ಹಳೇ ದಂಡ; ಹೊಸ ಗೊಂದಲ

Team Udayavani, Jul 23, 2019, 3:10 AM IST

ಬೆಂಗಳೂರು: ಇಂದಿರಾನಗರದ ಮಹೇಶ್‌ ತಿಂಗಳ ಹಿಂದೆ ಬೈಕ್‌ನಲ್ಲಿ ಹೋಗುವಾಗ ಸಿಗ್ನಲ್‌ ಜಂಪ್‌ ಮಾಡಿದ್ದರು. ಆಗ ಈ ನಿಯಮ ಉಲ್ಲಂಘನೆಗೆ ಇದ್ದ ದಂಡದ ಮೊತ್ತ 100 ರೂ. ಆದರೆ, ಕಳೆದೆರಡು ದಿನಗಳಿಂದ ಆ ಮೊತ್ತ ಹತ್ತುಪಟ್ಟು ಆಗಿದೆ. ಹಾಗಿದ್ದರೆ, ಈಗ ಅವರು ಪಾವತಿಸಬೇಕಾದ ದಂಡ ಎಷ್ಟು? ಅಷ್ಟಕ್ಕೂ ಪರಿಷ್ಕೃತ ದಂಡ ಸ್ವೀಕಾರಕ್ಕೆ ಸಂಚಾರ ಪೊಲೀಸರು ಸಿದ್ಧವಾಗಿದ್ದಾರೆಯೇ? ದಂಡ ನಿಗದಿಪಡಿಸುವ ಪಿಡಿಎ ಯಂತ್ರದ ಸಾಫ್ಟ್ವೇರ್‌ ಅಪ್‌ಡೇಟ್‌ ಆಗಿದೆಯೇ?

ಮಹೇಶ್‌ ಅವರದ್ದು ಒಂದು ಉದಾಹರಣೆ ಅಷ್ಟೇ. ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣಗಳಿಗೆ ದಂಡದ ಪ್ರಮಾಣವನ್ನು ಸಾಕಷ್ಟು ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೇ ಸಾವಿರಾರು ವಾಹನ ಸವಾರರಲ್ಲಿ ಈ ಪ್ರಶ್ನೆಗಳು ಎದ್ದಿವೆ. ಆದರೆ, ಇವುಗಳ ಬಗ್ಗೆ ಸಂಚಾರ ಪೊಲೀಸರಲ್ಲೇ ಗೊಂದಲ ಇದೆ! ಮದ್ಯ ಸೇವಿಸಿ ವಾಹನ ಚಾಲನೆ ಹೊರತುಪಡಿಸಿ (ಕೋರ್ಟ್‌ನಲ್ಲಿ ಪಾವತಿಸಬೇಕು) ನಿಷೇಧಿತ ಪ್ರದೇಶದಲ್ಲಿ ವಾಹನ ನಿಲುಗಡೆ, ತ್ರಿಬಲ್‌ ರೈಡಿಂಗ್‌, ಚಾಲನಾ ಪರವಾನಗಿ, ವಿಮೆ ಇಲ್ಲದಿರುವುದು, ಸಿಗ್ನಲ್‌ ಜಂಪ್‌ ಮಾಡುವುದು ಸೇರಿದಂತೆ ಲಕ್ಷಾಂತರ ಉಲ್ಲಂಘನೆ ಪ್ರಕರಣಗಳಲ್ಲಿ ಇನ್ನೂ ದಂಡ ಪಾವತಿ ಆಗಿಲ್ಲ.

ಬೆಂಗಳೂರಿನ ಎಲ್ಲ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಸುಮಾರು 23 ಸಾವಿರಕ್ಕೂ ಹೆಚ್ಚು ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗುತ್ತಿದ್ದು, ಶೇ.90ರಷ್ಟು ಮಂದಿ ಸ್ಥಳದಲ್ಲೇ ದಂಡ ಪಾವತಿಸುತ್ತಿದ್ದಾರೆ. ಆದರೆ, ಸಿಗ್ನಲ್‌ ಜಂಪ್‌ ಹಾಗೂ ಇತರೆ ನಿಯಮ ಉಲ್ಲಂಘನೆ ಮಾಡಿ ಪರಾರಿಯಾದ ವಾಹನ ಚಾಲಕರ ವಿರುದ್ಧ ಘಟನಾ ಸ್ಥಳದ ಸಿಸಿಕ್ಯಾಮೆರಾ ಹಾಗೂ ಸಿಬ್ಬಂದಿ ಮಾಹಿತಿ ಆಧರಿಸಿ ನಿಗದಿತ ವಾಹನದ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ.

