ನಮ್ಮ ಮೆಟ್ರೋ 2ನೇ ಹಂತ ಹೊರಗುತ್ತಿಗೆ

Team Udayavani, Sep 16, 2019, 3:09 AM IST

ಬೆಂಗಳೂರು: “ನಮ್ಮ ಮೆಟ್ರೋ’ ಎರಡನೇ ಹಂತದ ನಿರ್ವಹಣೆ ಮತ್ತು ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಹೊರಗುತ್ತಿಗೆ ನೀಡಲು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ಉದ್ದೇಶಿಸಿದೆ. ಈ ಮೂಲಕ ಪರೋಕ್ಷವಾಗಿ ಖಾಸಗೀಕರಣಕ್ಕೆ ಮುನ್ನುಡಿ ಬರೆದಿದೆ.

ಈ ಸಂಬಂಧ ಇತ್ತೀಚೆಗೆ ನಡೆದ ಮೆಟ್ರೋ ಮಂಡಳಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದು, ಅದರಂತೆ ಮುಂದಿನ ಹಂತದಲ್ಲಿ ಬರುವ ಮೆಟ್ರೋ ಮಾರ್ಗ ಮತ್ತು ನಿಲ್ದಾಣಗಳ ನಿರ್ವಹಣೆ ಹಾಗೂ ಕಾರ್ಯಾಚರಣೆ ಹೊಣೆಯನ್ನು ಕಂಪೆನಿಯೊಂದಕ್ಕೆ ವಹಿಸಲು ನಿರ್ಧರಿಸಲಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಬಿಎಂಆರ್‌ಸಿಎಲ್‌ನಲ್ಲಿ ಕಾಯಂ ನೇಮಕಾತಿಗೆ ಬಹುತೇಕ ಶಾಶ್ವತವಾಗಿ ತೆರೆ ಬೀಳಲಿದೆ.

ಈಗಾಗಲೇ ಚೆನ್ನೈನಲ್ಲಿ ಅರ್ಧಕ್ಕರ್ಧ ಅಂದರೆ 32 ನಿಲ್ದಾಣಗಳ ಪೈಕಿ 16 ನಿಲ್ದಾಣಗಳ ನಿರ್ವಹಣೆಯನ್ನು ಹೊರಗುತ್ತಿಗೆ ನೀಡಲಾಗಿದೆ. ಇದೇ ಮಾದರಿಯನ್ನು “ನಮ್ಮ ಮೆಟ್ರೋ’ ಎರಡನೇ ಹಂತದಲ್ಲಿ ಅನುಸರಿಸಲು ಬಿಎಂಆರ್‌ಸಿಎಲ್‌ ಮುಂದಾಗಿದೆ. ಆದರೆ, 72 ಕಿ.ಮೀ. ಉದ್ದದ ಮಾರ್ಗದಲ್ಲಿ ನಾಲ್ಕು ವಿಸ್ತರಿಸಿದ ಮಾರ್ಗಗಳೂ ಸೇರಿವೆ. ಅವುಗಳನ್ನು ಪ್ರಸ್ತುತ ನಿಗಮದ ಸಿಬ್ಬಂದಿಯೇ ನಿರ್ವಹಣೆ ಮಾಡುತ್ತಿದ್ದಾರೆ. ಹಾಗಾಗಿ, ಈ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.

ಮಂಡಳಿಯ ಸೂಚನೆ ಮೇರೆಗೆ ಹೊರಗುತ್ತಿಗೆಗೆ ನಿರ್ಧರಿಸಲಾಗಿದೆ. ಇದರ ಮುಖ್ಯ ಉದ್ದೇಶ “ನಮ್ಮ ಮೆಟ್ರೋ’ ವೆಚ್ಚ ತಗ್ಗಿಸುವುದಾಗಿದೆ. ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಪ್ರಸ್ತುತ ಸಾಕಷ್ಟು ಖರ್ಚಾಗುತ್ತಿದೆ. ಹೊರಗುತ್ತಿಗೆ ನೀಡುವುದರಿಂದ ಸಾಕಷ್ಟು ಹೊರೆ ಕಡಿಮೆ ಆಗಲಿದೆ. ನಿರ್ಮಾಣ ಮತ್ತಿತರ ಚಟುವಟಿಕೆಗಳ ಕಡೆಗೆ ಗಮನಹರಿಸಲು ಅನುಕೂಲ ಆಗಲಿದೆ ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್ “ಉದಯವಾಣಿ’ಗೆ ಸ್ಪಷ್ಟಪಡಿಸಿದರು.

