ಬಲಗೈ ತುಂಡಾದರೂ, ಬದುಕು ಬಂಗಾರವಾಯಿತು!

Team Udayavani, Mar 10, 2019, 12:30 AM IST

“ಆಕೆ ಬದುಕೋದು ಡೌಟು. ಹೇಗಿದ್ರೂ ಇದು ಕೇಸ್‌ ಆಗುತ್ತೆ. ಒಂದ್ಕಡೆ ಪೊಲೀಸರು, ಇನ್ನೊಂದ್ಕಡೆಯಿಂದ ನಕ್ಸಲರು ಬೆಂಡ್‌ ತೆಗೀತಾರೆ. ಯಾಕೆ ಬೇಕು ಸಹವಾಸ?’ ಎಂದು ಸ್ಥಳದಲ್ಲಿದ್ದ ಜನ ಮುಖಕ್ಕೆ ಹೊಡೆದಂತೆ ಹೇಳಿ ಕಾಲು ಕೀಳುತ್ತಿದ್ದರು. ಕಡೆಗೊಮ್ಮೆ ನಿವೃತ್ತ ಯೋಧರೊಬ್ಬರು ನನಗೆ ಪ್ರಥಮ ಚಿಕಿತ್ಸೆ ನೀಡಿದರು. ಸ್ಲೀಪರ್‌ ಬೋಗಿಯಿಂದ ಕಳಚಿ ಬಿದ್ದಿದ್ದ ಒಂದು ಸೀಟ್‌ನ ಮೇಲೆ ನನ್ನನ್ನು ಮಲಗಿಸಿ, ಪ್ಲಾಟ್‌ಫಾರ್ಮ್ನ ಒಂದು ಮೂಲೆಗೆ ತಂದಿಟ್ಟರು. 

ರೈಲು ಅಪಘಾತದಲ್ಲಿ ಆಕೆಯ ಬಲಗೈ ತುಂಡಾಗಿ ಹೋಯಿತು. ಈ ಭೀಕರ ದುರಂತದಲ್ಲಿ ಜೀವ ಉಳಿಯಿತಲ್ಲ: ಅದಕ್ಕೆ ಸಮಾಧಾನ ಮಾಡಿಕೊಳ್ಳಮ್ಮಾ ಎಂದರು ಡಾಕ್ಟರ್‌. ಆನಂತರದಲ್ಲಿ, ತುಂಡಾಗಿ ಹೋದ ಬಲಗೈಗಾಗಿ ಈಕೆ ಚಿಂತಿಸುತ್ತಾ ಕೂರಲಿಲ್ಲ. ವಿಧಿಯನ್ನು ಹಳಿಯುತ್ತಾ ಖನ್ನತೆಗೆ ಈಡಾಗಲಿಲ್ಲ. ಬದಲಾಗಿ, ಎಡಗೈಲಿ ಪೆನ್‌ ಹಿಡಿದಳು. ಕೇವಲ ನಾಲ್ಕೇ ತಿಂಗಳಲ್ಲಿ ವೇಗವಾಗಿ ಬರೆಯಲು ಕಲಿತಳು. ಅಷ್ಟೇ ಅಲ್ಲ: ಆರ್ಕಿಟೆಕ್ಚರ್‌ ಎಂಜಿನಿಯರಿಂಗ್‌ನಲ್ಲಿ ಮುಂಬೈ ಯುನಿವರ್ಸಿಟಿಗೇ ಮೊದಲ ರ್‍ಯಾಂಕ್‌ ಪಡೆದಳು! ಈ ಛಲಗಾತಿಯ ಹೆಸರು ಶ್ರೇಯಾ ಶ್ರೀವಾತ್ಸವ. ಬೆಂಗಳೂರು- ಮಂಗಳೂರು- ಉಡುಪಿ ಅಂದ್ರೆ ನಂಗೆ ಸಖತ್‌ ಇಷ್ಟ ಅನ್ನುವ ಈಕೆ ತನ್ನ ಬಾಳ ಕಥೆಯನ್ನು ಸಡಗರದಿಂದಲೇ ಹೇಳಿಕೊಂಡಿದ್ದಾರೆ, ಓದಿಕೊಳ್ಳಿ…

