ನೀವು ನಿಂತ ನೆಲದಡಿಯೇ ಆಗುತ್ತಿದೆ ಸ್ಫೋಟ!

Team Udayavani, Nov 5, 2019, 3:10 AM IST

ಚಿತ್ರ: ಫ‌ಕ್ರುದ್ದೀನ್‌ ಎಚ್‌.

ಬೆಂಗಳೂರು: ವಾರದ ಹಿಂದೆ ದೀಪಾವಳಿಯಲ್ಲಿ ಹೊಡೆದ ಪಟಾಕಿ ಸದ್ದಿಗೇ ನಗರದ ಕೆಲವು ಪ್ರದೇಶಗಳು ನಲುಗಿದವು. ಸ್ಥಳೀಯರ ಕಿವಿಗಳು ಗಡಚಿಕ್ಕಿದವು. ಶಬ್ದಮಾಲಿನ್ಯ ಪ್ರಮಾಣ ಆ ಭಾಗಗಳಲ್ಲಿ ದುಪ್ಪಟ್ಟಾಗಿತ್ತು. ಆದರೆ, ಕಂಟೋನ್ಮೆಂಟ್‌ನಲ್ಲಿಯ ಜನರ ಕಾಲ ಕೆಳಗಿನ ನೆಲದಲ್ಲೇ ನಿತ್ಯ ಸ್ಫೋಟಗಳು ನಡೆಯುತ್ತಿವೆ. ಆದರೆ, ಅದರ ಸದ್ದಾಗಲಿ ಅಥವಾ ಸುಳಿವಾಗಲಿ ಅಲ್ಲಿಲ್ಲ!

“ನಮ್ಮ ಮೆಟ್ರೋ’ ಎರಡನೇ ಹಂತದ ಯೋಜನೆಯ ಗೊಟ್ಟಿಗೆರೆ-ನಾಗವಾರ ನಡುವೆ ಬರುವ ಸುರಂಗ ನಿಲ್ದಾಣದ ನಿರ್ಮಾಣಕ್ಕಾಗಿ ಕಳೆದ ಒಂದೂವರೆ ತಿಂಗಳಿಂದ ಸ್ಫೋಟ ಕಾರ್ಯ ನಡೆಯುತ್ತಿದೆ. ಆದರೆ, ಆ ಸ್ಫೋಟದ ಶಬ್ದ ಕೇವಲ 200-300 ಮೀಟರ್‌ ದೂರದಲ್ಲಿರುವ ನಿವಾಸಿಗಳಿಗೂ ಕೇಳುತ್ತಿಲ್ಲ. ಅಷ್ಟೇ ಅಲ್ಲ, ಅದರ ಪರಿಣಾಮವೂ ಯಾರಿಗೂ ಗೊತ್ತಾಗುತ್ತಿಲ್ಲ. ಇದಕ್ಕೆ ಕಾರಣ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ಅನುಸರಿಸುತ್ತಿರುವ ಅತ್ಯಾಧುನಿಕ ವಿಧಾನ.

ಟನೆಲ್‌ ಬೋರಿಂಗ್‌ ಮಷಿನ್‌ (ಟಿಬಿಎಂ)ನಿಂದ ಸುರಂಗ ಕೊರೆಯಲಾಗುತ್ತದೆ. ಆದರೆ, 20 ಮೀಟರ್‌ ಆಳದ ನೂರಾರು ಮೀಟರ್‌ ಅಗಲದ ನಿಲ್ದಾಣವನ್ನು ನಿರ್ಮಿಸಲು ದೊಡ್ಡ ಪ್ರಮಾಣದಲ್ಲಿ ನೆಲವನ್ನು ಅಗೆಯಬೇಕಾಗುತ್ತದೆ. ಸಾಮಾನ್ಯವಾಗಿ ಎಸ್ಕೆವೇಟರ್‌ನಿಂದ ಈ ಕೆಲಸ ಮಾಡಬಹುದು. ಆದರೆ, ಬೆಂಗಳೂರಿನ ಅದರಲ್ಲೂ ಕಂಟೋನ್‌ಮೆಂಟ್‌ ಸುತ್ತಲಿನ ಭೂಮಿಯು ಗಟ್ಟಿ ಶಿಲೆಯಿಂದ ಕೂಡಿದೆ. ಹಾಗಾಗಿ ರಾಸಾಯನಿಕ ಅಂಶಗಳಿರುವ ಯಂತ್ರಗಳನ್ನು ಬಳಸಿ, ಬಂಡೆಗಳನ್ನು ಕತ್ತರಿಸಿ ಪುಡಿ ಮಾಡಬೇಕಾಗುತ್ತದೆ. ಇದಕ್ಕೆ ಕಂಟ್ರೋಲ್‌ ಬ್ಲಾಸ್ಟಿಂಗ್‌ ಅಂದರೆ “ನಿಯಂತ್ರಿತ ಸ್ಫೋಟಕ’ ವಿಧಾನ ಎನ್ನುತ್ತಾರೆ.

