ದರ್ಶನ್‌ ಈಗ ಭಗತ್‌ ಸಿಂಗ್‌

Team Udayavani, Aug 13, 2018, 11:46 AM IST

“ಯಜಮಾನ’ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಗಿಸಿರುವ ದರ್ಶನ್‌, ಸದ್ಯದಲ್ಲೇ ಹಾಡುಗಳ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ. ಈ ಗ್ಯಾಪ್‌ನಲ್ಲಿ ಅವರು ಏನು ಮಾಡುತ್ತಿದ್ದಾರೆ ಎಂಬ ಸಣ್ಣ ಕುತೂಹಲ ಎಲ್ಲರಲ್ಲೂ ಇತ್ತು. ಅದಕ್ಕೆ ಉತ್ತರವಾಗಿ ಈ ಫೋಟೋ ಸಿಕ್ಕಿದೆ. ಪ್ರಜ್ವಲ್‌ ದೇವರಾಜ್‌ ಅಭಿನಯದ “ಇನ್‌ಸ್ಪೆಕ್ಟರ್‌ ವಿಕ್ರಮ್‌’ ಚಿತ್ರದಲ್ಲಿ ದರ್ಶನ್‌ ಅತಿಥಿ ಪಾತ್ರ ಮಾಡುವುದಕ್ಕೆ ಒಪ್ಪಿಕೊಂಡಿದ್ದರು. ಅದರಂತೆ ಚಿತ್ರದಲ್ಲಿನ ತಮ್ಮ ಕೆಲಸವನ್ನು ಭಾನುವಾರ ರಾತ್ರಿ ಮುಗಿಸಿದ್ದಾರೆ ದರ್ಶನ್‌.

ಹೌದು, “ಇನ್‌ಸ್ಪೆಕ್ಟರ್‌ ವಿಕ್ರಮ್‌’ಗಾಗಿ ಕಳೆದ 10 ದಿನಗಳಿಂದ ನಗರದ ಮಿನರ್ವ ಮಿಲ್‌ನಲ್ಲಿ ಸೆಟ್‌ ಹಾಕಿ ಚಿತ್ರೀಕರಣ ಮಾಡಲಾಗುತ್ತಿದ್ದು, ಇದರಲ್ಲಿ ದರ್ಶನ್‌ ಅಭಿನಯಿಸಿದ್ದಾರೆ. ವಿಶೇಷವೆಂದರೆ, ದರ್ಶನ್‌ ಈ ಚಿತ್ರದಲ್ಲಿ ಮಹಾನ್‌ ದೇಶ ಪ್ರೇಮಿ ಭಗತ್‌ ಸಿಂಗ್‌ ಅವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ಇಷ್ಟು ಹೇಳುತ್ತಿದ್ದಂತೆ ತಲೆಯಲ್ಲಿ ಮಲಗಿರುವ ಹಲವು ಹುಳಗಳು ಎದ್ದು ಕೂರಬಹುದು. ದರ್ಶನ್‌ ಅವರ ಪಾತ್ರ ಎಷ್ಟು ನಿಮಿಷ ಇರಬಹುದು? ಇದು ಐತಿಹಾಸಿಕ ಚಿತ್ರವಾ? ದರ್ಶನ್‌ ಅವರು ಇದರಲ್ಲಿ ಬ್ರಿಟಿಷರ ವಿರುದ್ಧ ಹೋರಾಡುತ್ತಾರಾ?

ಆ ಭಗತ್‌ ಸಿಂಗ್‌ಗೂ, ಇನ್‌ಸ್ಪೆಕ್ಟರ್‌ ವಿಕ್ರಮ್‌ಗೂ ಎಲ್ಲಿಂದೆಲ್ಲಿ ಸಂಬಮಧ ಎಂಬ ಪ್ರಶ್ನೆಗಳು ಬರಬಹುದು. ಆದರೆ, ಇದ್ಯಾವ ಪ್ರಶ್ನೆಗಳಿಗೂ ಉತ್ತರಿಸುವುದಕ್ಕೆ ನಿರ್ಮಾಪಕ ವಿಖ್ಯಾತ್‌ ಸಿದ್ಧರಿಲ್ಲ. “ದರ್ಶನ್‌ ಅವರ ಪಾತ್ರ ಈ ಚಿತ್ರದಲ್ಲಿ ಎಷ್ಟುದ್ದ ಇರಬಹುದು, ಎಷ್ಟು ನಿಮಿಷ ಬರಬಹುದು ಎನ್ನುವುದಕ್ಕಿಂತ, ಅದೊಂದು ಮಹತ್ವದ ಅತಿಥಿ ಪಾತ್ರ. ದರ್ಶನ್‌ ಅವರ ಅಭಿಮಾನಿಗಳಂತೂ ನಿಜಕ್ಕೂ ದೊಡ್ಡ ಹಬ್ಬವಾಗಿರುತ್ತದೆ. ಇಲ್ಲಿ ದರ್ಶನ್‌ ಅವರು ಬ್ರಿಟಿಷರ ವಿರುದ್ಧ ಹೋರಾಡುತ್ತಾರೆ ಎನ್ನುವುದಕ್ಕಿಂತ ಕೆಲವು ಎಪಿಕ್‌ ಆದ ಪಾತ್ರಗಳ ಜೊತೆಗೆ ಹೋರಾಡುತ್ತಾರೆ.