 “ನಾವು ಬಂಗಾಳಿಗಳು. ಮೂಲತಃ ಕೋಲ್ಕತ್ತಾದವರು. ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿಯೇ ನಮ್ಮ ಅಜ್ಜ ಮುಂಬಯಿಗೆ ಬಂದರಂತೆ. ಆನಂತರದಲ್ಲಿ ಮುಂಬಯಿಯೇ ನಮ್ಮ ಕುಟುಂಬದವರ ವಾಸದ ನೆಲೆಯಾಯಿತು. ಸಂಬಂಧಿಕರೆಲ್ಲಾ ಕೋಲ್ಕತ್ತಾದಲ್ಲಿಯೇ ಇದ್ದರು. ಹಬ್ಬ, ಮದುವೆ, ಸುದೀರ್ಘ‌ ರಜೆಯಂಥ ಸಂದರ್ಭಗಳಲ್ಲಿ ಕೋಲ್ಕತ್ತಾಕ್ಕೆ ಹೋಗಿ ಬರುವುದು ನಮಗೆ ಅಭ್ಯಾಸವಾಗಿತ್ತು. ಹೀಗಿದ್ದಾಗಲೇ, 2010ರಲ್ಲಿ, ಅಂದರೆ 18 ವರ್ಷಗಳ ಹಿಂದೆ, ಕುಟುಂಬದ ಮದುವೆಯೊಂದರಲ್ಲಿ ಪಾಲ್ಗೊಳ್ಳಲು ಕೋಲ್ಕತ್ತಾಗೆ ಹೋಗಬೇಕಾಗಿ ಬಂತು. ನಾನಾಗ ಆರ್ಕಿಟೆಕ್ಚರ್‌ ಎಂಜಿನಿಯರಿಂಗ್‌ನ ಮೂರನೇ ವರ್ಷದಲ್ಲಿದ್ದೆ. ಡಿಗ್ರಿ ಮುಗಿಯುತ್ತಿದ್ದಂತೆಯೇ ಬಗೆಬಗೆಯ ಮನೆ, ಕಟ್ಟಡ, ಬಂಗಲೆಗಳ ಪ್ಲಾನ್‌ಗಳನ್ನು ತಯಾರಿಸಬೇಕು. ವಿಭಿನ್ನ, ವಿಶಿಷ್ಟ ಡಿಸೈನ್‌ಗಳ ಮೂಲಕ ಎಲ್ಲರ ಮನಸ್ಸು ಗೆಲ್ಲಬೇಕು ಎಂಬುದು ನನ್ನ ಆಸೆಯಾಗಿತ್ತು.

ತಮಾಷೆ, ಹುಸಿಮುನಿಸು, ಕಡೆಗೊಂದು ಗ್ರೂಪ್‌ ಫೋಟೋ.. ಇಂಥ ಗಡಿಬಿಡಿಗಳ ಮಧ್ಯೆಯೇ ಮದುವೆ  ಮುಗಿಯಿತು. ಅಮ್ಮ ಮತ್ತು ತಮ್ಮನೊಂದಿಗೆ, ಕೋಲ್ಕತ್ತಾದಿಂದ ಮುಂಬಯಿಗೆ ತೆರಳುವ ಜ್ಞಾನೇಶ್ವರಿ ಎಕ್ಸ್‌ಪ್ರೆಸ್‌ ರೈಲು ಹತ್ತಿದೆ. ಅವತ್ತು 2010ರ ಮೇ 28, ಶುಕ್ರವಾರ. ನಾನು ಮೇಲಿನ ಬರ್ತ್‌ನಲ್ಲಿದ್ದೆ. ರಾತ್ರಿ ಊಟ ಮುಗಿಸಿ, ಅಮ್ಮನಿಗೂ- ತಮ್ಮನಿಗೂ ಗುಡ್‌ನೈಟ್‌ ಹೇಳಿ ಮಲಗಿಕೊಂಡೆ.

ನಡುರಾತ್ರಿಯಲ್ಲಿ ಇದ್ದಕ್ಕಿದ್ದಂತೆಯೇ ರೈಲು ಜೋರಾಗಿ ಅಲುಗಾಡಿತು. ಗೊತ್ತು ಗುರಿಯಿಲ್ಲದೆ ಚಲಿಸಿದಂತೆ ಭಾಸವಾಯಿತು. ಅದರ ಹಿಂದೆಯೇ ರೈಲಿನಲ್ಲಿದ್ದ ಜನರೆಲ್ಲ ಒಂದೇ ಸಮನೆ ಬೊಬ್ಬೆ ಹಾಕುತ್ತಿರುವುದು ಕೇಳಿಸಿತು. ಏನಾಯಿತು? ಯಾಕೆ ಇವರೆಲ್ಲಾ ಕಿರುಚುತ್ತಿದ್ದಾರೆ? ರೈಲು ಹಳಿ ತಪ್ಪಿದೆಯಾ? ಏನಾದರೂ ಅನಾಹುತವಾಗಿದೆಯಾ ಎಂದೆಲ್ಲಾ ಯೋಚಿಸುತ್ತ, “ಅಮ್ಮಾ, ಯಾಕೆ ಇವರೆಲ್ಲಾ ಹೀಗೆ ಕೂಗಾಡ್ತಿದ್ದಾರೆ?’ ಎಂದು ಕೇಳ್ಳೋಣ ಅಂದುಕೊಂಡೆ. ಆಗಲೇ ವಿಮಾನವೊಂದು ತಲೆಯ ಮೇಲೆ ಹಾರಿದಾಗ ಆಗುತ್ತದಲ್ಲ; ಅಂಥ ಸದ್ದಾಗಿ, ರೈಲು ಇದ್ದಕ್ಕಿದ್ದಂತೆಯೇ ಎರಡೆರಡು ಬಾರಿ ಎದ್ದು ಕುಣಿದಂತಾಯಿತು. ಮೇಲಿನ ಬರ್ತ್‌ನಲ್ಲಿ ಮಲಗಿದ್ದವಳು, ಅಲ್ಲಿಂದ ದಭಾರನೆ ನೆಲಕ್ಕೆ ಬಿದ್ದಿದ್ದೆ. ಆಗಲೇ ,ನಾವಿದ್ದ ಬೋಗಿಗೇ ಇನ್ಯಾವುದೋ ವಾಹನ ಡಿಕ್ಕಿ ಹೊಡೆದಿದೆಯೆಂದು ಗೊತ್ತಾಯಿತು.

