ಈ ಸಚಿನ್‌ ಕ್ಯಾನ್ಸರ್‌ ವಿರುದ್ಧ ಸಿಕ್ಸರ್‌ ಹೊಡೆದ !

Team Udayavani, Feb 24, 2019, 12:30 AM IST

ನನ್ನ ಎದುರಿಗಿದ್ದುದು ಎರಡೇ ಆಯ್ಕೆ: ಗೆದ್ದರೆ ಬಾಳು, ಸೋತರೆ ಗೋಳು! ಎಷ್ಟೇ ಕಷ್ಟವಾದ್ರೂ ಸರಿ, ಭವ್ಯಾಳನ್ನು ಉಳಿಸ್ಕೋಬೇಕು ಅಂತಷ್ಟೇ ನಾನು ನಿರ್ಧರಿಸಿದೆ. ಅವಳನ್ನೂ ಜೊತೆಗಿಟ್ಕೊಂಡೇ ವೈದ್ಯರಿಗೆ ನನ್ನ ನಿರ್ಧಾರ ತಿಳಿಸಿದೆ. “ಕೀಮೋ ಥೆರಪಿ ಶುರುವಾಗುತ್ತಿದ್ದಂತೆಯೇ ಅದರ ಸೈಡ್‌ ಎಫೆಕ್ಟ್ ರೂಪದಲ್ಲಿ ತಲೆಯ ಕೂದಲೆಲ್ಲಾ ಉದುರಿಹೋಗುತ್ತೆ. ನಾಲ್ಕು ಹೆಜ್ಜೆ ನಡೆದರೆ, ಕೂದಲು ಜೊಂಪೆಜೊಂಪೆಯಾಗಿ ನೆಲಕ್ಕೆ ಬೀಳುತ್ತೆ. ಆಗ ಕೆಲವರು ಡಿಪ್ರಶನ್‌ಗೆ ಹೋಗಿಬಿಡ್ತಾರೆ ‘ ಅಂದರು ಡಾಕ್ಟರ್‌.

ಇದೊಂದು ಮಧುರ ಪ್ರೇಮದ ಕಥೆ. ಪ್ರೀತಿಸಿದ ಹುಡುಗಿಗೆ ಕ್ಯಾನ್ಸರ್‌ ಇದೆ. ಅದೂ ಏನು? ಫೈನಲ್‌ ಸ್ಟೇಜ್‌ನಲ್ಲಿದೆ. ಆಕೆ ಬದುಕುವ ಸಾಧ್ಯತೆ ತುಂಬಾ ಕಡಿಮೆ ಎಂದು ತಿಳಿದನಂತರವೂ ಅವಳನ್ನೇ ಮದುವೆಯಾದ, ಚಿಕಿತ್ಸೆಗೆ ಹಣ ಹೊಂದಿಸಲು ಕೂಲಿ ಕೆಲಸವನ್ನೂ ಮಾಡಿದ, ಕಡೆಗೊಮ್ಮೆ ಕ್ಯಾನ್ಸರಿನ ವಿರುದ್ಧ  ಗೆಲುವಿನ ಧ್ವಜ ಹಾರಿಸಿರುವ ಕೇರಳದ ಸಚಿನ್‌ಕುಮಾರ್‌ ಈ ಕಥೆಯ ಹೀರೋ. ಈತನ ಕಥಾನಾಯಕಿಯ ಹೆಸರು ಭವ್ಯಾ. ಮೊನ್ನೆಯಷ್ಟೇ ಮಾತಿಗೆ ಸಿಕ್ಕ ಸಚಿನ್‌, ತನ್ನ ಹೋರಾಟದ ಬದುಕಿನ ಕಥೆ ಹೇಳಿಕೊಂಡ. ಅದನ್ನು ಅವನ ಮಾತುಗಳಲ್ಲೇ ವಿವರಿಸುವುದಾದರೆ….
* * * 
“ಡಿಗ್ರಿ ಕಾಲೇಜಿನಲ್ಲಿ ನಾನು ಅವಳಿಗೆ ಒಂದು ತಿಂಗಳು ಸೀನಿಯರ್‌. ಅದೇನು ಕಾರಣವೋ ಗೊತ್ತಿಲ್ಲ; ಭವ್ಯಾ ತಡವಾಗಿ ಸೇರಿಕೊಂಡಳು. ಆ ಹೊತ್ತಿಗೆ ನಮ್ಮ ಸೆಕ್ಷನ್‌ನಲ್ಲಿದ್ದ ಎಲ್ಲ ಹುಡುಗಿಯರ ಪರಿಚಯವೂ ಆಗಿತ್ತು. ಯಾರ ಮೇಲೂ ಪ್ರೀತಿಯಾಗಲಿ, ಆಕರ್ಷಣೆಯಾಗಲಿ ಹುಟ್ಟಿರಲಿಲ್ಲ. ಆದರೆ ಯಾಕೆ ಹಾಗಾಯೊ¤à ಕಾಣೆ; ಮೊದಲ ನೋಟದಲ್ಲೇ ಭವ್ಯಾ ನನಗೆ ಇಷ್ಟ ಆಗಿಬಿಟುÛ. ನಾನೇ ಮುಂದಾಗಿ ಪರಿಚಯ ಹೇಳಿಕೊಂಡೆ. ನನ್ನ ಅದೃಷ್ಟ ಚೆನ್ನಾಗಿತ್ತು; ಮೊದಲ ಭೇಟಿಯಲ್ಲಿ ಅವಳು ಮಲ್ಲಿಗೆಯಂತೆ ನಕ್ಕಳು…