“ಒಂದು ವೇಳೆ ಹೊರಗುತ್ತಿಗೆ ನೀಡಿದರೆ, ನೌಕರರ ನೇಮಕಾತಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಬಿಎಂಆರ್‌ಸಿ ಬದಲಿಗೆ ಗುತ್ತಿಗೆ ಪಡೆದ ಕಂಪೆನಿಯು ನೌಕರರ ನೇಮಕ ಮಾಡಿಕೊಳ್ಳಲಿದೆ ಅಷ್ಟೇ’ ಎಂದೂ ಅವರು ಹೇಳಿದರು.

ವೆಚ್ಚದ ಲೆಕ್ಕಾಚಾರ: ಪ್ರಸ್ತುತ ನಿರ್ವಹಣೆ ಮತ್ತು ಕಾರ್ಯಾಚರಣೆ ವಿಭಾಗದಲ್ಲಿ ಕಿರಿಯ ಎಂಜಿನಿಯರ್‌, ವಿಭಾಗ ನಿಯಂತ್ರಕ, ಪೈಲಟ್‌ಗಳು ಸೇರಿ ಸುಮಾರು 1,300 ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ. ಅವರೆಲ್ಲರಿಗೂ ಮಾಸಿಕ ವೇತನ ಕನಿಷ್ಠ 40 ಸಾವಿರದಿಂದ ಗರಿಷ್ಠ 80 ಸಾವಿರ ರೂ.ವರೆಗೂ ಇದೆ. ಸರಾಸರಿ ವಾರ್ಷಿಕ 40ರಿಂದ 45 ಕೋಟಿ ರೂ. ಖರ್ಚಾಗುತ್ತಿದೆ. ಅಲ್ಲದೆ, ವೇತನ ಆಯೋಗದ ಅನ್ವಯ ಸಂಬಳವೂ ಹೆಚ್ಚಳ ಆಗುತ್ತಲೇ ಇರುತ್ತದೆ.

ಒಂದು ವೇಳೆ ಹೆಚ್ಚಳ ಮಾಡದಿದ್ದರೆ, ಪ್ರತಿಭಟನೆ ಎದುರಿಸಬೇಕಾಗುತ್ತದೆ. ಇದರ ಪರಿಣಾಮ ಮೆಟ್ರೋ ಸೇವೆಯಲ್ಲಿ ಆಗುತ್ತದೆ. ಹೊರಗುತ್ತಿಗೆ ನೀಡಿದರೆ, ಇದಾವುದರ ಕಿರಿಕಿರಿ ಇರುವುದಿಲ್ಲ. ಮಾಸಿಕ ವೇತನವನ್ನು 30-50 ಸಾವಿರ ರೂ.ಗಳಲ್ಲೇ ನಿಭಾಯಿಸಬಹುದು. ವೇತನ ಮಾತ್ರವಲ್ಲ; ಸೌಲಭ್ಯಗಳಿಗೂ ಕತ್ತರಿ ಬೀಳಲಿದೆ. ಆ ಮೂಲಕ ಖರ್ಚು ತಗ್ಗಲಿದೆ ಎಂಬ ಲೆಕ್ಕಾಚಾರ ನಿಗಮದ್ದಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.

