ಕಾಂಗ್ರೆಸ್‌ಗೆ ಸಾಧನೆ ಹೇಳಿ ಮತ ಗಳಿಸುವ ವಿಶ್ವಾಸ ಇಲ್ಲ

Team Udayavani, May 8, 2018, 6:40 AM IST

ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ ಕಾಂಗ್ರೆಸ್‌ ನಾಯಕರಿಗೆ ತಾವು ಮಾಡಿರುವ ಸಾಧನೆಗಳನ್ನು ಮುಂದಿಟ್ಟು ಮತ ಪಡೆಯುವ ವಿಶ್ವಾಸವಿಲ್ಲ. ಹೀಗಾಗಿ ನರೇಂದ್ರಮೋದಿ, ಅಮಿತ್‌ ಶಾ, ಯಡಿಯೂರಪ್ಪನವರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಬೆಂಗಳೂರು ಪ್ರಸ್‌ ಕ್ಲಬ್‌ ಹಾಗೂ ವರದಿಗಾರರ ಕೂಟ ಜಂಟಿಯಾಗಿ ಆಯೋಜಿಸಿದ್ದ ಪತ್ರಿಕಾ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್‌ನ ಯಾವೊಬ್ಬ ನಾಯಕರಿಗೂ ಸಾಧನೆ ಹೇಳಿಕೊಳ್ಳುವ ವಿಶ್ವಾಸವೇ ಇಲ್ಲ. ಯಾಕೆಂದರೆ ಅವರು ಏನೂ ಮಾಡಿಲ್ಲ ಎಂದು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಶ್ವಾಸವಿಲ್ಲದೆ 2 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದಾರೆ. 10 ದಿನ ಚಾಮುಂಡೇಶ್ವರಿ
ಯಲ್ಲಿ ಹೋಗಿ ಕೆಂಪಯ್ಯ ಸಹಿತ ಎಲ್ಲರಿಂದ ಮಾಹಿತಿ ಪಡೆದು ಸೋಲುವುದು ಖಚಿತ ಎಂದಾಗ ಬಾದಾಮಿಗೆ ಹೋಗಿದ್ದಾರೆ. ನಾವು ಕೊಪ್ಪಳಕ್ಕೂ ಹೋಗಬಹುದು ಎಂದು ಕೊಂಡಿದ್ದೆವು. ಆದರೆ ಬಾದಾಮಿಗೆ ಬಂದಿದ್ದಾರೆ. ಪಾಪ ಅಲ್ಲಿಯೂ ಸೋಲ್ತಾರೆ. ಪಕ್ಷದಲ್ಲಿ ನಾನೇ ಎಲ್ಲ, ನನ್ನಿಂದಲೇ ಎಲ್ಲ ಭಾಗ್ಯ ಜನತೆಗೆ ಸಿಕ್ಕಿದೆ ಎಂದು ಹಿರಿಯ ನಾಯಕರನ್ನು ಕಡೆಗಣಿಸಿರುವ ಸಿಎಂ ಚುನಾವಣೆಯಲ್ಲಿ ಸೂಕ್ತ ಪಾಠ ಕಲಿಯಲಿದ್ದಾರೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೇಶ ಬಿಟ್ಟು ಪರಾರಿಯಾಗಿರುವ ಉದ್ಯಮಿ ದುಬಾರಿ  ಕೊಡುಗೆಯಾಗಿ ಕೊಟ್ಟಿರುವ ಬಗ್ಗೆ ನಮಗೆ ಮಾಹಿತಿಯಿದ್ದು, ಅದು ವಾಚ್‌ ಅಥವಾ ಬೇರೆ ಏನು ಎಂಬುದನ್ನೂ ಸಿದ್ದರಾಮಯ್ಯ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಬಿಜೆಪಿ ಸಂಘಟನಾತ್ಮಕವಾಗಿ ಬೆಳೆದು ನಿಂತಿದೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ನಮ್ಮ ಸಂಘಟನೆಯಲ್ಲ. ಸಂಘಟನೆ ನಿರಂತರವಾಗಿರುತ್ತದೆ. ಹೀಗಾಗಿಯೇ 55 ಸಾವಿರ ಬೂತ್‌ಗಳಲ್ಲಿ ನಮಗೆ ಸಮಿತಿಯಿದೆ ಎಂದು ಹೇಳಿದರು.

