ಎಸ್‌ಟಿಪಿ ನೀರು ಬಳಕೆಗೆ ಮಡಿವಂತಿಕೆ

Team Udayavani, Jul 23, 2019, 3:09 AM IST

ಬೆಂಗಳೂರು: ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ (ಎಸ್‌ಟಿಪಿ) ಸಂಸ್ಕರಿಸಿದ ನೀರನ್ನು ಕಾಮಗಾರಿಗಳಿಗೆ ಬಳಸುವಂತೆ ಸಾರ್ವಜನಿಕರಿಗೆ ಸೂಚನೆ ನೀಡುವ ಜಲಮಂಡಳಿಯು ಇಂದಿಗೂ ತನ್ನ ಕಾಮಗಾರಿಗಳಿಗೆ ಸಂಸ್ಕರಿಸಿದ ನೀರನ್ನು ಬಳಸುತ್ತಿಲ್ಲ. ಈ ಮೂಲಕ ಸಂಸ್ಕರಿಸಿದ ತ್ಯಾಜ್ಯ ನೀರಿನ ವಿಚಾರದಲ್ಲಿ ಜಲಮಂಡಳಿಯ ನಡೆ “ಹಿತ್ತಲ ಗಿಡ ಮನೆಗೆ ಮದ್ದಲ್ಲ’ ಎಂಬಂತಾಗಿದೆ.

ದಿನೇ ದಿನೆ ನಗರದಲ್ಲಿ ನೀರಿನ ಬೇಡಿಕೆ ಹೆಚ್ಚಾಗುತ್ತಿದೆ. ಬೇಡಿಕೆಯಷ್ಟು ನೀರನ್ನು ಪೂರೈಸಲು ಜಲಮಂಡಳಿಗೆ ಸಾಧ್ಯವಾಗುತ್ತಿಲ್ಲ. ಶುದ್ಧ ನೀರಿನ ಉಳಿಸುವ ನಿಟ್ಟಿನಲ್ಲಿ ಮಳೆನೀರು ಕೊಯ್ಲು ಅಳವಡಿಕೆ ಹಾಗೂ ಎಸ್‌ಟಿಪಿ ನೀರನ್ನು ಬಳಸುವಂತೆ ಜಲಮಂಡಳಿಯೇ ಬಳಕೆದಾರರಿಗೆ ನಿಯಮ ಜಾರಿಗೊಳಿಸಿರುವುದಲ್ಲದೆ, ಪಾಲಿಸವರಿಗೆ ಸಾವಿರಾರು ರೂ. ದಂಡ ಸಹ ವಿಧಿಸುತ್ತಿದೆ.

ಆದರೆ, ಜಲಮಂಡಳಿಯಿಂದ ಕೈಗೊಳ್ಳುವ ಕಾಮಗಾರಿಗಳಿಗೆ ಎಸ್‌ಟಿಪಿ ನೀರನ್ನೇ ಬಳಸಬೇಕು ಎಂಬ ಕುರಿತು ಮೂರು ವರ್ಷಗಳ ಹಿಂದೆಯೇ ಸುತ್ತೋಲೆ ಹೊರಡಿಸಿದ್ದರೂ, ಈವರೆಗೂ ಅದನ್ನು ಸಮರ್ಪಕವಾಗಿ ಪಾಲಿಸಲು ಮುಂದಾಗಿಲ್ಲ. ಇದರಿಂದಾಗಿ ಇಂದಿಗೂ ನಗರದ ವಿವಿಧೆಡೆ ಜಲಮಂಡಳಿ ಕೈಗೊಂಡಿರುವ ಕಾಮಗಾರಿಗಳಿಗೆ ನಿತ್ಯ ಸಾವಿರಾರು ಲೀ. ಶುದ್ಧ ನೀರು ಬಳಕೆಯಾಗುತ್ತಿದೆ.