ಸ್ಫೋಟಿಸುವುದು ಹೀಗೆ: ಒಂದು ನಿರ್ದಿಷ್ಟ ಜಾಗದ ಶಿಲೆಯನ್ನು ಗುರುತಿಸಲಾಗುತ್ತದೆ. ಅದರ ಮೇಲೆ ನಿರ್ದಿಷ್ಟ ಅಂತರದಲ್ಲಿ 2 ಇಂಚು ಸುತ್ತಳತೆಯ ರೋಟರಿ ಡ್ರಿಲ್‌ನಿಂದ 30ಕ್ಕೂ ಅಧಿಕ ರಂಧ್ರಗಳನ್ನು ಕೊರೆಯಲಾಗುತ್ತದೆ. ಅವುಗಳಲ್ಲಿ 50-100 ಗ್ರಾಂ.ನಷ್ಟು ರಾಸಾಯನಿಕ ಅಂಶದಿಂದ ಕೂಡಿದ ಕ್ಯಾಪುÕಲ್‌ (ಗುಳಿಗೆ)ಗಳನ್ನು ಹಾಕಲಾಗುತ್ತದೆ. ಅದಕ್ಕೆ ಡೆಟೋನೇಟರ್‌ ಸಿಕ್ಕಿಸಿ, ಎಲೆಕ್ಟ್ರಿಕ್‌ ವೈರ್‌ಗಳನ್ನು ಜೋಡಿಸಲಾಗುತ್ತದೆ. ಅಲ್ಲಿಂದ ಸುಮಾರು 50 ಮೀಟರ್‌ ದೂರದಿಂದ ರಿಮೋಟ್‌ ಗುಂಡಿ ಒತ್ತುವ ವ್ಯವಸ್ಥೆ ಮಾಡಲಾಗುತ್ತದೆ.

ಹಾಗೊಂದು ವೇಳೆ, ಈ ಹಂತದಲ್ಲೇ ಸ್ಫೋಟಿಸಿದರೆ, 50 ಮೀಟರ್‌ನಷ್ಟು ಮೇಲೆ ಹಾಗೂ 200-300 ಮೀಟರ್‌ನಷ್ಟು ದೂರದಲ್ಲಿ ಕಲ್ಲಿನ ಚೂರುಗಳು ಸಿಡಿಯುವ ಸಾಧ್ಯತೆ ಇರುತ್ತದೆ. ಆದ್ದರಿಂದ ಗುಳಿಗೆಗಳನ್ನು ತುಂಬಿದ ರಂಧ್ರಗಳ ಮೇಲೆ ಮರಳಿನ ಭಾರವಾದ ಚೀಲಗಳನ್ನು ಜೋಡಿಸಲಾಗುತ್ತದೆ. ಅದರ ಮೇಲೆ ಕಬ್ಬಿಣದ ಚೂರುಗಳು ಹೊರಬರದಂತೆ ಸಣ್ಣ ರಂಧ್ರಗಳಿಂದ ಕೂಡಿದ ಜಾಲರಿಯನ್ನು ಹೊದಿಸಲಾಗುತ್ತದೆ. ಆಮೇಲೆ ಅತ್ಯಂತ ಭಾರವಾದ ರಬರ್‌ ಚಾಪೆ ಜೋಡಿಸಲಾಗುತ್ತದೆ. ಈ ರಬ್ಬರ್‌ ಚಾಪೆ ಎಷ್ಟು ಭಾರವಾಗಿರುತ್ತದೆ ಎಂದರೆ ಒಂದು ಚದರ ಮೀಟರ್‌ 300 ಕೆಜಿ ತೂಗುತ್ತದೆ! ಇದರಿಂದ ಶಬ್ಧ ಉಂಟಾಗುವುದಿಲ್ಲ ಎಂದು ತಂತ್ರಜ್ಞರೊಬ್ಬರು “ಉದಯವಾಣಿ’ಗೆ ವಿವರಿಸಿದರು.

