ಬಿಜೆಪಿ ಹುಟ್ಟಿದ್ದೇ 370ನೇ ವಿಧಿ ತೆರವಿಗೆ

Team Udayavani, Aug 24, 2019, 3:07 AM IST

ಬೆಂಗಳೂರು: ಕರ್ನಾಟಕ, ಮಧ್ಯಪ್ರದೇಶ, ಉತ್ತರ ಪ್ರದೇಶ ಅಥವಾ ಇನ್ಯಾವುದೇ ರಾಜ್ಯದಲ್ಲಿ ಅಧಿಕಾರ ನಡೆಸಬೇಕು ಅಥವಾ ಯಾರನ್ನೋ ಪ್ರಧಾನಿ ಮಾಡಬೇಕು ಎಂದು ಬಿಜೆಪಿ ಹುಟ್ಟಿಲ್ಲ. ಜಮ್ಮುಕಾಶ್ಮೀರದ 370ನೇ ವಿಧಿ ತೆಗೆದುಹಾಕಲೆಂದೇ ಬಿಜೆಪಿ ಜನ್ಮತಾಳಿದ್ದು. ಅದು ಈಗ ಸಾಕಾರಗೊಂಡಿದೆ. ಹಾಗೆಯೇ ರಾಮ ಮಂದಿರವನ್ನು ಮಾಡಲಿದ್ದೇವೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಗಾಂಧಿ ಭವನದಲ್ಲಿ ಗುರುವಾರ ಜನಮನ ಸಂಸ್ಥೆ ಹಮ್ಮಿಕೊಂಡಿದ್ದ ಭಾರತಾಂಬೆಯ ಕಿರೀಟ-ಕಾಶ್ಮೀರ 370 ವಿಧಿ ರದ್ದತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿಗೆ ಬಿಜೆಪಿ 73 ಬಾರಿ ರಾಷ್ಟ್ರೀಯ ಸಭೆಯಲ್ಲಿ ನಿರ್ಣಯ ತೆಗೆದುಕೊಂಡಿತ್ತು ಮತ್ತು ಎಲ್ಲ ಲೋಕಸಭಾ ಚುನಾವಣೆಯ ಬಿಜೆಪಿ ಪ್ರಣಾಳಿಕೆಯಲ್ಲಿ ಇದು ಪ್ರಮುಖ ವಿಷಯವಾಗಿತ್ತು. ಅದು ಈಗ ಸಾಕಾರಗೊಂಡಿದೆ ಎಂದರು.

ವೈಚಾರಿಕವಾಗಿ ಜವಹಾರ್‌ಲಾಲ್‌ ನೆಹರು ಅವರ ವಿಚಾರಗಳನ್ನು ಒಪ್ಪದ ಶ್ಯಾಮ್‌ ಪ್ರಸಾದ್‌ ಮುಖರ್ಜಿಯವರು ಜನಸಂಘವನ್ನು ಸ್ಥಾಪಿಸಿದರು. ಒಂದು ದೇಶದಲ್ಲಿ ಎರಡು ಧ್ವಜ, ಸಂವಿಧಾನ ಹಾಗೂ ಪ್ರಧಾನಿ ಇರಲು ಸಾಧ್ಯವಿಲ್ಲ ಎಂದು ಕಾಶ್ಮೀರ ಉಳಿಸಲು ಹೋರಾಟ ಆರಂಭಿಸಿದರು. ಅಂದಿನಿಂದ ಇಂದಿನವರೆಗೆ ಬಿಜೆಪಿಯು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿಗಾಗಿ ಹೋರಾಟ ನಡೆಸುತ್ತಲೇ ಬಂದಿದೆ. ಈಗಿನ ಕೇಂದ್ರ ಸರ್ಕಾರದ ಅದನ್ನು ಸಾಕಾರ ಮಾಡಿದೆ ಎಂದರು.