2016ರಲ್ಲಿ ವಿಜಯ್‌ ಭಾಸ್ಕರ್‌ ಅವರು ಜಲಮಂಡಳಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಜಲಮಂಡಳಿಯ ಎಲ್ಲಾ ಕಾಮಗಾರಿಗಳಿಗೆ ಎಸ್‌ಟಿಪಿ ನೀರು ಬಳಸುವಂತೆ ಸೂಚನೆ ನೀಡಿದ್ದರು. ಈ ಕುರಿತು ಸುತ್ತೋಲೆ ಹೊರಡಿಸುವ ಜತೆಗೆ ಜಲಮಂಡಳಿಯೇ ತ್ಯಾಜ್ಯ ಸಂಸ್ಕರಣಾ ಘಟಕದ ನೀರನ್ನು ಬಳಸಿ ಇತರರಿಗೆ ಮಾದರಿಯಾಗಬೇಕು ಎಂದು ತಿಳಿಸಿದ್ದರು. ಆದರೆ, ಇಂದಿಗೂ ಜಲಮಂಡಳಿಯು ತನ್ನ ಕಾಮಗಾರಿಗಳಿಗೆ ಶುದ್ಧ ನೀರು ಬಳಸಿ, ಸಾರ್ವಜನಿಕರಿಗೆ ಮಾತ್ರ ಬಳಸುವಂತೆ ಹೇಳುತ್ತಿದೆ. ಜಲಮಂಡಳಿಯ ಈ ನಡೆಗೆ ಸಾರ್ವಜನಿಕರಿಂದ ಟೀಕೆ ವ್ಯಕ್ತವಾಗಿದೆ.

ಇನ್ನು ಮುಂದೆ ಕಡ್ಡಾಯ ಬಳಕೆಗೆ ಕ್ರಮ: “ಜಲಮಂಡಳಿ ಕಾಮಗಾರಿಗೆ ಕಡ್ಡಾಯವಾಗಿ ಎಸ್‌ಟಿಪಿ ನೀರು ಬಳಸಬೇಕು ಎಂಬ ನಿಯಮ ಇದೆ. ಆದರೆ, ಕಾಮಗಾರಿ ಸ್ಥಳಗಳಿಗೆ ಎಸ್‌ಟಿಪಿ ನೀರು ಪೂರೈಸಲು ಸೂಕ್ತ ಸೌಲಭ್ಯವಿರಲಿಲ್ಲ. ಸ್ವಂತ ವಾಹನ ಬಳಸಿ ನೀರನ್ನು ತರಿಸಿಕೊಳ್ಳಲು ಗುತ್ತಿಗೆದಾರರು ಹಿಂದೇಟು ಹಾಕುತ್ತಿದ್ದರು. ಸದ್ಯ ಜಲಮಂಡಳಿಯೇ ನೀರು ಪೂರೈಸಲು ವಾಹನ ಸೌಲಭ್ಯ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಕಡ್ಡಾಯವಾಗಿ ಎಸ್‌ಟಿಪಿ ನೀರನ್ನು ಬಳಸಲು ಕ್ರಮ ಕೈಗೊಳ್ಳಲಿದೆ. ಉಳಿದಂತೆ ಎಸ್‌ಟಿಪಿ ಇದ್ದ ಕಡೆ ನಡೆದ ಕಾಮಗಾರಿಯಲ್ಲಿ ಎಸ್‌ಟಿಪಿ ನೀರನ್ನೇ ಬಳಸಿದ್ದೇವೆ ಎಂದು ಜಲಮಂಡಳಿ ಅಧಿಕಾರಿಗಳು ಹೇಳುತ್ತಾರೆ.

