ಅಕ್ರಮ ವಾಹನಗಳದ್ದೇ ಕಾರುಬಾರು

ಮಕ್ಕಳಿದ್ದಾರೆ ಎಚ್ಚರಿಕೆ 2

Team Udayavani, May 16, 2019, 3:10 AM IST

ಬೆಂಗಳೂರು: ಶಾಲಾ ಮಕ್ಕಳನ್ನು ಕರೆದೊಯ್ಯುವ ವಾಹನಗಳ ತಪಾಸಣೆ, ನಿಯಮ ಪಾಲನೆಯ ಬಗ್ಗೆ ನಿಗಾ ವಹಿಸುವ ಹೊಣೆಗಾರಿಕೆ ಸಂಚಾರ ಪೊಲೀಸರು ಹಾಗೂ ಸಾರಿಗೆ ಇಲಾಖೆ ಮೆಲಿದೆ. ಆದರೆ, ಎರಡೂ ಇಲಾಖೆಗಳು ಪೂರ್ಣ ಪ್ರಮಾಣದಲ್ಲಿ ತಮ್ಮ ಜವಾಬ್ದಾರಿ ನಿರ್ವಹಿಸುತ್ತಿಲ್ಲ.

ಶಾಲಾ ವಾಹನದಲ್ಲಿ ಇಂತಿಷ್ಟೇ ಮಕ್ಕಳನ್ನು ಕರೆದೊಯ್ಯಬೇಕು ಎಂಬ ಮಾರ್ಗಸೂಚಿ ಇದೆ. ಆದರೆ, ನಿಯಮಗಳನ್ನು ಪಾಲಿಸುತ್ತಿರುವುದು ಬೆರಳೆಣಿಕೆಯಷ್ಟು ಶಾಲೆಗಳು ಮಾತ್ರ. ಇದು ಮಕ್ಕಳ ಸುರಕ್ಷತೆ ಬಗ್ಗೆ ಸಾರಿಗೆ ಇಲಾಖೆ ಹಾಗೂ ಸಂಚಾರ ಪೊಲೀಸರ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿ.

ಉದಾಹರಣೆಗೆ, ಓಮ್ನಿ ಒಂದರಲ್ಲೇ ಕನಿಷ್ಠ 12ರಿಂದ 15ಕ್ಕೂ ಹೆಚ್ಚು ಮಕ್ಕಳನ್ನು ತುಂಬಲಾಗುತ್ತಿದೆ. ಹೀಗಾಗಿ ಶಾಲಾ ಮಕ್ಕಳನ್ನು ಕರೆದೊಯ್ಯುವ ಓಮ್ನಿ ಮಾಲೀಕರು, ವಾಹನದ ಒಳ ವಿನ್ಯಾಸವನ್ನೇ ಬದಲಾಯಿಸಿಕೊಳ್ಳುತ್ತಾರೆ. ಇನ್ನು ಆಟೋ ಚಾಲಕರು ಮಕ್ಕಳನ್ನು ಕುರಿಗಳಂತೆ ತುಂಬಿ ಶಾಲೆಗೆ ಕರೆದೊಯ್ಯುವ ಪ್ರವೃತ್ತಿ ನಿರಂತರವಾಗಿ ನಡೆಯುತ್ತಿದೆ.

ಶಾಲೆಗಳೇ ನೇರವಾಗಿ ನೋಂದಣಿ ಮಾಡಿಕೊಂಡು ಸಂಚರಿಸುವ ವಾಹನಗಳಲ್ಲಿ ಇಂಥ ಅವ್ಯವಸ್ಥೆ ಅಷ್ಟಾಗಿ ಕಂಡು ಬರುವುದಿಲ್ಲ. ಆದರೆ, ಆಯಾ ಪ್ರದೇಶದಲ್ಲೇ ಸ್ಥಳೀಯವಾಗಿ ಪೋಷಕರು ಚೌಕಾಸಿ ಮಾಡಿ, ಬಾಡಿಗೆ ನಿಗದಿಪಡಿಸಿರುವ ಆಟೋ, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್‌, ಟೆಂಪೋ ಟ್ರಾವೆಲರ್‌, ಮಿನಿ ಬಸ್‌ಗಳಲ್ಲಿ ಇದು ಹೆಚ್ಚಾಗಿದೆ.

