ಶಾಲಾ ವಾಹನದಲ್ಲಿ ಮಕ್ಕಳೆಷ್ಟು ಸೇಫ್?

ಮಕ್ಕಳಿದ್ದಾರೆ ಎಚ್ಚರಿಕೆ 1

Team Udayavani, May 15, 2019, 3:10 AM IST

ಶಾಲಾ ಮಕ್ಕಳನ್ನು ಕರೆದೊಯ್ಯುವ ವಾಹನಗಳು ಹೀಗೇ ಇರಬೇಕು ಎಂದು ಹಲವು ನಿಯಮಗಳಿವೆ. ಈ ಕುರಿತು ಪ್ರತ್ಯೇಕ ಮಾರ್ಗಸೂಚಿ ಕೂಡ ಇದೆ. ಆದರೆ, ಈ ನಿಯಮಗಳನ್ನು ಖಾಸಗಿ, ಅನುದಾನಿತ ಶಾಲೆಗಳು ಪಾಲಿಸುತ್ತವೆಯೇ ಎಂಬ ಪ್ರಶ್ನೆ ಕೂಡ ಇದೆ. ಈ ನಿಟ್ಟಿನಲ್ಲಿ ಶಾಲಾ ವಾಹನಗಳ ಕುರಿತು ಸರ್ಕಾರದ ನಿಯಮಾವಳಿ ಏನು? ಸುಪ್ರೀಂಕೋರ್ಟ್‌ ನಿರ್ದೇಶನ ಏನು? ಎಂಬ ಬಗ್ಗೆ “ಮಕ್ಕಳಿದ್ದಾರೆ ಎಚ್ಚರಿಕೆ’ ಸರಣಿ ಮೂಲಕ “ಉದಯವಾಣಿ’ ಬೆಳಕು ಚೆಲ್ಲಲಿದೆ.

ಬೆಂಗಳೂರು: ಪೋಷಕರೇ, ನಿಮ್ಮ ಮಕ್ಕಳು ಶಾಲೆಗೆ ಖಾಸಗಿ ಅಥವಾ ಶಾಲಾ ವಾಹನಗಳಲ್ಲಿ ಹೋಗುತ್ತಿದ್ದಾರೆಯೇ? ಆ ವಾಹನಗಳು ವಾಣಿಜ್ಯ ಸರಕು ಸಾಗಣೆ ವಾಹನಗಳೇ ಅಥವಾ ಸರ್ಕಾರದ ನಿಯಮಾವಳಿ ಪ್ರಕಾರ ಇರುವ ವಾಹನಗಳೇ? ಅಥವಾ ರಿಕ್ಷಾ, ಓಮ್ನಿ ವಾಹನಗಳೇ? ಎಂಬುದರ ಬಗ್ಗೆ ಜಾಗರೂಕತೆ ವಹಿಸುವುದು ಮುಖ್ಯ ಹಾಗೂ ಸೂಕ್ತ.

ಮಕ್ಕಳನ್ನು ಪ್ರತಿಷ್ಠಿತ ಶಾಲೆಗೆ ಸೇರಿಸುವುದು ಮಾತ್ರವಲ್ಲ, ನಿತ್ಯ ಮನೆಯಿಂದ ಶಾಲೆಗೆ ಹಾಗೂ ಶಾಲೆಯಿಂದ ಮನೆಗೆ ಯಾವ ವಾಹನದಲ್ಲಿ ಮಗು ಓಡಾಡುತ್ತಿದೆ, ಆ ವಾಹನ ಸುಸ್ಥಿತಿಯಲ್ಲಿದೆಯಾ? ಸುರಕ್ಷಿತವಾಗಿದೆಯೇ ಎಂಬ ಬಗ್ಗೆಯೂ ಪೋಷಕರು ಗಮನಹರಿಸಬೇಕು.

ಶಾಲಾ ಮಕ್ಕಳನ್ನು ಕರೆದೊಯ್ಯುವ ವಾಹನಗಳು ಹೇಗಿರಬೇಕು? ವಿದ್ಯಾರ್ಥಿಗಳಿಗಾಗಿ ವಾಹನ ವ್ಯವಸ್ಥೆ ಮಾಡಿರುವ ಶಾಲಾ ಆಡಳಿತ ಮಂಡಳಿಗಳು ಯಾವ ನಿಯಮ ಅನುಸರಿಸಬೇಕು? ಖಾಸಗಿ ವಾಹನಗಳಾದರೆ ಅವು ಹೇಗಿರಬೇಕು ಎಂಬ ಬಗ್ಗೆ ಸರ್ಕಾರ ರೂಪಿಸಿರುವ ನಿಯಮ ಪಾಲನೆ ಕುರಿತು ಸುಪ್ರೀಂಕೋರ್ಟ್‌ ಸ್ಪಷ್ಟ ನಿರ್ದೇಶನ ಹೊರಡಿಸಿದೆ.