ಗುತ್ತಿಗೆ ಕಂಪನಿ ಹಿಂದೇಟು: ಎಸ್‌ಟಿಪಿ ನೀರನ್ನು ಬಳಸಲು ಕಾಮಗಾರಿ ಗುತ್ತಿಗೆ ಪಡೆದ ಕಂಪನಿಗಳು ಹಿಂದೇಟು ಹಾಕುತ್ತಿವೆ ಎಂದು ಜಲಮಂಡಳಿ ಅಧಿಕಾರಿಗಳು ಹೇಳುತ್ತಾರೆ. “ಮೂರು ವರ್ಷಗಳ ಹಿಂದೆ ಕಾಮಗಾರಿಗೆ ಎಸ್‌ಟಿಪಿ ನೀರನ್ನೇ ಬಳಸಬೇಕು ಎಂದು ಸುತ್ತೋಲೆ ಹೊರಡಿಸಿದ ಸಂದರ್ಭದಲ್ಲಿ ಅಧಿಕಾರಿಗಳು ಆ ಕಾಮಗಾರಿಗಳಿಗೆ ಎಸ್‌ಟಿಪಿ ನೀರನ್ನು ನೀಡಲು ನಿರ್ಧರಿಸಿದ್ದರು. ಆದರೆ, ಆ ವೇಳೆ ಕಾಮಗಾರಿ ಗುತ್ತಿಗೆ ಪಡೆದ ಕಂಪನಿಗಳು ಹಾಗೂ ಗುತ್ತಿಗೆದಾರರು ಎಸ್‌ಟಿಪಿ ನೀರನ್ನು ಬಳಸಲು ಹಿಂದೇಟು ಹಾಕಿದ್ದರು.

ಜತೆಗೆ ಎಸ್‌ಟಿಪಿ ನೀರನ್ನು ಕಾಮಗಾರಿ ಸ್ಥಳಕ್ಕೆ ಪೂರೈಸಲು ಸೂಕ್ತ ವ್ಯವಸ್ಥೆ ಇರಲಿಲ್ಲ. ಹೀಗಾಗಿ, ಅಂದು ಎಸ್‌ಟಿಪಿ ನೀರು ಬಳಸುಲು ಸಾಧ್ಯವಾಗಿರಲಿಲ್ಲ. ಹೊಸ ಕಾಮಗಾರಿ ಆರಂಭಿಸುವ ವೇಳೆ ಗುತ್ತಿಗೆ ನೀಡುವ ಕಂಪನಿ ಜತೆ ಎಸ್‌ಟಿಪಿ ನೀರನ್ನೇ ಕಾಮಗಾರಿಗೆ ಕಡ್ಡಾಯವಾಗಿ ಬಳಸಬೇಕು ಎಂದು ಒಪ್ಪಂದ ಮಾಡಿಕೊಳ್ಳಲು ನಿರ್ಧರಿಸಲಾಯಿತು’ ಎಂದು ಜಲಮಂಡಳಿ ನಿವೃತ್ತ ಮುಖ್ಯ ಎಂಜಿನಿಯರ್‌ಗಳು ಹೇಳುತ್ತಾರೆ. ಆದರೆ, ನಂತರದ ದಿನಗಳಲ್ಲಿ ಹೊಸ ಕಾಮಗಾರಿ ವೇಳೆ ಯಾವುದೇ ಒಪ್ಪಂದ ಮಾಡಿಕೊಳ್ಳುವಲ್ಲಿ ಜಲಮಂಡಳಿ ವಿಫ‌ಲವಾಗಿದೆ.