ಮುಂದೊಂದು ವರ್ಷದಲ್ಲಿ ಎರಡನೇ ಹಂತದ ಮೊದಲ ಮಾರ್ಗವು ಸೇವೆಗೆ ಮುಕ್ತವಾಗಲಿದೆ. ಹಾಗಾಗಿ, ಈ ಹೊರಗುತ್ತಿಗೆ ಪ್ರಯೋಗ ತತ್‌ಕ್ಷಣಕ್ಕೆ ಮಾಡುವುದಿಲ್ಲ. ಆರಂಭದ ಕೆಲವು ದಿನಗಳು ಸ್ವತಃ ಬಿಎಂಆರ್‌ಸಿಎಲ್‌ ಸಿಬ್ಬಂದಿಯಿಂದಲೇ ನಿರ್ವಹಣೆ ಮಾಡಲಾಗುತ್ತದೆ. ನಂತರದಲ್ಲಿ ಹಂತ ಹಂತವಾಗಿ ಖಾಸಗಿ ಕಂಪೆನಿಗೆ ವರ್ಗಾಯಿಸುವ ಸಾಧ್ಯತೆ ಇದೆ. ದೇಶದಲ್ಲಿ ಈಗಿರುವ ಬಹುತೇಕ ಮೆಟ್ರೋ ಯೋಜನೆಗಳಲ್ಲಿ ಇದೇ ಮಾದರಿಯನ್ನು ಅನುಸರಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದರು.

ಮುಂದುವರಿಯಲಿದೆ ಹೊರಗುತ್ತಿಗೆ: “ನಮ್ಮ ಮೆಟ್ರೋ’ 2ಎ ಮತ್ತು ಬಿ ಹಾಗೂ 3ನೇ ಹಂತವೂ ಬರಲಿದೆ. ಅದಕ್ಕೂ ಹೊರಗುತ್ತಿಗೆ ಮಾದರಿ ಅನುಸರಿಸುವ ಚಿಂತನೆ ಇದೆ. ಹಾಗೊಂದು ವೇಳೆ ಮುಂಬರುವ ಎಲ್ಲ ಹಂತಗಳೂ ಹೊರಗುತ್ತಿಗೆ ನೀಡಿದರೆ, ಆಗ ಮೊದಲ ಹಂತ ಹೊರತುಪಡಿಸಿ ಉಳಿದೆಲ್ಲದ ಹೊಣೆ ಖಾಸಗಿ ಕಂಪನಿಗೆ ನೀಡಿದಂತಾಗಲಿದೆ. ಈ ಕ್ರಮದಿಂದ ಸ್ಥಳೀಯವಾಗಿ ಉದ್ಯೋಗಾವಕಾಶಗಳು ಕ್ಷೀಣಿಸುವ ಸಾಧ್ಯತೆಯೂ ಇದೆ. ಯಾಕೆಂದರೆ, ಗುತ್ತಿಗೆ ಪಡೆದ ಕಂಪೆನಿಯು ತನ್ನ ಪ್ರಾದೇಶಿಕ ಪ್ರತಿಭೆಗಳಿಗೆ ಆದ್ಯತೆ ನೀಡವ ಸಾಧ್ಯತೆಗಳು ಹೆಚ್ಚಿರುತ್ತವೆ ಎಂದು ನೌಕರರು ಆರೋಪಿಸುತ್ತಾರೆ.

ಎರಡನೇ ಹಂತದ ವಿವರ
ಮಾರ್ಗದ ಉದ್ದ 72 ಕಿ.ಮೀ.
ಒಟ್ಟು ನಿಲ್ದಾಣಗಳು 61
ಎತ್ತರಿಸಿದ ನಿಲ್ದಾಣಗಳು 49
ಸುರಂಗ ನಿಲ್ದಾಣಗಳು 12
ವಿಸ್ತರಿಸಿದ ಮಾರ್ಗಗಳ ಉದ್ದ 32.025 ಕಿ.ಮೀ.
ಯೋಜನಾ ಅಂದಾಜು ವೆಚ್ಚ 26,405 ಕೋಟಿ ರೂ.

* ವಿಜಯಕುಮಾರ್‌ ಚಂದರಗಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