ಶಾಸಕರಿಗೆ ಜೈಕಾರ ಕೂಗಿದ ಪಿಐ
Team Udayavani, Feb 6, 2020, 3:07 AM IST
ಬೆಂಗಳೂರು: ಕೆ.ಆರ್.ಪುರಂ ಶಾಸಕ ಬೈರತಿ ಬಸವರಾಜ್ ಹುಟ್ಟುಹಬ್ಬಕ್ಕೆ 53 ಕೆ.ಜಿ ಕೇಕ್ ಕತ್ತರಿಸಿ ಕೈಗೆ ಬೆಳ್ಳಿ ಗದೆ ಕೊಟ್ಟು ವೇದಿಕೆ ಮೇಲೆ ಜೈಕಾರ ಕೂಗಿದ ಕೆ.ಆರ್.ಪುರ ಠಾಣೆ ಇನ್‌ಸ್ಪೆಕ್ಟರ್ ಅಂಬರೀಶ್ ಇದೀಗ ಸಾರ್ವಜನಿಕರು ಮಾತ್ರವಲ್ಲದೆ, ಹಿರಿಯ ಪೊಲೀಸ್ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಈ ಮಧ್ಯೆ ಜೈಕಾರದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಈತ ಪೊಲೀಸ್ ಇನ್‌ಸ್ಪೆಕ್ಟರ್ ಅಲ್ಲ, ರಾಜಕೀಯ ಪಕ್ಷದ ಕಾರ್ಯಕರ್ತ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ. ಈ ಸಂಬಂಧ ವೈಟ್‌ಫೀಲ್ಡ್ ಡಿಸಿಪಿ ಎಂ.ಎನ್.ಅನುಚೇತ್ ಕಾರಣ ಕೇಳಿ ಇನ್‌ಸ್ಪೆಕ್ಟರ್‌ಗೆ ನೋಟಿಸ್ ಜಾರಿ ಮಾಡಿದ್ದಾರೆ.
ಸದ್ಯ ಪ್ರಕರಣವೊಂದರ ಆರೋಪಿಗಳ ಬಂಧನಕ್ಕೆ ಪಿಐ ಅಂಬರೀಶ್ ಅಂಡಮಾನ್‌ಗೆ ತೆರಳಿರುವುದರಿಂದ ಬೆಂಗಳೂರಿಗೆ ಬಂದ ನಂತರ ನೋಟಿಸ್‌ಗೆ ಉತ್ತರ ನೀಡಲಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕೆ.ಆರ್.ಪುರ ಠಾಣಾಧಿಕಾರಿಯಾಗಿರುವ ಇನ್‌ಸ್ಪೆಕ್ಟರ್ ಅಂಬರೀಶ್ ಖುದ್ದು ಶಾಸಕ ಬಸವರಾಜು ಅವರ ಹುಟ್ಟುಹಬ್ಬದ ಕಾರ್ಯಕ್ರಮ ಆಯೋಜನೆ ಹೊಣೆ ಹೊತ್ತಿದ್ದರು ಎಂದು ತಿಳಿದು ಬಂದಿದೆ.
ಸಾರ್ವಜನಿಕವಾಗಿ ಜೈಕಾರ: ಫೆ.4ರಂದು ಕೆ.ಆರ್.ಪುರ ಶಾಸಕ ಬೈರತಿ ಬಸವರಾಜ್, ಕ್ಷೇತ್ರ ಅಭಿಮಾನಿಗಳ ಸಮ್ಮುಖದಲ್ಲಿ ಜನ್ಮದಿನ ಆಚರಿಸಿಕೊಂಡರು. ಅಲ್ಲಿಗೆ ಇನ್‌ಸ್ಪೆಕ್ಟರ್ ಅಂಬರೀಶ್ ಸೇರಿ ಕೆಲ ಪೊಲೀಸ್ ಅಧಿಕಾರಿಗಳು ಖಾಸಗಿಯಾಗಿ ಶುಭ ಕೋರಲು ತೆರಳಿದ್ದರು. ಆದರೆ, ಇನ್‌ಸ್ಪೆಕ್ಟರ್ ಅಂಬರೀಶ್ ಶಾಸಕರಿಗಾಗಿ ವಿಶೇಷವಾಗಿ 53 ಕೆ.ಜಿ ಕೇಕ್ ಮಾಡಿಸಿಕೊಂಡು ಬಂದಿದ್ದು, ಅದನ್ನು ಶಾಸಕರಿಂದ ಕತ್ತರಿಸಿ ಅವರಿಗೆ ಬೆಳ್ಳಿಯ ಗದೆ ನೀಡಿ ಶುಭ ಹಾರೈಸಿದ್ದಾರೆ.
