ವೈಟ್ ಟಾಪಿಂಗ್ ಅಕ್ರಮ ತನಿಖೆಗೆ ಸಿಎಂ ಸೂಚನೆ
Team Udayavani, Aug 15, 2019, 3:09 AM IST
ಬೆಂಗಳೂರು: ಹಿಂದಿನ ಕಾಂಗ್ರೆಸ್ ಸರ್ಕಾರ ಹಾಗೂ ಮೈತ್ರಿ ಸರ್ಕಾರದ ಅವಧಿಯಲ್ಲಿ ಬೆಂಗಳೂರು ನಗರದಲ್ಲಿ ಕೈಗೊಂಡ ವೈಟ್ ಟಾಪಿಂಗ್ ಕಾಮಗಾರಿಯಲ್ಲಿ ಅಕ್ರಮ ನಡೆದಿದೆ ಎಂಬ ಬಿಜೆಪಿ ಶಾಸಕರ ಆರೋಪದ ಹಿನ್ನೆಲೆಯಲ್ಲಿ ಸೂಕ್ತ ತನಿಖೆ ನಡೆಸಿ ತಪ್ಪಿಸ್ಥತರ ವಿರುದ್ಧ ಕ್ರಮ ಕೈಗೊಳ್ಳಲು ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚಿಸಿದ್ದಾರೆ.
ಬೆಂಗಳೂರು ನಗರಾಭಿವೃದ್ಧಿ ಹಾಗೂ ಬಿಬಿಎಂಪಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ, ನಗರದ ಬಿಜೆಪಿ ಶಾಸಕರು ಹಾಗೂ ಸಂಸದರ ಜತೆ ಬುಧವಾರ ಸಭೆ ನಡೆಸಿದರು. ಪಾಲಿಕೆಯ ಆರ್ಥಿಕ ಸ್ಥಿತಿಗತಿ ಹಾಗೂ ಮುಂಬರಲಿರುವ ಬಿಬಿಎಂಪಿ ಚುನಾವಣೆಗೆ ಶಾಸಕರು ವಾರ್ಡ್‌ಗಳಲ್ಲಿ ಕೈಗೊಳ್ಳಬೇಕಾದ ಕಾಮಗಾರಿಗಳ ಕುರಿತು ಸಭೆಯಲ್ಲಿ ಸಮಾಲೋಚನೆ ನಡೆಸಲಾಗಿದೆ.
ಮೈತ್ರಿ ಸರ್ಕಾರ ಹಾಗೂ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ನಡೆದ ರಸ್ತೆಗಳ ವೈಟ್ ಟಾಪಿಂಗ್, ಬಿಬಿಎಂಪಿ ಬಜೆಟ್‌ಗೆ ಅನುಮೋದನೆ ದೊರೆಯದಿದ್ದರೂ ಕೈಗೊಂಡ ಅಕ್ರಮ ಕಾಮಗಾರಿಗಳು, ಗುತ್ತಿಗೆ ಕೆಲಸಗಳನ್ನು ಸ್ಥಗಿತಗೊಳಿಸಿ ರಸ್ತೆಗಳ ವೈಟ್ ಟಾಪಿಂಗ್ ಕಾಮಗಾರಿಗಳ ಬಗ್ಗೆ ತನಿಖೆಗೆ ವಹಿಸುವಂತೆ ಶಾಸಕರು ಮುಖ್ಯಮಂತ್ರಿಗೆ ಮನವಿ ಮಾಡಿಕೊಂಡಿದ್ದರಿಂದ ಈ ಬಗ್ಗೆ ಸಮಗ್ರ ವರದಿ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.
ಸಭೆ ಬಳಿಕ ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಮಾತನಾಡಿ, ಬಿಬಿಎಂಪಿ ಕೈಗೊಂಡಿರುವ ವೈಟ್ ಟಾಪಿಂಗ್, ಟೆಂಡರ್ ಶ್ಯೂರ್ ರಸ್ತೆ ಕಾಮಗಾರಿಗಳಲ್ಲಿ ಭಾರೀ ಅಕ್ರಮ ನಡೆದಿದ್ದು, ಈ ಬಗ್ಗೆ ತನಿಖೆ ನಡೆಸುವ ಬಹುತೇಕ ಶಾಸಕರ ಆಗ್ರಹಕ್ಕೆ ಮುಖ್ಯಮಂತ್ರಿಗಳು ಒಪ್ಪಿದ್ದಾರೆ ಎಂದರು. ಬೆಂಗಳೂರು ಅಭಿವೃದ್ಧಿ ವಿಚಾರದಲ್ಲಾಗಿರುವ ಲೋಪಗಳ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ.
ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಪಾಲಿಕೆಯಲ್ಲಾದ ಅವ್ಯವಹಾರಗಳು, ತಾರತಮ್ಯಗಳನ್ನು ಸರಿದೂಗಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ವೈಟ್ ಟಾಪಿಂಗ್‌ಗೆ ತಗಲುವ ವೆಚ್ಚಕ್ಕಿಂತ ಹೆಚ್ಚು ವೆಚ್ಚವನ್ನು ಪಾಲಿಕೆ ತೋರಿಸಿದೆ. ಅಗತ್ಯವಿಲ್ಲದ ಕಡೆ ಕಾಮಗಾರಿ ಕೈಗೊಳ್ಳಲಾಗಿದೆ. ಸರ್ಕಾರ ಪತನಗೊಳ್ಳುವ ಸಂದರ್ಭದಲ್ಲಿ, ಯಾವುದೇ ನಿಯಮ ಪಾಲಿಸದೆ ತಮಗೆ ಬೇಕಾದವರಿಗೆ ಕಾಮಗಾರಿಗಳನ್ನು ನೀಡಲಾಗಿದ್ದು, ಅವುಗಳನ್ನು ತಡೆ ಹಿಡಿಯಲು ಸಿಎಂ ಸೂಚಿಸಿದ್ದಾರೆ ಎಂದು ಹೇಳಿದರು.
ಪ್ರತ್ಯೇಕ ಕಾಯಿದೆ: ರಾಜ್ಯದ ನಗರಗಳಿಗೆ ಸಂಬಂಧಿಸಿದ ಕೆಎಂಸಿ ಕಾಯ್ದೆ ವ್ಯಾಪ್ತಿಯಲ್ಲಿಯೇ ಬೆಂಗಳೂರು ಮಹಾನಗರ ಬರುತ್ತದೆ. ಆದರೆ, ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ಸ್ಥಾನ ಹೊಂದಿದೆ. ಹೀಗಾಗಿ ನಗರಕ್ಕೆ ಪ್ರತ್ಯೇಕ ಕಾನೂನು ಜಾರಿಗೊಳಿಸುವ ಬಗ್ಗೆ ಸಭೆಯಲ್ಲಿ ಸಿಎಂಗೆ ಮನವಿ ಮಾಡಲಾಗಿದೆ. ಅವರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ಆರೋಪದಲ್ಲಿ ಹುರುಳಿಲ್ಲ: ಬಿಬಿಎಂಪಿ ಬಜೆಟ್ ತಡೆ ಹಿಡಿದಿರುವ ಬಗ್ಗೆ ಪ್ರತಿಪಕ್ಷಗಳು ಮಾಡುತ್ತಿರುವ ಆರೋಪದಲ್ಲಿ ಹುರುಳಿಲ್ಲ. ಬಿಬಿಎಂಪಿ 13 ಸಾವಿರ ಕೋಟಿ ರೂ. ಬಜೆಟ್‌ಗೆ ಅನುಮೋದನೆ ನೀಡಿತ್ತು. ಆದರೆ, ಹಣಕಾಸು ಇಲಾಖೆ ಅದಕ್ಕೆ ಒಪ್ಪಿಗೆ ನೀಡದೆ 9 ಸಾವಿರ ಕೋಟಿ ರೂ. ಬಜೆಟ್‌ಗೆ ಅನುಮತಿ ನೀಡಿತ್ತು. ಆದರೆ, 13 ಸಾವಿರ ಕೋಟಿ ರೂ.ಗೆ ಅನುಮೋದನೆ ದೊರೆತಿದೆ ಎಂದು ಪಾಲಿಕೆ ಹೇಳಿರುವುದರಿಂದ ಅದನ್ನು ತಡೆ ಹಿಡಿಯಲಾಗಿದೆ.
