ರಾಜ್ ಕುಟುಂಬದಿಂದ ಮತ್ತೊಬ್ಬ ಹೀರೋ
ಪಾರ್ವತಮ್ಮ ಸೋದರ ಪುತ್ರ ಸೂರಜ್ ಎಂಟ್ರಿ
Team Udayavani, Jun 12, 2019, 3:02 AM IST
ವರನಟ ಡಾ. ರಾಜಕುಮಾರ್ ಕುಟುಂಬದಲ್ಲಿ ಹಲವರು ಈಗಾಗಲೇ ಸ್ಟಾರ್ ನಟರಾಗಿ ಚಿತ್ರರಂಗದಲ್ಲಿ ತಮ್ಮದೇ ಸ್ಥಾನ-ಮಾನ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಈಗ ರಾಜ್ ಕುಟುಂಬದ ಮೂರನೇ ತಲೆಮಾರು ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳುವ ತಯಾರಿಯಲ್ಲಿದೆ.
ಈಗಾಗಲೇ ರಾಜ್ ಕುಟುಂಬದ ಮೂರನೇ ತಲೆಮಾರಿನ ಪ್ರತಿಭೆಯಾಗಿರುವ ವಿನಯ್ ರಾಜಕುಮಾರ್ ನಾಯಕ ನಟನಾಗಿ ಸ್ಯಾಂಡಲ್‌ವುಡ್‌ಗೆ ಅಡಿಯಿಟ್ಟಿದ್ದು, ಈಗ ಯುವರಾಜ ಕುಮಾರ್, ಧೀರನ್ ರಾಮ್‌ಕುಮಾರ್, ಧನ್ಯ ರಾಮ್‌ಕುಮಾರ್ ಮೊದಲಾದವರು ತೆರೆಗೆ ಅಡಿಯಿಡಲು ಸಿದ್ಧತೆ ನಡೆಸುತ್ತಿದ್ದಾರೆ.
ಈ ಸಾಲಿಗೆ ಈಗ ರಾಜ್ ಕುಟುಂಬದ ಮತ್ತೊಂದು ಹೆಸರು ಸೇರ್ಪಡೆಯಾಗುತ್ತಿದೆ. ಅವರೇ ಸೂರಜ್ ಕುಮಾರ್. ಅಂದಹಾಗೆ, ಸೂರಜ್ ಕುಮಾರ್ ಅವರು ಹಿರಿಯ ನಿರ್ಮಾಪಕಿ, ರಾಜಕುಮಾರ್ ಪತ್ನಿ ಪಾರ್ವತಮ್ಮ ರಾಜಕುಮಾರ್ ಅವರ ಸಹೋದರ ಎಸ್.ಎ ಶ್ರೀನಿವಾಸ್ ಅವರ ಪುತ್ರ.
ಚಿತ್ರರಂಗದ ಹಿನ್ನೆಲೆಯಿದ್ದ ಕಾರಣ ಮೊದಲಿನಿಂದಲೂ ಚಿತ್ರರಂಗವನ್ನು ಸೂಕ್ಷ್ಮವಾಗಿ ಗಮನಿಸಿಕೊಂಡು ಬೆಳೆದ ಸೂರಜ್ ಕುಮಾರ್, ಕೆಲಕಾಲ ತೆರೆಮರೆಯಲ್ಲಿ ಒಂದಷ್ಟು ತಯಾರಿ ಮಾಡಿಕೊಂಡು ಈಗ ನಾಯಕ ನಟನಾಗಿ ಚಂದನವನಕ್ಕೆ ಅಡಿಯಿಡುವ ತಯಾರಿ ನಡೆಸುತ್ತಿದ್ದಾರೆ.
ಇನ್ನು ಸೂರಜ್ ಕುಮಾರ್ ಅಭಿನಯದ ಚೊಚ್ಚಲ ಚಿತ್ರಕ್ಕೆ ರಾಜ್ಯ ರಘು ಕೋವಿ ನಿರ್ದೇಶನ ಮಾಡುತ್ತಿದ್ದಾರೆ.
ಸದ್ಯ ಈ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಭರದಿಂದ ನಡೆಯುತ್ತಿದ್ದು, ಚಿತ್ರಕ್ಕೆ ನಾಯಕಿಯಾಗಿ ಮಲಯಾಳಿ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್ ಕರೆತರಲು ಚಿತ್ರತಂಡ ಕಸರತ್ತು ನಡೆಸುತ್ತಿದೆ. ಉಳಿದಂತೆ ಚಿತ್ರದ ಟೈಟಲ್, ಇತರೆ ಕಲಾವಿದರು ಮತ್ತು ತಂತ್ರಜ್ಞರ ಪಟ್ಟಿ ಇದೇ ತಿಂಗಳಾಂತ್ಯಕ್ಕೆ ಅಂತಿಮವಾಗುವ ಸಾಧ್ಯತೆ ಇದೆ.
ಈ ಚಿತ್ರವನ್ನು ಬಿ. ಎಸ್ ಸುಧೀಂದ್ರ ಹಾಗೂ ಇ . ಶಿವಪ್ರಕಾಶ್ ನಿರ್ಮಿಸುತ್ತಿದ್ದು, ಚಿತ್ರ ಆಗಸ್ಟ್‌ನಲ್ಲಿ ಸೆಟ್ಟೇರಲಿದೆ. ತಮ್ಮ ಚೊಚ್ಚಲ ಚಿತ್ರಕ್ಕಾಗಿ ಈಗಾಗಲೇ ಸೂರಜ್ ಕುಮಾರ್ ಚೆನ್ನೈನಲ್ಲಿ ಸಾಹಸ ಹಾಗೂ ನೃತ್ಯ ತರಬೇತಿ ಪಡೆದುಕೊಂಡಿದ್ದಾರೆ.
ಅಲ್ಲದೇ ನೀನಾಸಂ ಹಾಗೂ ಟೆಂಟ್ ಸಿನಿಮಾದಲ್ಲಿ ಅಭಿನಯ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ. ಉಳಿದಂತೆ ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ ಸಂಯೋಜಿಸುತ್ತಿದ್ದು, ಸತ್ಯ ಹೆಗಡೆ ಕ್ಯಾಮರಾ ನಿರ್ವಹಣೆ ಮಾಡಲಿದ್ದಾರೆ. ಚಿತ್ರದ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಗಳು ಚಿತ್ರ ಸೆಟ್ಟೇರಿದ ಮೇಲಷ್ಟೇ ಗೊತ್ತಾಗಲಿದೆ.