ರಾಜ್‌ ಹುಟ್ಟುಹಬ್ಬದಲ್ಲಿ ಅಭಿಮಾನಿಗಳ ಸಡಗರ

ಡಾ.ರಾಜ್‌ ಸ್ಮಾರಕ ಬಳಿ ಅಭಿಮಾನಿಗಳ ಕಲರವ

Team Udayavani, Apr 25, 2019, 3:11 AM IST

ಕಂಠೀರವ ಸ್ಟುಡಿಯೋದಲ್ಲಿ ಬುಧವಾರ ಎಂದಿಗಿಂತಲೂ ಸಂಭ್ರಮದ ವಾತಾವರಣ. ಅದಕ್ಕೆ ಕಾರಣ, ಡಾ.ರಾಜಕುಮಾರ್‌ ಅವರ 91 ನೇ ಹುಟ್ಟುಹಬ್ಬ. ಮುಂಜಾನೆಯಿಂದಲೇ ದೂರದ ಊರುಗಳಿಂದ ಅಭಿಮಾನಿಗಳು ಆಗಮಿಸಿ, ರಾಜ್‌ ಸಮಾಧಿಗೆ ಪುಷ್ಪಗುಚ್ಛ ಇಡುವ ಮೂಲಕ ಪೂಜಿಸಿ, ಅಭಿಮಾನ ಮೆರೆದರು. ಅಪಾರ ಅಭಿಮಾನಿಗಳ ಸಮ್ಮುಖದಲ್ಲಿ ರಾಜ್‌ ಕುಟುಂಬ ಸದಸ್ಯರು ಸಮಾಧಿ ಬಳಿ ಪೂಜೆ ಸಲ್ಲಿಸಿ, ಪುಷ್ಪನಮನ ಸಲ್ಲಿಸಿದರು.

ಕಂಠೀರವ ಸ್ಟುಡಿಯೋದಲ್ಲಿರುವ ರಾಜ್‌ ಪುಣ್ಯಭೂಮಿ ಮುಂದೆ ಮಧ್ಯರಾತ್ರಿಯಿಂದಲೇ ಜಮಾಯಿಸಿದ್ದ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಸಮಾಧಿಗೆ ಪುಷ್ಪಾಲಂಕಾರದಿಂದ ಶೃಂಗರಿಸಿ ಸಂಭ್ರಮಿಸಿದ್ದು ವಿಸೇಷವಾಗಿತ್ತು. ಬೆಳಗ್ಗೆ ಡಾ. ರಾಜಕುಮಾರ್‌ ಸಮಾಧಿ ಬಳಿ ಆಗಮಿಸಿದ ಕುಟುಂಬ ವರ್ಗ, ವಿಶೇಷ ಪೂಜೆಯ ಮೂಲಕ ನಮನ ಸಲ್ಲಿಸಿತು.

ಇನ್ನು ಡಾ.ರಾಜಕುಮಾರ್‌ ಜನ್ಮದಿನದ ಪ್ರಯುಕ್ತ ಪ್ರತಿವರ್ಷದಂತೆ ಈ ವರ್ಷ ಕೂಡ ಡಾ. ರಾಜಕುಮಾರ್‌ ಅಭಿಮಾನಿಗಳು ಮತ್ತು ಇತರೆ ಸಂಘ-ಸಂಸ್ಥೆಗಳ ಆಶ್ರಯದಲ್ಲಿ, ಉಚಿತ ರಕ್ತದಾನ ಶಿಬಿರ, ನೇತ್ರ ತಪಾಸಣಾ ಶಿಬಿರ, ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಡಾ. ರಾಜ್‌ ಪುತ್ರ ನಟ ಶಿವರಾಜಕುಮಾರ್‌ ಹಾಗು ಮೊಮ್ಮಗ ವಿನಯ್‌ ಕೂಡ ಈ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಾಡಿದರು.