ಒಂದು ಹುಡುಗಿಯ ಮೇಲೆ ಅಥವಾ ಹುಡುಗನ ಮೇಲೆ ಯಾಕೆ ಪ್ರೀತಿ ಹುಟ್ಟುತ್ತೆ ಎಂಬುದಕ್ಕೆ ಪಫೆìಕ್ಟ್ ಆಗಿ ಇಂಥದೇ ಕಾರಣ ಅಂತ ಹೇಳಲು ಆಗಲ್ಲ. ಆದರೆ, ಹುಡುಗ/ಹುಡುಗಿಯ ಮೇಲೆ ಸಾಫ್ಟ್ ಕಾರ್ನರ್‌ ಉಂಟಾಗಲಿಕ್ಕೆ ಖಂಡಿತ ಒಂದು ಕಾರಣ ಇರುತ್ತೆ. ನಮ್ಮ ಜೊತೆಗಿರುವವರು ಬಡವರೋ ಇಲ್ಲಾ ಶ್ರೀಮಂತರೋ ಎಂಬುದನ್ನು ಕಾಲೇಜು ಓದುವ ಹುಡುಗ/ಹುಡುಗಿ ಬಹಳ ಸೂಕ್ಷ್ಮವಾಗಿ ಗಮನಿಸಿ ಅರ್ಥ ಮಾಡಿಕೊಂಡಿರ್ತಾರೆ. ಭವ್ಯಾಳ ಮೇಲೆ ಆಕರ್ಷಣೆ ಬೆಳೆಸಿಕೊಳ್ಳುವ ಮೊದಲು ನಾನೂ ಅಂಥದೊಂದು ಅಬ್ಸರ್ವ್‌ ಮಾಡಿದ್ದೆ. ಆಕೆ ಕಡುಬಡವರ ಮನೆಯ ಹುಡುಗಿ ಎಂಬುದೂ ಅವಳ ಮೇಲೆ ಪ್ರೀತಿ ಹೆಚ್ಚಾಗಲು ಕಾರಣವಾಯ್ತು.

ದಿನಗಳು ಕಳೆದಂತೆಲ್ಲ ನಮ್ಮ ಗೆಳೆತನ ಗಟ್ಟಿಯಾಗ್ತಾ ಹೋಯ್ತು. ಕಷ್ಟ ಸುಖ ಹಂಚಿಕೊಳ್ಳುವಂಥ ಫ್ರೆಂಡ್‌ಶಿಪ್‌ ನಮ್ಮದು ಎಂಬುದು ಖಚಿತವಾದ ನಂತರ, ನಾನೇ ಮುಂದಾಗಿ ಪ್ರಪೋಸ್‌ ಮಾಡಿದೆ. ನನ್ನ ಮನವಿಗೆ ಭವ್ಯಾ, ಅಷ್ಟು ಸುಲಭಕ್ಕೆ ಒಪ್ಪಿಗೆ ಕೊಡಲಿಲ್ಲ. ಆದರೆ, ನನ್ನ ಪ್ರೀತಿಯನ್ನು ನಿರಾಕರಿಸಲೂ ಇಲ್ಲ. ಕೆಲವೇ ದಿನಗಳಲ್ಲಿ ಎರಡೂ ಕುಟುಂಬಗಳಿಗೆ ವಿಷಯ ತಿಳಿಯಿತು. ಬೀಗರ ಕಡೆಯವರು ಶ್ರೀಮಂತರಾಗಿದ್ರೆ ಕಷ್ಟಗಳು ಬಂದಾಗ ಸಹಾಯ ಕೇಳುವುದಕ್ಕಾದ್ರೂ ಅನುಕೂಲ ಆಗುತ್ತೆ ಎಂಬುದು ನಮ್ಮ ಕುಟುಂಬದವರ ವಾದವಾಗಿತ್ತು. ಭವ್ಯಾಳ ಮನೆಯಲ್ಲಂತೂ ನಮ್ಮ ಪ್ರೀತಿಗೆ ಭಾರೀ ವಿರೋಧವಿತ್ತು. ‘ಅವನನ್ನೇ ಮದುವೆ ಆಗ್ತೀನೆ ಅನ್ನೋದಾದ್ರೆ, ಈ ಕ್ಷಣದಿಂದಲೇ ನಮ್ಮ ಪಾಲಿಗೆ ನೀನು-ನಿನ್ನ ಪಾಲಿಗೆ ನಾವು ಸತ್ತುಹೋದ್ವಿ ಅಂತ ತಿಳ್ಕೊಂಡುಬಿಡು’ ಎಂದು ಆಕೆಯ ಮನೆಯವರು ಅಬ್ಬರಿಸಿದ್ದರು.

