ಲೂ ವ್ಯತ್ಯಾಸವಿರಬಹುದು. ಇದ್ದರೆ ಅದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳಬೇಕಲ್ಲವೇ?

ಒಂದು ಯುಲಿಪ್‌ ಯೋಜನೆಯನ್ನು ಒಂದು ವಿಮೆ ಮತ್ತು ಮ್ಯೂಚುವಲ್‌ ಫ‌ಂಡುಗಳ ಹೈಬ್ರಿಡ್‌ ಎಂದು ಮಾರುಕಟ್ಟೆಯಲ್ಲಿ ಗುರುತಿಸಲಾಗುತ್ತದೆ. ಹಾಗಾಗಿ ಒಂದು ಯುಲಿಪ್‌ ಪಾಲಿಸಿಯನ್ನು ತುಲನೆ ಮಾಡುವಾಗ ಅದನ್ನು ಒಂದು ವಿಮಾ ಪಾಲಿಸಿ ಮತ್ತು ಪ್ರತ್ಯೇಕವಾದ ಒಂದು ಮ್ಯೂಚುವಲ್‌ ಫ‌ಂಡ್‌ ಜೊತೆಗೆ ಹೋಲಿಕೆ ಮಾಡಿ ಲೆಕ್ಕ ಹಾಕುವುದು ಸಹಜವಾಗಿದೆ. ನಿಮ್ಮ ಯುಲಿಪ್‌ ಪಾಲಿಸಿಯ ಪ್ರತಿಫ‌ಲವನ್ನು ಆ ಪಾಲಿಸಿಗೆ ನೀಡುವ ಒಟ್ಟು ಪ್ರೀಮಿಯಂ ಮೊತ್ತದಿಂದ ಅದೇ ವಿಮಾ ಮೊತ್ತಕ್ಕೆ ಬೇರೆಡೆ ನೀಡಬೇಕಾಗುವ ಪ್ರೀಮಿಯಂ ಕಳೆದು ಉಳಿದ ಮೊತ್ತವನ್ನು ಒಂದು ತತ್ಸಮಾನ ಮ್ಯೂಚುವಲ್‌ ಫ‌ಂಡಿಗೆ ಹೂಡಿದರೆ ಬರುವ ಪ್ರತಿಫ‌ಲದೊಂದಿಗೆ ಹೋಲಿಸಲಾಗುತ್ತದೆ.

ಉದಾಹರಣೆಗಾಗಿ ಒಬ್ಟಾತ ರೂ. 10,000 ವಾರ್ಷಿಕ ಪ್ರೀಮಿಯಂ ತೆತ್ತು ರೂ. 1 ಲಕ್ಷ ಮೌಲ್ಯದ ಯುಲಿಪ್‌ ಪಾಲಿಸಿ ಕೊಳ್ಳುತ್ತಾನೆ ಎಂದಿಟ್ಟುಕೊಳ್ಳಿ ಹಾಗೂ ಪ್ರತ್ಯೇಕವಾಗಿ ರೂ. 1 ಲಕ್ಷದ ಒಂದು ಉತ್ತಮ ಆನ್‌ಲೈನ್‌ ಟರ್ಮ್ ಪಾಲಿಸಿ ರೂ. 1,000 ಪ್ರೀಮಿಯಂ ಮೊತ್ತಕ್ಕೆ ಬೇರೆಡೆ ಸಿಗುತ್ತದೆ ಎಂದಿಟ್ಟುಕೊಳ್ಳಿ. ಆವಾಗ ರೂ. 10,000 ಕಳೆ ರೂ. 1,000 ಅಂದರೆ ರೂ. 9,000 ನಿಮ್ಮ ಯುಲಿಪ್‌ ಫ‌ಂಡಿನಲ್ಲಿ ಹೂಡಿಕೆಯಾಗುತ್ತದೆ. ಈಗ ನೀವು ಆ ರೂ. 9,000ದ ಯುಲಿಪ್‌ ಹೂಡಿಕೆಯನ್ನು ಬೇರೆ ಮ್ಯೂಚುವಲ್‌ ಫ‌ಂಡಿನಲ್ಲಿ ಮಾಡಬಹುದಾದ ಹೂಡಿಕೆಯೊಂದಿಗೆ ತುಲನೆ ಮಾಡಬೇಕು.

