ಬಾಕ್ಸರ್‌ ನಡುವಿನ ಶಾಂತಿ-ಕ್ರಾಂತಿ

ಗುರಿಯ ಬೆನ್ನತ್ತಿ ...

Team Udayavani, Jun 20, 2019, 3:00 AM IST

“ಗಾಂಧಿ ಮತ್ತು ಹಿಟ್ಲರ್‌ನ ಐತಿಹಾಸಿಕ ಭೇಟಿ’… ಇದು ಹೊಸಬರೇ ಸೇರಿ ಮಾಡುತ್ತಿರುವ “ವಾರ್‌ ಅಂಡ್‌ ಪೀಸ್‌’ ಚಿತ್ರದ ಅಡಿಬರಹ. ಈ ಟ್ಯಾಗ್‌ಲೈನ್‌ ಮತ್ತು ಶೀರ್ಷಿಕೆ ಗಮನಿಸಿದರೆ, ಇದು ಯುದ್ಧಕ್ಕೆ ಸಂಬಂಧಿಸಿದ ಸಿನಿಮಾ ಇರಬಹುದಾ ಅಥವಾ ಗಾಂಧಿ ಹಾಗೂ ಹಿಟ್ಲರ್‌ ಕುರಿತಾದ ವಿಷಯ ಏನಾದರೂ ಇರಬಹುದಾ ಎಂಬ ಪ್ರಶ್ನೆ ಎದುರಾಗುವುದು ಸಹಜ. ಆದರೆ, “ವಾರ್‌ ಅಂಡ್‌ ಪೀಸ್‌’ ಅದ್ಯಾವುದಕ್ಕೂ ಸಂಬಂಧಿಸಿದ ಚಿತ್ರವಲ್ಲ.

ಹೌದು, ಇದೊಂದು ಬಾಕ್ಸರ್‌ ಕಥೆ. ಚಿತ್ರದ ನಾಯಕ ತಾನೊಬ್ಬ ಬಾಕ್ಸರ್‌ ಆಗಬೇಕು ಅಂತ ಬಯಸಿದವನು. ಬದುಕಿನಲ್ಲಿ ಬಾಕ್ಸರ್‌ ಆಗಲು ಹೊರಡುವ ಅವನಿಗೆ ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಾನೆ. ಬರುವ ಸಮಸ್ಯೆಗಳನ್ನು ಹೇಗೆಲ್ಲಾ ಮೆಟ್ಟಿ ನಿಂತು, ತನ್ನ ಬಾಕ್ಸರ್‌ ಬಯಕೆಯನ್ನು ಈಡೇರಿಸಿಕೊಳ್ಳುತ್ತಾನೆ ಎಂಬುದೇ ಚಿತ್ರದ ಒನ್‌ಲೈನ್‌ ಸ್ಟೋರಿ.

ಪ್ರಖ್ಯಾತ್‌ ಗೌಡ ಚಿತ್ರದ ನಿರ್ದೇಶಕರು. ಈ ಹಿಂದೆ ಗುರುಪ್ರಸಾದ್‌ ಅವರ ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಪ್ರಖ್ಯಾತ್‌ ಗೌಡ ಈ ಚಿತ್ರದ ಮೂಲಕ ಹೊಸ ವಿಷಯ ಹೇಳಲು ಹೊರಟಿದ್ದಾರೆ. ತಮ್ಮ “ವಾರ್‌ ಅಂಡ್‌ ಪೀಸ್‌’ ಬಗ್ಗೆ ಹೇಳುವ ಪ್ರಖ್ಯಾತ್‌ ಗೌಡ, ” ಒಂದಷ್ಟು ಭಾಗ ಚಿತ್ರೀಕರಣವಾಗಿದೆ. ಚಿತ್ರದ ಶೀರ್ಷಿಕೆ ಮತ್ತು ಅಡಿಬರಹ ಯಾಕೆ ಹೀಗೆ ಕೊಡಲಾಗಿದೆ ಎಂಬ ಸ್ಪಷ್ಟನೆ ಕೊಡುವುದಾದರೆ, ಇಲ್ಲಿ ಚಿತ್ರದ ನಾಯಕ ಗಾಂಧಿ ತತ್ವದವನು.

