ಸಹೋದ್ಯೋಗಿಯ ಕೊಂದಿದ್ದ ಆರೋಪಿ ಸೆರೆ

Team Udayavani, Apr 16, 2019, 3:00 AM IST

ಬೆಂಗಳೂರು: ಮರ್ಯಾದೆ ಕೊಡುತ್ತಿಲ್ಲ ಎಂಬ ಕಾರಣಕ್ಕೆ ಸಹೋದ್ಯೋಗಿಯ ಗುಪ್ತಾಂಗ ಹಾಗೂ ಗುದದ್ವಾರಕ್ಕೆ ಬಾಟಲಿ ಹಾಗೂ ಕಬ್ಬಿಣದ ರಾಡ್‌ನಿಂದ ಇರಿದು ಬರ್ಬರವಾಗಿ ಹತ್ಯೆಗೈದಿದ್ದ ಆರೋಪಿಯನ್ನು ನಾಲ್ಕು ತಿಂಗಳ ಬಳಿಕ ಮಹಾಲಕ್ಷ್ಮೀ ಲೇಔಟ್‌ ಪೊಲೀಸರು ಬಂಧಿಸಿದ್ದಾರೆ.

ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ಮನೋಹರ್‌ ಪ್ರೇಮ್‌ಚಂದ್‌ ವರ್ಮಾ (33) ಬಂಧಿತ. ಆರೋಪಿ ಜ.15ರಂದು ಉತ್ತರಪ್ರದೇಶದ ಗೋರಕ್‌ಪುರ ಮೂಲದ ರಮೇಶ್‌ (33) ಎಂಬಾತನನ್ನು ಕೊಂದು ಪರಾರಿಯಾಗಿದ್ದ.

ಲಗ್ಗೆರೆಯಲ್ಲಿನ ಶೃಂಗಾರ್‌ ಇಂಟೀರಿಯರ್‌ ಡೆಕೋರೆಟರ್ಸ್‌ ಸಂಸ್ಥೆಯಲ್ಲಿ ರಮೇಶ್‌, ಉತ್ತರ ಪ್ರದೇಶದ ಗೌತಮ್‌, ರಾಮು, ಕೃಷ್ಣ ಹಾಗೂ ಆರೋಪಿ ಮನೋಹರ್‌ ಜತೆ ಪೇಂಟಿಂಗ್‌ ಕೆಲಸ ಮಾಡುತ್ತಿದ್ದ. ಹೀಗಾಗಿ ಎಲ್ಲರೂ ಮಾಲೀಕ ಲೋಕೇಶ್‌ ಅವರಿಗೆ ಸೇರಿದ ಲಗ್ಗೆರೆಯ ಕೆಂಪೇಗೌಡ ಲೇಔಟ್‌ನ ಮನೆಗಳಲ್ಲಿ ವಾಸವಿದ್ದರು.

ಗುಪ್ತಾಂಗ, ಗುದದ್ವಾರಕ್ಕೆ ಇರಿತ: ಜ.15ರಂದು ಸಂಕ್ರಾಂತಿ ಹಬ್ಬವಿದ್ದ ಕಾರಣ ಮೂರು ದಿನ ಕೆಲಸಕ್ಕೆ ರಜೆ ಇತ್ತು. ಹೀಗಾಗಿ ಎಲ್ಲರೂ ತಮ್ಮ ಕೊಠಡಿಯಲ್ಲೇ ಉಳಿದುಕೊಂಡಿದ್ದರು. ಈ ನಡುವೆ ಆರೋಪಿ ಮನೋಹರ್‌, ಮದ್ಯದ ಬಾಟಲಿಗಳ ಸಮೇತ ರಮೇಶ್‌ ಕೂಠಡಿಗೆ ಹೋಗಿದ್ದಾನೆ.

ಇಬ್ಬರೂ ಕಂಠಪೂರ್ತಿ ಮದ್ಯ ಸೇವಿಸಿದ್ದಾರೆ. ಆಗ ರಮೇಶ್‌ ಮದ್ಯದ ಅಮಲಿನಲ್ಲಿ ಮನೋಹರ್‌ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈ ವೇಳೆ ಕೋಪಗೊಂಡ ಆರೋಪಿ, ಮದ್ಯದ ಬಾಟಲಿಯಿಂದ ರಮೇಶನ ಗುಪ್ತಾಂಗ ಹಾಗೂ ಪಕ್ಕೆಗೆ ಐದಾರು ಬಾರಿ ಇರಿದಿದ್ದಾನೆ.

ನಂತರ, ಕಬ್ಬಿಣ ರಾಡ್‌ನಿಂದ ಆತನ ಗುದದ್ವಾರಕ್ಕೆ ನಾಲ್ಕೈದು ಬಾರಿ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ರಮೇಶ್‌ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಜ.18ರಂದು ಮಾಲೀಕ ಲೋಕೇಶ್‌, ರಮೇಶ್‌ಗೆ ನಾಲ್ಕೈದು ಬಾರಿ ಕರೆ ಮಾಡಿದ್ದು, ಆತ ಸ್ವೀಕರಿಸಿಲ್ಲ.

ಅನುಮಾನಗೊಂಡು ಕೊಠಡಿ ಬಳಿ ಹೋದಾಗ ಕೊಳೆತ ವಾಸನೆ ಬರುತ್ತಿತ್ತು. ಕೂಡಲೇ ಲೋಕೇಶ್‌, ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ತೆರಳಿದ ಪೊಲೀಸರು ಬಾಗಿಲು ಒಡೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ನಂತರ ರಮೇಶ್‌ ಜತೆ ಕೆಲಸ ಮಾಡುತ್ತಿದ್ದ ಗೌತಮ್‌, ರಾಮು ಹಾಗೂ ಇತರರನ್ನು ವಿಚಾರಿಸಿದಾಗ ಮನೋಹರ್‌ ಬಗ್ಗೆ ಹೇಳಿಕೆ ನೀಡಿದ್ದರು.

ಅಷ್ಟರಲ್ಲಿ ಆರೋಪಿ, ಉತ್ತರಪ್ರದೇಶ, ಮುಂಬೈನ ಬೇರೆ ಬೇರೆ ಕಡೆಗಳಲ್ಲಿ ಕೆಲಸ ಮಾಡಿಕೊಂಡು ತಲೆಮರೆಸಿಕೊಂಡಿದ್ದ. ಕೊನೆಗೆ ಕೆಲ ದಿನಗಳ ಹಿಂದೆ ಬೆಂಗಳೂರಿಗೆ ಬಂದಾಗ ಖಚಿತ ಮಾಹಿತಿ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ.

“ಕೆಲಸದ ಸಂದರ್ಭದಲ್ಲಿ ರಮೇಶ್‌ ನನಗೆ ಮರ್ಯಾದೆ ಕೊಡುತ್ತಿರಲಿಲ್ಲ. ಅವಾಚ್ಯವಾಗಿ ನಿಂದಿಸುತ್ತಿದ್ದ. ಅನಗತ್ಯವಾಗಿ ಜಗಳ ಮಾಡುತ್ತಿದ್ದುದರಿಂಧ ಕೊಂದೆ’ ಎಂದು ಆರೋಪಿ ಮನೋಹರ್‌ ಹೇಳಿಕೆ ನೀಡಿರುವುದಾಗಿ ಪೊಲೀಸರು ಹೇಳಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