ವೆಚ್ಚದ ಬೆಚ್ಚ
ಆ ರೀತಿ ಮಾಡುವಾಗ ಮೊತ್ತ ಮೊದಲನೆಯದಾಗಿ ಯುಲಿಪ್‌ ಖರ್ಚುವೆಚ್ಚಗಳು ಕಣ್ಣೆದುರು ಬರುತ್ತವೆ. ಕಳೆದ ವಾರದ ಕೊರೆತದಲ್ಲಿ ಬಣ್ಣಿಸಿದಂತೆ ಒಂದು ಯುಲಿಪ್‌ ಹೂಡಿಕೆಯಿಂದ ಅಲೋಕೇಶನ್‌ ಚಾರ್ಜ್‌, ಪಾಲಿಸಿ ಅಡ್ಮಿನಿಸ್ಟ್ರೇಷನ್‌ ಚಾರ್ಜ್‌, ಫ‌ಂಡ್‌ ಮ್ಯಾನೇಜ್ಮೆಂಟ್ ಚಾರ್ಜ್‌ ಇತ್ಯಾದಿಗಳು ಕಳೆಯಲ್ಪಡುತ್ತವೆ. ಅದರ ಎದುರಿಗೆ ಒಂದು ಮ್ಯೂಚುವಲ್‌ ಫ‌ಂಡಿನಲ್ಲಿ ಹೂಡಿಕೆ ಮಾಡಿದರೆ ಫ‌ಂಡ್‌ ಮ್ಯಾನೇಜ್ಮೆಂಟ್ ಚಾರ್ಜ್‌ ಮಾತ್ರವೇ ಕಳೆಯಲ್ಪಡುತ್ತದೆ. ಅದು ಬಿಟ್ಟು, ಯುಲಿಪ್‌ ಒಳಗಣ ಮಾರ್ಟಾಲಿಟಿ ಚಾರ್ಜ್‌ ಮತ್ತು ನೀವೇ ಪ್ರತ್ಯೇಕವಾಗಿ ಮಾಡಬಹುದಾದ ವಿಮಾ ಪಾಲಿಸಿಯ ಮಾರ್ಟಾಲಿಟಿ ಚಾರ್ಜ್‌ ಅಥವಾ ಪ್ರೀಮಿಯಂ ಮೊತ್ತದಲ್ಲೂ ವ್ಯತ್ಯಾಸವಿರುವ ಸಂದರ್ಭ ಇದೆ. ಇದ್ದರೆ ಅದನ್ನೂ ಕೂಡಾ ಲೆಕ್ಕಕ್ಕೆ ತೆಗೆದುಕೊಳ್ಳಬೇಕಲ್ಲವೇ? ಈ ಚಾರ್ಜುಗಳು ಪಾಲಿಸಿಯಿಂದ ಪಾಲಿಸಿಗೆ ಮತ್ತು ಮ್ಯೂಚುವಲ್‌ ಫ‌ಂಡಿನಿಂದ ಮ್ಯೂಚುವಲ್‌ ಫ‌ಂಡಿಗೆ ವ್ಯತ್ಯಾಸವಾಗುತ್ತವೆ. ಹಾಗಾಗಿ ಒಂದು ಯುಲಿಪ್‌ ಮತ್ತು ಮ್ಯೂಚುವಲ್‌ ಫ‌ಂಡನ್ನು ತುಲನೆ ಮಾಡಿ ನೋಡುವಾಗ ಆಯಾ ನಿರ್ದಿಷ್ಟ ಯೋಜನೆಯ ನಿಖರವಾದ ಖರ್ಚುಗಳ ಅಂಕಿಅಂಶಗಳನ್ನು ನೋಡಿ ಅವನ್ನು ತುಲನೆ ಮಾಡತಕ್ಕದ್ದು. “ಜನರಲ…’ ಆಗಿ ಇಂತಿಷ್ಟು ಎಂಬುದಾಗಿ ಹೇಳಲು ಬರುವುದಿಲ್ಲ.

