ಬಿಜೆಪಿ ಮೊದಲ ಪಟ್ಟಿ ಬಿಡುಗಡೆ: 72 ಅಭ್ಯರ್ಥಿಗಳ ಪಟ್ಟಿ ಬಹಿರಂಗ
Team Udayavani, Apr 9, 2018, 6:00 AM IST
ಬೆಂಗಳೂರು: ವಿಧಾನಸಭೆ ಚುನಾವಣೆಗಾಗಿ ಬಿಜೆಪಿ ಮೊದಲ ಪಟ್ಟಿ ಬಿಡುಗಡೆಗೊಂಡಿದೆ. ಒಟ್ಟು 72 ಕ್ಷೇತ್ರಗಳಿಗೆ ಹೆಸರು ಅಂತಿಮ ಗೊಂಡಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಮಾಜಿ ಉಪ ಮುಖ್ಯಮಂತ್ರಿ ಈಶ್ವರಪ್ಪ, ಆರ್. ಅಶೋಕ್, ಜಗದೀಶ್ ಶೆಟ್ಟರ್ ಕಾರ್ಕಳ ಶಾಸಕ ಸುನಿಲ್ ಕುಮಾರ್, ಕುಂದಾಪುರದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಸಿಟಿ ರವಿ, ಜೀವರಾಜ್, ವಿಶ್ವೇಶ್ವರ ಹೆಗಡೆ ಕಾಗೇರಿ, ಸಿ.ಪಿ. ಯೋಗೇಶ್ವರ, ಎಂ. ಕೃಷ್ಣಪ್ಪ, ವಿ. ಸೋಮಣ್ಣ ಹಾಗೂ ರವಿವಾರವಷ್ಟೇ ಬಿಜೆಪಿಗೆ ಸೇರ್ಪಡೆ ಯಾದ ಮಾಲೀಕಯ್ಯ ಗುತ್ತೇದಾರ್ ಮೊದ ಲಾದವರ ಹೆಸರುಗಳು ಮೊದಲ ಪಟ್ಟಿಯಲ್ಲಿಯೇ ಇದೆ.
ಕೇಂದ್ರ ಚುನಾವಣ ಸಮಿತಿ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ಶಾ, ಕೇಂದ್ರ ಸಚಿವ ಅನಂತಕುಮಾರ್, ರಾಜ್ಯ ಚುನಾವಣ ಉಸ್ತುವಾರಿ ಪ್ರಕಾಶ್ ಜಾಬ್ಡೇಕರ್, ರಾಜ್ಯ ಉಸ್ತುವಾರಿ ಮುರಳೀಧರ ರಾವ್, ಪಕ್ಷದ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಭಾಗವಹಿಸಿದ್ದರು.
ರಾಜ್ಯ ನಾಯಕರ ಸಭೆಯಲ್ಲಿ ಸಿದ್ಧ ಪಡಿಸಲಾಗಿದ್ದ ಸಂಭಾವ್ಯರ ಪಟ್ಟಿಯ ಬಗ್ಗೆ ಪರಾಮರ್ಶೆ ಮಾಡಿ, ಆರೆಸ್ಸೆಸ್ ಮೂಲಕ ನಡೆಸಿರುವ ಸಮೀಕ್ಷೆ ಆಧರಿಸಿ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲಾಗಿದೆ ಎಂದು ಹೇಳಲಾಗಿದೆ.
ಕೇಂದ್ರದ ನಾಯಕರಿಗೆ ಪಕ್ಷದ ಅಭ್ಯರ್ಥಿಗಳ ಆಯ್ಕೆ ಸಂಬಂಧ ರಾಜ್ಯದಲ್ಲಿ ನಡೆದ ಅಭಿಪ್ರಾಯ ಸಂಗ್ರಹ, ಆಂತರಿಕವಾಗಿ ನಡೆಸಿದ ಸಮೀಕ್ಷೆ, ಪಕ್ಷ ಗೆಲುವಿನ ಗುರಿ ತಲುಪಲು ಇತರ ಪಕ್ಷಗಳ ಶಾಸಕರನ್ನು ಸೇರ್ಪಡೆ ಮಾಡಿಕೊಂಡಿರುವ ಬಗ್ಗೆ ಯಡಿ ಯೂರಪ್ಪ ಮಾಹಿತಿ ನೀಡಿದರು.