ರಾಜ್ಯದ ವಿವಿಧ ಭಾಗಗಳಿಂದ ವರನಟನ ಜನ್ಮದಿನವನ್ನು ಆಚರಿಸಲು ರಾಜಕುಮಾರ್‌ ಪುಣ್ಯಭೂಮಿಗೆ ಆಗಮಿಸಿದ್ದ ಅಭಿಮಾನಿಗಳಿಗೆ ಅನ್ನದಾನದ ವ್ಯವಸ್ಥೆಯನ್ನು ಮಾಡಲಾಗಿತ್ತು. ಶಿವರಾಜಕುಮಾರ್‌, ರಾಘವೇಂದ್ರ ರಾಜಕುಮಾರ್‌, ಎಸ್‌.ಎ.ಗೋವಿಂದರಾಜ್‌, ಬರಗೂರು ರಾಮಚಂದ್ರಪ್ಪ, ಸಾ.ರಾ.ಗೋವಿಂದು, ದೊಡ್ಡಣ್ಣ, ಚಿನ್ನೇಗೌಡ, ರಾಕ್‌ಲೈನ್‌ ವೆಂಕಟೇಶ್‌, ವಿನಯ್‌ರಾಜಕುಮಾರ್‌, ಸುಮಲತಾ ಅಂಬರೀಶ್‌,

ಗೀತಾ ಶಿವರಾಜಕುಮಾರ್‌, ಮಂಗಳಾ ರಾಘವೇಂದ್ರ ರಾಜಕುಮಾರ್‌ ಸೇರಿದಂತೆ ಚಿತ್ರರಂಗದ ಅನೇಕರು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದರು. ಅತ್ತ ಸುದೀಪ್‌, ದರ್ಶನ್‌, ಗಣೇಶ್‌, ಸೃಜನ್‌, ತರುಣ್‌ ಸುಧೀರ್‌ ಸೇರಿದಂತೆ ಕನ್ನಡದ ಅನೇಕ ನಟ,ನಟಿಯರು ಟ್ವೀಟ್‌ ಮೂಲಕ ಡಾ.ರಾಜಕುಮಾರ್‌ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ, ಅವರ ವ್ಯಕ್ತಿತ್ವವನ್ನು ಕೊಂಡಾಡಿದ್ದಾರೆ.

ಅಂಬಿಯ 5ನೇ ಪುಣ್ಯತಿಥಿ: ಇನ್ನು ಕಂಠೀರವ ಸ್ಟುಡಿಯೋದಲ್ಲಿ, ಒಂದು ಕಡೆ ಡಾ.ರಾಜ್‌ ಹುಟ್ಟಹಬ್ಬ ನಡೆದರೆ, ಮತ್ತೂಂದು ಕಡೆ ಅಂಬರೀಶ್‌ ಅವರ ಐದನೇ ತಿಂಗಳ ಪುಣ್ಯತಿಥಿ ಕಾರ್ಯಕ್ರಮ ಕೂಡ ನಡೆಯಿತು. ಈ ಬಾರಿ ರಾಜಕುಮಾರ್‌ ಹುಟ್ಟುಹಬ್ಬ ಮತ್ತು ಅಂಬರೀಶ್‌ ಐದನೇ ಪುಣ್ಯತಿಥಿ ಒಂದೇ ದಿನ ಬಂದಿದ್ದರಿಂದ, ಇಬ್ಬರೂ ನಟರ ಅಭಿಮಾನಿಗಳೂ ಕಂಠೀರವ ಸ್ಟುಡಿಯೋದಲ್ಲಿ ಜಮಾಯಿಸಿದ್ದರು.

ಇದೇ ಸಂದರ್ಭದಲ್ಲಿ ರಾಜಕುಮಾರ್‌ ಕುಟುಂಬ ಅಂಬಿ ಸಮಾಧಿಗೂ, ಅಂಬಿ ಪತ್ನಿ ಹಾಗೂ ಪುತ್ರ ಅಭಿಷೇಕ್ ರಾಜಕುಮಾರ್‌ ಸಮಾಧಿಗೂ ಭೇಟಿ ನೀಡಿ, ಇಬ್ಬರು ದಿಗ್ಗಜ ನಟರ ಆಶೀರ್ವಾದ ಪಡೆದಿದ್ದು ವಿಶೇಷವಾಗಿತ್ತು. ಜೊತೆಗೆ ಅಭಿಮಾನಿಗಳೂ ಕೂಡ ಎರಡೂ ಸಮಾಧಿಗಳಿಗೆ ನಮಿಸುವ ದೃಶ್ಯಗಳು ದಿನವಿಡಿ ಕಂಡು ಬಂತು.

