ಕಾರುಗಳೊಂದಿಗೆ ದಾಖಲೆಗಳೂ ಭಸ್ಮ

Team Udayavani, Feb 24, 2019, 10:29 AM IST

ಬೆಂಗಳೂರು: ವಿಮಾನ ಹಾರಾಟ ನೋಡಲು ಬಂದವರ ಖುಷಿ ಹೆಚ್ಚುಕಾಲ ಇರಲೇ ಇಲ್ಲ. ಮನೆಯಿಂದ ಕಾರಿನಲ್ಲಿ ಬಂದಿದ್ದ ಹಲವರು ವಾಪಸ್‌ ಮನೆಗೆ ಕೊಂಡೊಯ್ಯಲು ಕಾರೇ ಇರಲಿಲ್ಲ. ಯಲಹಂಕದ ವಾಯುನೆಲೆಯಲ್ಲಿ ನಡೆಯುತ್ತಿರುವ ಏರ್‌ ಶೋ ನೋಡಲು ರಾಜ್ಯದ ಹಲವು ಭಾಗದಿಂದ ಸಾವಿರಾರು ಜನರು ಕಾರಿನಲ್ಲಿ ಬಂದಿದ್ದರು. ಏರ್‌ ಶೋಗೆ ಟಿಕೆಟ್‌ ಪಡೆದವರಿಗೆ ಗೇಟ್‌ ನಂ.5ರ ಎದುರು ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ 12 ಗಂಟೆಯಿಂದ 12.10ರ ವೇಳೆಗೆ ಸಂಭವಿಸಿದ ಅಗ್ನಿ ದುರಂತದಿಂದ ಸುಮಾರು 300 ಕಾರು ಹಾಗೂ ದ್ವಿಚಕ್ರ ವಾಹನ ಸುಟ್ಟು ಹೋಗಿವೆ. ಇದರಲ್ಲಿ ಬಹುತೇಕ ಕಾರುಗಳ ಪೂರ್ಣ ಪ್ರಮಾಣದಲ್ಲಿ ಕರಕಲಾಗಿವೆ. ಕೆಲವು ಕಾರುಗಳ ಮುಂಭಾಗ ಹಾಗೂ ಹಿಂಭಾಗ ಅಗ್ನಿಗೆ ಆಹುತಿಯಾಗಿದೆ.

ವಾಹನ ನಿಲುಗಡೆ ಪ್ರದೇಶದ ಒಂದು ಭಾಗದಲ್ಲಿ ಸರತಿ ಸಾಲಿನಲ್ಲಿ ನಿಲ್ಲಿಸಿದ 37 ಕಾರು, ಅದರ ಎದುರಿನ ಸಾಲಿನ 98 ಹಾಗೂ ಎರಡನೇ ಸಾಲಿನ 102 ಕಾರು, ಮೂರನೇ ಸಾಲಿನ 53 ಕಾರು ಸಹಿತವಾಗಿ ಬೆಂಕಿಗೆ ಸುಮಾರು 300 ಕಾರು ಸುಟ್ಟು ಹೋದವು. ಅಗ್ನಿ ಅನಾಹುತ ಮಾಹಿತಿ ತಿಳಿಯುತ್ತಿದ್ದಂತೆ ವಾಯುನೆಲೆಯಲ್ಲಿ ಪ್ರದರ್ಶನ ನೋಡುತ್ತಿದ್ದ ಜನ ಪಾರ್ಕಿಂಗ್‌ ಪ್ರದೇಶಕ್ಕೆ ಧಾವಿಸಿದರು. ಕಣ್ಣೆದುರೇ ಕಾರು ಸುಟ್ಟು ಹೋಗುತ್ತಿರುವುದು ನೋಡಿ ಮಾಲೀಕರು ಕಣ್ಣೀರಿಟ್ಟರು. ಕಾರು ಕಳೆದುಕೊಂಡ ಅನೇಕರು ಸ್ಥಳದಿಂದ ವಾಪಸ್‌ ಬರಲು ಇಷ್ಟಪಡದೆ ಕಾರಿನ ಮುಂದೆ ನಿಂತು ಅಳುತ್ತಿದ್ದರು. ಕಾರಿನೊಳಗೆ ಇದ್ದ ದಾಖಲೆಯಾದರೂ ಸಿಗಬಹುದೇ ಎಂದು ಕೆಲವರು ಗ್ಲಾಸ್‌ ಒಡೆದು ಕಾರನ್ನು ನೋಡಿದರು.