ಜತೆಗೆ ವೇದಿಕೆ ಮೇಲೆಯೇ “ಬೈರತಿ ಬಸವರಾಜ್’ ಅಣ್ಣನಿಗೆ ಜೈ ಜೈ ಎಂದು ಜೈಕಾರ ಕೂಗಿದ್ದರು. ಈ ವೇಳೆ ಶಾಸಕ ಬೈರತಿ ಬಸವರಾಜು 2-3 ಬಾರಿ ಸುಮ್ಮನಿರುವಂತೆ ಸೂಚಿಸಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದೆ. ಪೊಲೀಸ್ ಅಧಿಕಾರಿಯ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ವೈಟ್‌ಫೀಲ್ಡ್ ವಿಭಾಗ ಡಿಸಿಪಿ ಎಂ.ಎನ್. ಅನುಚೇತ್, ಇನ್‌ಸ್ಪೆಕ್ಟರ್‌ಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.
“ರಾಜಕೀಯ ಕಾರ್ಯಕರ್ತ’: ಇನ್‌ಸ್ಪೆಕ್ಟರ್ ಶಾಸಕರಿಗೆ ಜೈಕಾರ ಕೂಗಿ, ಕೇಕ್ ಕತ್ತಿರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣ ಫೇಸ್‌ಬುಕ್, ವಾಟ್ಸ್‌ಆ್ಯಪ್, ಟ್ವಿಟರ್‌ನಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಇನ್‌ಸ್ಪೆಕ್ಟರ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಇನ್‌ಸ್ಪೆಕ್ಟರ್ ಅಂಬರೀಶ್ ಪೊಲೀಸ್ ಅಧಿಕಾರಿಯಲ್ಲ. ರಾಜಕೀಯ ಪಕ್ಷದ ಕಾರ್ಯಕರ್ತ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಎಸಿಬಿ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದ ಮಾಜಿ ಪೊಲೀಸ್ ಸಿಬ್ಬಂದಿ
ಇಂದಿರಾ ಕ್ಯಾಂಟೀನ್ಗೆ ಇಸ್ಕಾನ್ ಊಟ; ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ
ತಾಜಾ ಮಾವು, ಹಲಸು ಬೇಕಾ?ಮೇಳಕ್ಕೆ ಬನ್ನಿ;ಲಾಲ್ಬಾಗ್ನಲ್ಲಿ ಜೂ.13ರವರೆಗೆ ಪ್ರದರ್ಶನ, ಮಾರಾಟ
ಸ್ತ್ರೀಯರ ವೇಷದಲ್ಲಿ ಫೈನಾನ್ಸ್ನಲ್ಲಿ ಕಳವಿಗೆ ಯತ್ನ: ಸೈರನ್ ಶಬ್ದ ಕೇಳಿ ಆರೋಪಿಗಳು ಪರಾರಿ
ಮೆಡಿಕಲ್ ಸೀಟ್ ನೆಪದಲ್ಲಿ ವಂಚನೆ: ವಂಚಿಸಿದ ಹಣ ಕೇಳಿದ್ದಕ್ಕೆ ಹನಿಟ್ರ್ಯಾಪ್