ನಾವು ಮದುವೆಯಾದರೆ, ಎರಡೂ ಕಡೆಯಿಂದ ಸಪೋರ್ಟ್‌ ಸಿಗೋದಿಲ್ಲ. ಹಾಗಾಗಿ ಮೊದಲು ಡಿಗ್ರಿ ಮುಗಿಸೋಣ. ಆಮೇಲೆ ಕೆಲಸಕ್ಕೆ ಸೇರೋಣ. ಇಬ್ಬರೂ ಒಂದಷ್ಟು ಹಣ ಸಂಪಾದನೆ ಮಾಡಿ, ಯಾರ ಹಂಗಿಲ್ಲದೆ ಬದುಕೋಣ ಅಂತ ಮಾತಾಡಿಕೊಂಡೆವು. ಡಿಗ್ರಿ ಮುಗಿಯುತ್ತಿದ್ದಂತೆಯೇ ಜಿಲ್ಲಾ ಕೇಂದ್ರವಾದ ಮಲಪ್ಪುರಂನಲ್ಲಿ ಕಂಪ್ಯೂಟರ್‌ ಆಪರೇಟರ್‌ ಆಗಿ ಭವ್ಯಾ ಕೆಲಸಕ್ಕೆ ಸೇರಿದಳು.
 
ಒಂದೆರಡು ತಿಂಗಳು ಕಳೆದವು. ಈ ಮಧ್ಯೆ ಭವ್ಯಾ, ವಿಪರೀತ ಬೆನ್ನುನೋವು ಎನ್ನಲು ಶುರುಮಾಡಿದಳು. ಹೇಳಿಕೇಳಿ ಅವಳು ಮಾಡ್ತಾ ಇದ್ದುದು ಕಂಪ್ಯೂಟರ್‌ ಆಪರೇಟರ್‌ ಕೆಲಸ. ಬೆಳಗಿಂದ ಸಂಜೆಯವರೆಗೆ ಕಂಪ್ಯೂಟರಿನ ಮುಂದೆಯೇ ಕುಳಿತಿರಬೇಕು. ಇಡೀ ದಿನ ಕಂಪ್ಯೂಟರ್‌ ಪರದೆಯನ್ನೇ ನೋಡುತ್ತಿರಬೇಕು. ಈ ಕಾರಣದಿಂದಲೇ ಬೆನ್ನುನೋವು ಬಂದಿರಬಹುದೆಂಬ ಊಹೆ ನಮ್ಮದಾಗಿತ್ತು. ಮಲಪ್ಪುರಂನ ಆಸ್ಪತ್ರೆಗೆ ಹೋಗಿ ಇದೇ ಕಾರಣ ಹೇಳಿದೆವು. ಡಾಕ್ಟರು, ನೋವು ನಿವಾರಕ ಮಾತ್ರೆ ಬರೆದುಕೊಟ್ಟರು. ಅದರಿಂದ ಏನೇನೂ ಪ್ರಯೋಜನವಾಗಲಿಲ್ಲ. ಆಗ, ಮನೆಯವರಿಗೆ ಒಂದು ಮಾತೂ ಹೇಳದೆ, ನರ್ಸಿಂಗ್‌ ಹೋಂಗೆ ಹೋದೆವು. ನಾವು ಹೇಳಿದ್ದನ್ನೆಲ್ಲ ಕೇಳಿ, ಒಮ್ಮೆ ಎಕ್ಸ್‌ರೇ ತೆಗೆಯೋಣ. ಏನಾದ್ರೂ ಸುಳಿವು ಸಿಗಬಹುದು ಎಂದರು ಡಾಕ್ಟರ್‌. ಎಕ್ಸ್‌ರೇ ರಿಪೋರ್ಟ್‌ ಪಡೆಯಲೆಂದು ಸಂಜೆ ಹೋದರೆ, ಆ ವೈದ್ಯರು ಗಾಬರಿಯಿಂದ ಹೇಳಿದರು: “ಬೆನ್ನುಮೂಳೆಯ ಭಾಗದಲ್ಲಿ ಏನೋ ಸಮಸ್ಯೆಯಾಗಿದೆ ಅನಿಸ್ತದೆ. ಯಾರಾದ್ರೂ ಸರ್ಜನ್‌ ಹತ್ರ ಚೆಕ್‌ ಮಾಡಿÕ. ಲೇಟ್‌ ಮಾಡಬೇಡಿ. ನಾಳೆಯೇ ಹೋಗಿ…’