ಸಂಸ್ಕರಿತ ನೀರು ಮಾರಾಟ ಆರಂಭ: ಎಸ್‌ಟಿಪಿ ನೀರಿನ ಬಳಕೆ ಪ್ರೋತಾಹಿಸುವ ಉದ್ದೇಶದಿಂದ ಸದ್ಯ ನೀರು ಸರಬರಾಜು ಮಾಡಲು ಜಲಮಂಡಳಿಯಲ್ಲಿ ಲಭ್ಯವಿರುವ 68 ವಾಹನಗಳ ಪೈಕಿ 10 ವಾಹನಗಳನ್ನು ಬಳಸಲು ಜಲಮಂಡಳಿ ನಿರ್ಧರಿಸಿದೆ. “ಈ ನೀರನ್ನು ಕುಡಿಯಲು ಬಳಸಬಾರದು ಎಂದು ತಿಳಿಯಲು ಕೆಂಪು ಅಥವಾ ಹಸಿರು ಬಣ್ಣದ ಸಾಗಣೆ ವಾಹನ ಬಳಸಲಾಗುತ್ತದೆ. ಸದ್ಯ ನಾಲ್ಕು ವಾಹನ ಬಳಸಲಿದ್ದು, ಮುಂದಿನ ದಿನಗಳಲ್ಲಿ ಅವಶ್ಯಕತೆ ನೋಡಿಕೊಂಡು ವಾಹನಗಳ ಸಂಖ್ಯೆ ಹೆಚ್ಚಿಸಲಾಗುವುದು. 6,000 ಲೀ. ಸಾಮರ್ಥ್ಯದ ಒಂದು ಟ್ಯಾಂಕರ್‌ಗೆ 350 ರೂ. ದರ ನಿಗದಿ ಪಡಿಸಲಾಗಿದೆ’ ಎಂದು ಜಲಮಂಡಳಿ ಅಧ್ಯಕ್ಷ ತುಷಾರ್‌ ಗಿರಿನಾಥ್‌ ತಿಳಿಸಿದ್ದಾರೆ.

ಎಸ್‌ಟಿಪಿ ಕಾಮಗಾರಿಗೂ ಶುದ್ಧ ನೀರು: ಸದ್ಯ ಜಲಮಂಡಳಿಯ ಮೆಗಾ ಸಿಟಿ ಆಪತ್ತು ನಿಧಿ ಹಾಗೂ ಅಮೃತ್‌ ಸಿಟಿ ಯೋಜನೆಯಡಿ ನಗರದಲ್ಲಿ ವಿವಿಧ ಪ್ರದೇಶಗಳಲ್ಲಿ ಸಂಗ್ರಹವಾಗುವ ಕೊಳಚೆ ನೀರನ್ನು ಸಂಗ್ರಹಿಸಿ ಆ ನೀರನ್ನು ಶುದ್ಧೀಕರಿಸಿ ನಾಲೆಗಳ ಮೂಲಕ ಹತ್ತಿರದ ಕೆರೆಗಳಿಗೆ ಹರಿಸಲು ಉದ್ದೇಶಿಸಿ ನಗರದ 9 ಪ್ರದೇಶಗಳಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ (ಎಸ್‌ಟಿಪಿ) ನಿರ್ಮಿಸುತ್ತಿದೆ. ಒಂದು ವರ್ಷದಿಂದ ಕಾಮಗಾರಿಗಳು ನಡೆಯುತ್ತಿದ್ದು, ಇಲ್ಲೆಲ್ಲಾ ಶುದ್ಧ ನೀರನ್ನೇ ಬಳಸಲಾಗುತ್ತಿದೆ.

ಪ್ರಮುಖವಾಗಿ ಸಾರಕಿ ಕೆರೆ, ಚಿಕ್ಕಬೇಗೂರು, ಉಳಿಮಾವು, ಅಗರ ಕೆರೆ, ಹೆಬ್ಬಳ ಬಳಿ ನಿರ್ಮಿಸಲಾಗುತ್ತಿರುವ ಎಸ್‌ಟಿಪಿ ಕಾಮಗಾರಿಗಳಿಗೆ ಶುದ್ಧ ನೀರನ್ನೇ ಬಳಸಲಾಗಿದೆ. ಉಳಿದಂತೆ ವೃಷಭಾವತಿ, ದೊಡ್ಡಬೆಲೆ, ಕೆ.ಆರ್‌.ಪುರದಲ್ಲಿ ನಿರ್ಮಾಣವಾಗುತ್ತಿರುವ ಎಸ್‌ಟಿಪಿ ಕಾಮಗಾರಿಯಲ್ಲೂ ಪೂರ್ಣ ಪ್ರಮಾಣದಲ್ಲಿ ಎಸ್‌ಟಿಪಿ ನೀದು ಬಳಕೆಯಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. “ಒಂದು ಎಸ್‌ಟಿಪಿ ಕಾಮಗಾರಿಗೆ ನಿತ್ಯ ಕನಿಷ್ಠ ಒಂದು ಸಾವಿರ ಲೀ. ನೀರು ಬೇಕಾಗುತ್ತದೆ. ಇಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕದ ನೀರು ಬಳಸಿದರೆ ನಿತ್ಯ ಅಂದಾಜು 10 ಸಾವಿರ ಲೀ. ಶುದ್ಧ ನೀರನ್ನು ಉಳಿಸಬಹುದಿತ್ತು’ ಎನ್ನುವುದು ಜಲತಜ್ಞರ ಅಭಿಪ್ರಾಯ.