ಆದರೂ ಒಂದು ಗೋಶಾºರೀ ಲೆಕ್ಕ ಹಾಕಿ ಹೇಳಿರಯ್ನಾ ಎಂದರೆ ಸರಿ ಸುಮಾರು ಯುಲಿಪ್‌ ಪಾಲಿಸಿಗಳ ವೆಚ್ಚವನ್ನು ಒಂದು ಮ್ಯೂಚುವಲ್‌ ಫ‌ಂಡ್‌ + ಪ್ರತ್ಯೇಕ ಟರ್ಮ್ ವಿಮಾ ಪಾಲಿಸಿಗಳ ವೆಚ್ಚಕ್ಕೆ ಹೋಲಿಸಿದರೆ ಯುಲಿಪ್‌ ಪಾಲಿಸಿಯು ಕನಿಷ್ಠ ಪಕ್ಷ ಒಂದೆರಡು ಶೇಕಡಾ ಆದರೂ ದುಬಾರಿ ಬೀಳುವುದರಲ್ಲಿ ಸಂಶಯವಿಲ್ಲ ಮತ್ತು ಈ ವ್ಯತ್ಯಾಸ ಬಹುತೇಕ ಪ್ರೀಮಿಯಂ ಅಲೋಕೇಶನ್‌ ಚಾರ್ಜಿನಿಂದಲೇ ಬರುವಂತದ್ದು ಹೌದು. (ಮಾರ್ಟಾಲಿಟಿ ಚಾರ್ಜಿನಲ್ಲಿ ವ್ಯತಾಸವಿಲ್ಲ ಎಂದು ಊಹಿಸಲಾಗಿದೆ; ಕೆಲವೆಡೆ ವ್ಯತ್ಯಾಸ ಇದೆ. ಇದ್ದರೆ ಅದನ್ನು ತೆಗೆದುಕೊಳ್ಳಬೇಕು. ಉಳಿದ ವೆಚ್ಚಗಳಲ್ಲಿ ವ್ಯತ್ಯಾಸ ಅಷ್ಟು ಗಣನೀಯವಲ್ಲ). 2010ರ ಯುಲಿಪ್‌ ಸುಧಾರಣೆಯ ಮೊದಲು ಕಡ³ಕತ್ತಿ ಯುಗದಲ್ಲಿ ಪ್ರೀಮಿಯಂ ಅಲೋಕೇಷನ್‌ ಚಾರ್ಜ್‌ 20%-40% ಅಥವಾ 60% ಕೂಡಾ ಇದ್ದಿರುವ ಕಾಲದಲ್ಲಿ ಯುಲಿಪ್‌ ಮತ್ತು ಮ್ಯೂಚುವಲ್‌ ಫ‌ಂಡುಗಳ ಖರ್ಚುವೆಚ್ಚದಲ್ಲಿ ಭಾರೀ ವ್ಯತ್ಯಾಸವಿದ್ದಿದ್ದು ಯುಲಿಪ್‌ ಪಾಲಿಸಿ ಒಂದು ಮಹಾ ಮೋಸ ಎಂದೇ ಜನಜನಿತವಾಗಿತ್ತು. ಆದರೆ ಇಂದಿಗೆ ವಸ್ತುಸ್ಥಿತಿ ಅಷ್ಟು ಕೆಟ್ಟದಾಗಿಲ್ಲ. ಖರ್ಚಿನ ಬಾಬ್ತು ಯುಲಿಪ್‌ ಪಾಲಿಸಿಯು ಮ್ಯೂಚುವಲ್‌ ಫ‌ಂಡುಗಳಿಂದ ದುಬಾರಿಯಾದರೂ ತೀರಾ ಕೆಟ್ಟದಾಗಿಯೇನೂ ಇಲ್ಲ. ಆದರೂ ಹೂಡಿಕೆಯಲ್ಲಿಯೇ ಅಷ್ಟೊಂದು ವ್ಯತ್ಯಾಸ ಗಣನೀಯವೇ ಹೌದು.