ಕೊಡಗಿನಿಂದ ಬಂದಿದ್ದೆವು: ವೈಮಾನಿಕ ಪ್ರದರ್ಶನ ನೋಡಲು ಕಾರಿನಲ್ಲಿ ಕೊಡಗಿನಿಂದ ಬಂದಿದ್ದೆವು. ಬೆಳಗ್ಗೆ 9 ಗಂಟೆಗೆ ಕಾರು ಪಾರ್ಕ್‌ ಮಾಡಿದ್ದೆವು. ಮಧ್ಯಾಹ್ನ 1 ಗಂಟೆ ಸುಮಾರಿಗೆ ಬಂದು ನೋಡುವಾಗ ಕಾರು ಸಂಪೂರ್ಣವಾಗಿ ಸುಟ್ಟು ಹೋಗಿತ್ತು. ಪೊಲೀಸರಿಗೆ ಕೇಳಿದರೆ, ದೂರು ಬರೆದುಕೊಡಿ ಎನ್ನುತ್ತಿದ್ದಾರೆ. ಏನು ಮಾಡಬೇಕು ಎಂಬುದು ತಿಳಿಯಲಿಲ್ಲ. 50 ಸಾವಿರ ನಗದು, ಕಾರಿಗೆ ಸಂಬಂಧಿಸಿದ ದಾಖಲೆಗಳು ಅದರೊಳಗೆ ಇದ್ದವು. ಕಾರಿಗೆ ವಿಮೆ ಮೊತ್ತ ಸಿಗುತ್ತದೋ ಇಲ್ಲವೋ ಎನ್ನುವ ಭಯ ಕಾಡುತ್ತಿದೆ ಎಂದು ಕುಶಾಲನಗರದ ಪೊನ್ನಪ್ಪ ನೋವು ಹೇಳಿಕೊಂಡರು.

ಅಧಿಕಾರಿಗಳ ನಿರ್ಲಕ್ಷ್ಯ: ಕಾರು ನಿಲ್ಲಿಸಿ ಮುಖ್ಯರಸ್ತೆಗೆ ಬರುವಷ್ಟರೊಳಗೆ ಬೆಂಕಿ ದುರಂತ ಸಂಭವಿಸಿದೆ. ಬೆಂಕಿಯ ತೀವ್ರತೆ ಅಧಿಕವಿದ್ದರೂ, ಅಗ್ನಿಶಾಮಕ ದಳದ ಸಿಬ್ಬಂದಿ ಒಂದೇ ವಾಹನದಲ್ಲಿ ಬಂದಿದ್ದರು. ಒಣ ಹುಲ್ಲಿನ ಮೇಲೆ ಪಾರ್ಕಿಂಗ್‌ ವ್ಯವಸ್ಥೆ ಮಾಡಿದ್ದಾರೆ. ಭದ್ರತಾ ಸಿಬ್ಬಂದಿಯನ್ನು ನೇಮಿಸಿರಲಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನಮ್ಮ ಕಾರು ಕಳೆದುಕೊಂಡೆವು ಎಂದು ಜಕ್ಕೂರಿನ ಗಿರೀಶ್‌ ಬೇಸರ ವ್ಯಕ್ತಪಡಿಸಿದರು. ಹೊಸ ಕಾರು ಹೋಯ್ತು: ಕಾರನ್ನು ಇತ್ತೀಚಿಗಷ್ಟೆ ತೆಗೆದುಕೊಂಡಿದ್ದೆವು. ವಿಮಾನ ಹಾರಾಟ ನೋಡುವುದಕ್ಕೆ ಕಾರಿನಲ್ಲಿ ಹೋಗಬೇಕು ಎಂದು ನಿರ್ಧರಿಸಿರಲಿಲ್ಲ. ಎಲ್ಲರೂ ಒಟ್ಟಾಗಿ ಹೋಗುವುದರಿಂದ ಕಾರಿನಲ್ಲೇ ಹೋಗುವುದು ಒಳ್ಳೆಯದು ಎಂದು ಕಾರು ತೆಗೆದುಕೊಂಡು ಬಂದಿದ್ದೆವು. ಶೋ ನೋಡುತ್ತಿದ್ದಾಗ ಕಂಡ ದಟ್ಟ ಹೊಗೆ ನಮ್ಮನ್ನು ಕಂಗೆಡಿಸಿತು, ಪಾರ್ಕಿಂಗ್‌ ಸ್ಥಳಕ್ಕೆ ಬಂದು ನೋಡುವಾಗ ಒಂದು ಕ್ಷಣ ದಿಗ್ಭ್ರಮೆಯಾಗಿತ್ತು ಎಂದು ಮೋಹಿತ್‌ ಹೇಳಿದರು.

