ಆತ್ಮಗಳ ಕಾಟ ನೋಡುಗರಿಗೆ ಸಂಕಟ!

ಚಿತ್ರ ವಿಮರ್ಶೆ

Team Udayavani, May 12, 2019, 3:00 AM IST

ಒಮ್ಮೊಮ್ಮೆ ನಿರೀಕ್ಷೆ ಹುಸಿಯಾಗುವುದು ಅಂದರೆ ಹೀಗೇನೆ. ಸಿನಿಮಾದ ಪೋಸ್ಟರ್‌ ಡಿಸೈನ್‌ ನೋಡಿ ಈ ಸಿನಿಮಾ ನೋಡಲೇಬೇಕು ಅಂದುಕೊಂಡು ಒಳಹೊಕ್ಕರೆ, ಅಲ್ಲಿ ನಿರಾಸೆಗಳ ಆಗರ. ಪೋಸ್ಟರ್‌ ಡಿಸೈನ್‌ನಲ್ಲಿರುವಷ್ಟೇ “ತಾಕತ್ತು’ ಚಿತ್ರದಲ್ಲೂ ಇದ್ದಿದ್ದರೆ ಬಹುಶಃ ನೋಡುಗರಿಗೆ “ಕುಷ್ಕ’ ತಿಂದಷ್ಟೇ “ಅನುಷ್ಕ’ ಇಷ್ಟವಾಗುತ್ತಿದ್ದಳೇನೋ? ಆದರೆ, ಅಂತಹ ಯಾವ ರುಚಿಕಟ್ಟಾದ ಕೆಲಸವೂ ಇಲ್ಲಿ ನಡೆದಿಲ್ಲ ಎಂಬುದೇ ಬೇಸರದ ಸಂಗತಿ.

ಇಲ್ಲಿ ಅತಿ ಹೆಚ್ಚು ಬಳಕೆಯಾಗಿರುವ ಗ್ರಾಫಿಕ್ಸ್‌ ಬಗ್ಗೆ ಹೊಗಳಬೇಕೋ, ತಡೆದುಕೊಳ್ಳಲಾಗದಷ್ಟು “ಭಯಾನಕ’ ಟಾರ್ಚರ್‌ ಕೊಡುವ ಆತ್ಮಗಳ ಬಗ್ಗೆ ಹೇಳಬೇಕೋ, ದೆವ್ವಗಳ ಹುಚ್ಚಾಟಕ್ಕೆ ನಗಬೇಕೋ ಅಥವಾ ಎಲ್ಲಾ ಆತ್ಮ ಕಥೆಗಳ ಸಾಲಿಗೆ ಇದೂ ಒಂದು ಅಂತ ಕರೆಯಬೇಕೋ ಎಂಬ ಗೊಂದಲದಲ್ಲೇ “ಅನುಷ್ಕ’ಳ ಆರ್ಭಟದೊಂದಿಗೆ ಕಟ್ಟು ಕಥೆಯೊಂದನ್ನು ಅಂತ್ಯಗೊಳಿಸಲಾಗಿದೆ.

ಇಲ್ಲಿ ಆತ್ಮಗಳ ಸುತ್ತ ಕಥೆ ಸುತ್ತಲಾಗಿದೆ. ತೆರೆ ಮೇಲೆ ಕಾಣಿಸಿಕೊಳ್ಳುವ ದೆವ್ವಗಳು ಮಾತಾಡುತ್ತವೆ, ಬಿಳಿ ಸೀರೆ ಧರಿಸಿ, ಕೂದಲು ಬಿಟ್ಟುಕೊಂಡು ಕತ್ತಲ ರಾತ್ರಿಯಲ್ಲಿ ಹಾಡುತ್ತವೆ, ಗೆಜ್ಜೆ ಸದ್ದು ಮಾಡುತ್ತವೆ, ಅಳುತ್ತವೆ, ನಗುತ್ತವೆ, ಆದರೆ, ನೋಡುಗರನ್ನು ಮಾತ್ರ ಅಳಿಸುವುದರಲ್ಲ, ನಗಿಸುವುದರಲ್ಲಿ ಅಷ್ಟೇ ಯಾಕೆ ಭಯಪಡಿಸುವುದರಲ್ಲಿ ಸಫ‌ಲವಾಗಿಲ್ಲ. ಹಾಗಾದರೆ ಅವೆಲ್ಲವೂ ಡಮ್ಮಿ ದೆವ್ವಗಳೇ? ಅನುಮಾನ ಮೂಡಿದರೆ, “ಅನುಷ್ಕ’ಳ ಹಾರಾಟ, ಕಿರುಚಾಟ ನೋಡಿಬರಹಬದು.