ಈ ಮಾದರಿಯ ವಾಹನಗಳ ಮಾಲೀಕರಿಗೆ ಶಾಲಾ ಆಡಳಿತ ಮಂಡಳಿ ಭಯವಾಗಲಿ, ಅಧಿಕಾರಿಗಳ ಭಯವಾಗಲಿ ಇರುವುದಿಲ್ಲ. ಇಂಥ ವಾಹನಗಳ ವಿರುದ್ಧ ಸಂಚಾರ ಪೊಲೀಸರು ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ಸಂಚಾರ ಪೊಲೀಸರು ಆಗಿಂದಾಗ್ಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಆದರೆ, ಅದು ಸರಿಯಾಗಿ ಆಗುತ್ತಿಲ್ಲ.

ಅನಧಿಕೃತ ವಾಹನಗಳ ಲೆಕ್ಕ ಇಲ್ಲ: ಮೂಲಗಳ ಪ್ರಕಾರ ರಾಜ್ಯದಲ್ಲಿ ಮಕ್ಕಳನ್ನು ಕರೆದೊಯ್ಯುವ ವಾಹನಗಳ ಸಂಖ್ಯೆ ಲೆಕ್ಕವೇ ಇಲ್ಲದಾಗಿದೆ. ನಗರದ ಶಿಕ್ಷಣ ಸಂಸ್ಥೆಯ ವಾಹನಗಳು ಎಂದು ನೋಂದಣಿಯಾದ ಬಸ್‌ಗಳ ಸಂಖ್ಯೆ 12,352ಕ್ಕೂ ಹೆಚ್ಚು. ಅವುಗಳನ್ನು ಹೊರತು ಪಡಿಸಿ, ನೇರವಾಗಿ ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ಇತರೆ ವಾಹನಗಳು ಎಷ್ಟಿವೆ ಎಂಬುದರ ನಿಖರ ಮಾಹಿತಿ ಸಾರಿಗೆ ಇಲಾಖೆ ಬಳಿ ಇಲ್ಲ. ಆದರೆ, ಮೂಲಗಳ ಪ್ರಕಾರ 40 ಸಾವಿರಕ್ಕೂ ಅಧಿಕ ಎಂದು ಅಂದಾಜಿಸಲಾಗಿದೆ.

ಇದರ ಜತೆಗೆ, ಕೆಲ ಶಾಲಾ ವಾಹನ ಚಾಲಕರು ಮದ್ಯ ಸೇವಿಸಿ ವಾಹನ ಚಾಲನೆ ಮಾಡುತ್ತಾರೆ ಎಂಬ ಗಂಭೀರ ಆರೋಪಗಳಿವೆ. ಆದರೆ, ಅಂತಹ ವಾಹನ ಚಾಲಕರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕಾದ ಸಂಚಾರ ಪೊಲೀಸರು ತಪಾಸಣೆ ನಡೆಸದೆ ಕೈಕಟ್ಟಿ ಕೂತಿದ್ದಾರೆ. ಮತ್ತೂಂದೆಡೆ ಸಂಚಾರ ಪೊಲೀಸರು ಶಾಲಾ ವಾಹನ ತಡೆಯಲು ಮುಂದಾದರೆ, ಶಾಲೆಗೆ ಕರೆದೊಯ್ಯಲು ತಡವಾಗುತ್ತದೆ ಎಂಬ ಸಬೂಬು ನುಣುಕಿಕೊಳ್ಳುವವರೇ ಹೆಚ್ಚು ಎನ್ನುತ್ತಾರೆ ಸಂಚಾರ ಪೊಲೀಸರು.