ಮಗನಿಗೆ ಏರ್‌ ಶೋ ತೋರಿಸಬೇಕು ಎಂದು ಮನೆಯವರಿಗೆ ಒತ್ತಾಯ ಮಾಡಿ ಆನ್‌ಲೈನ್‌ನಲ್ಲಿ ಟಿಕೆಟ್‌ ಬುಕ್‌ ಮಾಡಿದ್ದೆವು. ಅವರು ಸೂಚಿಸಿದ್ದ ಸ್ಥಳದಲ್ಲಿ ಪಾರ್ಕಿಂಗ್‌ ಮಾಡಿದ್ದೆವು. ಪ್ರದರ್ಶನ ನೋಡುತ್ತಿದ್ದಾಗ ಹೊಗೆ ಬಂದಿದ್ದರಿಂದ ಗಡಿಬಿಡಿಯಾಗಿ ಕಾರು ನಿಲುಗಡೆ ಮಾಡಿದ್ದ ಸ್ಥಳಕ್ಕೆ ಬಂದು ನೋಡಿದರೆ ಬಹುತೇಕ ಸುಟ್ಟು ಹೋಗಿತ್ತು. ಕಾರಿನಲ್ಲಿದ್ದ ಯಾವ ದಾಖಲೆಯೂ ಸಿಗಲಿಲ್ಲ ಎಂದು ಗೃಹಿಣಿಯೊಬ್ಬರು ನೋವು ತೋಡಿಕೊಂಡರು. ಅನೇಕರು ಊಟ, ತಿಂಡಿ ಹಾಗೂ ಇತರೆ ಖರ್ಚಿಗೆ ಬೇಕಾದಷ್ಟು ಹಣ ತೆಗೆದುಕೊಂಡು ಪರ್ಸ್‌ ಹಾಗೂ ಕ್ರೆಡಿಟ್‌, ಡೆಬಿಟ್‌ ಕಾರ್ಡ್‌ಗಳನ್ನು ಕಾರಲ್ಲೇ ಬಿಟ್ಟು
ಹೋಗಿದ್ದರು. ಸಾಮಾನ್ಯವಾಗಿ ಕಾರಿನ ನೋಂದಣಿ ಪ್ರಮಾಣ ಪತ್ರ, ವಿಮೆ ಪ್ರತಿ ಹೀಗೆ ಎಲ್ಲ ದಾಖಲೆಗಳನ್ನು ಕಾರಿನಲ್ಲೇ ಇಡಲಾಗುತ್ತದೆ. ಸುಟ್ಟು ಹೋಗಿರುವ ಕಾರುಗಳಲ್ಲಿದ್ದ ಈ ಎಲ್ಲ ದಾಖಲೆಗಳು ಬೆಂಕಿಗೆ ಆಹುತಿಯಾಗಿವೆ. ಕೆಲವರ ಮನೆ, ಅಂಗಡಿ ಕೀಗಳು, ಲ್ಯಾಪ್‌ಟಾಪ್‌, ಪವರ್‌ ಬ್ಯಾಂಕ್‌, ಮನೆಗೆ ಸಂಬಂಧಿಸಿದ ದಾಖಲೆಗಳು, ಒಡವೆಗಳು ಕಾರಿನಲ್ಲಿ ಸುಟ್ಟುಹೋಗಿವೆ.