ರಾಜ್ಯದಲ್ಲಿ ಬಿಜೆಪಿ ಅಲೆಯಿದೆ. ಕೇಂದ್ರ ನಾಯಕರು ನಮಗೆ ಎಲ್ಲ ರೀತಿಯ ಸಹಕಾರ ಕೊಡುತ್ತಿದ್ದಾರೆ. ಕಳೆದ ಚುನಾವಣೆಗಳಿಗೆ ಹೋಲಿಸಿದರೆ ಹತ್ತು ಪಟ್ಟು ಹೆಚ್ಚು ಸಹಕಾರ ಕೇಂದ್ರ ನಾಯಕರಿಂದ ಸಿಗುತ್ತಿದೆ. ಅವರೇ ಜಿಲ್ಲಾ ಮಟ್ಟದಲ್ಲಿ ಆಗುತ್ತಿರುವ ಸಣ್ಣಪುಟ್ಟ ತಪ್ಪು ಪತ್ತೆ ಹಚ್ಚಿ ತಿದ್ದಿಕೊಳ್ಳಲು ಹೇಳುತ್ತಿದ್ದಾರೆ. ನಮ್ಮ ಸಲಹೆಗಳನ್ನೂ ಗಂಭೀರವಾಗಿ 
ಪರಿಗಣಿಸುತ್ತಿದ್ದಾರೆ ಎಂದು ತಿಳಿಸಿದರು.

ಯಡಿಯೂರಪ್ಪರಿಗೆ ಬೇಡಿಕೆ: ಬಿಜೆಪಿ ಕೇವಲ ನರೇಂದ್ರ ಮೋದಿ ಅಲೆ ಹಾಗೂ ಅಮಿತ್‌ ಶಾ ತಂತ್ರಗಾರಿಕೆ ನಂಬಿದೆ. ಅವರಿಬ್ಬರೇ ಹೆಚ್ಚು ಪ್ರಚಾರ ಮಾಡುತ್ತಿದ್ದಾರೆ ಯಾಕೆ ಎಂಬ ಪ್ರಶ್ನೆಗೆ, ಯಡಿಯೂರಪ್ಪ ಅವರು ಪರಿವರ್ತನೆ ಯಾತ್ರೆ ಮೂಲಕ 224 ಕ್ಷೇತ್ರಗಳನ್ನು  ಸುತ್ತಾಡಿ ಇದೀಗ ಎರಡನೇ ಸುತ್ತಿನಲ್ಲಿ 125 ಕ್ಷೇತ್ರಗಳ ಪ್ರವಾಸ ಮಾಡಿದ್ದಾರೆ. ಎಲ್ಲ ಕ್ಷೇತ್ರಗಳಿಂದ ಒಂದೇ ಬೇಡಿಕೆ ಅದು ಯಡಿಯೂರಪ್ಪ ಪ್ರಚಾರಕ್ಕೆ ಬರಬೇಕು ಎಂದು. ಯಡಿಯೂರಪ್ಪ, ನರೇಂದ್ರ ಮೋದಿ, ಅಮಿತ್‌ ಶಾ ಸಹಿತ  ರಾಜ್ಯ ಹಾಗೂ ಕೇಂದ್ರ ನಾಯಕರೆಲ್ಲರೂ ತಮ್ಮ ತಮ್ಮ ವ್ಯಾಪ್ತಿಯಲ್ಲಿ ಪಕ್ಷದ ಗೆಲುವಿಗೆ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ನಾನು ಬಿಜೆಪಿ ಸರಕಾರದಲ್ಲಿ  ಆಹಾರ ಮತ್ತು ನಾಗರಿಕ ಪೂರೈಕೆ, ಇಂಧನ, ಗ್ರಾಮೀಣಾಭಿವೃದ್ಧಿ, ಪಂಚಾಯತ್‌ರಾಜ್‌ ಖಾತೆ ನಿರ್ವಹಿಸಿ ಇಲಾಖೆಗೆ ಶಕ್ತಿ ತುಂಬುವ ಕೆಲಸ ಮಾಡಿದ್ದೇನೆ. ಆ ಸಂದರ್ಭದಲ್ಲಿ ಬೇರೆಯವರ ಖಾತೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದೆ ಎಂಬ ಆರೋಪ ಆರೋಪವೇ ಹೊರತು ನಿಜವಲ್ಲ. ಆರೋಪ ಮಾಡಿದವರು ಇದುವರೆಗೂ ಒಂದೇ ಒಂದು ಸಾಕ್ಷಿ ಕೊಟ್ಟಿಲ್ಲ.
– ಶೋಭಾ ಕರಂದ್ಲಾಜೆ, ಚಿಕ್ಕಮಗಳೂರು ಸಂಸದೆ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