ಉದಾಹರಣೆಗೆ, ರಾವಣ ಅಥವಾ ಕುಂಭಕರ್ಣರಂತಹ ಪಾತ್ರಗಳ ಜೊತೆಗೆ ದರ್ಶನ್‌ ಹೋರಾಡುತ್ತಾರೆ. ಅದೊಂದು ಅಬ್‌ಸ್ಟ್ರಾಕ್ಟ್ ಆದಂತಹ ಪಾತ್ರ. ಕಳೆದ 10 ದಿನಗಳ ಕಾಲ ಸೆಟ್‌ನಲ್ಲಿ ಅವರ ಭಾಗದ ಚಿತ್ರೀಕರಣವಾಗಿದೆ’ ಎನ್ನುತ್ತಾರೆ ವಿಖ್ಯಾತ್‌. ದರ್ಶನ್‌ ಅವರ ಕೆಲಸ ಮುಗಿಯುತ್ತಿದ್ದಂತೆಯೇ ಸದ್ಯದಲ್ಲೇ ರಮೇಶ್‌ ಅರವಿಂದ್‌ ಅವರು ಬಂದು ತಮ್ಮ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದಾರಂತೆ. ಈ ಚಿತ್ರದಲ್ಲಿ ಅವರು ವಿಲನ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಈ ಕುರಿತು ಮಾತನಾಡುವ ವಿಖ್ಯಾತ್‌, “ವಿಲನ್‌ ಅಥವಾ ನೆಗೆಟಿವ್‌ ಪಾತ್ರ ಎಂದರೆ ಕಿರುಚಾಟ, ಅಬ್ಬರ ಯಾವುದೂ ಇಲ್ಲ. ನಗಿಸುತ್ತಾ ನಗಿಸುತ್ತಾ ಸಾಯಿಸುವ ಪಾತ್ರವದು. ರಮೇಶ್‌ ಅವರು ಸಹ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ. ಇನ್ನೊಂದೆರೆಡು ದಿನಗಳಲ್ಲಿ ಅವರ ಡೇಟ್ಸ್‌ ಪಕ್ಕಾ ಆಗಲಿದೆ’ ಎನ್ನುತ್ತಾರೆ ವಿಖ್ಯಾತ್‌. ಅಂದಹಾಗೆ, “ಇನ್‌ಸ್ಪೆಕ್ಟರ್‌ ವಿಕ್ರಮ್‌’ ಚಿತ್ರದ ಶೇ.70ರಷ್ಟು ಚಿತ್ರೀಕರಣ ಈಗಾಗಲೇ ಬೆಂಗಳೂರು, ಕಾರವಾರ, ಗೋವಾ, ಗೋಕರ್ಣ ಮುಂತಾದ ಕಡೆ ಚಿತ್ರೀಕರಣ ಮುಗಿಸಿದೆ ಚಿತ್ರತಂಡ.

ಮುಂದಿನ ವಾರ ಗುಜರಾತ್‌ನ ಕಛ…ನಲ್ಲಿ ಚಿತ್ರೀಕರಣ ನಡೆಯಲಿದೆ. ಈ ಮಧ್ಯೆ ಪೋಸ್ಟ್‌ ಪೊ›ಡಕ್ಷನ್‌ ಕೆಲಸಗಳು ಸಹ ಜೊತೆಜೊತೆಯಾಗಿ ನಡೆಯುತ್ತಿದ್ದು, ಅಕ್ಟೋಬರ್‌ ಕೊನೆ ಅಥವಾ ನವೆಂಬರ್‌ನಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಚನೆ ಚಿತ್ರತಂಡದ್ದು. ಭಾವನಾ ಮೆನನ್‌ ನಾಯಕಿಯಾಗಿ ಕಾಣಿಸಿಕೊಂಡಿರುವ ಈ ಚಿತ್ರಕ್ಕೆ ಅನೂಪ್‌ ಸೀಳಿನ್‌ ಅವರ ಸಂಗೀತ ಮತ್ತು “ಮಫ್ತಿ’ ನವೀನ್‌ ಅವರ ಛಾಯಾಗ್ರಹಣವಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