ಕಂಪನಗಳ ಮಾಪನ: ಅಂದಹಾಗೆ ಎಲ್ಲ 30 ರಂಧ್ರಗಳಿಂದ ಒಮ್ಮೆಲೆ ಸ್ಫೋಟಗೊಳ್ಳುವುದಿಲ್ಲ. ಪ್ರತಿ ಸ್ಫೋಟದ ನಡುವೆ 20 ಮಿಲಿ ಸೆಕೆಂಡ್‌ (1 ಸೆಕೆಂಡ್‌ನ‌ಲ್ಲಿ ಸಾವಿರ ಭಾಗ ಮಾಡಿ, ಅದರಲ್ಲಿನ 20 ಭಾಗಗಳು) ಅಂತರ ಇರುತ್ತದೆ. ಅಲ್ಲದೆ, ಈ ಸ್ಫೋಟ ಕಾರ್ಯ ನಡೆಯುವ ಜಾಗದಿಂದ ಹತ್ತಿರ ಇರುವ ಎರಡು-ಮೂರು ಕಟ್ಟಡಗಳಲ್ಲಿ ಸಿಸ್ನೋಗ್ರಾಫ್ ಅಳವಡಿಸಲಾಗಿರುತ್ತದೆ. ಅದು ಭೂಕಂಪನವನ್ನು ಅಳೆಯುವ ರಿಕ್ಟರ್‌ ಮಾಪಕದ ಮಾದರಿಯಾಗಿದೆ.

ಅದರಲ್ಲಿ ಸ್ಫೋಟದ ತೀವ್ರತೆ ಪಿಪಿವಿ (ಪೀಕ್‌ ಪಾರ್ಟಿಕಲ್‌ ವೆಲಾಸಿಟಿ) ದಾಖಲಾಗುತ್ತದೆ. ನಿಯಮದ ಪ್ರಕಾರ ಈ ಪಿಪಿವಿ ಪ್ರಮಾಣ 10ಕ್ಕಿಂತ ಕಡಿಮೆ ಇರತಕ್ಕದ್ದು. ಕಂಟೋನ್ಮೆಂಟ್‌ನಲ್ಲಿ ನಡೆಯುತ್ತಿರುವ ಸ್ಫೋಟ ಕಾರ್ಯದಲ್ಲಿ ಇದುವರೆಗೆ 3ರ ಗಡಿಯೂ ದಾಟಿಲ್ಲ. ಕಳೆದ ಒಂದೂವರೆ ತಿಂಗಳಿಂದ ಸ್ಫೋಟ ಕಾರ್ಯ ನಡೆಯುತ್ತಿದ್ದು, ಇದುವರೆಗೆ 180-200 ಬಾರಿ ಸ್ಫೋಟ ನಡೆಸಲಾಗಿದೆ ಎಂದು ತಂತ್ರಜ್ಞರು ಮಾಹಿತಿ ನೀಡಿದರು.

ಸಾಂಪ್ರದಾಯಿಕ ವಿಧಾನ ಯಾಕಿಲ್ಲ?: ಕಲ್ಲು ಕ್ವಾರಿಗಳಲ್ಲಿ ಅನುಸರಿಸುವ ಸಾಂಪ್ರದಾಯಿಕ ವಿಧಾನವನ್ನು ಇಲ್ಲಿ ಅನುಸರಿಸಲು ಬರುವುದಿಲ್ಲ. ಯಾಕೆಂದರೆ, ಆ ರೀತಿ ಕಲ್ಲು ತೆಗೆಯಲು ಸ್ಫೋಟ ಮಾಡಿದರೆ ಭಾರಿ ಶಬ್ಧ ಉಂಟಾಗುವುದಲ್ಲದೆ, ಚೂರು ಚೂರಾಗುವ ಕಲ್ಲುಗಳು ಬಹಳ ದೂರದವರೆಗೆ ಸಿಡಿಯುವುದು. ಹೆಚ್ಚು ಕಂಪನಗಳು ಉಂಟಾಗಿ, ಕಟ್ಟಡಗಳಿಗೂ ಧಕ್ಕೆ ಉಂಟಾಗುವ ಸಾಧ್ಯತೆ ಹೆಚ್ಚು. ಅದರಲ್ಲೂ ಜನರು ಹೆಚ್ಚಾಗಿ ಓಡಾಡುವ ಪ್ರದೇಶಗಳಲ್ಲಿ ಸಾಂಪ್ರದಾಯಿಕ ವಿಧಾನದಲ್ಲಿ ಸ್ಫೋಟ ಕಾರ್ಯ ನಡೆಸುವುದು ಅಸಾಧ್ಯ. ಅರಣ್ಯ ಪ್ರದೇಶದಲ್ಲೂ ಈ ವಿಧಾನ ಅನುಸರಿಸದಂತೆ ನಿರ್ಬಂಧಿಸಲಾಗಿದೆ. ಹೀಗಿರುವಾಗ, ಬೆಂಗಳೂರಿನಂತಹ ಪ್ರದೇಶದಲ್ಲಿ ಅವಕಾಶ ಇಲ್ಲ; ಅದು ಸೂಕ್ತವೂ ಅಲ್ಲ.

