ಮಾಲ್ಗುಡಿ ಹಾಡಿಗೆ ಕ್ರೇಜಿಸ್ಟಾರ್ ಸಾಥ್
ಊರೊಂದು ಕರೆದಂತೆ ಹಿಂದೆನೋ ಮರೆತಂತೆ ...
Team Udayavani, Jan 27, 2020, 7:02 AM IST
ತನ್ನ ಲುಕ್, ಟೀಸರ್ ಮೂಲಕ ಗಮನ ಸೆಳೆಯುತ್ತಿರುವ ಚಿತ್ರ ವಿಜಯ ರಾಘವೇಂದ್ರ ಅಭಿನಯದ “ಮಾಲ್ಗುಡಿ ಡೇಸ್’. ಈಗಾಗಲೇ ಚಿತ್ರದ ಫಸ್ಟ್ಲುಕ್, ಟೀಸರ್ ಮೂಲಕ ಚಿತ್ರ ಒಂದಷ್ಟು ನಿರೀಕ್ಷೆ ಹುಟ್ಟಿಸಿದೆ. ಈಗ ಚಿತ್ರದ ಮೊದಲ ಹಾಡೊಂದು ಬಿಡುಗಡೆಯಾಗಿದ್ದು, ನೆನಪುಗಳ ಬುತ್ತಿಗೆ ಕೈ ಹಾಕುವಂತಿದೆ.
“ಊರೊಂದು ಕರೆದಂತೆ ಹಿಂದೆನೋ ಮರೆತಂತೆ …’ ಎಂಬ ಹಾಡು ಬಿಡುಗಡೆಯಾಗಿದೆ. ಈ ಹಾಡನ್ನು ಚಿತ್ರದ ನಿರ್ದೇಶಕ ಕಿಶೋರ್ ಮೂಡುಬಿದ್ರೆ ರಚಿಸಿದ್ದಾರೆ. ಇತ್ತೀಚೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಚಿತ್ರದ ಈ ಹಾಡನ್ನು ಬಿಡುಗಡೆ ಮಾಡಿ, ಚಿತ್ರದ ಲುಕ್ ಹಾಗೂ ಮೇಕಿಂಗ್ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಈ ತಿಂಗಳಾಂತ್ಯಕ್ಕೆ ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ.
ಇದು ಮಾಲ್ಗುಡಿ ಎಂಬ ಊರಲ್ಲಿ ನಡೆಯುವ ಕಾಲ್ಪನಿಕ ಕಥೆ ಇದು. ಮುಖ್ಯವಾಗಿ ಈ ಚಿತ್ರ ನೆನಪುಗಳ ಸುತ್ತ ಸಾಗಲಿದ್ದು, ಚಿತ್ರ ನೋಡುವ ಪ್ರತಿಯೊಬ್ಬರಿಗೂ ಇದು ತಮ್ಮ ಸುತ್ತಮುತ್ತಲಿನಲ್ಲಿ ನಡೆದ ಕಥೆಯೇನೋ ಎಂಬ ಭಾಸವಾಗುತ್ತದೆ. ಈ ಚಿತ್ರದ ಹೈಲೈಟ್ ಅಂದರೆ ವಿಜಯ ರಾಘವೇಂದ್ರ ಅವರು 75 ವರ್ಷ ವ್ಯಕ್ತಿಯಾಗಿ ಕಾಣಿಸಿಕೊಂಡಿರುವುದು.
ಪ್ರಾಸ್ಥೆಟಿಕ್ ಮೇಕಪ್ ಮೂಲಕ ಅವರೊಬ್ಬ ಸಾಹಿತಿಯಾಗಿ ಮೊದಲ ಬಾರಿಗೆ ನಟಿಸಿದ್ದಾರೆ. ಬೆಂಗಳೂರು, ಮೈಸೂರು, ಶಿವಮೊಗ್ಗ, ತೀರ್ಥಹಳ್ಳಿ, ಮಂಗಳೂರು, ಪಾಂಡಿಚೇರಿ, ಬಾಳೆಹೊನ್ನೂರು, ಕಳಸ, ಶೃಂಗೇರಿ, ಆಗುಂಬೆ ಸುತ್ತಮುತ್ತಲ ಸ್ಥಳದಲ್ಲಿ ಚಿತ್ರೀಕರಿಸಲಾಗಿದೆ. ರತ್ನಾಕರ್ ಕಾಮತ್ ಈ ಚಿತ್ರದ ನಿರ್ಮಾಪಕರು.