ಆದರೆ, ಎದುರಾಳಿಗಳು ಹಿಟ್ಲರ್‌ ರೀತಿ ಕೆಲಸ ಮಾಡುವವರು. ಹಾಗಾಗಿ, ಅಡಿಬರಹವನ್ನು ಹಾಗೆ ಇಡಲಾಗಿದೆ. ಹಾಗಂತ, ಇದು ಗಾಂಧಿ, ಹಿಟ್ಲರ್‌ಗೆ ಸಂಬಂಧಿಸಿದ ಚಿತ್ರವಂತೂ ಅಲ್ಲ. ಆದರೆ, ಆ ಎರಡರ ನಡುವಿನ ಸನ್ನಿವೇಶಗಳು ಹೇಗೆಲ್ಲಾ ವ್ಯಕ್ತಿಯ ವ್ಯಕ್ತಿತ್ವವನ್ನು ಕುಗ್ಗಿಸುತ್ತವೆ. ಅದರಿಂದ ಅವನು ಹೇಗೆ ಹೊರಬರುತ್ತಾನೆ ಎಂಬುದಕ್ಕೆ ಚಿತ್ರ ನೋಡಬೇಕು ಎನ್ನುತ್ತಾರೆ ನಿರ್ದೇಶಕ ಪ್ರಖ್ಯಾತ್‌ ಗೌಡ.

ಈಗಾಗಲೇ ಹತ್ತು ದಿನಗಳ ಕಾಲ ಶಿವಮೊಗ್ಗ, ಅರಸೀಕೆರೆ, ಬೆಂಗಳೂರು ಸುತ್ತಮುತ್ತ ಚಿತ್ರೀಕರಿಸಲಾಗಿದೆ. ಎರಡನೇ ಹಂತದಲ್ಲಿ ಮೈಸೂರು, ರಾಜಸ್ಥಾನ ಸುತ್ತಮುತ್ತ ಚಿತ್ರೀಕರಣವಾಗಲಿದೆ. ಹಾಡುಗಳನ್ನು ಮಡಿಕೇರಿ ಮತ್ತು ವಿದೇಶದಲ್ಲಿ ಚಿತ್ರೀಕರಿಸುವ ಯೋಚನೆ ಇದೆ ಎನ್ನುತ್ತಾರೆ ನಿರ್ದೇಶಕರು. ಚಿತ್ರಕ್ಕೆ ಸುರೇಶ್‌ ನಿರ್ಮಾಪಕರು.

ಅವರಿಗೆ ಲೀಲಾ ಮೋಹನ್‌ ಸಹ ನಿರ್ಮಾಪಕರಾಗಿ ಸಾಥ್‌ ಕೊಡುತ್ತಿದ್ದಾರೆ. ಇನ್ನು, ಚಿತ್ರಕ್ಕೆ ಚಿರಂತ್‌ ಹೀರೋ ಆಗಿ ಎಂಟ್ರಿಯಾಗುತ್ತಿದ್ದಾರೆ. ಜಿಮ್‌ ತರಬೇತುದಾರರಾಗಿರುವ ಚಿರಂತ್‌, ಬಾಕ್ಸರ್‌ ಕೂಡ ಹೌದು. ಅವರಿಗೆ ಇದು ಮೊದಲ ಚಿತ್ರ. ಅವರು ಚಿತ್ರದಲ್ಲಿ ಬಾಕ್ಸರ್‌ ಮಹ್ಮದ್‌ ಅಲಿ ಅವರ ಅಭಿಮಾನಿಯಂತೆ. ಅವರಂತೆಯೇ ಸಾಧನೆ ಮಾಡಲು ಹೊರಟಾಗ ಏನೆಲ್ಲಾ ಅಡ್ಡಿಗಳು ಎದುರಾಗುತ್ತವೆ, ಅವೆಲ್ಲವನ್ನು ಹೇಗೆ ಎದುರಿಸುತ್ತಾನೆ ಎಂಬುದೇ ಕಥೆ.

ಅವರಿಗಿಲ್ಲಿ ನಾಲ್ಕು ಶೇಡ್‌ಗಳಿವೆಯಂತೆ. ಚಿತ್ರದಲ್ಲಿ ರಾಣಿ ಎಂಬ ಕನ್ನಡದ ಹುಡುಗಿ ನಟಿಸಿದ್ದು, ಅವರಿಗಿಲ್ಲಿ ಹೀರೋನನ್ನು ಪ್ರೋತ್ಸಾಹಿಸುವ ಪಾತ್ರವಂತೆ. ಚಿತ್ರಕ್ಕೆ ಗುಪ್ಪಿನೇನಿ ವಿಜಯಬಾಬು ಆರು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಜಗಪತಿಬಾಬು, ತಬಲಾನಾಣಿ, ಚಿಕ್ಕಣ್ಣ ,ಕರಿಸುಬ್ಬು , ಚೇತನ್‌, ಶ್ರೀಧರ್‌ ಇತರರು ನಟಿಸುತ್ತಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