ಪ್ರತಿಫ‌ಲ
ಇವಿಷ್ಟು ಖರ್ಚು ವೆಚ್ಚಗಳ ಬಾಬ್ತು. ಇನ್ನು ಉಳಿದಂತೆ ಇವೆರಡು ಸ್ಕೀಮುಗಳ ಪ್ರತಿಫ‌ಲವನ್ನೂ ಹೋಲಿಸಬೇಕು. ಕೇವಲ ಖರ್ಚನ್ನು ಮಾತ್ರ ಅಳೆದು ನೋಡುವುದರಲ್ಲಿ ಅರ್ಥವಿಲ್ಲ. ಆದರೆ ಈ ಬಾಬಿ¤ನಲ್ಲಿ ಹೋಲಿಕೆ ಮಾಡುವುದು ಕಷ್ಟ ಸಾಧ್ಯ. ಯುಲಿಪ್ಪಿನ ಅಡಿಯಲ್ಲಿಯೇ ಬೇರೆ ಬೇರೆ ಕಂಪೆನಿಗಳ ಬೇರೆ ಬೇರೆ ಹೆಸರುಗಳುಳ್ಳ ಹಲವಾರು ಪಾಲಿಸಿಗಳಿವೆ ಮತ್ತು ಅವು ಬೇರೆ ಬೇರೆ ರೀತಿಯ ಪ್ರತಿಫ‌ಲನ್ನು ನೀಡುತ್ತಿವೆ. ಹಾಗೆಯೇ ಮ್ಯೂಚುವಲ್‌ ಫ‌ಂಡ್‌ ಕ್ಷೇತ್ರದಲ್ಲೂ ಹಲವಾರು ಫ‌ಂಡುಗಳಿವೆ ಮತ್ತು ಅವು ಬೇರೆ ಬೇರೆ ರೀತಿಯ ಪ್ರತಿಫ‌ಲವನ್ನು ನೀಡುತ್ತಿವೆ. ವಿಷಯ ಹಾಗಿರುವಾಗ ಯುಲಿಪ್‌ ಮತ್ತು ಮ್ಯೂಚುವಲ್‌ ಫ‌ಂಡುಗಳನ್ನು ತುಲನೆ ಮಾಡಿ ಬೆಟರ್‌ ಆವುದಯ್ನಾ ಅಂದರೆ ಏನಂತ ಹೇಳುವುದು? ಯಾವುದೋ ಒಂದು ಮ್ಯೂಚುವಲ್‌ ಫ‌ಂಡ್‌ ಯಾವುದೋ ಒಂದು ಯುಲಿಪ್‌ ಫ‌ಂಡಿನಿಂದ ಬೆಟರ್‌ ಇದ್ದರೆ ಇನ್ಯಾವುದೋ ಯುಲಿಪ್‌ ಫ‌ಂಡು ಇನ್ಯಾವುದೋ ಮ್ಯೂಚುವಲ್‌ ಫ‌ಂಡಿಗಿಂತ ಬೆಟರಾಗಿರುವುದು ಕಾಣಿಸುತ್ತದೆ. ಈ ಮಜಲಿಗೆ ಬಂದಾಗ ಹೋಲಿಕೆ ಗೋಜಲು ಗೋಜಲಾಗುತ್ತಾ ಸಾಗುತ್ತದೆ. ಅಷ್ಟೇ ಅಲ್ಲದೆ ಈ ಪ್ರತಿಫ‌ಲದ ವ್ಯತ್ಯಾಸಗಳು ಕೂಡಾ ಸದಾ ಕಾಲ ಹಾಗೆಯೇ ಇರುವುದಿಲ್ಲ. ಅವು ಪ್ರತಿ ತಿಂಗಳು ಎಂಬಂತೆ ಸ್ಕೀಮಿನಿಂದ ಸ್ಕೀಮಿಗೆ ಬದಲಾಗುತ್ತಾ ಇರುತ್ತದೆ. ಇದು ಹೂಡಿಕಾ ಕ್ಷೇತ್ರದಲ್ಲಿ ಅತಿ ಸಾಮಾನ್ಯವಾದ ವಿಚಾರ. ಹಾಗಾಗಿ ಪ್ರತಿಫ‌ಲದ ವಿಚಾರದಲ್ಲಿ ಸ್ಕೀಮುಗಳ ತುಲನೆ ಕಷ್ಟ ಸಾಧ್ಯ. ಪ್ರಾಯಶಃ ಆ ಕಾರಣಕ್ಕಾಗಿಯೇ ಇರಬಹುದು ಬಹುತೇಕ ವಿಶ್ಲೇಷಕರು ಒಂದು ಯುಲಿಪ್‌ ಮತ್ತು ಮ್ಯೂಚುವಲ್‌ ಫ‌ಂಡುಗಳ ತುಲನೆಯ ಮಾತು ಬಂದಾಗ ಖರ್ಚಿನ ಬಾಬ್ತು ಮಾತ್ರ ಮಾತನಾಡುತ್ತಾರೆ, ಪತಿಫ‌ಲದಲ್ಲಿ ಇರ ಬಹುದಾದ ವ್ಯತ್ಯಾಸವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ.