ಎಚ್ಚರವಾದಾಗ ನೋಡಿದರೆ, ನಾನು ರೈಲಿನಲ್ಲಿರಲಿಲ್ಲ. ರೈಲು ಹಳಿಗಳ ಒಂದು ಬದಿಯಲ್ಲಿ, ಅವಶೇಷಗಳ ಮಧ್ಯೆ ಬಿದ್ದಿದ್ದೆ. ನನ್ನ ಆಚೀಚೆ ಹತ್ತಾರು ಮಂದಿ ಬಿದ್ದಿದ್ದರು. ಎಲ್ಲರಿಗೂ ಗಾಯವಾಗಿತ್ತು. ಕೆಲವರಿಗೆ ಕೈ ಕಾಲುಗಳೇ ಮುರಿದು ಹೋಗಿದ್ದವು. ರೈಲು ನಿಲ್ದಾಣ, ಅಲ್ಲಿನ ಕೊಳಕು, ಆ ದುರ್ವಾಸನೆ… ಅಯ್ಯಯ್ಯೋ, ಇದೇನಾಗಿದೆ ಎಂದು ನೋಡಿದರೆ- ಮರದಿಂದ ನುಗ್ಗೇಕಾಯಿ ನೇತಾಡುತ್ತದಲ್ಲ; ಹಾಗೆ ನನ್ನ ಬಲಗೈ ನೇತಾಡುತ್ತಿತ್ತು. ರೈಲು ಆ್ಯಕ್ಸಿಡೆಂಟ್‌ ಆಗಿದೆ. ಅಪಘಾತದ ತೀವ್ರತೆಗೆ ನನ್ನ ಬಲಗೈ ಕತ್ತರಿಸಿ ಹೋಗಿದೆ. ಕೆಲವು ಸ್ನಾಯುಗಳ ಸಹಾಯದಿಂದ ಅದು ತುಂಡಾಗಿ ಬೀಳದೇ ಉಳಿದಿದೆ ಎಂದು ನನಗೆ ನಿಧಾನಕ್ಕೆ ಅರ್ಥವಾಯಿತು. ಅಫ‌ಘಾತದ ತೀವ್ರತೆ ಹೇಗಿತ್ತೆಂದರೆ, “ದಯವಿಟ್ಟು ಸಹಾಯ ಮಾಡಿ, ನನ್ನನ್ನು ಕಾಪಾಡಿ’ ಎಂದು ಚೀರಿ ಹೇಳುವ ಶಕ್ತಿಯೂ ನನಗಿರಲಿಲ್ಲ. ಆನಂತರದಲ್ಲಿ ತಿಳಿದು ಬಂದ ಸಂಗತಿ ಏನೆಂದರೆ-ನಾವಿದ್ದ ರೈಲು ನಕ್ಸಲಿಯರ ದಾಳಿಗೆ ತುತ್ತಾಗಿತ್ತು. ಮೊದಲು ರೈಲು ಹಳಿ ತಪ್ಪುವಂತೆ ಮಾಡಿದ್ದ ನಕ್ಸಲರು, ನಂತರ ಅದೇ ರೈಲಿಗೆ ಎದುರಿನಿಂದ ಬಂದ ಗೂಡ್ಸ್‌ ರೈಲು ಡಿಕ್ಕಿ ಹೊಡೆಯುವಂತೆಯೂ ನೋಡಿಕೊಂಡಿದ್ದರು!