ಚಿತ್ರ ನೋಡಿದಾಗ ಖರ್ಚು ಮಾಡಿರುವುದು ಕಾಣುತ್ತೆ. ಅದು ಅತೀ ಹೆಚ್ಚು ಗ್ರಾಫಿಕ್ಸ್‌ಗೆ. ಹಾಗಂತ, ಅದನ್ನಾದರೂ ಸರಿಯಾಗಿ ಮಾಡಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸುವುದು ಕಷ್ಟ. ಒಂದು ಸರಳ ಕಥೆಯನ್ನು ತೋರಿಸಲು ಹರಸಾಹಸ ಪಡಲಾಗಿದೆ. ಆತ್ಮಗಳ ಕಥೆ ಅಂದರೆ, ಅಲ್ಲಿ ಮಂತ್ರವಾದಿ ಇರುತ್ತಾನೆ, ತನ್ನ ದೈವಶಕ್ತಿ ಪ್ರಯೋಗಿಸಿ, ಆತ್ಮವನ್ನು ಬಂಧಿಸುತ್ತಾನೆ.

ಆದರೆ, ಇಲ್ಲಿ ನೋಡುಗರು ಬಂಧನಕ್ಕೊಳಗಾಗುತ್ತಾರೆ ಅನ್ನುವುದು ಬಿಟ್ಟರೆ ಯಾವ ಆತ್ಮಗಳ ಬಂಧನವೂ ಆಗಲ್ಲ. ಈ ರೀತಿಯ ಕಥೆ ಇಟ್ಟುಕೊಂಡು ಸಿನಿಮಾ ಮಾಡುವ ಮುನ್ನ ನೋಡುಗರಲ್ಲಿ ಭಯಪಡಿಸುವಂತಹ ತಾಕತ್ತು ಆ ಚಿತ್ರಕ್ಕಿರಬೇಕು, ಇಲ್ಲವೇ ಚಿತ್ರದುದ್ದಕ್ಕೂ ಕುತೂಹಲದ ಅಂಶಗಳಿರಬೇಕು. ಆದರೆ, ಇಲ್ಲಿ ಭಯವೂ ಇಲ್ಲ, ಕುತೂಹಲ ಕೆರಳಿಸುವ ಅಂಶಗಳೂ ಇಲ್ಲ.

ಒಂದೇ ಒಂದು ಎಳೆ ಇಟ್ಟುಕೊಂಡು, ವಿನಾಕಾರಣ, ದೆವ್ವಗಳ ಭಯ ಸೃಷ್ಟಿಸಿ, ಅದಕ್ಕೊಂದು ಮಾಫಿಯಾದ ಲೇಪನ ಮಾಡಿ, ನೋಡುಗರ ತಾಳ್ಮೆಗೆಡಿಸಲಾಗಿದೆಯಷ್ಟೇ. ಮೊದಲರ್ಧ ಒಂಚೂರು ಭಯದ ಜೊತೆಗೆ ಸಾಗುವ ಚಿತ್ರ, ದ್ವಿತಿಯಾರ್ಧದಲ್ಲಿ ಕಥೆ ಎಲ್ಲೆಲ್ಲೋ ಹರಿದಾಡಿ, ಒಂದಷ್ಟು ಗೊಂದಲಕ್ಕೀಡಾಗಿ, ಕೊನೆಗೆ ಟ್ರ್ಯಾಕ್‌ಗೆ ಬರುವ ಹೊತ್ತಿಗೆ ನೋಡುಗ ಸೀಟಿಗೆ ಒರಗಿರುತ್ತಾನೆ. ಇಂತಹ ಕಥೆಗೆ ಎಫೆಕ್ಟ್ಸ್ , ಹಿನ್ನೆಲೆ ಸಂಗೀತ ಸಾಥ್‌ ನೀಡಬೇಕು.