ಖಾಸಗಿ ಶಾಲೆಗಳ ನಿರ್ಲಕ್ಷ್ಯ: ಸರ್ಕಾರದ ಆದೇಶದ ಪ್ರಕಾರ ನಗರದ ಎಲ್ಲ ಖಾಸಗಿ ಶಾಲಾ ಆಡಳಿತ ಮಂಡಳಿಯ ತಮ್ಮ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುವ ಶಾಲಾ ವಾಹನ ಸೇರಿ ಪ್ರತಿ ಸಿಬ್ಬಂದಿಯ ಸಂಪೂರ್ಣ ಮಾಹಿತಿಯನ್ನೊಳಗೊಂಡ ಪರಿಶೀಲನಾ ಅರ್ಜಿಯನ್ನು ಪ್ರತಿ ವರ್ಷ ಪೊಲೀಸ್‌ ಇಲಾಖೆಗೆ ಸಲ್ಲಿಸಿ, ನವೀಕರಣ ಮಾಡಿಕೊಳ್ಳಬೇಕು. ಆದರೆ, ನಗರ ಪೊಲೀಸ್‌ ಆಯುಕ್ತರ ಕಚೇರಿ ಮೂಲಗಳ ಪ್ರಕಾರ ಇದುವರೆಗೂ ಪ್ರಸಕ್ತ ವರ್ಷದಲ್ಲಿ 250ಕ್ಕೂ ಹೆಚ್ಚು ಅರ್ಜಿಗಳು ಮಾತ್ರ ಬಂದಿದ್ದು, ಇನ್ನುಳಿದ ಶಾಲಾ ಆಡಳಿತ ಮಂಡಳಿಗೆ ಸೂಚಿಸಿದರು ಪ್ರಯೋಜನವಿಲ್ಲ ಎಂದು ಪೊಲೀಸರು ಹೇಳುತ್ತಾರೆ.

ಸಂಚಾರ ಪೊಲೀಸರ ಕಾರ್ಯಾಚರಣೆ: ನಿಗದಿಗಿಂತ ಹೆಚ್ಚು ಮಕ್ಕಳನ್ನು ಕರೆದೊಯ್ಯುವ ಶಾಲಾ ವಾಹನಗಳ ವಿರುದ್ಧ ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. 2017ರಲ್ಲಿ 4,556, 2018ರಲ್ಲಿ 5,043 ಹಾಗೂ 2019ರಲ್ಲಿ(ಮಾ.31ರವರೆಗೆ) 652 ಪ್ರಕರಣಗಳನ್ನು ದಾಖಲಿಸಿದ್ದು, ವಾಹನ ಚಾಲಕರು ಹಾಗೂ ಶಾಲಾ ಆಡಳಿತ ಮಂಡಳಿಗೂ ನೋಟಿಸ್‌ ಜಾರಿ ಮಾಡಿ ಕಾನೂನು ಕ್ರಮಕೈಗೊಂಡಿದ್ದಾರೆ.

ಮಕ್ಕಳು, ವಿದ್ಯಾರ್ಥಿಗಳು, ಕಾರ್ಮಿಕರು ಹಾಗೂ ಅಸಹಾಯಕ ದುರ್ಬಲ ವರ್ಗದ ಜನರು ಸೇರಿದಂತೆ ಸಾಮಾನ್ಯ ಪ್ರಯಾಣಿಕರನ್ನು ಸರಕು ಸಾಗಾಣಿಕೆ ವಾಹಗಳಲ್ಲಿ ಮಿತಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಒಂದು ಸ್ಥಳದಿಂದ ಮತ್ತೂಂದು ಸ್ಥಳಕ್ಕೆ ಸಾಗಿಸುವುದು ಮಾನವನ ಮೂಲಭೂತ ಹಕ್ಕು ಮತ್ತು ವ್ಯಕ್ತಿ ಘನತೆಯ ಉಲ್ಲಂಘನೆಯಾಗಿದೆ.