ಬೆಂಕಿ ಬಿದ್ದಾಗ ಸೆಲ್ಫಿ ಹುಚ್ಚು ಬೆಂಕಿ ಅನಾಹುತಕ್ಕೆ ಕಾರುಗಳು ಧಗಧಗನೆ ಉರಿಯುತ್ತಿದ್ದರೂ, ಅಲ್ಲಿದ್ದ ಕೆಲವರು ಪೊಲೀಸ್‌ ಅಥವಾ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ವಿಷಯ ತಿಳಿಸುವುದನ್ನು ಬಿಟ್ಟು, ಬೆಂಕಿಯ ಎದುರು ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಇನ್ನು ಕೆಲವರು, ವಿಡಿಯೋ ಮಾಡುತ್ತಿದ್ದರೆ, ಮತ್ತೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಲೈವ್‌ ನೀಡುತ್ತಿದ್ದರು. ಅಗ್ನಿ ಅನಾಹುತ ಸಂಭವಿಸಿದ ಕೆಲವೇ ಕ್ಷಣದಲ್ಲಿ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌, ಟ್ವಿಟರ್‌ ಮೊದಲಾದ ಸಾಮಜಿಕ ಜಾಲತಾಣದಲ್ಲಿ ಘಟನೆ ವಿಡಿಯೋ ಮತ್ತು ಫೋಟೋ ಹರಿದಾಡಿದವು.

ಇನ್ಸೂರೆನ್ಸ್‌ ಹಣ ಸಿಗುತ್ತಾ? ಕಾರುಗಳಿಗೆ ವಿಮೆ ಇರುತ್ತದೆಯಾದರೂ, ಅದನ್ನು ಅಷ್ಟು ಸುಲಭವಾಗಿ ಕ್ಲೈಂ ಮಾಡಿಕೊಳ್ಳಲು ಸಾಧ್ಯವೇ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಇದಕ್ಕೆ ಉತ್ತರಿಸಿರುವ ಇನ್ಸೂರೆನ್ಸ್‌ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು, ವಿಮೆ ಲ್ಯಾಪ್ಸ್‌ ಆಗದಂತೆ ಪಾವತಿಸುತ್ತಿರುವ ಬಗ್ಗೆ ಯಾವುದೇ ದಾಖಲೆ ಇದ್ದರೂ, ನಿಯಮಾನುಸಾರ ಪರಿಶೀಲಿಸಿ, ಎಷ್ಟು ಪರಿಹಾರ ಸಿಗಬಹುದೋ ಅಷ್ಟನ್ನು ಸಂಸ್ಥೆಗಳು ನೀಡುತ್ತವೆ. ಯಾವುದೇ ಕಾರಿಗೂ ಪೂರ್ಣ ಪ್ರಮಾಣದಲ್ಲಿ ವಿಮೆ ಸಿಗುವುದಿಲ್ಲ. ಹೊರ ಮೈ ವಿನ್ಯಾಸಕ್ಕೆ ಕೆಲವೊಮ್ಮೆ ಇನ್ಸೂರೆನ್ಸ್‌ ಅನ್ವಯಿಸುವುದಿಲ್ಲ. ಎಂಜಿನ್‌ ಹಾಗೂ ಒಳಭಾಗ ಕೆಲವೊಂದು ವಸ್ತುಗಳಿಗೆ ಇನ್ಸೂರೆನ್ಸ್‌ ಇರುತ್ತದೆ. ಸಂಸ್ಥೆಗಳು ಎಷ್ಟು ಪ್ರಮಾಣದಲ್ಲಿ ಮರುಪಾವತಿ ಮಾಡುತ್ತವೆ ಎನ್ನುವುದು ಅವರವರ ನಿಯಮದ ಮೇಲೆ ಅವಲಂಬಿತವಾಗಿರುತ್ತದೆ ಎಂದು ಹೇಳುತ್ತಾರೆ.

ಕಾರಿಗೆ ನಂಬರ್‌ ಬರೆದರು ಬೆಂಕಿಗೆ ಸುಟ್ಟು ಹೋಗಿದ್ದ ಕಾರುಗಳನ್ನು ಮಾಲೀಕರೇ ಗುರುತಿಸುವುದು ಕಷ್ಟವಾಗಿತ್ತು. ಕಾರುಗಳಲ್ಲಿ ಲಭ್ಯವಾಗಿದ್ದ ವಸ್ತುಗಳ ಆಧಾರದ ಮೇಲೆ ಮಾಲೀಕರು ಕಾರಿನ ಮುಂಭಾಗ, ಮೇಲ್ಭಾಗ ಹಾಗೂ ಹಿಂಭಾಗದಲ್ಲಿ ನಂಬರ್‌ ಬರೆಯುತ್ತಿದ್ದ ದೃಶ್ಯ ಕಂಡು ಬಂತು.