ಶಾಟ್‌ ಫೈರರ್‌ ಸುರಕ್ಷಿತ: ಈ ಎಲ್ಲ ಸ್ಫೋಟಗಳ ನಿಯಂತ್ರಿಸಲು ಒಬ್ಬ ಶಾಟ್‌ ಫೈರರ್‌ ಅನ್ನು ನಿಯೋಜಿಸಲಾಗಿರುತ್ತದೆ. ಸ್ಫೋಟಗೊಳ್ಳುವ ಜಾಗದಿಂದ ಸುಮಾರು 50 ಮೀಟರ್‌ ದೂರದಲ್ಲಿ ಕಬ್ಬಿಣದಿಂದ ನಿರ್ಮಿಸಿರುವ ನಿಯಂತ್ರಣ ಕೊಠಡಿಯಲ್ಲಿ ಆತ ಕುಳಿತಿರುತ್ತಾನೆ. ಅಕಸ್ಮಾತ್‌ ಯಾವುದಾದರೂ ಕಲ್ಲಿನ ಚೂರು ಬಂದು ಸಿಡಿದರೂ ಯಾವುದೇ ಅನಾಹುತ ಸಂಭವಿಸದಂತೆ ಇದನ್ನು ತಯಾರಿಸಲಾಗಿರುತ್ತದೆ.

12 ಸಾವಿರ ಲಾರಿ ಲೋಡ್‌ ಅಗೆಯಬೇಕು!: 40 ರಂಧ್ರಗಳ ಒಂದು ಸ್ಫೋಟದಿಂದ ಸುಮಾರು 100ರಿಂದ 150 ಕ್ಯುಬಿಕ್‌ ಮೀಟರ್‌ ಅಂದರೆ 10ರಿಂದ 15 ಟಿಪರ್‌ ಲಾರಿಗಳಲ್ಲಿ ಸಾಗಿಸುವಷ್ಟು ಕಲ್ಲಿನ ಪುಡಿ ಹೊರತೆಗೆಯಬಹುದು. 20 ಮೀ. ಆಳದಲ್ಲಿ ಹೋಗಲು 120 ಸಾವಿರ ಕ್ಯುಬಿಕ್‌ ಅಂದರೆ 12 ಸಾವಿರ ಟಿಪರ್‌ ಲಾರಿಗಳಷ್ಟು ಕಲ್ಲಿನ ಪುಡಿಯನ್ನು ಹೊರೆತೆಗೆಯುವ ಅವಶ್ಯಕತೆ ಇದೆ.

ಇದಕ್ಕಾಗಿ ಇನ್ನೂ ಎಂಟು ನಿಯಮಿತವಾಗಿ ಈ ಸ್ಫೋಟ ಕಾರ್ಯ ನಡೆಸಬೇಕಾಗುತ್ತದೆ. ಬೆಂಚ್‌ ಅಥವಾ ಮೆಟ್ಟಿಲು ಮಾದರಿಯಲ್ಲಿ ಈ ಸ್ಫೋಟ ವ್ಯವಸ್ಥೆ ರೂಪಿಸಲಾಗುತ್ತದೆ. ಒಂದು ಕಡೆ ಎತ್ತರ ಅದಕ್ಕೆ ಹೊಂದಿಕೊಂಡಂತೆ ತಗ್ಗು ಇರಬೇಕು. ಎತ್ತರ ಇದ್ದ ಬಂಡೆ ಸ್ಫೋಟಿಸಿದಾಗ, ಅದು ಕುಸಿದು ಮತ್ತೂಂದು ಮೆಟ್ಟಿಲು ನಿರ್ಮಾಣ ಆಗುತ್ತದೆ. ಈ ವಿಧಾನದಿಂದ ಕಲ್ಲಿನ ಚೂರುಗಳ ಪ್ರಮಾಣ ಹೆಚ್ಚು ಬರುತ್ತದೆ ಎಂಬ ಲೆಕ್ಕಾಚಾರ ತಜ್ಞರದ್ದು.