ಇದು ಸಾರಿಗೆ ಮತ್ತು ಸಂಚಾರ ಕಾಯ್ದೆಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ. ಸರಕು ಸಾಗಾಣಿಕೆ ವಾಹನಗಳಲ್ಲಿ ಶಾಲಾ ಮಕ್ಕಳು ಸೇರಿದಂತೆ ಸಾರ್ವಜನಿಕರ ಸಂಚಾರವನ್ನು ತಡೆಯುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂಬ ಅಂಶಗಳನ್ನು ಸೇರಿಸಿ ಪ್ರಾಧಿಕಾರ ಅರ್ಜಿ ಸಲ್ಲಿಸಿದ್ದು, ಈ ಅರ್ಜಿ ವಿಚಾರಣೆ ಇನ್ನು ನಡೆಯುತ್ತಿದೆ.

ಪ್ರತಿ 15ದಿನ ಅಥವಾ ತಿಂಗಳಿಮ್ಮೆ ತಪಾಸಣೆ: “ಶಾಲೆ ಆರಂಭವಾದ ನಂತರ ಎರಡನೇ ಶನಿವಾರ ಸ್ಥಳ ನಿಗದಿ ಮಾಡಿ ನಗರದ ಎಲ್ಲ ಶಾಲಾ ವಾಹನ ಚಾಲಕರಿಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು. ಮಗ ಶಾಲಾ ವಾಹನ ಹತ್ತಿದ ಕೂಡಲೇ ಚಾಲಕ ಏನು ಮಾಡಬೇಕು, ವಾಹನದಲ್ಲಿರುವ ಸಹಾಯಕರು ಏನು ಮಾಡಬೇಕು. ಹಾಗೇ ಪೋಷಕರು ಏನುಮಾಡಬೇಕು’ ಎಂದು ಕಾರ್ಯಾಗಾರದಲ್ಲಿ ಮಾಹಿತಿ ನೀಡಲಾಗುವುದು. ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ ಪಿ.ಹರಿಶೇಖರನ್‌ ಮಾಹಿತಿ ನೀಡಿದರು.

ಅಲ್ಲದೆ, ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಇನ್ಮುಂದೆ ಪ್ರತಿ 15 ದಿನ ಅಥವಾ ತಿಂಗಳಿಗೊಮ್ಮೆ ಶಾಲಾ ವಾಹನಗಳ ತಪಾಸಣಾ ಕಾರ್ಯಾ ನಡೆಸಲಾಗುವುದು. ಒಂದು ವೇಳೆ ಮದ್ಯ ಸೇವಿಸಿ ವಾಹನ ಚಾಲನೆ ಮಾಡುವುದು, ನಿಗದಿತ ಪ್ರಮಾಣಕ್ಕಿಂತ ಅಧಿಕ ಮಕ್ಕಳನ್ನು ಕರೆದೊಯ್ಯುವ ವಾಹನಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು. ಕಳೆದ ಐದಾರು ತಿಂಗಳ ಹಿಂದೆ ವಿಶೇಷ ಕಾರ್ಯಾಚರಣೆ ನಡೆಸಿ ಸುಮಾರು 100ಕ್ಕೂ ಹೆಚ್ಚು ಶಾಲಾ ವಾಹನ ಚಾಲಕರನ್ನು ತಪಾಸಣೆ ನಡೆಸಿ, ದಂಡ ವಿಧಿಸಲಾಗಿತ್ತು ಎಂದರು.

ಪ್ರತಿ ಶಾಲಾ ವಾಹನ ತಪಾಸಣೆ: ರಾಜ್ಯ ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ ಪಿ.ಎಸ್‌.ಸಂಧು ಮಾತನಾಡಿ, ಈ ಸಂಬಂಧ ಎಲ್ಲ ನಗರಗಳ ಪೊಲೀಸ್‌ ಆಯುಕ್ತರು, ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆದಿದ್ದು, ಪ್ರತಿಯೊಂದು ಶಾಲಾ ವಾಹನಗಳನ್ನು ತಪಾಸಣೆ ನಡೆಸಬೇಕು.