ಈ ದುರಂತ ನಡೆದಿದ್ದು ಕೋಲ್ಕತ್ತಾಕ್ಕೆ ಸಮೀಪದ ಮಿಡ್ನಾಪುರ ರೈಲು ನಿಲ್ದಾಣದಲ್ಲಿ. ಅದು ನಕ್ಸಲರ ಪ್ರಾಬಲ್ಯವಿದ್ದ ಏರಿಯಾ. ನಕ್ಸಲರ ಕುರಿತು ಜನರಿಗೆ ಅದೆಷ್ಟು ಹೆದರಿಕೆ ಇತ್ತೆಂದರೆ, ರೈಲು ಅಪಘಾತದಲ್ಲಿ ನೂರಾರು ಜನ ಗಾಯಗೊಂಡು ಬಿದ್ದಿದ್ದರೂ ಅವರನ್ನು ಎತ್ತಿ ಕೂರಿಸುವುದಕ್ಕೂ ಜನ ಬರಲಿಲ್ಲ. ಕೆಲವೊಂದಷ್ಟು ಜನ, ಗಾಯಗೊಂಡವರನ್ನು ಒಮ್ಮೆ ಸೂಕ್ಷ್ಮವಾಗಿ ಗಮನಿಸಿ- “ಇವರಿಗೆ ಭಾರೀ ಪೆಟ್ಟು ಬಿದ್ದಿದೆ. ಇವರು ಬದುಕುವ ಛಾನ್ಸ್‌ ಕಡಿಮೆ. ಹಾಗಾಗಿ, ಆಸ್ಪತ್ರೆಗೆ ಸೇರಿಸಿದ್ರೂ ಏನೂ ಪ್ರಯೋಜನವಿಲ್ಲ’ ಎಂದು ತಾವೇ ನಿರ್ಧರಿಸಿ ಹೋಗಿ ಬಿಡುತ್ತಿದ್ದರು. ಮತ್ತೂಂದಷ್ಟು ಜನ- “ನಾವೇನೋ ಇವರಿಗೆ ಹೆಲ್ಪ್ ಮಾಡ್ತೇವೆ. ಆದರೆ, ಇದನ್ನೇ ನೆಪ ಮಾಡಿಕೊಂಡು ನಾಳೆ ನಕ್ಸಲರು ನಮ್ಮ ಮೇಲೇ ಏರಿ ಬಂದರೆ ಗತಿಯೇನು?’ ಅಂದುಕೊಂಡು ಜಾಗ ಖಾಲಿ ಮಾಡಿದರು. 

ಇಂಥವರ ಮಧ್ಯೆ ಒಬ್ಬ ಹುಡುಗ ನನ್ನ ಗಮನ ಸೆಳೆದ. ಅವನು, ಎಲ್ಲರ ಬಳಿ ಹೋಗಿ- ಸಾರ್‌ ನಮ್ಮಕ್ಕ ಹಳಿಗಳ ಮಧ್ಯೆ ಬಿದ್ದಿದ್ದಾಳೆ. ಅವಳ ಕೈ ತುಂಡಾಗಿದೆ. ಅವಳನ್ನು ಆಸ್ಪತ್ರೆಗೆ ಸೇರಿಸಬೇಕು. ಹೆಲ್ಪ್ ಮಾಡಿ ಸಾರ್‌’ ಎಂದು ಗೋಗರೆಯುತ್ತಿದ್ದ. ಕೈ ಮುಗಿದು ಪ್ರಾರ್ಥಿಸುತ್ತಿದ್ದ. ಅವನು ಬೇರೆ ಯಾರೂ ಅಲ್ಲ. ನನ್ನ ತಮ್ಮ ಸೌರಭ್‌ ಸೇನ್‌. ಅವನು ಎಷ್ಟೇ ಬೇಡಿಕೊಂಡರೂ, ಜನ ನನ್ನತ್ತ ತಿರುಗಿ ಕೂಡ ನೋಡಲಿಲ್ಲ. ಕೆಲವರಂತೂ “ಆಕೆ ಬದುಕೋದು ಡೌಟು. ಹೇಗಿದ್ರೂ ಇದು ಕೇಸ್‌ ಆಗುತ್ತೆ. ಒಂದ್ಕಡೆ ಪೊಲೀಸರು, ಇನ್ನೊಂದ್ಕಡೆಯಿಂದ ನಕ್ಸಲರು ಬೆಂಡ್‌ ತೆಗೀತಾರೆ. ಯಾಕೆ ಬೇಕು ಸಹವಾಸ?’ ಎಂದು ಮುಖಕ್ಕೆ ಹೊಡೆದಂತೆ ಹೇಳುತ್ತಿದ್ದರು. ಕಡೆಗೊಮ್ಮೆ ನಿವೃತ್ತ ಯೋಧರೊಬ್ಬರು ನನಗೆ ಪ್ರಥಮ ಚಿಕಿತ್ಸೆ ನೀಡಿದರು. ಸ್ಲಿàಪರ್‌ ಬೋಗಿಯಿಂದ ಕಳಚಿ ಬಿದ್ದಿದ್ದ ಒಂದು ಸೀಟ್‌ನ ಮೇಲೆ ನನ್ನನ್ನು ಮಲಗಿಸಿ, ಪ್ಲಾಟ್‌ಫಾರ್ಮ್ನ ಒಂದು ಮೂಲೆಗೆ ತಂದಿಟ್ಟರು. 