ಅದರಂತೆ ಕೇಂದ್ರ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಹಾಗೂ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆ ಮಾರ್ಗಸೂಚಿಗಳನ್ನು ಹೊರಡಿಸಿದೆ. ಇದರ ಅನುಷ್ಠಾನ ಜವಾಬ್ದಾರಿಯನ್ನು ಪೊಲೀಸ್‌ ಇಲಾಖೆ, ಸಾರಿಗೆ ಇಲಾಖೆ ಹಾಗೂ ಶಾಲಾಡಳಿತ ಮಂಡಳಿಗೆ ನೀಡಲಾಗಿದೆ. ಆದರೆ, ಎಷ್ಟು ಪ್ರಮಾಣದಲ್ಲಿ ಈ ಮಾರ್ಗಸೂಚಿಯನ್ನು ಖಾಸಗಿ, ಅನುದಾನಿತ ಶಾಲೆಗಳು ತಮ್ಮ ವಾಹನದಲ್ಲಿ ಅಳವಡಿಸಿಕೊಳ್ಳುತ್ತವೆ ಎಂಬ ಪ್ರಶ್ನೆಯೂ ಇದೆ.

ಶಾಲಾ ವಿದ್ಯಾರ್ಥಿಗಳನ್ನು ರಿಕ್ಷಾ, ಓಮ್ನಿ ಇತ್ಯಾದಿ ವಾಹನಗಳಲ್ಲಿ ಕುರಿ ತುಂಬಿದಂತೆ ಶಾಲಾ ಮಕ್ಕಳನ್ನು ತುಂಬಿಕೊಂಡು ಹೋಗುವ ದೃಶ್ಯ ಸಾಮಾನ್ಯ. ನಿರ್ದಿಷ್ಟ ಸಂಖ್ಯೆಗಿಂತ ಹೆಚ್ಚಿನ ಮಕ್ಕಳನ್ನು ತುಂಬಿಕೊಂಡು ವೇಗವಾಗಿ ಹೋಗುತ್ತಿದ್ದ ಅದೆಷ್ಟೊ ಶಾಲಾ ವಾಹನಗಳು ಅಪಘಾತಕ್ಕೆ ಈಡಾಗಿ ಮಕ್ಕಳ ಜೀವವನ್ನೇ ಕಳೆದುಕೊಂಡ ನಿದರ್ಶನಗಳು ಕಣ್ಣಮುಂದಿವೆ. ಸರ್ಕಾರದ ನಿಯಮಾವಳಿ ಏನು? ಸುಪ್ರೀಂಕೋರ್ಟ್‌ ನಿರ್ದೇಶನ ಏನು? ಎಂಬುದರ ಬಗ್ಗೆ ಲ್ಲಿದೆ ಮಾಹಿತಿ.

ನಿಯಮದಲ್ಲಿ ಏನೇನಿದೆ?
* ಶಾಲಾ ವಾಹನದಲ್ಲಿ ಚಾಲಕನನ್ನು ಹೊರತುಪಡಿಸಿ ಕನಿಷ್ಠ 13 ಮಕ್ಕಳು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳು ಕುಳಿತುಕೊಳ್ಳಬಹುದಾದ ವ್ಯವಸ್ಥೆ ಇರಬೇಕು. ಮಕ್ಕಳು ವಾಹನ ಇಳಿದು, ಹತ್ತಲು ವ್ಯವಸ್ಥೆ ಚೆನ್ನಾಗಿರಬೇಕು.

* ಶಾಲಾ ಮಕ್ಕಳನ್ನು ಕರೆದೊಯ್ಯವ ಬಸ್‌ಗಳು ಹಳದಿ ಬಣ್ಣದಿಂದ ಕೂಡಿದ್ದು, ಬಸ್‌ನ ಎರಡೂ ಬದಿಯಲ್ಲಿ ಶಾಲೆಯ ಹೆಸರನ್ನು ಸ್ಪಷ್ಟವಾಗಿ ಬರೆದಿರಬೇಕು.

