‘ಸ್ತ್ರೀ’

Team Udayavani, Jul 1, 2019, 4:28 PM IST

ಹೊತ್ತಾರೆಯಿಂದ ಹೊತ್ತೇರುವ ತನಕ

ಎಡೆಬಿಡದೆ ಸೂರ್ಯನಂತಿವಳ ದುಡಿತ

ಮನೆಮಂದಿಯೆಲ್ಲ ಯೋಗಕ್ಷೇಮವೇ

ಹೃದಯದ ಮಿಡಿತ

ಆತನಿಗೋ ಜಗಕೆ ಬೆಳಕ ನೀಡೋ ಕಾಯಕ

ಈಕೆಗೋ ಬದುಕ ಕಟ್ಟಿಕೊಡುವ ತವಕ

ಬಾಲ್ಯದಲಿ ಅಪ್ಪನ ಜೇಬಿನಲ್ಲಿ ಚಿಂತೆ

ಹರೆಯದಲಿ ಹದ್ದು –ಕಾಕದೃಷ್ಟಿಗಳದ್ದೇ ಸಂತೆ

ಮುಚ್ಚಿಟ್ಟ ಮನಸ್ಸು, ಬಚ್ಚಿಟ್ಟ ಕನಸು

ರೆಕ್ಕೆ ಬಿಚ್ಚಲೇ ಇಲ್ಲ, ಗರಿಕೆದರಲೇ ಇಲ್ಲ

ದೋಸೆ ಬಿಸಿ ಇಲ್ಲ, ಪಲಾವು ರುಚಿ ಇಲ್ಲ

ಎಂದೆತ್ತಿ ಆಡಿತೋರಿದರಲ್ಲಾ

ಕೈಗಳಲ್ಲಾದ ‘ಬಿಸಿಯಕಲೆ’ಗಳರಿವು

ಯಾರಿಗೂ ಬರಲೇ ಇಲ್ಲ

ಇಡ್ಲಿಗೆ ಚಟ್ನಿ ಸಾಂಬಾರ್  ಬಯಸಿದವರೇ ಎಲ್ಲ

“ನಿನಗೆ ತಿಂಡಿ ಉಳಿದಿದೆಯೇ’…..?ಎಂದು

ಕೇಳಿದವರಾರೂ ಇಲ್ಲ

ಒಡನಾಡಿಗಳು ತುಸು ಕೆಮ್ಮಿದರೂ

ಒಡಲಲ್ಲಿ ಎಲ್ಲಿಲ್ಲದ ಸಂಕಟ

ತನ್ಮಡಿಲೇ ಒಡೆದು ಹೋದರೂ

ಗಣನೆಗೆ ಬಾರದಿರುವುದು ದೊಡ್ಡ‘ವಿಕಟ’

ಸೊರಗದಂತೆ ಸಾಂತ್ವನ ನೀಡುವ

ಸೆರಗಿನಲ್ಲಿ ಕಣ್ಣೀರ ಕಥೆಯಿದೆ.

ತಲೆನೇವರಿಸಿ ಭರವಸೆ ತುಂಬುವ

ಕೈಗಳಲಿ ಬಾಳಿನ ವ್ಯಥೆಯಿದೆ

ಎಲ್ಲರಿಗಾಗಿ ಬದುಕಿದಳು

ತಾ ಬಾಳುವುದಾ ಮರೆತಳು

‘ಗಾದೆ’ಗೆ ನುಡಿಯಾದಳು

‘ಶಾಸ್ತ್ರ’ಕ್ಕೆ ಅಸ್ತ್ರವಾದಳು

‘ಸಂಸ್ಕೃತಿ’ಗೆ ಕೃತಿಯಾದಳು

ವಿಕೃತಿಗೊಳಗಾದ ,’ಪ್ರಕೃತಿ’ ಮಾತೆಯಾದಳು

ತನ್ನಿರವ ಮರೆತು ತನ್ನವರಿಗಾಗಿ

ಬದುಕ ತೆತ್ತವಳು

ಆಹಾರ ನೀಡಿ ಆಸರೆಯಾದಳು

ಎಲ್ಲರ ಬಾಯಿಗೆ ತಾನೇ ‘ಆಹಾರ’ವಾದಳು

‘ಸ್ತ್ರೀ’ ಅಲ್ಲವೇ ದೇವತೆ ಬೇರಾರಾಗಲು ಸಾಧ್ಯ……?

ಮಲ್ಲಿಕಾ.ಐ

ಕನ್ನಡ ಶಿಕ್ಷಕಿ

ಸರಕಾರಿ ಪ್ರೌಢಶಾಲೆ ವಳಾಲು, ಬಜತ್ತೂರು, ಪುತ್ತೂರು. ದ.ಕ.


ಈ ವಿಭಾಗದಿಂದ ಇನ್ನಷ್ಟು

  • ತೆಲಂಗಾಣದಲ್ಲಿ ನಡೆದ ಯುವತಿಯ ಅತ್ಯಾಚಾರ-ಹತ್ಯೆ ಪ್ರಕರಣವು ದೇಶವನ್ನು ಬೆಚ್ಚಿ ಬೀಳಿಸಿದೆ. ನಿರ್ಭಯಾ ಪ್ರಕರಣದ ನಂತರ ದೇಶದಲ್ಲಿ ಎಷ್ಟೇ ಕಠಿಣ ಕಾನೂನು ತಂದರೂ...

  • ದೇಶದ ಪ್ರಮುಖ ಮೂರು ಖಾಸಗಿ ಟೆಲಿಕಾಂ ಆಪರೇಟರ್‌ಗಳಾದ ವೊಡಾಫೋನ್‌ ಐಡಿಯಾ ಲಿಮಿಟೆಡ್‌, ಭಾರ್ತಿ ಏರ್‌ಟೆಲ್‌, ರಿಲಯನ್ಸ್‌ ಜಿಯೋ ಇನ್ನು ದುಬಾರಿಯಾಗಲಿದೆ. ಡಿಸೆಂಬರ್‌...

  • ಹೆಣ್ಣಾಗಿ ಹುಟ್ಟಿದವರು, ಹೆಣ್ಣನ್ನು ಹೊತ್ತು-ಹೆತ್ತು ಬೆಳೆಸಿದವರು, ಹೆಣ್ಣನ್ನು ಗೌರವಿಸುವವರೆಲ್ಲರನ್ನೂ ಬೆಚ್ಚಿ ಬೀಳಿಸುವ ಭಯಾನಕ ಸುದ್ದಿಯದು. ಮನೆಯಿಂದ ಹೊರ...

  • ನನಗಿನ್ನೂ ನೆನಪಿದೆ. ಕೊಲಂಬೋದಲ್ಲಿ ಟಿ20 ಕ್ರಿಕೆಟ್‌ ನಡೆದಿತ್ತು. ಭಾರತ-ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯಕ್ಕೆ ನಾನೂ ಹೋಗಿದ್ದೆ. ಅಂದು ಶ್ರೀಲಂಕಾದ ಫ್ಯಾನ್‌ಗಳೆಲ್ಲ...

  • ಪೊಲೀಸರ ವಶದಲ್ಲಿರುವಾಗಲೇ ಪ್ರಾಣ ಕಳೆದುಕೊಳ್ಳುತ್ತಿರುವ ಆರೋಪಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅಸ್ವಾಭಾವಿಕವಾಗಿ ದೇಶದಲ್ಲಿ ಒಟ್ಟು 133 ಅಪರಾಧಿಗಳು ಮತ್ತು...

ಹೊಸ ಸೇರ್ಪಡೆ