ಬಿಜೆಪಿ 300ಕ್ಕೂ ಅಧಿಕ ಲೋಕಸಭೆ ಸ್ಥಾನಗಳನ್ನು ಗೆದ್ದಿದೆ, ಅದಕ್ಕಾಗಿ ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡುವ ನಿರ್ಧಾರವನ್ನು ಏಕಾಏಕಿ ತೆಗೆದುಕೊಂಡಿದ್ದಾರೆ ಎಂದು ಭಾವಿಸಬೇಕಾಗಿಲ್ಲ. ಇದಕ್ಕಾಗಿ ಬೇಕಾದಷ್ಟು ರೀತಿಯಲ್ಲಿ ಸಿದ್ಧತೆ ನಡೆದಿತ್ತು. ಅಲ್ಲಿನ ಜನ ಜೀವನ್ನು ಸಹಜ ಸ್ಥಿತಿಗೆ ತರುವ ಮತ್ತು ಮೂರು ಕುಟುಂಬಕ್ಕೆ ಸೀಮಿತವಾಗಿದ್ದ ರಾಜಕಾರಣ ಕೊನೆಗೊಂಡು, ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ನಿರ್ಮಿಸಿರುವ ಸಂವಿಧಾನದಂತೆ ಅಲ್ಲಿ ಚುನಾವಣೆ ನಡೆಯಬೇಕು, ಕಾಶ್ಮೀರವು ಭಾರತದೊಂದಿಗೆ ಭಾವನಾತ್ಮಕವಾಗಿ ಒಂದಾಗಬೇಕಿತ್ತು. ಅದನ್ನು ಮೋದಿ ಸರ್ಕಾರ ಮಾಡಿದೆ ಎಂದು ವಿವರಿಸಿದರು.

ದೇಶದ ಮೊದಲ ಪ್ರಧಾನಿ ಮಾಡಿದ ಐತಿಹಾಸಿಕ ಅನ್ಯಾಯವನ್ನು ಸರಿ ಪಡಿಸಲು 72 ಲೋಕಸಭಾ ಚುನಾವಣೆ, 22 ಸರ್ಕಾರ ಬಂದರು ಸಾಧ್ಯವಾಗಿಲ್ಲ. ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರಿಂದ ಸಾಧ್ಯವಾಗಿದೆ. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನದಿಂದ ಅಲ್ಲಿನ ಮುಸ್ಲಿಂ ಕುಟುಂಬಕ್ಕೆ ಹೆಚ್ಚು ಅನ್ಯಾಯವಾಗಿದೆ. ಇನ್ಮುಂದೆ ಇದೆಲ್ಲವೂ ಅವರ ಅರಿವಿಗೆ ಬರಲಿದೆ. ಸರ್ಕಾರದ ಮುಂದೆ ಸವಾಲಿದೆ. ಎಲ್ಲವೂ ಸರಿಯಾಗಲಿದೆ. ಇಡೀ ಭಾರತವೇ ಕಾಶ್ಮೀರದೊಂದಿಗೆ ಇದೆ ಎಂದು ಹೇಳಿದರು.

ಕಾಶ್ಮೀರದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೀಸಲಾತಿ ಇರಲಿಲ್ಲ, ಅಂಬೇಡ್ಕರ್‌ ರೂಪಿಸಿದ್ದ ಸಂವಿಧಾನ ಜಾರಿಯಲ್ಲಿ ಇರಲಿಲ್ಲ. ಇದ್ಯಾವುದನ್ನು ಇಲ್ಲಿನ ಸ್ವಘೋಷಿತ ಬುದ್ಧಿಜೀವಿಗಳು ವಿರೋಧಿಸಿ ಪ್ರತಿಭಟನೆ ಮಾಡಿಲ್ಲ. ಕಾಶ್ಮೀರದಲ್ಲಿ ಹಿಂಸಾಚಾರ ಸೃಷ್ಟಿಸುತ್ತಿದ್ದವರು ಕೆಲವರು ಮಾತ್ರ. ದಿನಕೂಲಿಗಾಗಿ ಕಲ್ಲು ಎಸೆಯುತ್ತಿದ್ದವರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ವಿಶೇಷ ಸ್ಥಾನಮಾನದಿಂದಾಗಿ ಕಾಶ್ಮೀರದಲ್ಲಿ ಹಿಂಸೆ ಹೆಚ್ಚಾಗಿತ್ತು. ಈಗ ಎಲ್ಲವೂ ಶಾಂತವಾಗಿದೆ. ಮೊದಲು ಎಷ್ಟಿತ್ತೋ ಅದಕ್ಕಿಂತ ಕಡಿಮೆ ಭದ್ರತೆ ಅಲ್ಲಿ ಈಗ ಇದೆ ಎಂದರು.