ಅಂತಹ ವಾಹನ ಮಾಲೀಕರ ವಿರುದ್ಧ ನೋಟಿಸ್‌ ಜಾರಿ ಮಾಡುತ್ತಿದ್ದು, ಕೆಲವೊಮ್ಮೆ ನೇರವಾಗಿ ಮನೆಗೇ ನೋಟಿಸ್‌ ತಲುಪಿಸಲಾಗುತ್ತಿದೆ. ಆದರೂ ಕೆಲವರು ದಂಡ ಕಟ್ಟುತ್ತಿಲ್ಲ. ಹೀಗಾಗಿ ನೆರೆ ಜಿಲ್ಲೆಗಳ ಸ್ಥಳೀಯ ಸಂಚಾರ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಬೆಂಗಳೂರಿನಲ್ಲಿ ದಂಡ ಸಂಗ್ರಹಿಸುವ ಪಿಡಿಎ ಯಂತ್ರಕ್ಕೆ ವಾಹನಗಳ ನಂಬರ್‌ಗಳನ್ನು ಅಪ್‌ಡೇಟ್‌ ಮಾಡಲಾಗುತ್ತಿದೆ. ಹೀಗಾಗಿ ಈ ಹಿಂದೆ ನಿಯಮ ಉಲ್ಲಂಘಿಸಿ ದಂಡ ಪಾವತಿಸದೆ, ಮುಂದೆ ಸಿಕ್ಕಿಬಿದ್ದರೆ ಪರಿಷ್ಕೃತ ದರ ಕಟ್ಟಬೇಕೋ ಅಥವಾ ಹಳೇ ದಂಡದ ಮೊತ್ತ ತೆರಬೇಕೋ ಎಂಬ ಪ್ರಶ್ನೆ ವಾಹನ ಸವಾರರನ್ನು ಕಾಡುತ್ತಿದೆ.

ವಾಹನ ಸವಾರರ ಗೊಂದಲಕ್ಕೆ ಸ್ಪಷ್ಟನೆ ನೀಡಿರುವ ಸಂಚಾರ ವಿಭಾಗದ ಹಿರಿಯ ಪೊಲೀಸರು, “ಜುಲೈ 20ರಿಂದ ಮಾತ್ರ ಹೊಸ ದರ ಅನ್ವಯ ಆಗಲಿದ್ದು, ಈ ಹಿಂದಿನ ಎಲ್ಲ ರೀತಿಯ ಉಲ್ಲಂಘನೆಗೆ ಹಳೇಯ ದಂಡವನ್ನೇ ಪಾವತಿಸಬೇಕು. ಅದರಲ್ಲಿ ಯಾವುದೇ ವ್ಯತ್ಯಾಸ ಇಲ್ಲ. ಗೊಂದಲವೂ ಇಲ್ಲ’. ಉದಾಹರಣೆಗೆ ಜುನ್‌ ಅಥವಾ ಜುಲೈ 19ರೊಳಗೆ ರಾಂಗ್‌ ಪಾರ್ಕಿಂಗ್‌ ಮಾಡಿ ದಂಡ ಪಾವತಿಸದೆ ತಲೆಮರೆಸಿಕೊಂಡು, ಜುಲೈ 20 ರಂದು ಮತ್ತೂಮ್ಮೆ ಉಲ್ಲಂಘಿಸಿ ಸಂಚಾರ ಪೊಲೀಸರ ಕೈಗೆ ಸಿಕ್ಕಿಬಿದ್ದರೆ, ಹಳೇ ಉಲ್ಲಂಘನೆಗೆ 100 ರೂ. ಹಾಗೂ ಹೊಸ ಉಲ್ಲಂಘನೆಗೆ ಸಾವಿರ ರೂ. ಸೇರಿ 1,100 ರೂ. ಪಾವತಿಸಬೇಕು ಎಂದು ಹೇಳಿದರು.

ಸಾಫ್ಟ್ವೇರ್‌ ಅಪ್‌ಡೇಟ್‌ ಆಗಿಲ್ಲ: ಈ ಮಧ್ಯೆ ದಂಡ ಸಂಗ್ರಹಕ್ಕೆ ಬಳಸುವ ಪಿಡಿಎ(ಪರ್ಸನಲ್‌ ಡಿಜಿಟಲ್‌ ಅಸಿಸ್‌ಟೆನ್ಸ್‌)ಯಂತ್ರದ ಸಾಫ್ಟ್ವೇರ್‌ ಅಪ್‌ಡೇಟ್‌ ಆಗದ ಕಾರಣ ಜುಲೈ 20ರಿಂದಲೂ ಹಳೇ ದಂಡವನ್ನು ಸಂಗ್ರಹಿಸಲಾಗುತ್ತಿದೆ. ರಾಜ್ಯ ಸರ್ಕಾರ ಜುನ್‌ 25ರಂದು ಪರಿಷ್ಕೃತ ದರದ ಅಧಿಸೂಚನೆ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಸಂಚಾರ ಪೊಲೀಸರು ವಾಹನ ಸವಾರರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಪಿಡಿಎ ಸಾಫ್ಟ್ವೇರ್‌ ಅಪ್‌ಡೇಟ್‌ ಮಾಡಿಕೊಳ್ಳುವ ಸಲುವಾಗಿ ಜುಲೈ 20ರಿಂದ ಹೊಸ ದರ ಅನ್ವಯ ಆಗಲಿದೆ ಎಂದು ಹೇಳದ್ದರು. ಆದರೂ ಇದುವರೆಗೂ ಸಾಫ್ಟ್ವೇರ್‌ ಅಪ್‌ಡೇಟ್‌ ಆಗಿಲ್ಲ.