ಮುಂದಿನ ಏಳು ಗಂಟೆಗಳವರೆಗೂ ಜೀವಂತ ಶವದಂತೆ ಅಲ್ಲೇ ಮಲಗಿದ್ದೆ. ಗಾಯಾಳುಗಳನ್ನು ಕರೆದೊಯ್ಯಲು ಕೊನೆಗೂ ರೈಲು ಬಂತು. ಕೋಲ್ಕತ್ತಾದ ಆರ್ಮಿ ಆಸ್ಪತ್ರೆಯಲ್ಲಿ ವೈದ್ಯರು ವಿಷಾದದಿಂದ ಹೇಳಿದರು- “ತುಂಡಾದ ಭಾಗಗಳನ್ನು ಘಟನೆ ನಡೆದ 6 ಗಂಟೆಯೊಳಗೆ ತಂದರೆ ಮಾತ್ರ ಜೋಡಿಸಬಹುದು. ಈಗಾಗಲೇ 7 ಗಂಟೆ ಮೀರಿದೆ. ತುಂಡಾದ ಭಾಗಕ್ಕೆ ರಕ್ತ ಸಂಚಾರವಿಲ್ಲದ್ದರಿಂದ ಕೈ ಪೂರಾ ಗ್ಯಾಂಗ್ರಿನ್‌ಗೆ ತುತ್ತಾಗಿದೆ. ಬಲಗೈ ಕಟ್‌ ಮಾಡುವುದೊಂದೇ ಉಳಿದ ದಾರಿ…’

ವೈದ್ಯರು ಇಂಥ ಮಾತು ಹೇಳಿದಾಗ ಆಚೀಚಿನ ಬೆಡ್‌ಗಳಲ್ಲಿ ಇದ್ದವರು “ಹೋ’ ಎಂದು ಚೀರುತ್ತಿದ್ದರು. ಕೆಲವರು, ಶಾಕ್‌ನಿಂದ ಮೂಛೆì ಹೋಗುತ್ತಿದ್ದರು. ನನಗಂತೂ ಅಂಥ ಯಾವುದೇ ಫೀಲ್‌ ಆಗಲಿಲ್ಲ. ಆಗಿದ್ದು ಆಗಿ ಹೋಗಿದೆ. ಅತ್ತು ಪ್ರಯೋಜನವಿಲ್ಲ. ಒಂದು ಕೈ ಇರೋದಿಲ್ಲ ಅಷ್ಟೆ. ಎಡಗೈ ಮಾತ್ರ ಇದ್ದರೂ ನೆಮ್ಮದಿಯಿಂದ ಬದುಕ್ತಿರೊ ಜನ ಇಲ್ವ? ನಾನೂ ಅವರ ಥರ ಇದ್ದರಾಯ್ತು ಎಂದಷ್ಟೇ ಯೋಚಿಸಿದೆ. “ಡಾಕ್ಟರ್‌, ಎಡಗೈನಿಂದ ವೇಗವಾಗಿ ಬರೆಯಲು, ಡ್ರಾಯಿಂಗ್‌ ಮಾಡಲು ಎಷ್ಟು ಸಮಯ ಹಿಡಿಯುತ್ತೆ?’ ಎಂದು ಕೇಳುತ್ತಿದ್ದೆ. ಆಸ್ಪತ್ರೇಲಿ ಇದ್ದವರೆಲ್ಲ- “ಅಬ್ಟಾ, ಎಂಥಾ ಧೈರ್ಯ ಈ ಹುಡುಗೀದು. ಯಾರಿವಳು?’ ಎಂದು ಬೆರಗಿನಿಂದ ಕೇಳುತ್ತಿದ್ದರು. 