ಎಷ್ಟು ಗಟ್ಟಿ?: ಕಂಟೋನ್‌ಮೆಂಟ್‌ನಲ್ಲಿರುವ ಕಲ್ಲು ಅತ್ಯಂತ ಗಟ್ಟಿಯಾಗಿದೆ. ಅದನ್ನು ಸಾಮಾನ್ಯ ಸಿಮೆಂಟ್‌ ಕಾಂಕ್ರೀಟ್‌ಗೆ ಹೋಲಿಸುವುದಾದರೆ, ಒಂದು ಚದರ ಮೀಟರ್‌ ಸ್ಲಾಬ್‌ಗ 200 ಕೆಜಿ ಸಿಮೆಂಟ್‌ ಸಾಕಾಗುತ್ತದೆ. ಆದರೆ, ನಿರ್ಮಾಣ ಕಾರ್ಯ ಕೈಗೆತ್ತಿಕೊಂಡ ಜಾಗದಲ್ಲಿ ಇಷ್ಟೇ ಗಾತ್ರದ ಕಲ್ಲುಬಂಡೆ 1,750 ಕೆಜಿ ತೂಗುತ್ತದೆ. ಅಂದರೆ ಎಂಟುಪಟ್ಟು ಗಟ್ಟಿಯಾದದ್ದು!

ವಿಧಾನಗಳು ಯಾವ್ಯಾವು?: ನಿಯಂತ್ರಿತ ಸ್ಫೋಟದಲ್ಲೇ ಸ್ಪ್ಲಿಟಿಂಗ್‌, ರಾಸಾಯನಿಕ ಸ್ಫೋಟಕ ಸೇರಿದಂತೆ ಎರಡು-ಮೂರು ವಿಧಾನಗಳಿವೆ.

ಸ್ಪ್ಲಿಟಿಂಗ್‌: ಇದರಲ್ಲಿ ರಂಧ್ರ ಕೊರೆಯಲಾಗುತ್ತದೆ. ಅದರಲ್ಲಿ ಸೂಜಿ ಮಾದರಿಯ ಹೈಡ್ರಾಲಿಕ್‌ ಜಾಕ್‌ ಹಾಕಲಾಗುತ್ತದೆ. ಕೆಲಹೊತ್ತಿನ ನಂತರ ಗಟ್ಟಿಯಾದ ಶಿಲೆ ಸಡಿಲಗೊಂಡು ಒಡೆಯುತ್ತದೆ. ಇದು ತುಂಬಾ ನಿಧಾನ ವಿಧಾನ.

ರಾಸಾಯನಿಕ ಸ್ಫೋಟ: ಇದರಲ್ಲಿ ನಿರಂತರ ಒಂದು ರಂಧ್ರ ಕೊರೆದು, ಸ್ಫೋಟಕಕ್ಕೆ ಪೂರಕವಾದ ಎರಡು-ಮೂರು ಪ್ರಕಾರದ ರಾಸಾಯನಿಕ ಅಂಶವನ್ನು ಆ ರಂಧ್ರದಲ್ಲಿ ಸುರಿಯಲಾಗುತ್ತದೆ. ಆ ಅಂಶವು ಬಂಡೆಯೊಳಗೆ ನಿಧಾನವಾಗಿ ವಿಸ್ತರಿಸುತ್ತಾ ಹೋಗುತ್ತದೆ. ಒಂದೆರಡು ದಿನಗಳಲ್ಲಿ ಬಂಡೆಯಲ್ಲಿ ಬಿರುಕುಗಳು ಉಂಟಾಗುತ್ತವೆ. ನಂತರ ಅದನ್ನು ಸುಲಭವಾಗಿ ಒಡೆದುಹಾಕಬಹುದು.

* ವಿಜಯಕುಮಾರ್‌ ಚಂದರಗಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