ಬಹಳ ದಿನಗಳ ಹಿಂದೆಯೇ ಸಾಫ್ಟ್ವೇರ್‌ ಅಪ್‌ಡೇಟ್‌ ಮಾಡಲಾಗಿದೆ. ಆದರೆ, ತಾಂತ್ರಿಕ ಕಾರಣಗಳಿಂದ ಪಿಡಿಎ ಯಂತ್ರ ಅದಕ್ಕೆ ಸ್ಪಂದಿಸುತ್ತಿಲ್ಲ. ಹೊಸ ಮೊತ್ತ ಉಲ್ಲೇಖೀಸಿದರೆ ರಿಜಕ್ಟ್ ಆಗುತ್ತಿದೆ. ಹೀಗಾಗಿ ಹಳೇ ಮೊತ್ತವನ್ನೇ ಸಂಗ್ರಹಿಸುತ್ತಿದ್ದು, ಅದನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಸದ್ಯದಲ್ಲೇ ಸಾಪ್ಟ್ವೇರ್‌ ಅಪ್‌ಡೇಟ್‌ ಮಾಡಲಾಗುವುದು ಎಂದು ಸಂಚಾರ ಪೊಲೀಸರು ತಿಳಿಸಿದರು.

ಸರ್ಕಾರದ ಬೊಕ್ಕಸಕ್ಕೆ ಭಾರೀ ನಷ್ಟ: ಹೊಸ ನಿಯಮದ ಪ್ರಕಾರ ಶೇ.100ರಷ್ಟು ದಂಡದ ಮೊತ್ತ ಹೆಚ್ಚಳ ಮಾಡಲಾಗಿದೆ. ಈ ಹಿಂದೆ ಚಾಲನಾ ಪರವಾನಗಿ ಇಲ್ಲದೆ ಚಾಲನೆ ಮಾಡಿದರೆ 100 ರೂ. ಪಾವತಿಸಬೇಕಿತ್ತು. ಆದರೆ, ಪರಿಷ್ಕೃತ ದರದ ಪ್ರಕಾರ 1000 ರೂ. ಕಟ್ಟಬೇಕು. ಆದರೆ, ಸಾಫ್ಟ್ವೇರ್‌ ಅಪ್‌ಡೇಟ್‌ ಆಗದ ಕಾರಣ ಪ್ರತಿನಿತ್ಯ ದಾಖಲಾಗುವ ಸುಮಾರು 23 ಸಾವಿರ ಪ್ರಕರಣಗಳಿಗೆ 2 ಕೋಟಿ ರೂ.ಗೂ ಅಧಿಕ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿದೆ ಎಂದು ಅಂದಾಜಿಸಲಾಗಿದೆ.

ಸಂಚಾರ ಪೊಲೀಸರಿಗೂ ಗೊಂದಲ – ಸವಾರರ ಜತೆ ವಾಗ್ವಾದ: ಸಂಚಾರ ಪೊಲೀಸರ ಪ್ರಕಾರ ಸುಮಾರು 30ಕ್ಕೂ ಹೆಚ್ಚು ನಿಯಮ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿಕೊಳ್ಳಬಹುದು. ಆದರೆ, ಈ ಪ್ರಕರಣ ಪೈಕಿ ಯಾವುದಕ್ಕೆ ಪರಿಷ್ಕೃತ ದಂಡ ವಿಧಿಸಬೇಕು, ಯಾವುದಕ್ಕೆ ಹಳೇ ದಂಡ ಹಾಕಬೇಕು ಎಂಬ ಗೊಂದಲ ಸಂಚಾರ ಪೊಲೀಸರಲ್ಲೇ ಉಂಟಾಗಿದೆ. ಮತ್ತೂಂದೆಡೆ ನಿಯಮ ಉಲ್ಲಂಘನೆ ಮಾಡುತ್ತಿದ್ದಂತೆ ವಾಹನ ಸವಾರರನ್ನು ತಡೆದು ದಂಡ ಕಟ್ಟುವಂತೆ ಹೇಳುವ ಸಂಚಾರ ಪೊಲೀಸರ ಮೇಲೆ ಕೆಲ ವಾಹನ ಸವಾರರು ವಾಗ್ವಾದಕ್ಕೆ ಮುಂದಾದ ಘಟನೆಗಳು ಕಳೆದೆರಡು ದಿನಗಳಲ್ಲಿ ನಗರದಲ್ಲಿ ನಡೆದಿವೆ.