ಪೂರ್ತಿ ಹುಷಾರಾಗಲಿಕ್ಕೆ ನಾಲ್ಕು ತಿಂಗಳು ಬೇಕಾಯ್ತು. ಮನೆಗೆ ಬಂದ ತಕ್ಷಣ- ನನಗಿರೋದು ಒಂದೇ ಕೈ. ಎಲ್ಲಾ ಕೆಲಸವನ್ನು ಅದರಿಂದಲೇ ಮಾಡಬೇಕು ಎಂದು ನನಗೆ ನಾನೇ ಪದೇ ಪದೆ ಹೇಳಿಕೊಂಡೆ. ಪೆನ್‌, ಪೆನ್ಸಿಲ್‌ ತಗೊಂಡು ಇಡೀ ದಿನ ಎಡಗೈಲಿ ಬರೆಯುವುದನ್ನು ಅಭ್ಯಾಸ ಮಾಡಿದೆ. ಕಾಲೆºರಳಿನಿಂದ ಡ್ರಾಯಿಂಗ್‌ ಮಾಡಲು ಪ್ರಯತ್ನಿಸಿ ಅದರಲ್ಲೂ ಯಶಸ್ಸು ಕಂಡೆ. ಆಸ್ಪತ್ರೆ, ಚಿಕಿತ್ಸೆ, ಆಪರೇಷನ್‌, ವಿಶ್ರಾಂತಿಯ ಮಧ್ಯೆಯೇ ಓದೂ ಸಾಗುತ್ತಿತ್ತು. ಕಾಲೆºರಳು ಮತ್ತು ಎಡಗೈನ ಸಹಾಯದಿಂದಲೇ ಥೀಸೀಸ್‌ ಬರೆದೆ. ಪರೀಕ್ಷೆಗೂ ಹಾಜರಾದೆ. ನಾನು ಆಸ್ಪತ್ರೆಯಲ್ಲಿ ಇದ್ದಾಗಲೇ ಫ‌ಲಿತಾಂಶವೂ ಬಂತು. ಅವತ್ತು ಮಾತ್ರ ಸಮಾಧಾನವಾಗುವಷ್ಟು ಅತ್ತುಬಿಟ್ಟೆ. ಅದು ಖುಷಿಯ ಕಣ್ಣೀರು. ಆನಂದಭಾಷ್ಪ ಇಡೀ ಮುಂಬೈ ಯೂನಿವರ್ಸಿಟಿಗೆ ಮೊದಲ ರ್‍ಯಾಂಕ್‌ ಪಡೆದಾಗ ಖುಷಿಯಿಂದ ಬಿಕ್ಕಳಿಸದೆ ಮತ್ತೇನು ಮಾಡಲಿ?

ಮರುದಿನ, ಮುಂಬಯಿಯ ಅಷ್ಟೂ ಪತ್ರಿಕೆಗಳು, ಟಿ.ವಿ.ಗಳಲ್ಲಿ ನನ್ನ ಯಶೋಗಾಥೆ ಪ್ರಸಾರವಾಯಿತು. “ಇದ್ಯಾರೋ ಶ್ರೇಯಾ ಸೇನ್‌ ಅಂತೆ. ಆ್ಯಕ್ಸಿಡೆಂಟ್‌ನಲ್ಲಿ ಬಲಗೈ ತುಂಡಾದರೂ, ಎಡಗೈಲೇ ಪರೀಕ್ಷೆ ಬರೆದು ಮೊದಲ ರ್‍ಯಾಂಕ್‌ ತಗೊಂಡಳಂತೆ’ ಎಂಬ ಸುದ್ದಿ ಎಲ್ಲೆಡೆ ಹರಡಿತು. ಮುಂಬಯಿನ ಸಾವಿರಾರು ಮಂದಿ ನನ್ನನ್ನು ಅಭಿನಂದಿಸಿದ್ದು  ಮಾತ್ರವಲ್ಲ; ಕ್ರೌಡ್‌ ಫ‌ಂಡಿಂಗ್‌ ಮೂಲಕ ಹಣ ಸಂಗ್ರಹಿಸಿ, ಕೃತಕ ಕೈ ಖರೀದಿಗೆ ಧನ ಸಹಾಯವನ್ನೂ ಒದಗಿಸಿದರು.