ಬಜೆಟ್ ತಡೆ ಹಿಡಿದಿರುವುದರಿಂದ ಯಾವುದೇ ಕಾರ್ಯಗಳಿಗೆ ತೊಂದರೆಯಾಗಿಲ್ಲ. ಈಗಾಗಲೇ ಜಾರಿಯಲ್ಲಿರುವ ಕಾಮಗಾರಿಗಳಿಗೂ ಅಡ್ಡಿಯಾಗಿಲ್ಲ. ಅದರೆ, ತರಾತುರಿಯಲ್ಲಿ ಟೆಂಡರ್ ಕರೆದು ಕಾಮಗಾರಿಗಳನ್ನು ನೀಡಿರುವುದನ್ನು ತಡೆ ಹಿಡಿಯಲಾಗಿದೆ ಎಂದು ಅಶೋಕ್ ಸ್ಪಷ್ಟಪಡಿಸಿದರು.
ಸಭೆಯಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಸಂಸದರಾದ ಪಿ.ಸಿ.ಮೋಹನ್, ರಾಜೀವ್ ಚಂದ್ರಶೇಖರ್, ಶಾಸಕರಾದ ಆರ್.ಅಶೋಕ್, ವಿ. ಸೋಮಣ್ಣ, ಅರವಿಂದ ಲಿಂಬಾವಳಿ, ಸಿ.ಎನ್.ಅಶ್ವಥನಾರಾಯಣ, ಎಂ. ಕೃಷ್ಣಪ್ಪ, ಎಸ್.ಆರ್.ವಿಶ್ವನಾಥ್, ಎಸ್. ರಘು, ವೈ. ಎ. ನಾರಾಯಣಸ್ವಾಮಿ, ಕೆ.ಪಿ.ನಂಜುಂಡಿ, ಎಲ್.ಎ. ರವಿಸುಬ್ರಹ್ಮಣ್ಯ, ನಂದೀಶ್ ರೆಡ್ಡಿ, ಡಾ: ಉದಯ್ ಗರುಡಾಚಾರ್ ಹಾಗೂ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಬಿಬಿಎಂಪಿ ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ, ಬಿಡಿಎ, ಬಿಬಿಎಂಪಿ, ಜಲ ಮಂಡಳಿ ಅಧಿಕಾರಿಗಳು ಭಾಗವಹಿಸಿದ್ದರು.
ಇಂದು ನಡೆದಿರುವುದು ಕೇವಲ ಪೂರ್ವಭಾವಿ ಸಭೆ. ಬಜೆಟ್ ಮಂಡನೆಗೆ ಮುನ್ನ ಮತ್ತೂಮ್ಮೆ ಬೆಂಗಳೂರಿನ ಎಲ್ಲ ಶಾಸಕರ ಸಭೆ ಕರೆದು ಸಮಗ್ರವಾಗಿ ಚರ್ಚಿಸುತ್ತೇವೆ. ಸಭೆಗೆ ಕಾಂಗ್ರೆಸ್, ಜೆಡಿಎಸ್ ಶಾಸಕರು, ಬಿಬಿಎಂಪಿ ಪ್ರಮುಖರನ್ನು ಆಹ್ವಾನಿಸಲು ಸಾಧ್ಯವಾಗಿಲ್ಲ. ಈ ಬಗ್ಗೆ ಯಾರೂ ತಪ್ಪು ತಿಳಿಯಬಾರದು.
-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗುತ್ತಿಗೆದಾರರ ಬೇಜವಾಬ್ದಾರಿ, ಕಾಮಗಾರಿ ವಿಳಂಬದಿಂದ ಮನೆಗಳಿಗೆ ನೀರು :ಎಸ್.ಟಿ.ಸೋಮಶೇಖರ್ ಕಿಡಿ
ಅಪರಾಧಿಗಳನ್ನು ಹಿಡಿಯಬೇಕಾದ ಪೊಲೀಸರು ಅಪರಾಧ ನಡೆಸಿದರೆ ಕ್ಷಮೆ ಇಲ್ಲ : ಗೃಹ ಸಚಿವ ಎಚ್ಚರಿಕೆ
ಖಾಲಿಯಿರುವ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ನೇರ ನೇಮಕಾತಿ : ಸಚಿವ ಬಿ.ಸಿ.ಪಾಟೀಲ್
ಭಾರಿ ಮಳೆಗೆ ವಿದ್ಯುತ್ ವ್ಯತ್ಯಯ : ಖುದ್ದು ನಿರ್ವಹಣೆಗಿಳಿದ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ
ಭಾರಿ ಮಳೆ : ನೀರು ನುಗ್ಗಿರುವ ಮನೆಗಳಿಗೆ 25,000 ರೂ ಪರಿಹಾರ : ಸಿಎಂ ಬೊಮ್ಮಾಯಿ