ಮೂವರ ಸ್ಮಾರಕ ಒಂದೇ ಕಡೆ ಆಗಬೇಕು: ” ನಿಜ ಹೇಳಬೇಕೆಂದರೆ ರಾಜ್‌ ಕುಟುಂಬದಲ್ಲಿ ಹುಟ್ಟಿರುವುದೇ ಪುಣ್ಯ. ಅಂತಹ ತಂದೆ ಪಡೆದ ನನಗೆ ನಿಜಕ್ಕೂ ಹೆಮ್ಮೆಯಾಗುತ್ತದೆ. ಅಪ್ಪಾಜಿ ಮೇಲೆ ಕೋಟ್ಯಂತರ ಅಭಿಮಾನಿಗಳು ಪ್ರೀತಿ ಇಟ್ಟುಕೊಂಡಿದ್ದಾರೆ.

ಎಷ್ಟು ಕೋಟಿ ಕೊಟ್ಟರೂ ಈ ಪ್ರೀತಿ, ಅಭಿಮಾನ ಸಿಗಲ್ಲ. ಇನ್ನು ಇದೇ ದಿನ ಅಂಬರೀಶ್‌ ಅವರ 5 ನೇ ಪುಣ್ಯತಿಥಿ ಇದೆ. ಅವರು ತುಂಬ ನೆನಪಾಗುತ್ತಾರೆ. ಚಿತ್ರೀಕರಣ ಸಮಯದಲ್ಲಿ ನಾವೆಲ್ಲ ಕೇಕ್‌ ಕಟ್‌ ಮಾಡಿ ಅಪ್ಪಾಜಿ ಬರ್ತ್‌ಡೇ ಆಚರಿಸುವಾಗ, ಅಪ್ಪಾಜಿ ಕೇಕ್‌ಗೆ ಖರ್ಚು ಮಾಡುವುದನ್ನು ನೋಡಿ ಬೈಯುತ್ತಿದ್ದರು.

ಇನ್ನು ಚಿಕ್ಕಂದಿನಿಂದಲೂ ನಾವು ಅಪ್ಪಾಜಿ, ಅಂಬಿಮಾಮ, ವಿಷ್ಣುಮಾಮ ಅವರನ್ನು ನೋಡಿಕೊಂಡು ಬೆಳೆದವರು. ಈ ಮೂವರು ತ್ರಿಮೂರ್ತಿಗಳು ಯಾವುದೇ ಅಪೇಕ್ಷೆ ಇಲ್ಲದೆ ನಿಸ್ವಾರ್ಥ ಸೇವೆ ಸಲ್ಲಿಸಿದವರು.ಇವರ ಗೆಳೆತನ ದೊಡ್ಡದು. ಹಾಗಾಗಿ ಈ ಮೂವರು ದಿಗ್ಗಜರ ಸ್ಮಾರಕಗಳು ಒಂದೇ ಕಡೆ ಆಗಬೇಕು’
-ಶಿವರಾಜಕುಮಾರ್‌,ನಟ