ಬಿಜೆಪಿ ಗೆಲುವು ಸಾಧಿಸಲು ಸಾಧ್ಯವೇ ಇಲ್ಲದ ಕ್ಷೇತ್ರಗಳಲ್ಲಿ ಬೇರೆ ಪಕ್ಷದಲ್ಲಿ ವೈಯಕ್ತಿಕ ವರ್ಚಸ್ಸಿನಿಂದ ಗೆಲ್ಲುವವರನ್ನು ಸ್ಥಳೀಯ ನಾಯಕರ ಸಮ್ಮತಿ ಪಡೆದೇ ಸೇರಿಸಿಕೊಳ್ಳಲಾಗಿದೆ ಎಂದು ತಿಳಿಸಿದರು ಎಂದು ಹೇಳ ಲಾಗಿದೆ. ಚುನಾವಣ ಸಮಿತಿ ಸಭೆಯಲ್ಲಿ ಪಾಲ್ಗೊಂಡಿದ್ದ ಯಡಿಯೂರಪ್ಪ ರವಿವಾರ ರಾತ್ರಿಯೇ ವಾಪಸಾದರು.ದಿಲ್ಲಿಯಲ್ಲಿ ರವಿವಾರ ರಾತ್ರಿ ಜೆ.ಪಿ. ನಡ್ಡಾ ಅವರು ಪಟ್ಟಿ ಬಿಡುಗಡೆ ಮಾಡಿದರು.
ಶ್ರೀರಾಮುಲು ದಿಲ್ಲಿ ಭೇಟಿ
ಬಳ್ಳಾರಿ ಸಂಸದ ಶ್ರೀರಾಮುಲು ಶನಿವಾರ ದಿಢೀರ್ ದಿಲ್ಲಿಗೆ ಪ್ರಯಾಣ ಬೆಳೆಸಿದ್ದು ಕುತೂಹಲ ಮೂಡಿಸಿದೆ. ಮೂಲಗಳ ಪ್ರಕಾರ ಶ್ರೀರಾಮುಲು ಅವರಿಗೂ ವಿಧಾನಸಭೆಯಲ್ಲಿ ಸ್ಪರ್ಧೆ ಮಾಡಲು ಸೂಚಿಸಲಾಗಿದೆ. ರಾಜ್ಯದಲ್ಲಿರುವ 15 ಎಸ್‌ಟಿ ಮೀಸಲು ಕ್ಷೇತ್ರಗಳ ಮೇಲೆ ಕಣ್ಣಿಟ್ಟು ಹೆಚ್ಚಿನ ಕ್ಷೇತ್ರ ಗೆಲ್ಲಲು ಬಿಜೆಪಿ ಕಾರ್ಯತಂತ್ರ ರೂಪಿಸಿದ್ದು ಅದರಂತೆ ರಾಮುಲು ಅವರಿಗೆ ಟಿಕೆಟ್ ದೊರೆಯಲಿದೆ. ಜತೆಗೆ ರಾಮುಲು ಅವರು ಬಳ್ಳಾರಿ ಜಿಲ್ಲೆಯಲ್ಲಿ ತಮ್ಮ ಬೆಂಬಲಿಗರಿಗೆ ಟಿಕೆಟ್ ಕೇಳಿದ್ದರು. ಈ ಸಂಬಂಧ ಕೇಂದ್ರ ನಾಯಕರು ಚರ್ಚಿಸಲು ಬುಲಾವ್ ನೀಡಿದರು ಎಂದು ಹೇಳಲಾಗಿದೆ.