ಚಿಕ್ಕಂದಿನಿಂದಲೂ, ದಿನಕ್ಕೊಂದು ಥರದಲ್ಲಿ ಜಡೆ ಹಾಕಿಸಿಕೊಳ್ಳುವುದು, ಹೇರ್‌ಸ್ಟೈಲ್‌ ಬದಲಿಸುವುದು ನನ್ನ ಮೆಚ್ಚಿನ ಹವ್ಯಾಸವಾಗಿತ್ತು. ಆದರೆ, ಬಲಗೈ ಮಾಯವಾದ ನಂತರ, ತಲೆ ಬಾಚುವುದೇ ದೊಡ್ಡ ಸಮಸ್ಯೆಯಾಯಿತು. ಎಲ್ಲ ಸಮಸ್ಯೆಗೂ ಒಂದು ಪರಿಹಾರ ಇದ್ದೇ ಇರುತ್ತೆ ಎಂಬುದು ನನಗೆ ನಾನೇ ಹೇಳಿಕೊಳ್ತಿದ್ದ ಪಿಸುಮಾತು. ಆವತ್ತೂ ಹಾಗೆಯೇ ಮಾಡಿದೆ. ಉದ್ದದ ಜಡೆಯನ್ನು ಕತ್ತರಿಸಿ, ಬಾಯ್‌ಕಟ್‌ ಮಾಡಿಸಿಕೊಂಡೆ. ವಿದ್ಯೆ, ಉದ್ಯೋಗ ಎರಡರಲ್ಲೂ ಯಶಸ್ಸು ಸಿಕ್ಕಿದ ಮೇಲೆ, ಮದುವೆ ಯಾವಾಗ ಎಂಬ ಪ್ರಶ್ನೆ ಎಲ್ಲರಿಗೂ ಎದುರಾಗುತ್ತದೆ. ಹುಡುಗಿಗೆ ಒಂದು ಕೈ ಇಲ್ಲ ಅಂದಾಗ ಹುಡುಗರು ಮತ್ತು ಈ ಸಮಾಜ ನೋಡುವ ದೃಷ್ಟಿಯೇ ಬೇರೆ. ಹಾಗಾಗಿ, ಮದುವೆಯ ಯೋಚನೆಯನ್ನು ಮನಸ್ಸಿಂದ ಆಚೆಗಿಟ್ಟೆ. ಈ ಸಂದರ್ಭದಲ್ಲಿಯೇ, ಒಂದು ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು ಜರ್ಮನಿಗೆ ತೆರಳುವ ಅವಕಾಶ ಸಿಕು¤. ಆ ವೇಳೆಗೆ ನಾನು ರೂರ್ಕಿ ಐಐಟಿಯ ಟಾಪರ್‌ ಅನ್ನಿಸಿಕೊಂಡಿದ್ದೆ.

ಜರ್ಮನಿಯಲ್ಲಿ, ಬೈ ಮಿಸ್ಟೇಕ್‌ ಎಂಬಂತೆ ನನಗೆ ಪರಿಚಯವಾದಾತ ಪ್ರತೀಕ್‌ ಶ್ರೀವಾತ್ಸವ. ಅವನು ಚೆನ್ನೈ ಐಐಟಿಯ ಟಾಪರ್‌. ಥೀಸಿಸ್‌ ಬರೆಯುವ ನೆಪದಲ್ಲಿ ನಾವು ಪರಿಚಯ ಹೇಳಿಕೊಂಡೆವು. ಫ್ರೆಂಡ್ಸ್‌ ಆದೆವು. ಆನಂತರದಲ್ಲಿ, ಒಂದೇ ಒಂದು ದಿನ ಕೂಡಾ- “ನಿನಗೆ ಬಲಗೈ ಇಲ್ಲವಲ್ಲ, ಅದಕ್ಕೆ ಏನಾಯ್ತು? ಬೈ ಬರ್ತ್‌ ಹೀಗಿದೀಯಾ?’ ಎಂದೆಲ್ಲ ಅಪ್ಪಿತಪ್ಪಿ ಕೂಡ ಅವನು ಕೇಳಲಿಲ್ಲ. ಬದಲಾಗಿ “ಒಂದೇ ಕೈ ಇದ್ರೂ ಇಷ್ಟೆಲ್ಲಾ ಸಾಧನೆ ಮಾಡಿದೀಯಲ್ಲ: ನಿಜವಾಗಲೂ ನೀನು ಗ್ರೇಟ್‌’ ಎಂದು ಮೆಚ್ಚುಗೆಯ ಮಾತಾಡಿದ್ದ. ಮುಂದೊಂದು ದಿನ ಅವನೇ- “ನಾವಿಬ್ರೂ ಮದುವೆ ಆಗೋಣಾÌ?’ ಎಂದು ಕೇಳಿಯೇ ಬಿಟ್ಟ. ನಂತರದ ಕೆಲವೇ ದಿನಗಳಲ್ಲಿ ನಮ್ಮ ಮದುವೆಯಾಯಿತು. 