ಅಧಿಕೃತ ವಾಹನಗಳ ಮೂಲಕವೇ ಮಕ್ಕಳನ್ನು ಶಾಲೆಗೆ ಕರೆದೊಯ್ಯಬೇಕು. ಸರಕು ಸಾಗಾಣಿಕೆ ವಾಹನ ಅಥವಾ ಅನಧಿಕೃತ ವಾಹನಗಳಲ್ಲಿ ಮಕ್ಕಳನ್ನು ಕರೆದೊಯ್ಯುವುದು ಕಂಡು ಬಂದರೆ ಕೂಡಲೇ ಕಾನೂನು ಕ್ರಮಕೈಗೊಳ್ಳಬೇಕು. ಪರವಾನಿಗೆ ರದ್ದು ಪಡಿಸಬೇಕು. ಅಲ್ಲದೆ, ಸಾರಿಗೆ ಇಲಾಖೆ ಅಧಿಕಾರಿಗಳ ಜತೆ ಸೇರಿ ವಿಶೇಷ ಕಾರ್ಯಾಚರಣೆ ನಡೆಸುವಂತೆ ಸೂಚಿಸಲಾಗಿದೆ ಎಂದರು.

* ಮೋಹನ್‌ ಭದ್ರಾವತಿ/ ರಾಜು ಖಾರ್ವಿ ಕೊಡೇರಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: ರಾಜಾಜಿನಗರದಲ್ಲಿ ಭಾನುವಾರ ಮುಂಜಾನೆ ನಡೆದಿದ್ದ ಬಟ್ಟೆ ವ್ಯಾಪಾರಿ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ವ್ಯಾಪಾರಿ ಜೈಕುಮಾರ್‌ರನ್ನು...

  • ಬೆಂಗಳೂರು: ಡೆಂಘೀ ಜ್ವರಕ್ಕೆ ತುತ್ತಾಗಿ ಪ್ಲೇಟ್‌ಲೆಟ್‌ಗಾಗಿ ಖಾಸಗಿ ರಕ್ತನಿಧಿಗಳಿಗೆ ಸಾವಿರಾರು ರೂ. ನೀಡಿ ಬಳಲಿರುವ ಬಡ ರೋಗಿಗಳ ನೆರವಿಗೆ ಧಾವಿಸಿರುವ ಬೃಹತ್‌...

  • ಬೆಂಗಳೂರು: ಜಿಲ್ಲಾಡಳಿತಕ್ಕೆ ಆದಾಯ ತಂದು ಕೊಡುವ ನಿಟ್ಟಿನಲ್ಲಿ ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ಮುಂದಾಗಿದೆ. ಇದರ ಭಾಗವಾಗಿಯೇ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದ...

  • ಬೆಂಗಳೂರು: ಬೈಸಿಕಲ್‌ಗ‌ಳು, ಬೈಕ್‌ಗಳು, ಅಷ್ಟೇ ಯಾಕೆ ಐಷಾರಾಮಿ ಕಾರುಗಳೂ ಬಾಡಿಗೆ ಸಿಗುವುದು ಸರ್ವೇಸಾಮಾನ್ಯ. ಆದರೆ, ಈಗ ದೇವರು ಅದರಲ್ಲೂ ಗಣೇಶ ಕೂಡ ಬಾಡಿಗೆಗೆ...

  • ಬೆಂಗಳೂರು: ರಾಜ್ಯ ಸರ್ಕಾರವು ಬಿಬಿಎಂಪಿಯ ಬಜೆಟ್‌ ತಡೆಹಿಡಿದಿರುವುದರ ಬಗ್ಗೆ ಸೋಮವಾರ ನಡೆದ ಕೌನ್ಸಿಲ್‌ ಸಭೆಯು ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ವಾಗ್ವಾದದ...

ಹೊಸ ಸೇರ್ಪಡೆ