ಮರುದಿನವೇ ಕೊಯಿಕ್ಕೋಡ್‌ನ‌ಲ್ಲಿದ್ದ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗೆ ಹೋಗಿ ಚೆಕಪ್‌ ಮಾಡಿಸಿದೆವು. ಅಲ್ಲಿನ ವೈದ್ಯರು ವಿಷಾದದಿಂದ ಹೇಳಿದರು: “ಭವ್ಯಾಗೆ ಇಂಗ್‌ ಸರ್ಕೋಮಾ ಎಂಬ ಕ್ಯಾನ್ಸರ್‌ ಇದೆ. ಇದು ಸಾವಿರದಲ್ಲಿ ಒಬ್ಬರಿಗೆ ಮಾತ್ರ ಕಾಣಿಸಿಕೊಳ್ಳುತ್ತೆ. ಶಾಕಿಂಗ್‌ ಸುದ್ದಿ ಏನ್‌ ಗೊತ್ತ? ಕ್ಯಾನ್ಸರ್‌ ಆಗಲೇ 4ನೇ ಸ್ಟೇಜ್‌ನಲ್ಲಿದೆ. ಸ್ವಲ್ಪ ತಡಮಾಡಿ ದ್ರೂ ಬದುಕುವ ಛಾನ್ಸ್‌ ಖಂಡಿತ ಇಲ್ಲ. ತಕ್ಷಣದಿಂದಲೇ ಕೀಮೋಥೆರಪಿ ಗೆ ರೆಡಿ ಆಗಬೇಕು. ಕ್ಯಾನ್ಸರ್‌ ಗೆಲ್ಲಬಲ್ಲೆ ಎಂಬ ಆತ್ಮಶ್ವಾಸ ನಿಮಗಿರಬೇಕು. ತಿಂಗಳಿಗೆ ಎರಡು ಬಾರಿ ಕೀಮೋಥೆರಪಿ ಆಗಬೇಕು. ಒಂದು ಸಲದ ಕೀಮೋಥೆರಪಿಗೆ 40 ಸಾವಿರ ಆಗುತ್ತೆ. ಎಕ್ಸ್‌ರೇ, ಸ್ಕ್ಯಾನಿಂಗ್‌, ಮಾತ್ರೆ, ಎಲ್ಲಾ ಸೇರಿದ್ರೆ 20 ಸಾವಿರ ಬೀಳುತ್ತೆ. ಅಂದ್ರೆ ತಿಂಗಳಿಗೆ 1 ಲಕ್ಷ ರೂ. ಖರ್ಚಿರುತ್ತೆ. ಆದ್ರೂ ಜೀವ ಉಳಿಯುತ್ತೆ ಅಂತ ಗ್ಯಾರಂಟಿ ಕೊಡಲು ಆಗಲ್ಲ. ಯಾಕಂದ್ರೆ ಕ್ಯಾನ್ಸರ್‌ ಆಗಲೇ 4ನೇ ಸ್ಟೇಜ್‌ನಲ್ಲಿದೆ…’