ಆದರೆ, ಅದ್ಯಾವುದನ್ನೂ ಇಲ್ಲಿ ನಿರೀಕ್ಷಿಸುವಂತಿಲ್ಲ. ಬಹುತೇಕ ಒಂದು ಬಂಗಲೆ, ಒಂದು ರಸ್ತೆ, ಒಂದಷ್ಟು ಮೈದಾನ ಬಿಟ್ಟರೆ ಚಿತ್ರ ಬೇರೆಲ್ಲೂ ಸಾಗಿಲ್ಲ. ಹೊಸದಾಗಿ ಮದುವೆಯಾದ ದಂಪತಿ ಹನಿಮೂನ್‌ಗೆಂದು ರಾಣಿ ವಿಲಾಸ ಗೆಸ್ಟ್‌ ಹೌಸ್‌ ಕಡೆಗೆ ಪಯಣ ಬೆಳೆಸುತ್ತಾರೆ. ರಾತ್ರಿ ಪಯಣದಲ್ಲಿ ವಿಚಿತ್ರ ಘಟನೆಗಳು ಎದುರಾಗುತ್ತವೆ, ಯಾವುದೋ ಒಂದು ಗೊಂಬೆ ಅವರನ್ನು ಹಿಂಬಾಲಿಸುತ್ತೆ. ಆದರೂ, ಹೇಗೋ ಆ ದಂಪತಿ ರಾಣಿ ವಿಲಾಸ ಗೆಸ್ಟ್‌ ಹೌಸ್‌ ತಲುಪುತ್ತೆ.

ಅಲ್ಲಿರುವ ವಾಚ್‌ಮೆನ್‌, ಮನೆ ಕೆಲಸದಾಕೆ ಅವರನ್ನು ಬರಮಾಡಿಕೊಳ್ಳುತ್ತಾರೆ. ಮನೆಯೊಳಗೆ ವಿಚಿತ್ರ ಅನುಭವ ಶುರುವಾಗುತ್ತದೆ. ಅಸಲಿಗೆ ಅವರು ಮನುಷ್ಯರಲ್ಲ, ಆತ್ಮಗಳು ಅನ್ನೋದು ಅರಿವಾಗುತ್ತಿದ್ದಂತೆಯೇ, ಅಲ್ಲೊಂದು ಸಂಚಿನ ಕಥೆ ಬಿಚ್ಚಿಕೊಳ್ಳುತ್ತೆ. ಅದರೊಳಗೊಂದು ಮಾಫಿಯಾ ಕೂಡ ಇಣುಕಿ ನೋಡುತ್ತೆ. ಆಮೇಲೆ ಏನೆಲ್ಲಾ ಆಗುತ್ತೆ ಅನ್ನೋದು ಕಥೆ.

ಇಲ್ಲೊಂದು ರಾಣಿಯ ಕಥೆಯೂ ಇದೆ. ನೂರಾರು ವರ್ಷಗಳ ಹಿಂದೆ ರಾಣಿ ಅನುಷ್ಕ ದೇವಿ ಆ ವಿಲಾಸ ಗೆಸ್ಟ್‌ಹೌಸ್‌ನಲ್ಲಿ ವಾಸವಿರುತ್ತಾಳೆ. ಆ ಊರ ಜನರ ಪರ ಕೆಲಸ ಮಾಡುತ್ತಿರುತ್ತಾಳೆ. ಆಕೆ ಯುದ್ಧದಲ್ಲಿ ಮಡಿದರೂ, ಆ ಊರ ಜನರಿಗೆ ತೊಂದರೆಯಾದರೆ, ಪ್ರತ್ಯಕ್ಷಗೊಂಡು, ಭ್ರಷ್ಟರನ್ನು ಹಿಗ್ಗಾಮುಗ್ಗ ಥಳಿಸಿ, ಸಂಹರಿಸುತ್ತಾಳೆ. ಆ ಕಥೆಯಲ್ಲಿ ಬರುವ ಅನುಷ್ಕ ದೇವಿ, ಆ ದಂಪತಿ ಹಿಂದೆ ನಿಲ್ಲುತ್ತಾಳ, ಅವರನ್ನು ರಕ್ಷಿಸುತ್ತಾಳ ಅನ್ನೋದು ಕಥೆ.