ಮೊದಲು ವಿಷ್ಣು ಸ್ಮಾರಕವಾಗಲಿ: “ಮೊದಲು ವಿಷ್ಣುವರ್ಧನ್‌ ಅವರ ಸ್ಮಾರಕ ಆಗಲಿ. ಆ ಬಳಿಕ ಅಂಬರೀಶ್‌ ಸ್ಮಾರಕ ಮಾಡಲಿ. ಮಂಡ್ಯ ಪ್ರಚಾರ ವೇಳೆ ಸಿಎಂ ವಿಷ್ಣು ಅಭಿಮಾನಿಗಳಿಗೆ ವಿಷ್ಣು ಸ್ಮಾರಕ ನಿರ್ಮಿಸುವುದಾಗಿ ಆಶ್ವಾಸನೆ ನೀಡಿದ್ದರು. “ಚುನಾವಣೆ ಬಳಿಕ ನೀವು ಎಲ್ಲಿ ಹೇಳುತ್ತೀರೋ ಅಲ್ಲೇ ಸ್ಮಾರಕ ಮಾಡೋಣ’ ಎಂದಿದ್ದರು. ಅದರಂತೆ ವಿಷ್ಣು ಸ್ಮಾರಕ ನಿರ್ಮಿಸಲಿ. ಮೊದಲು ವಿಷ್ಣು ಸ್ಮಾರಕ ಆ ಬಳಿಕ ಅಂಬರೀಶ್‌ ಸ್ಮಾರಕ ಮಾಡಲಿ’
-ಸುಮಲತಾ ಅಂಬರೀಶ್‌


ಈ ವಿಭಾಗದಿಂದ ಇನ್ನಷ್ಟು

  • "ನನ್ನ 38 ವರ್ಷಗಳ ಸಿನಿಮಾ ಜರ್ನಿ ಸಾರ್ಥಕವೆನಿಸಿದೆ. ಸಿನಿಮಾರಂಗದಲ್ಲಿ ನೆಮ್ಮದಿ ಸಿಕ್ಕಾಗಿದೆ. ಇನ್ನು ಸಾಕು ಅಂದುಕೊಂಡಿದ್ದೆ. ಆದರೆ, ಕವಿರಾಜ್‌, ನೀವು ಸುಮ್ಮನೆ...

  • ದರ್ಶನ್‌ ಅಭಿನಯದ "ಒಡೆಯ' ಚಿತ್ರದ ಆರ್ಭಟ ಜೋರಾಗಿದೆ. ಅದರಲ್ಲೂ ದರ್ಶನ್‌ ಅಭಿಮಾನಿಗಳಷ್ಟೇ ಅಲ್ಲ, ಎಲ್ಲಾ ವರ್ಗದವರಿಗೂ ಇಷ್ಟವಾಗುವ ಅಂಶಗಳು "ಒಡೆಯ'ದಲ್ಲಿರುವುದರಿಂದ...

  • ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಹೊಸ ಪ್ರಯೋಗದ ಚಿತ್ರಗಳನ್ನು ಒಪ್ಪಿಕೊಳ್ಳುವ ನಾಯಕ ನಟಿಯರ ಪೈಕಿ ಸೋನು ಗೌಡ ಕೂಡ ಒಬ್ಬರು. ಹಳಬರು ಮತ್ತು ಹೊಸಬರು ಎನ್ನದೆ ಎಲ್ಲ...

  • ಸುಮಾರು ಹದಿನೆಂಟು ವರ್ಷಗಳ ಹಿಂದೆ "ಗಟ್ಟಿಮೇಳ' ಚಿತ್ರದ ಮೂಲಕ ನಾಯಕನಾಗಿ ತೆರೆ ಮೇಲೆ ಬಂದಿದ್ದ ನಿರ್ದೇಶಕ ಎಸ್‌. ಮಹೇಂದರ್‌, ಈಗ "ಶಬ್ಧ' ಚಿತ್ರದಲ್ಲಿ ಮತ್ತೂಮ್ಮೆ...

  • ರವಿಚಂದ್ರನ್‌ ಅವರ ಎರಡನೇ ಪುತ್ರ ವಿಕ್ರಮ್‌ ಅಭಿನಯದ "ತ್ರಿವಿಕ್ರಮ' ಚಿತ್ರ ಶುರುವಾಗಿದ್ದು ಎಲ್ಲರಿಗೂ ಗೊತ್ತೇ ಇದೆ. ಈಗ ಹೊಸ ಸುದ್ದಿಯೆಂದರೆ, ಸದ್ದಿಲ್ಲದೆಯೇ...

ಹೊಸ ಸೇರ್ಪಡೆ