ಸುಟ್ಟುಹೋದ ಹಾವು ದಟ್ಟವಾಗಿ ಬೆಳೆದಿದ್ದ ಹುಲ್ಲು ಸಂಪೂರ್ಣವಾಗಿ ಒಣಗಿದ್ದರಿಂದ ಹಾವುಗಳು ಅಲ್ಲಿದ್ದ ಬಿಲಗಳಲ್ಲಿ ವಾಸವಾಗಿದ್ದವು. ಬೆಂಕಿ ತೀವ್ರತೆಗೆ ಹೊರ ಬಂದಿದ್ದ ಹಾವುಗಳು ಸುಟ್ಟು ಹೋಗಿವೆ. ಹಾವಿನ ಜತೆಗೆ ಮೊಲ ಮೊದಲಾದ ಪ್ರಾಣಿಗಳು ಕೂಡ ಬೆಂಕಿಯಲ್ಲಿ ಬೆಂದಿರುವ ಸಾಧ್ಯತೆ ಇದೆ. 

ವಾಯುನೆಲೆ ಸುತ್ತಸಂಚಾರ ದಟ್ಟಣೆ 
ಬೆಂಗಳೂರು: ಆಕಸ್ಮಿಕ ಅಗ್ನಿ ಅವಘಡದಿಂದ ವಾಯುನೆಲೆ ಸುತ್ತ-ಮುತ್ತ ಆರೇಳು ಕಿ.ಮೀ. ವರೆಗೆ ಸಂಚಾರ ದಟ್ಟಣೆ ಉಂಟಾಗಿತ್ತು. ಮಧ್ಯಾಹ್ನ 12 ಗಂಟೆ ಸುಮಾರಿಗೆ ಪಾರ್ಕಿಂಗ್‌ ಸ್ಥಳದಲ್ಲಿ ಅವಘಡ ಸಂಭವಿಸಿದರಿಂದ ವಾಯು ನೆಲೆ ಮುಂಭಾಗ ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಹೀಗಾಗಿ ಬಳ್ಳಾರಿ ರಸ್ತೆಯಲ್ಲಿ ಸಾವಿರಾರು ವಾಹನಗಳು ಒಂದೂವರೆ ಗಂಟೆ ರಸ್ತೆಯಲ್ಲೇ ನಿಲ್ಲಬೇಕಾಯಿತು. ಸುಗಮ ಸಂಚಾರಕ್ಕೆ ಅನುವು ಮಾಡಲು ಪೊಲೀಸರು ಹರಸಾಹಸ ಪಟ್ಟರು. ಘಟನೆ ಪರಿಣಾಮ ಗೇಟ್‌-5ರಲ್ಲಿ ಕೆಲ ಹೊತ್ತು ಒಳ ಮತ್ತು ಹೊರ ಹೋಗುವ
ವಾಹನಗಳ ಸಂಚಾರ ನಿರ್ಬಂಧಿಸಲಾಗಿತ್ತು

ಅಗ್ನಿ ಅವಘಡದ ಬಗ್ಗೆ ಅಗ್ನಿಶಾಮಕ ದಳ ಡಿಜಿಪಿ ಎಂ.ಎನ್‌.ರೆಡ್ಡಿ ಅವರಿಂದ ಮಾಹಿತಿ ಪಡೆದಿದ್ದೇನೆ. ಒಣಹುಲ್ಲಿಗೆ ಬೆಂಕಿ ಬಿದ್ದು ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿದ್ದು, ಘಟನೆ ಬಗ್ಗೆ ಉನ್ನತ ತನಿಖೆಗೆ ಆದೇಶಿಸಲಾಗುವುದು.
 ●ಎಂ.ಬಿ.ಪಾಟೀಲ, ಗೃಹ ಸಚಿವ