* ವಾಹನದ ಮುಂಭಾಗ ಮತ್ತು ಹಿಂಭಾಗದಲ್ಲಿ ಶಾಲಾ ವಾಹನ ಎಂದು ಬರೆದಿರಬೇಕು. ಶಾಲೆಯ ದೂರವಾಣಿ ಸಂಖ್ಯೆ ಅಥವಾ ಆಡಳಿತ ಮಂಡಳಿಗೆ ಸಂಬಂಧಿಸಿದ ಯಾವುದಾದರೊಂದು ಮೊಬೈಲ್‌ ಸಂಖ್ಯೆಯನ್ನು ಬಸ್‌ನ ಹೊರಭಾಗದಲ್ಲಿ ಸ್ಪಷ್ಟವಾಗಿ ಬರೆದಿರಬೇಕು.

* ವಾಹನದಲ್ಲಿ ತೆರೆದ ಕಿಟಕಿ ಇರಬಾರದು, ಅಡ್ಡವಾಗಿ ಸರಳುಗಳನ್ನು ಕಿಟಕಿಗೆ ಅಳವಡಿಸಿರಬೇಕು. ಬಸ್‌ನ ಬಾಗಿಲು ಸುಲಭವಾಗಿ ಲಾಕ್‌ ಮಾಡುವಂತಿರಬೇಕು. ಶಾಲಾ ಬಸ್‌ಗಳಿಗೆ ವೇಗ ನಿಯಂತ್ರಕಗಳನ್ನು ಅಳವಡಿಸಿ, 40 ಕಿ.ಮೀ ವೇಗಕಿಂತ ಜಾಸ್ತಿ ಹೋಗಬಾರದು ಎಂಬ ಸೂಚನೆಯನ್ನು ಚಾಲಕರಿಗೆ ಆಡಳಿತ ಮಂಡಳಿಯಿಂದ ನೀಡಿರಬೇಕು.

* ತುರ್ತು ನಿರ್ಗಮನ ದ್ವಾರ ಇರಬೆಕು. ಚಾಲಕನ ಆಯ್ಕೆ ಸಂದರ್ಭದಲ್ಲಿ ಪೊಲೀಸ್‌ ಪರಿಶೀಲನೆಯೂ ಮುಗಿಸಿಕೊಂಡಿರಬೇಕು. ಬಸ್‌ನಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಸೂಕ್ತ ಅರ್ಹತೆ ಹೊಂದಿರುವ ಮಹಿಳಾ ಸಿಬ್ಬಂದಿ ನೇಮಿಸಿರಬೇಕು. ಶಾಲಾ ವಾಹನ ನಿರ್ವಹಣೆ ಮತ್ತು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಒರ್ವ ಸಾರಿಗೆ ಸಂಯೋಜಕರನ್ನು ಆಡಳಿತ ಮಂಡಳಿಯೇ ನೇಮಿಸಿಕೊಂಡಿರಬೇಕು.

* ಮಕ್ಕಳ ಸುರಕ್ಷತೆ ಹಿತದೃಷ್ಟಿಯಿಂದ ಶಾಲಾಡಳಿತ ಮಂಡಳಿ ಕನಿಷ್ಠ ಒಬ್ಬ ಶಿಕ್ಷಕನಿಗೆ ಶಾಲಾ ಬಸ್‌ನಲ್ಲಿ ಹೋಗಿ ಬರಲು ಅವಕಾಶ ಕಲ್ಪಿಸಬೇಕು. ವಾಹನ ಚಾಲಕನ ದೈಹಿಕ ಸಾಮರ್ಥ್ಯ ಮತ್ತು ದೃಷ್ಟಿದೋಷಗಳ ಬಗ್ಗೆ ವರ್ಷಕ್ಕೊಮ್ಮೆಯಾದರೂ ಪರಿಶೀಲಿಸಬೇಕು.

* ಎಲ್ಲ ಶಾಲಾ ಬಸ್‌ಗಳಲ್ಲೂ ಮಕ್ಕಳ ಬ್ಯಾಗ್‌ ಇಡಲು ಪ್ರತ್ಯೇಕ ವ್ಯವಸ್ಥೆ ಮಾಡಿರಬೇಕು. ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇರಬೇಕು. ತುರ್ತು ಸಂದರ್ಭದಲ್ಲಿ ಮಕ್ಕಳು ಅಲಾರಾಮ್‌ ನೀಡಬಹುದಾದ ವ್ಯವಸ್ಥೆ ಬಸ್‌ ಒಳಗೆ ಕಲ್ಪಿಸಬೇಕು.