ಆಗ, ನನ್ನ ಎದುರಿಗಿದ್ದುದು ಎರಡೇ ಆಯ್ಕೆ: ಗೆದ್ದರೆ ಬಾಳು, ಸೋತರೆ ಗೋಳು! ಎಷ್ಟೇ ಕಷ್ಟವಾದ್ರೂ ಸರಿ, ಭವ್ಯಾಳನ್ನು ಉಳಿಸ್ಕೋಬೇಕು ಅಂತಷ್ಟೇ ನಾನು ನಿರ್ಧರಿಸಿದೆ. ಅವಳನ್ನೂ ಜೊತೆಗಿಟ್ಕೊಂಡೇ ವೈದ್ಯರಿಗೆ ನನ್ನ ನಿರ್ಧಾರ ತಿಳಿಸಿದೆ. ಕೀಮೋ ಶುರುವಾಗುತ್ತಿದ್ದಂತೆಯೇ ಅದರ ಸೈಡ್‌ ಎಫೆಕ್ಟ್ ರೂಪದಲ್ಲಿ ತಲೆಯ ಕೂದಲೆಲ್ಲಾ ಉದುರಿಹೋಗುತ್ತೆ. ನಾಲ್ಕು ಹೆಜ್ಜೆ ನಡೆದರೆ, ಕೂದಲು ಜೊಂಪೆಜೊಂಪೆಯಾಗಿ ನೆಲಕ್ಕೆ ಬೀಳುತ್ತೆ. ಆಗ ಕೆಲವರು ಡಿಪ್ರಶನ್‌ಗೆ ಹೋಗಿಬಿಡ್ತಾರೆ ಅಂದರು ಡಾಕ್ಟರ್‌. ಈ ವೇಳೆಗೆ, ಕ್ಯಾನ್ಸರ್‌ ವಿರುದ್ಧ ಹೋರಾಡಲು ಮಾನಸಿಕವಾಗಿ ರೆಡಿಯಾಗಿದ್ದ ಭವ್ಯಾ, ಬಾಲ್ಡಿ ಮಾಡಿಸ್ಕೊಂಡು ಟ್ರೀಟ್‌ಮೆಂಟ್‌ ತಗೊಳ್ತೀನಿ ಸಾರ್‌’ ಅಂದಳು.

ಭವ್ಯಾಗೆ ಕ್ಯಾನ್ಸರ್‌ ಇದೆ ಅಂತ ಗೊತ್ತಾಗುತ್ತಿದ್ದಂತೆ, ನನ್ನ ಪರಮಾಪ್ತರಲ್ಲಿ ಹಲವರು ತಾವಾಗಿಯೇ ದೂರವಾಗಿಬಿಟ್ಟರು. ಅವರಿಗೆಲ್ಲಾ- ಈ ಹುಡುಗ ಹೆಲ್ಪ್ ಕೇಳಿಬಿಟ್ರೆ ಎಂಬ ಭಯ! ಮತ್ತೆ ಕೆಲವರು- “ಕಾಯಿಲೆ ಇರೋಳನ್ನ, ಅದರಲ್ಲೂ ಕ್ಯಾನ್ಸರ್‌ ಇರುವವಳನ್ನು ಕಟ್ಕೊಂಡು ಏನು ಸುಖಪಡ್ತೀ? ಬೇಗ ಕಳಚಿಕೋ. ಎಂದೆಲ್ಲಾ ಬುದ್ಧಿ ಹೇಳಿದರು. ಉಹುಂ, ಅಂಥದೊಂದು ಕೆಲಸ ಮಾಡಲು ನನ್ನ ಮನಸ್ಸು ಒಪ್ಪಲಿಲ್ಲ. ಇಂಥ ಸಂದರ್ಭದಲ್ಲಿ ಭವ್ಯಾಗೆ ಬೆಂಬಲವಾಗಿ ನಿಲ್ಲಬೇಕು. ನಾನು ಒಂಟಿಯಲ್ಲ ಅನ್ನುವ ಫೀಲ್‌ ಅವಳಿಗೆ ಬರುವಂತೆ ನೋಡ್ಕೊàಬೇಕು ಅನ್ನಿಸ್ತು. ಇಷ್ಟೆಲ್ಲ ಆಗಿದ್ದರೂ ಎರಡೂ ಕುಟುಂಬಗಳಿಗೆ ಕ್ಯಾನ್ಸರ್‌ನ ವಿಷಯ ಗೊತ್ತಿರಲಿಲ್ಲ. ಎರಡೂ ಕಡೆಯಿಂದ- “ಈ ಸಂಬಂಧ ಬೇಡ’ ಎಂಬ ಮಾತು ಕೇಳಿಬರುತ್ತಿದ್ದರೂ, ಭವ್ಯಾಳೊಂದಿಗೆ ಎಂಗೇಜ್‌ಮೆಂಟ್‌ ಮಾಡಿಕೊಂಡೇಬಿಟ್ಟೆ!