ದೇಶದ ಒಳಗಿನ ರಾಜಕಾರಣದಲ್ಲಿ ಗೌರವ ಇಲ್ಲದಿದ್ದರೆ ಜಾಗತಿಕ ರಾಜಕಾರಣದಲ್ಲಿ ಗೌರವ ಸಿಗಲು ಸಾಧ್ಯವಿಲ್ಲ. ನೆಹರು ಅವರು ಜಾಗತಿಕ ರಾಜಕಾರಣದಲ್ಲಿ ಇಮೇಜ್‌ ಹೆಚ್ಚಿಸಿಕೊಳ್ಳುವುದಕ್ಕಾಗಿ ಕಾಶ್ಮೀರದ ಸಮಸ್ಯೆಯನ್ನು ಮರೆತು ಬಿಟ್ಟರು. ಸೆಕ್ಯೂಲರ್‌ ರಾಜಕಾರಣದ ಹೆಸರಿನಲ್ಲಿ ಕಾಶ್ಮೀರಕ್ಕೆ ಅನ್ಯಾಯ ಮಾಡಿದ್ದಾರೆ. ಅವರು ಮಾಡಿದ್ದ ದೊಡ್ಡ ತಪ್ಪಿನಿಂದ ಕಾಶ್ಮೀರ ಈ ಸ್ಥಿತಿಗೆ ತಲುಪಿದೆ. ಅಲ್ಲಿ ಪದವಿ ಶಿಕ್ಷಣ ಪಡೆಯುತ್ತಿರುವವರು ಶೇ.13ರಷ್ಟು, ಸ್ನಾತಕೋತ್ತರ ಪದವಿ ಪಡೆಯುತ್ತಿರುವವರು ಶೇ.7ರಷ್ಟು ಮಾತ್ರ. ಆದರೆ, ಕಾಶ್ಮೀರ ಆಡಳಿತ ಮೂರು ಮನೆತನದ ಮಕ್ಕಳು, ಮೊಮ್ಮೊಕ್ಕಳು ವಿದೇಶದ ಸುಭದ್ರವಾದ ನೆಲೆಗಳಲ್ಲಿ ಶಿಕ್ಷಣ ಪಡೆದಿದ್ದಾರೆ ಮತ್ತು ಪಡೆಯುತ್ತಿದ್ದಾರೆ. ಎಲ್ಲರಿಗೂ ಸಮಾನ ಶಿಕ್ಷಣ ಇನ್ಮುಂದೆ ಸಿಗಲಿದೆ ಎಂದು ಹೇಳಿದರು.

ರಾಮಮಂದಿರವನ್ನು ಮಾಡುತ್ತೇವೆ: 1991ರಿಂದ ರಾಮಜನ್ಮಭೂಮಿ ಆಂದೋಲನ ವ್ಯಾಪಕಗೊಂಡಾಗ ಈ ದೇಶದಲ್ಲಿ ರಾಷ್ಟ್ರೀಯ ರಾಜಕಾರಣವೂ ಇದೆ ಎಂಬುದನ್ನು ಜನರು ಅರಿಯಲಾರಂಭಿಸಿದರು. ರಾಮಜನ್ಮಭೂಮಿಯಲ್ಲೇ ಮಂದಿರ ನಿರ್ಮಾಣ ಮಾಡುವ ಹೋರಾಟವು ಇಂದು ನಿನ್ನೆಯದಲ್ಲ. ಅದಕ್ಕೂ ಇತಿಹಾಸ ಇದೆ. ಅಯೋಧ್ಯೆಯಲ್ಲೇ ರಾಮ ಮಂದಿರವನ್ನು ಒಂದಲ್ಲ ಒಂದು ದಿನ ಮಾಡುತ್ತೇವೆ ಹಾಗೆಯೇ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೆ ತರುತ್ತೇವೆ. ಅದಕ್ಕಾಗಿಯೇ ಬಿಜೆಪಿ ಹುಟ್ಟಿರುವುದು ಎಂದು ಬಿ.ಎಲ್‌. ಸಂತೋಷ್‌ ಅವರು ಹೇಳಿದರು.

ಕಾಶ್ಮೀರದ ವಿಶೇಷ ಸ್ಥಾನಮಾನದ ರದ್ದತಿ ನಿರ್ಧಾರವನ್ನು ಪೂರ್ಣ ಬಹುಮತ ಬಂದಿದೆ ಎಂದು ಭಂಡತನದಿಂದ ಮಾಡಲು ಸಾಧ್ಯವಿಲ್ಲ. ಇದಕ್ಕಾಗಿ ಸೂಕ್ತ ತಂತ್ರಗಾರಿಕೆ ಇರಬೇಕು ಮತ್ತು ಒಂದೇ ದಿನದಲ್ಲಿ ತೆಗೆದುಕೊಳ್ಳಬಹುದಾದ ನಿರ್ಧಾರವೂ ಇದಲ್ಲ. ಇದಕ್ಕಾಗಿ ದಶಕಗಳ ಪ್ರಯತ್ನ ಇದೆ. ಇದರಿಂದ ಕೆಲವರ ರಾಜಕೀಯ ಭವಿಷ್ಯ ಅಂತ್ಯವಾಗಿರಬಹುದು. ಆದರೆ, ಕಾಶ್ಮೀರದ ಉಜ್ವಲ ಭವಿಷ್ಯ ಆರಂಭವಾಗಿದೆ.
-ಬಿ.ಎಲ್‌.ಸಂತೋಷ್‌, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ, ಬಿಜೆಪಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