ಬೆಂಗಳೂರಿನಲ್ಲಿ ಏರ್‌ ಶೋ ನಡೆಸಲು ಬಿಜೆಪಿ ವಿರೋ ಧಿಸಿತ್ತು. ಈಗ ನಡೆದ ಕೆಲವು ಅವಘಡಗಳನ್ನು ನೆಪವಾಗಿಟ್ಟು
ಕೊಂಡು ಅದನ್ನು ಬೇರೆಡೆಗೆ ಸ್ಥಳಾಂತರಿಸುವ ಕೆಲಸಕ್ಕೆ ಬಿಜೆಪಿ ಮುಂದಾಗಬಾರದು. ಈ ಏರ್‌ ಶೋಗೆ ರಾಜ್ಯ ಸರ್ಕಾರದ ಸಂಪೂರ್ಣ ಸಹಕಾರವಿದೆ.
 ● ದಿನೇಶ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

ಬೆಂಗಳೂರಿನಲ್ಲಿ ಏರ್‌ ಶೋ ಆರಂಭವಾದಾಗಿನಿಂದ ಮುಹೂರ್ತವೇ ಸರಿ ಇಲ್ಲ. ಮೊನ್ನೆ ವಿಮಾನ ಪತನವಾಗಿ ಓರ್ವ ಮೃತಪಟ್ಟರು. ಈಗ ನೂರಾರು ಕಾರುಗಳು ಸುಟ್ಟ ಪ್ರಕರಣ ನಡೆದಿದೆ. ಇಂತಹ ಘಟನೆ ನಡೆಯಬಾರದಿತ್ತು.
 ● ಬಿ.ಎಸ್‌.ಯಡಿಯೂರಪ್ಪ,ಬಿಜೆಪಿ ರಾಜ್ಯಾಧ್ಯಕ್ಷ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: ರಾಜಾಜಿನಗರದಲ್ಲಿ ಭಾನುವಾರ ಮುಂಜಾನೆ ನಡೆದಿದ್ದ ಬಟ್ಟೆ ವ್ಯಾಪಾರಿ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ವ್ಯಾಪಾರಿ ಜೈಕುಮಾರ್‌ರನ್ನು...

  • ಬೆಂಗಳೂರು: ಡೆಂಘೀ ಜ್ವರಕ್ಕೆ ತುತ್ತಾಗಿ ಪ್ಲೇಟ್‌ಲೆಟ್‌ಗಾಗಿ ಖಾಸಗಿ ರಕ್ತನಿಧಿಗಳಿಗೆ ಸಾವಿರಾರು ರೂ. ನೀಡಿ ಬಳಲಿರುವ ಬಡ ರೋಗಿಗಳ ನೆರವಿಗೆ ಧಾವಿಸಿರುವ ಬೃಹತ್‌...

  • ಬೆಂಗಳೂರು: ಜಿಲ್ಲಾಡಳಿತಕ್ಕೆ ಆದಾಯ ತಂದು ಕೊಡುವ ನಿಟ್ಟಿನಲ್ಲಿ ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ಮುಂದಾಗಿದೆ. ಇದರ ಭಾಗವಾಗಿಯೇ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದ...

  • ಬೆಂಗಳೂರು: ಬೈಸಿಕಲ್‌ಗ‌ಳು, ಬೈಕ್‌ಗಳು, ಅಷ್ಟೇ ಯಾಕೆ ಐಷಾರಾಮಿ ಕಾರುಗಳೂ ಬಾಡಿಗೆ ಸಿಗುವುದು ಸರ್ವೇಸಾಮಾನ್ಯ. ಆದರೆ, ಈಗ ದೇವರು ಅದರಲ್ಲೂ ಗಣೇಶ ಕೂಡ ಬಾಡಿಗೆಗೆ...

  • ಬೆಂಗಳೂರು: ರಾಜ್ಯ ಸರ್ಕಾರವು ಬಿಬಿಎಂಪಿಯ ಬಜೆಟ್‌ ತಡೆಹಿಡಿದಿರುವುದರ ಬಗ್ಗೆ ಸೋಮವಾರ ನಡೆದ ಕೌನ್ಸಿಲ್‌ ಸಭೆಯು ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ವಾಗ್ವಾದದ...

ಹೊಸ ಸೇರ್ಪಡೆ