ಆಗ, ಹೆತ್ತವರು ಇನ್ನಷ್ಟು ಬಿಗುವಾದರು. ಅವತ್ತೂಂದು ರಾತ್ರಿ ಅಪ್ಪನ ಎದುರು ಕೂತು ಮೆಲುದನಿಯಲ್ಲಿ ಹೇಳಿದೆ: “ಅಪ್ಪಾ, ಭವ್ಯಾಗೆ ಕ್ಯಾನ್ಸರ್‌ ಇದೆ! ಏನ್ಮಾಡೋದಪ್ಪ…?’

ನನ್ನ ತಂದೆ ವಿದ್ಯಾವಂತನಲ್ಲ, ಶ್ರೀಮಂತನಲ್ಲ, ಬಿಸಿನೆಸ್‌ಮನ್‌ ಅಲ್ಲ. ಕೂಲಿ ಕೆಲಸ ಮಾಡಿಕೊಂಡು ಕುಟುಂಬ ಸಲಹುತ್ತಿದ್ದ ಕಡುಬಡವ. ನನ್ನ ಮಾತು ಕೇಳಿದಾಗ ಅಪ್ಪ ಏನೆಂದರು ಗೊತ್ತಾ?: “ಏನು? ಕ್ಯಾನ್ಸರ್‌ ಅಂದೆಯಾ? ಹಾಗಾದರೆ ಆ ಹುಡುಗೀನ ಕೈ ಬಿಡಬೇಡ. ಮದುವೆ ಮಾಡ್ಕೊà. ಅವಳಿಗೆ ಚಿಕಿತ್ಸೆ ಕೊಡಿಸೋಣ. ಅವಳನ್ನು ಮನೆ ಮಗಳ ಥರಾ ನಾವು ನೋಡಿಕೊಳೆ¤àವೆ. ಆಸ್ಪತ್ರೆ ಖರ್ಚು ವಿಪರೀತ ಇರುತ್ತೆ. ಒಂದು ಕೆಲ್ಸ ಮಾಡು. ನೀನು ಸೌದಿಗೇ, ದುಬೈಗೋ ಹೋಗಿ ಕೆಲಸಕ್ಕೆ ಸೇರಿಕೋ. ಅಲ್ಲಿ ದುಡಿದ ಹಣದಿಂದ ಭವ್ಯಾಗೆ ಒಳ್ಳೆಯ ಟ್ರೀಟ್‌ಮೆಂಟ್‌ ಕೊಡಿಸೋಣ…