ವೈಚಾರಿಕವಾಗಿ ನೋಡಿದರೆ ಒಂದು ಯುಲಿಪ್‌ ಫ‌ಂಡಿಗೂ ಒಂದು ಮ್ಯೂಚುವಲ್‌ ಫ‌ಂಡಿಗೂ ಪ್ರತಿಫ‌ಲದ ದೃಷ್ಟಿಯಲ್ಲಿ ಯಾವುದೇ ವ್ಯತ್ಯಾಸ ಇರಲು ಸಾಧ್ಯವಿಲ್ಲ. ಇರುವ ವ್ಯತ್ಯಾಸ ಏನಿ ದ್ದರೂ ಅದು ಸಂದರ್ಭಾನುಸಾರ ಮತ್ತು ಯಾವುದೇ ಎರಡು ಫ‌ಂಡುಗಳ ನಡುವೆ ಇರಬಹುದಾದ ವ್ಯತ್ಯಾಸ, ಅಷ್ಟೇ ಅಲ್ಲದೆ ಇವೆ ರಡು ವರ್ಗಗಳ ನಡುವೆ ಇರುವ ತಾತ್ವಿಕ ವ್ಯತ್ಯಾಸ ಅಲ್ಲವೇ ಅಲ್ಲ.

ಉಳಿದಂತೆ
ಉಳಿದಂತೆ ಸ್ವಿಚ್ಚಿಂಗ್‌ ಸೌಲಭ್ಯ, ಹಿಂಪಡೆತ ಹಾಗೂ ಆದಾಯ ಕರ ವಿಚಾರಗಳಲ್ಲಿ ಕೂಡಾ ವ್ಯತ್ಯಾಸಗಳಿವೆ. ಈ ಬಗ್ಗೆ ಕಳೆದ ವಾರ ಮಾಹಿತಿ ನೀಡಲಾಗಿದೆ.

ಫೈನಲ್‌ ಮಾತು
ಹಾಗಾಗಿ ಇವೆರಡು ವರ್ಗಗಳನ್ನು ತುಲನೆ ಮಾಡಿ ಯಾವುದು ಉತ್ತಮ ಎನ್ನುವುದು ಕಷ್ಟ ಸಾಧ್ಯ. ಆದರೆ ಯಾವುದೇ ಎರಡು ನಿರ್ದಿಷ್ಟ ಸ್ಕೀಮುಗಳ ನಿಖರವಾದ ವೆಚ್ಚ, ಅವಧಿ, ತೆರಿಗೆ ಮತ್ತು ಪ್ರತಿಫ‌ಲಗಳನ್ನು ನೋಡಿ ಯಾವುದು ಉತ್ತಮ ಎಂದು ಹೇಳುವುದು ಸಾಧ್ಯ. ಹಾಗಾಗಿ ನಾವೆಲ್ಲರೂ ಅಷ್ಟೇ ಮಾಡುತ್ತೇವೆಯೇ ಹೊರತು ಈ ಎರಡು ವರ್ಗಗಳನ್ನು ಹಿಡಿದುಕೊಂಡು ವರ್ಗ ಸಂಘರ್ಷಕ್ಕೆ ಹೊರಟರೆ ಆಗುವುದು ಅಧ್ವಾನವೇ.

ಆದರೆ ಇಲ್ಲೂ ಒಂದು “ಕೊಕ್ಕೆ’ ಇದೆ. ಆ ಕೊಕ್ಕೆ ಏನೆಂದರೆ ಯಾವುದೇ ಎರಡು ಫ‌ಂಡುಗಳ ತುಲನೆ ಈವರೆಗೆ ಹೇಗೆ ಎನ್ನುವುದು ಸಾಧ್ಯವಾದರೂ ಅದೇ ತುಲನೆ ಇನ್ಮುಂದೆಯೂ ಹಾಗೆಯೇ ಇರುತ್ತದೆ ಎಂದು ಹೇಳಲಾಗದು. ಭವಿಷ್ಯತ್ತಿನಲ್ಲಿ ಯಾವ ಸ್ಕೀಮು ಜಾಸ್ತಿ ಪ್ರತಿಫ‌ಲ ನೀಡಬಹುದು ಎಂದು ತಿಳಿಯಲು ಜ್ಯೋತಿಷ್ಯರ ಬಳಿಗೇನೇ ಹೋಗಬೇಕಷ್ಟೆ. ಸಾಕಾ, ಬೇಕಾ ಕನ್ಫ್ಯೂಶನ್‌ ?

– ಜಯದೇವ ಪ್ರಸಾದ ಮೊಳೆಯಾರ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