ರೂಪೇಶ್‌ ಶೆಟ್ಟಿ ಸಿಕ್ಕ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಅಮೃತಾ ಕೂಡ ಪಾತ್ರಕ್ಕೆ ಸಾಧ್ಯವಾದಷ್ಟು ನ್ಯಾಯ ಸಲ್ಲಿಸಿದ್ದಾರೆ. ಉಳಿದಂತೆ ಸಾಧುಕೋಕಿಲ ಅವರ ಹಾಸ್ಯ ಎಂದಿನಂತೆ ಸಾಗಿದೆ. ಆದಿಲೋಕೇಶ್‌, ಬಲರಾಜ್‌ ಇತರೆ ಪಾತ್ರಗಳು ಇರುವುಷ್ಟು ಸಮಯ ಗಮನಸೆಳೆಯುತ್ತವೆ. ವಿಕ್ರಮ್‌ ಸೆಲ್ವ ಸಂಗೀತದಲ್ಲಿ “ಸದಾ ನಿನ್ನ ಕಣ್ಣಲೀ ಸಮಾಚಾರ ಹೇಳಿದೆ..’ ಹಾಡು ಗುನುಗುವಂತಿದೆ. ವೀನಸ್‌ ಮೂರ್ತಿ ಛಾಯಾಗ್ರಹಣ ಪರವಾಗಿಲ್ಲ.

ಚಿತ್ರ: ಅನುಷ್ಕ
ನಿರ್ಮಾಣ: ಎಸ್‌.ಕೆ.ಗಂಗಾಧರ್‌
ನಿರ್ದೇಶನ: ದೇವರಾಜ್‌ಕುಮಾರ್‌
ತಾರಾಗಣ: ಅಮೃತಾ, ರೂಪೇಶ್‌ ಶೆಟ್ಟಿ, ಸಾಧುಕೋಕಿಲ, ರೂಪ ಶರ್ಮ, ಬಲರಾಜ್‌, ಆದಿಲೋಕೇಶ್‌ ಇತರರು.

* ವಿಭ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಸಾಮಾನ್ಯವಾಗಿ ಹುಡುಗರು ಲವ್‌ ಫೇಲ್ಯೂರ್‌ ಆದ್ರೆ, ಫ್ಯಾಮಿಲಿ ಪ್ರಾಬ್ಲಂ ಅಥವಾ ಇನ್ನೇನಾದ್ರೂ ಬೇಸರವಾದರೆ ಆದ್ರೆ ಹಳೆಯದನ್ನೆಲ್ಲ ಮರೆಯಲು ಕೈಯಲ್ಲಿ ಬಾಟಲ್‌...

  • ಆಕೆ ಶ್ರೀಮಂತ ಬಿಝಿನೆಸ್‌ಮ್ಯಾನ್‌ವೊಬ್ಬನ ಪತ್ನಿ. ಮೊದಲ ಪತ್ನಿಯನ್ನು ಕಳೆದುಕೊಂಡು ಒಂಟಿತನದಲ್ಲಿದ್ದ ಆ ಬಿಝಿನೆಸ್‌ ಮ್ಯಾನ್‌ಗೆ ಮೋಡಿ ಮಾಡಿ, ಆತನ ಪತ್ನಿಯಾದವಳಾಕೆ....

  • ಕಾಯಿಲೆಯ ಕೊನೆ ಹಂತದಲ್ಲಿ ನೀವು ಸಂಪೂರ್ಣವಾಗಿ ನಿಮ್ಮನ್ನೇ ಮರೆತಿರುತ್ತೀರಿ ವೈದ್ಯರು ಹೀಗೆ ಹೇಳುವಾಗ ಆಕೆಗೆ ಇಡೀ ಜಗತ್ತೇ ಕುಸಿದಂತಾಗುತ್ತದೆ. ಮಗಳ ಮುಖ ಕಣ್ಣ...

  • "ಕಿಕ್‌ ಏರ್‌ ಬೇಕು ಅಂದ್ರೆ ಕ್ವಾಟ್ರಾ ಬೇಕು... ಒಂಟಿನ ಮುಟ್ಬೇಕು ಅಂದ್ರೆ ಮೀಟ್ರಾ ಬೇಕು...' ಇಂಥದ್ದೊಂದು ಮಾಸ್‌ ಡೈಲಾಗ್‌ ಹೇಳಿ ಮುಗಿಸುವಷ್ಟರಲ್ಲಿ, "ಒಂಟಿ'ಯನ್ನು...

  • ಆತ ಖಡಕ್‌ ಪೊಲೀಸ್‌ ಆಫೀಸರ್‌. ಬಿಹಾರದ ಗೂಂಡಾಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಎನ್‌ಕೌಂಟರ್‌ ಸ್ಪೆಷಲಿಸ್ಟ್‌. ಗೂಂಡಾಗಳಿಗೆ ಗುಂಡೇಟು ಮದ್ದು ಎಂದು ಭಾವಿಸಿದ...

ಹೊಸ ಸೇರ್ಪಡೆ