* ಚಾಲಕನು ಕನಿಷ್ಠ 5 ವರ್ಷ ಭಾರಿ ವಾಹನ ಚಾಲನೆ ಮಾಡಿದ ಪರವಾನಿಗೆ ಪತ್ರ ಹೊಂದಿರಬೇಕು. ಸಂಚಾರ ನಿಯಮಗಳನ್ನು ಪದೇ ಪದೆ ಉಲ್ಲಂ ಸುವ ಚಾಲಕರಿಗೆ ಅವಕಾಶ ನೀಡಬಾರದು. ಚಾಲಕನು ಮೋಟಾರು ವಾಹನ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತಿರಬೇಕು.

ಕಹಿ ನೆನಪುಗಳು…: 2016ರ ಜೂನ್‌ 21ರಂದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತ್ರಾಸಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಒಂದೇ ಶಾಲೆಯ 8 ಮಕ್ಕಳು ಕೊನೆಯುಸಿರೆಳೆದಿದ್ದರು. ಅಲ್ಲದೆ, ನಾಲ್ಕೈದು ಮಕ್ಕಳಿಗೆ ತೀವ್ರ ಗಾಯಗಳಾಗಿತ್ತು. ಅದು ಶಾಲಾ ವಾಹನವಾಗಿರಲಿಲ್ಲ. ಓಮ್ನಿ ಆಗಿತ್ತು. ಅದೇ ತಿಂಗಳಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಶಾಲಾ ವಾಹನ ಅಪಘಾತದಲ್ಲಿ ಸುಮಾರು 13 ಮಕ್ಕಳಿಗೆ ತೀವ್ರ ಗಾಯಗಳಾಗಿತ್ತು.

2018ರಲ್ಲಿ ಶಿವಮೊಗ್ಗದಲ್ಲಿ ನಡೆದ ಶಾಲಾ ವಾಹನ ಅಪಘಾತದಲ್ಲಿ ಒಬ್ಬ ವಿದ್ಯಾರ್ಥಿನಿ ಕೊನೆಯುಸಿರೆಳೆದಿದ್ದಳು. ಇಷ್ಟು ಮಾತ್ರವಲ್ಲದೆ, ರಿಕ್ಷಾದಲ್ಲಿ ಶಾಲಾ ಮಕ್ಕಳು ಹೋಗುತ್ತಿದ್ದಾಗ ಅಪಘಾತಕ್ಕಿಡಾಗಿ ಸಾವು ನೋವು ಸಂಭವಿಸಿರುವ ಹತ್ತಾರು ಘಟನೆಗಳು ರಾಜ್ಯದಲ್ಲಿ ನಡೆದಿವೆ.

ಶಾಲಾ ವಾಹನ ಚಾಲಕರಿಂದಾದ ದೌರ್ಜನ್ಯಗಳು: ಶಿಕ್ಷಣ ಇಲಾಖೆ ಹಾಗೂ ಪೊಲೀಸ್‌ ಇಲಾಖೆ ಸೂಚನೆಯ ನಡುವೆಯೂ ಖಾಸಗಿ ಶಾಲಾ ಆಡಳಿತ ಮಂಡಳಿ ಸಿಬ್ಬಂದಿಯ ಪೂರ್ವಾಪರ ವಿಚಾರಣೆ ನಡೆಸದೆ ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ಈಗಲೂ ಮುಂದುವರಿದಿದೆ. ಕಳೆದ ಕೆಲ ವರ್ಷಗಳಲ್ಲಿ ಶಾಲಾ ವಾಹನ ಚಾಲಕರಿಂದಲೇ ವಿದ್ಯಾರ್ಥಿಗಳ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯಗಳು ಇದಕ್ಕೆ ಸಾಕ್ಷಿ.

* ಜನವರಿ 2014-ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ಎರಡೂವರೆ ವರ್ಷದ ಬಾಲಕಿ ಮೇಲೆ ದೌರ್ಜನ್ಯವೆಸಗಿದ ಆರೋಪಿ ಶ್ರೀನಿವಾಸ ಬಂಧನ.

* ಜುಲೈ 2017-ಬಂಡೆಪಾಳ್ಯದಲ್ಲಿ ಮೂರುವರೆ ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯಎಸಗಿದ ಶಾಲಾ ವಾಹನ ಚಾಲಕ ಅಶುತೋಷ್‌ ಬಂಧನ.

* ರಾಜು ಖಾರ್ವಿ ಕೊಡೇರಿ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