ಪರಿಷ್ಕೃತ ದರದ ಬಗ್ಗೆ ಮಾಹಿತಿ ಇಲ್ಲದ ವಾಹನ ಸವಾರರು ಈ ರೀತಿಯ ವರ್ತನೆ ತೋರುತ್ತಿದ್ದು, ಸರ್ಕಾರ ಹಾಗೂ ಸಂಚಾರ ವಿಭಾಗದಿಂದ ಹೊರಡಿಸಿರುವ ಹೊಸ ಆದೇಶವನ್ನು ತೋರಿಸಿದ ಬಳಿ ಸುಮ್ಮನಾಗುತ್ತಿದ್ದಾರೆ. ಮತ್ತೂಂದೆಡೆ ಸಾಫ್ಟ್ವೇರ್‌ ಅಪ್‌ಡೇಟ್‌ ಆಗದಿರುವುದು ದೊಡ್ಡ ತಲೆನೋವಾಗಿದೆ ಎನ್ನುತ್ತಾರೆ ಸಂಚಾರ ಪೊಲೀಸರು.

ಜುಲೈ 20ರಿಂದ ಮಾತ್ರ ಹೊಸ ಪರಿಷ್ಕೃತ ದರ ಅನ್ವಯ ಆಗಲಿದೆ. ಈ ಹಿಂದಿನ ಉಲ್ಲಂಘನೆಗೆ ಹಳೇ ಮೊತ್ತವನ್ನೇ ಪಾವತಿಸಬೇಕು. ಇದರಲ್ಲಿ ಯಾವುದೇ ಗೊಂದಲ ಇಲ್ಲ.
-ಪಿ.ಹರಿಶೇಖರನ್‌, ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ

* ಮೋಹನ್‌ ಭದ್ರಾವತಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಕೆಂಗೇರಿ: ನಗರದಲ್ಲಿ ಹೆಚ್ಚುತ್ತಿರುವ ಪಿಒಪಿ ಗಣೇಶಮೂರ್ತಿ ತಯಾರಿಕೆ ಘಟಕಗಳ ಮೇಲೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ.ಕೆ.ಸುಧಾಕರ್‌ ಅವರ...

  • ಬೆಂಗಳೂರು: ನಗರ ಪೊಲೀಸ್‌ ಆಯುಕ್ತರ ಹುದ್ದೆ ವಿಚಾರದಲ್ಲಿ ಇಬ್ಬರು ಹಿರಿಯ ಐಪಿಎಸ್‌ ಅಧಿಕಾರಿಗಳ ಕಾನೂನು ಸಂಘರ್ಷ ಅಂತ್ಯಗೊಂಡಿದೆ. ಎಡಿಜಿಪಿ ಭಾಸ್ಕರ್‌ ರಾವ್‌...

  • ಬೆಂಗಳೂರು: ಕಬ್ಬನ್‌ ಉದ್ಯಾನ ಮತ್ತು ಲಾಲ್‌ಬಾಗ್‌ ನಗರದ ಎರಡು ಶ್ವಾಸಕೋಶಗಳು. ಆದರೆ, ಕಬ್ಬನ್‌ ಪಾರ್ಕ್‌ ವಾಹನ ನಿಲುಗಡೆ ತಾಣವಾಗಿ ಮಾರ್ಪಡುತ್ತಿದ್ದು, ಪರಿಸರ...

  • ಬೆಂಗಳೂರು: ನಗರದಲ್ಲಿ ಕಾವೇರಿ ನೀರಿನ ಅವಲಂಬನೆ ಕಡಿಮೆ ಮಾಡಿ ಮಳೆನೀರು ಸಂಗ್ರಹ ಹಾಗೂ ಬಳಕೆ ಹೆಚ್ಚಿಸಲು ಜಲಮಂಡಳಿ ಮುಂದಾಗಿದೆ. ಇದಕ್ಕಾಗಿ ಕಟ್ಟಡಗಳ ಮಳೆ ನೀರು...

  • ಬೆಂಗಳೂರು: ವೈಜ್ಞಾನಿಕ ಕಸ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಚಿಂದಿ ಆಯುವವರಿಗೂ ಗುರುತಿನ ಚೀಟಿ ನೀಡಿ ಒಣ ಕಸ ಸಂಗ್ರಹಿಸಲು ಅವಕಾಶ ಮಾಡಿಕೊಡಲು ಬಿಬಿಎಂಪಿ ನಿರ್ಧರಿಸಿದೆ....

ಹೊಸ ಸೇರ್ಪಡೆ