* ಜಯಪ್ರಕಾಶ್‌ ಬಿರಾದಾರ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: ಅಕ್ಟೋಬರ್‌ನಲ್ಲಿ ನಡೆಯುವ ನಾಡಹಬ್ಬ ಮೈಸೂರು ದಸರಾಕ್ಕೆ ದೇಶ-ವಿದೇಶಿಗರನ್ನು ಆಕರ್ಷಿಸಲು ಏಪ್ರಿಲ್‌ ತಿಂಗಳಿನಿಂದ ಸಿದ್ಧತೆ ಆರಂಭಿಸಲಾಗುವುದು ಎಂದು...

  • ಬೆಂಗಳೂರು: ನಗರದಲ್ಲಿ ವಾಸವಿರುವ ಮಂಗಳಮುಖೀಯರ ಶ್ರೇಯೋಭಿವೃದ್ಧಿ ಹಾಗೂ ಅವರ ಜೀವನಮಟ್ಟ ಸುಧಾರಿಸುವ ಉದ್ದೇಶದಿಂದ ಕಳೆದ ಮೂರು ವರ್ಷಗಳಿಂದ ಪಾಲಿಕೆಯ ಬಜೆಟ್‌ನಲ್ಲಿ...

  • ಬೆಂಗಳೂರು: ಒತ್ತಡ ನಿವಾರಣೆಗಾಗಿ ಈಶಾನ್ಯ ಪೊಲೀಸರಿಗೆ ಮೂರುದಿನಗಳ ಕಾಲ "ಜುಂಬಾ' ನೃತ್ಯ ತರಬೇತಿ ನೀಡಿದ್ದು ಪೊಲೀಸ್‌ ಸಿಬ್ಬಂದಿ ಕುಣಿದು ಕುಪ್ಪಳಿಸಿರುವ ವಿಡಿಯೋ...

  • ಬೆಂಗಳೂರು: ಆಸ್ಪತ್ರೆ ಪಕ್ಕದಲ್ಲಿಯೇ ನಡೆಯುವ ಸಂತೆಗೆ ನಿತ್ಯ ಸಹಸ್ರಾರು ಜನ ಬರುತ್ತಾರೆ. ಆ ಪೈಕಿ ಬಹುತೇಕರು ಆಸ್ಪತ್ರೆ ಆವರಣದಲ್ಲಿ ವಾಹನ ನಿಲ್ಲಿಸಿ ಸಂತೆಗೆ...

  • ಬೆಂಗಳೂರು: ಆಂಧ್ರಪ್ರದೇಶ ಮೂಲದ ಸಾಫ್ಟ್ವೇರ್‌ ಎಂಜಿನಿಯರ್‌ ಲಕ್ಷ್ಮಣ್‌ಕುಮಾರ್‌ (33) ಕೊಲೆ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿರುವ ಮಹದೇವಪುರ ಠಾಣೆ ಪೊಲೀಸರು,...

ಹೊಸ ಸೇರ್ಪಡೆ