ನೋಡನೋಡುತ್ತಲೇ, ಎರ್ನಾಕುಲಂನ ಲೇಕ್‌ಶೈರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಶುರುವಾಗಿಯೇಬಿಟ್ಟಿತು. ನಾವೋ ಕಡುಬಡವರು. ಭವ್ಯಾರ ಮನೆಯಲ್ಲಿ ನಮಗಿಂತಲೂ ಹೆಚ್ಚಿನ ಬಡತನವಿತ್ತು. ವಿಷಯ ಗೊತ್ತಾದಾಗ, ಅವರೆಲ್ಲಾ ದಿಕ್ಕುತೋಚದೆ ಕೂತುಬಿಟ್ಟರು. ಭವಿಷ್ಯದ ಬದುಕಿಗೆಂದು ನಾವು ಜೋಡಿಸಿಕೊಂಡಿದ್ದ ಹಣ, ಕೆಲವೇ ದಿನಗಳಲ್ಲಿ ಖರ್ಚಾಗಿಹೋಯಿತು. ದುಬೈಗೆ ಹೋಗಿ ಹೆಚ್ಚು ಹಣ ದುಡಿದು ತರಲು  ನಾನು  ತುದಿಗಾಲಲ್ಲಿ ನಿಂತಿದ್ದೆ. ಆದರೆ, ಕೀಮೋಥೆರಪಿಯಂಥ ಚಿಕಿತ್ಸೆಯಾದಾಗ ವಿಪರೀತ ತಲೆಸುತ್ತು, ತಲೆನೋವು, ಜ್ವರ, ಬವಳಿ ಬೀಳುವುದು ಮುಂತಾದ ಸಮಸ್ಯೆಗಳು ಜೊತೆಯಾಗುತ್ತವೆ. ಇಂಥ ಸಂದರ್ಭದಲ್ಲಿ ಜೊತೆಗಿದ್ದು ಧೈರ್ಯ ಹೇಳುವುದು ಮುಖ್ಯ. ಹಾಗಾಗಿ ದುಬೈಗೆ ಹೋಗದೇ ಉಳಿದೆ. ಆದರೆ ಆಸ್ಪತ್ರೆಯ ಖರ್ಚು ಹೊಂದಿಸಲು ಕೆಲಸ ಮಾಡಲೇಬೇಕಿತ್ತು. ಮನೆ ನಿರ್ಮಾಣದಲ್ಲಿ ಟೈಲ್ಸ್‌ ಹಾಕ್ತಾರಲ್ಲ; ಆ ಕೆಲಸಕ್ಕೆ ಸೇರಿಕೊಂಡೆ. ನಾಳೆ ಏನಾಗುತ್ತೋ ಗೊತ್ತಿಲ್ಲ. ಈ ಕ್ಷಣವಂತೂ ನಮ್ಮದು. ಇದ್ದಷ್ಟು ಹೊತ್ತು ಲೈಫ್ನ ಎಂಜಾಯ್‌ ಮಾಡೋಣ ಎಂದುಕೊಂಡು 2018ರ ಮಾರ್ಚ್‌ 21ರಂದು ಭವ್ಯಾಳನ್ನು ಮದುವೆಯಾದೆ. ಈ ವೇಳೆಗೆ 13 ಕೀಮೋಥೆರಪಿ ಚಿಕಿತ್ಸೆಗಳು ಯಶಸ್ವಿಯಾಗಿ ಮುಗಿದಿದ್ದವು. ಮದುವೆಯಾದ 6ನೇ ದಿನಕ್ಕೆ ಚೆಕಪ್‌ಗೆಂದು ಆಸ್ಪತ್ರೆಗೆ ಹೋದರೆ, ಖುಷಿಯ ಸುದ್ದಿಯೊಂದು ನಮಗಾಗಿ ಕಾದಿತ್ತು. ವೈದ್ಯರು- “ಕಂಗ್ರಾಟ್ಸ್‌, ಕ್ಯಾನ್ಸರ್‌ ಗೆಡ್ಡೆಗಳನ್ನು ನಿರ್ಮೂಲನ ಮಾಡುವಲ್ಲಿ ಶೇ. 90ರಷ್ಟು ಯಶಸ್ಸು ಸಿಕ್ಕಿದೆ. ಇದು ಮೈಮರೆಯುವ ಕ್ಷಣವಲ್ಲ. ಈ ಕ್ಷಣಕ್ಕೆ ನಾವು ಗೆದ್ದಿದ್ದೀವಿ. ಈ ಕಾಯಿಲೆ 5 ವರ್ಷದ ನಂತರ ಮತ್ತೆ ಬರಬಹುದು. ಹಾಗಾಗಿ ಮೇಲಿಂದ ಮೇಲೆ ಟ್ರೀಟ್‌ಮೆಂಟ್‌ ತಗೊಳ್ತಾನೇ ಇರಬೇಕು…’ ಅಂದರು.

ಸದ್ಯ, ಕಾಯಿಲೆ ದೂರಾಗಿದೆ. ಸ್ವಲ್ಪ ದಿನದ ಮಟ್ಟಿಗಾದ್ರೂ ನೆಮ್ಮದಿಯಿಂದ ಇರಬಹುದು ಅಂದುಕೊಂಡಾಗಲೇ, ಈ ವರ್ಷದ ಆರಂಭದಲ್ಲಿ ಒಂದು ಎಡವಟ್ಟಾಗಿಹೋಯ್ತು. ನಮ್ಮ ಬದುಕನ್ನ, ನಗುವನ್ನ ತಪ್ಪಾಗಿ ಅರ್ಥಮಾಡಿಕೊಂಡ ಕೆಲವರು- “ಅವಳಿಗೆ ಯಾವ ಕಾಯ್ಲೆನೂ ಇಲ್ಲ. ಗುಂಡ್‌ಕಲ್ಲು ಇದ್ದಂಗಿದಾಳೆ. ಅವಳಿಗೆ ಹುಷಾರಿಲ್ಲ ಅಂತ ಸುಳ್ಳು ಹೇಳಿಕೊಂಡು ದುಡ್ಡು ಕಲೆಕ್ಟ್ ಮಾಡಿ, ಈಗ ಇಬ್ರೂ ಮಜಾ ಮಾಡ್ತಿದಾರೆ’ ಎಂದೆಲ್ಲಾ ಸುಳ್ಳು ಸುದ್ದಿ ಹಬ್ಬಿಸಿಬಿಟ್ರಾ. ಇದನ್ನೇ ಸತ್ಯವೆಂದು ನಂಬಿ, ಆತ್ಮೀಯರೇ ನಮ್ಮಿಂದ ದೂರಾಗಿಬಿಟ್ರಾ…