ಮದುವೆಯ ನಂತರ ನನ್ನ ಬದುಕಿಗೆ ಹೊಸ ಬಣ್ಣ ಮೆತ್ತಿಕೊಂಡಿದೆ. ಈ ಮೊದಲು ಏನೇ ಸಾಧನೆ ಮಾಡಿದ್ದೇನೆ ಅಂದುಕೊಂಡರೂ ಅಭದ್ರತೆ ಕಾಡುತ್ತಿತ್ತು. ಈಗ ಹಾಗಿಲ್ಲ. ಪ್ರತಿ ಹೆಜ್ಜೆಯಲ್ಲೂ ಪ್ರತೀಕ್‌ನ ಬೆಂಬಲವಿದೆ. “ಮನೆ ಕೆಲಸದಲ್ಲಿ ಮಾತ್ರವಲ್ಲ, ಜಡೆ ಹೆಣೆಯುವ ಕೆಲಸದಲ್ಲೂ ನೆರವಾಗ್ತಿàನಿ. ಮೊದಲು ಜುಟ್ಟು ಬೆಳೆಸು’ ಎಂದಿದ್ದಾನೆ ಪ್ರತೀಕ್‌. ನಾನೀಗ ಆರ್ಕಿಟೆಕ್ಚರ್‌ ಲೆಕ್ಚರರ್‌ ಆಗಿದ್ದೀನಿ. ಬೆಂಗಳೂರು, ಮಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಉಪನ್ಯಾಸ ನೀಡಿದೀನಿ. ಚಿಕ್ಕ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವವರನ್ನು, ಸೋಲಿನಿಂದ ಡಿಪ್ರಷನೆ ಹೋಗುವವರನ್ನು ಕಂಡಾಗ ಬೇಸರ ಆಗುತ್ತೆ. ಅಂಥವರ ಮುಂದೆ ಹೆಮ್ಮೆಯಿಂದಲೇ ನನ್ನ ಕಥೆ ಹೇಳಿಕೊಂಡು, ಬಲಗೈ ಇಲ್ಲದಿದ್ರೂ ನಾನು ಬದುಕಿದ್ದೀನಲ್ಲ; ನಿಮಗೇನು ಕಷ್ಟ ಎಂದು ಕೇಳಬೇಕು ಅನ್ನಿಸ್ತದೆ. ಬದುಕು, ನನಗೆ ಖುಷಿ ಮತ್ತು ಕಣ್ಣೀರನ್ನು ಸಮಪ್ರಮಾಣದಲ್ಲಿ ಕೊಟ್ಟಿದೆ. ರೈಲು ಅಪಘಾತ, ಆನಂತರದ ಆಸ್ಪತ್ರೆವಾಸ… ಇದನ್ನೆಲ್ಲ ನೆನಪಿಸಿಕೊಂಡರೆ, ಖುಷಿಗಿಂತ ಕಣ್ಣೀರಿನ ಅಧ್ಯಾಯವೇ ಜಾಸ್ತಿ ಇದೆಯೇನೋ. ಅದಕ್ಕಾಗಿ ನನಗೆ ವಿಷಾದವಿಲ್ಲ. ಬಾಳ ಕತೆಯನ್ನು ಎಲ್ಲರೊಂದಿಗೂ ಹಂಚಿಕೊಳ್ಳಲು ನನಗಂತೂ ಖುಷಿಯಿದೆ. ಕಾಲೇಜು, ಸಂಘ- ಸಂಸ್ಥೆಗಳಿಂದ ಆಹ್ವಾನ ಬಂದರೆ ಸಂತೋಷದಿಂದಲೇ ಎಲ್ಲ ಸಂಗತಿಗಳನ್ನೂ ಹೇಳಿಕೊಳೆ¤àನೆ. ನನ್ನ ಕಥೆ ಕೇಳಿ, ನಾಲ್ಕು ಮಂದಿಗೆ ಏನಾದರೂ ಸಾಧಿಸುವ ಹುಮ್ಮಸ್ಸು ಬಂದ್ರೆ ಅಷ್ಟೇ ಸಾಕು’ ಅನ್ನುತ್ತಾರೆ ಶ್ರೇಯಾ.

ಶ್ರೇಯಾರ ಬಾಳ ಕಥೆಯನ್ನು ಆಧರಿಸಿ ಮರಾಠಿಯಲ್ಲಿ “ಜ್ಞಾನೇಶ್ವರಿ ಎಕ್ಸ್‌ಪ್ರೆಸ್‌’ ಎಂಬ ಸಿನಿಮಾ ತೆಗೆಯಲಾಗಿದೆ. ಯೂಟ್ಯೂಬ್‌ನಲ್ಲಿ Disability to ability ಎಂದು ಹುಡುಕಿದರೆ, ಈ ಛಲಗಾತಿಯ ಮಾತುಗಳನ್ನು ಕೇಳುವ ಅವಕಾಶವೂ ಇದೆ.ವಿಧಿಗೆ ಸವಾಲು ಹಾಕಿ ಗೆದ್ದಿರುವ ಈ ದಿಟ್ಟೆಗೆ ಅಬಿನಂದನೆ ಹೇಳಬೇಕು ಎಂದರೆ- shreyasen1405@gmail.com

ಎ.ಆರ್‌. ಮಣಿಕಾಂತ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