ಕೀಮೋಥೆರಪಿ ಇನ್ನೂ ನಾಲ್ಕು ಸೆಷನ್‌ ಆಗಬೇಕು ಅಂದಿದಾರೆ ಡಾಕ್ಟರ್‌. ಈಗ ಭವ್ಯಾಳ ಜೊತೆ ನನ್ನ ಹೆತ್ತವರೂ ಇದ್ದಾರೆ. ನನ್ನ ತಾಯಿ, ಕೂಲಿಗೆ ಹೋಗುವುದು ಬಿಟ್ಟು, ಸೊಸೇನ ನೋಡಿಕೊಳ್ತಿದಾರೆ. ಬದುಕಿರುವಷ್ಟು ದಿನವೂ ಭವ್ಯಾ ಟ್ರೀಟ್‌ಮೆಂಟ್‌ ತಗೊಳ್ತಾನೇ ಇರಬೇಕು. ಅವಳನ್ನು ನೋಡಿಕೊಳ್ಳಲು ಒಬ್ಬರು ಮನೇಲಿ ಇರಲೇಬೇಕು. ಹಾಗಾಗಿ, ವಾರದಲ್ಲಿ ಮೂರು ದಿನ ಕೆಲಸಕ್ಕೆ ಹೋಗೋದು, ಇನ್ನು ಮೂರು ದಿನ ಆಸ್ಪತ್ರೆಗೆ ಓಡುವುದು… ಹೀಗೇ ನಡೀತಿದೆ ಬದುಕು. ಏನೇ ಕಷ್ಟ ಬರಲಿ ಸಾರ್‌, ಎದುರಿಸ್ತೀನಿ. ಭವ್ಯಾಳನ್ನು ಮದುವೆ ಆಗಿರೋದಕ್ಕೆ ಹೆಮ್ಮೆ-ಖುಷಿ ಎರಡೂ ಇದೆ. ಅವಳನ್ನು ಖಂಡಿತ ಉಳಿಸಿಕೊಳ್ತೀನಿ. ನಿಮ್ಮದು, ನಿಮ್ಮ ಓದುಗರದ್ದು ಹಾರೈಕೆ ಇರಲಿ’ ಅನ್ನುತ್ತಾ ಮಾತು ಮುಗಿಸಿದ ಸಚಿನ್‌ಕುಮಾರ್‌.
* * * 
ಬಡವರ ಮನೆಯಲ್ಲಿ ಬೆಳೆದ, ಬಡತನವನ್ನೇ ಉಸಿರಾಡಿದ ವ್ಯಕ್ತಿ ಸಚಿನ್‌. ಈ ಹುಡುಗನಿಗೆ ಯುದ್ಧ ಗೆಲ್ಲುವ ಉತ್ಸಾಹವಿದೆ. ಗೆಲ್ಲಬಲ್ಲೆ ಎಂಬ ಆತ್ಮಶ್ವಾಸವಿದೆ. ಗೆಳತಿಗೆ ಹೆಗಲಾಗಬೇಕು ಎಂಬ ಕಾಳಜಿಯಿದೆ. ಆದರೆ, ನಿಶ್ಚಿತ ಆದಾಯದ ನೌಕರಿಯಿಲ್ಲ. ಪತ್ನಿಯ ಚಿಕಿತ್ಸೆಗೆ ಅಗತ್ಯವಾಗಿ ಬೇಕಿರುವ ಹಣವಿಲ್ಲ. ಸಾಧ್ಯವಾದರೆ ಸಹಾಯ ಮಾಡಿ: Sachin kumar P.R., Kerala Gramin Bank; A/c No.: 40158101087592; IFSC: KLGB0040158, NETTIKULAM Branch,   ಇದು ಅವನ ಅಕೌಂಟ್‌ ವಿವರ.
ಅಂದಹಾಗೆ, ಸಚಿನ್‌ಗೆ ಮಲಯಾಳಂ ಚೆನ್ನಾಗಿ ಅರ್ಥವಾಗುತ್ತದೆ. ಆತನೊಂದಿಗೆ ಮಾತಾಡಬೇಕು ಅನಿಸಿದರೆ 8606682453.

– ಎ.ಆರ್‌. ಮಣಿಕಾಂತ್‌


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