ಪತ್ನಿಗೆ ಲೈಂಗಿಕ ಕಿರುಕುಳ ನೀಡಿದ ಸ್ನೇಹಿತನ ಬರ್ಬರ ಕೊಲೆ

Team Udayavani, Apr 15, 2019, 3:00 AM IST

ಬೆಂಗಳೂರು: ಪತ್ನಿ ಹಾಗೂ ಆಕೆಯ ಸಹೋದರಿ ಜತೆ ಅಸಭ್ಯವಾಗಿ ವರ್ತಿಸಿದ ಸ್ನೇಹಿತನನ್ನು ಭೀಕರವಾಗಿ ಕೊಲೆಗೈದಿರುವ ಘಟನೆ ರಾಜಗೋಪಾಲನಗರದ ಲವಕುಶನಗರದಲ್ಲಿ ಶನಿವಾರ ರಾತ್ರಿ ನಡೆದಿದ್ದು, ಈ ಸಂಬಂಧ ದಂಪತಿಯನ್ನು ರಾಜಗೋಪಾಲನಗರ ಪೊಲೀಸರು ಬಂಧಿಸಿದ್ದಾರೆ.

ರಾಜಗೋಪಾಲನಗರದ ಲವಕುಶನಗರ ನಿವಾಸಿ ಮೋಹನ್‌ (30) ಹಾಗೂ ಆತನ ಪತ್ನಿ ರಮ್ಯಾ (24) ಬಂಧಿತ ದಂಪತಿ. ಆರೋಪಿಗಳು ಶನಿವಾರ ಸಂಜೆ ಹುಳಿಮಾವು ನಿವಾಸಿ, ಅವಿವಾಹಿತ ಮಧು ಎಂಬಾತನನ್ನು ರಾಡ್‌ನಿಂದ ಹೊಡೆದು ಕೊಲೆಗೈದಿದ್ದಾರೆ ಎಂದು ಪೊಲೀಸರು ಹೇಳಿದರು.

ಹಾಸನ ಜಿಲ್ಲೆ ಹೊಳೇನರಸಿಪುರ ತಾಲೂಕಿನ ಗೋಪನಹಳ್ಳಿ ಮೂಲದ ಮೋಹನ್‌ ಹಾಗೂ ಕೊಲೆಯಾದ ಮಧು ಒಂದೇ ಊರಿನವರಾಗಿದ್ದು, ಆಪ್ತ ಸ್ನೇಹಿತರು. ಅಲ್ಲದೆ ದೂರದ ಸಂಬಂಧಿ ಕೂಡ ಹೌದು.

ಕೆಲ ವರ್ಷಗಳ ಹಿಂದೆ ಇಬ್ಬರೂ ಹೊಸ ಕಾರುಗಳನ್ನು ಖರೀದಿಸಿ ಖಾಸಗಿ ಕಂಪನಿ ಜತೆ ಒಪ್ಪಂದ ಮಾಡಿಕೊಂಡು ಕಾರು ಚಾಲನೆ ಮಾಡುತ್ತಿದ್ದರು. ಈ ನಡುವೆ ಆರೇಳು ವರ್ಷಗಳ ಹಿಂದೆ ಮೋಹನ್‌, ಸಂಬಂಧಿ ರಮ್ಯಾ ಅವರನ್ನು ವಿವಾಹವಾಗಿದ್ದು, ರಾಜಗೋಪಾಲನಗರದ ಲವಕುಶನಗರದಲ್ಲಿ ದಂಪತಿ ವಾಸವಾಗಿದ್ದರು. ದಂಪತಿಗೆ ಒಂದು ಗಂಡು ಮಗು ಇದೆ.

ಸಹೋದರಿಯರಿಗೆ ಕಿರುಕುಳ, ಹಲ್ಲೆ: ಹುಳಿಮಾವುನಲ್ಲಿ ಸ್ನೇಹಿತರ ಜತೆ ವಾಸವಾಗಿದ್ದ ಮಧು, ಆಗಾಗ ಮೋಹನ್‌ ಮನೆಗೆ ಬರುತ್ತಿದ್ದ. ಮೂರು ತಿಂಗಳಿಂದ ಮಧು ವರ್ತನೆಯಲ್ಲಿ ಬದಲಾವಣೆಯಾಗಿದ್ದು, ರಮ್ಯಾ ಜತೆ ಅನುಚಿತ ವರ್ತನೆ ತೋರುತ್ತಿದ್ದ. ಪದೇ ಪದೆ ಕರೆ ಮಾಡಿ,”ನಿನ್ನ ಕಂಡರೆ ನನಗಿಷ್ಟ. ನಾನು ಕರೆದ ಕಡೆ ನೀನು ಬರಬೇಕು.

ಇಲ್ಲವಾದರೆ ನಿನ್ನ ಗಂಡನಿಗೆ ನಿನ್ನ ಬಗ್ಗೆ ಕೆಟ್ಟದಾಗಿ ಹೇಳಿ, ನಿನ್ನ ಮರ್ಯಾದೆ ತೆಗೆಯುತ್ತೇನೆ’ ಎಂದು ಬೆದರಿಸುತ್ತಿದ್ದ. ಅಷ್ಟೇ ಅಲ್ಲದೆ, ರಾಜರಾಜೇಶ್ವರಿನಗರದಲ್ಲಿದ್ದ ರಮ್ಯಾ ಸಹೋದರಿಗೂ ಕರೆ ಮಾಡಿ ಕಿರುಕುಳ ನೀಡುತ್ತಿದ್ದ. ಈ ವಿಚಾರವನ್ನು ಸಹೋದರಿಯರು ತಮ್ಮ ಗಂಡಂದಿರಿಗೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಮತ್ತೂಮ್ಮೆ ಆ ರೀತಿ ವರ್ತಿಸದಂತೆ ಮಧುಗೆ ಮೋಹನ್‌ ದಂಪತಿ ಬುದ್ಧಿ ಹೇಳಿದ್ದರೂ, ಆತ ಚಾಳಿ ಮುಂದುವರಿಸಿದ್ದ.

20ಕ್ಕೂ ಹೆಚ್ಚು ಬಾರಿ ಹಲ್ಲೆ, ಇರಿದು ಕೊಲೆ: ಕೆಲ ದಿನಗಳ ಹಿಂದಷ್ಟೇ ರಮ್ಯಾಅವರ ಮತ್ತೂಬ್ಬ ಸಹೋದರಿ ಅರಕಲಗೂಡಿನಿಂದ ಮನೆಗೆ ಬಂದಿದ್ದರು. ಈ ಮಧ್ಯೆ ಶನಿವಾರ ಸಂಜೆ 6 ಗಂಟೆ ಸುಮಾರಿಗೆ ಮೋಹನ್‌ ಮತ್ತು ಮಧು ರಾಜಗೋಪಾಲನಗರದ ಬಾರ್‌ವೊಂದರಲ್ಲಿ ಮದ್ಯ ಸೇವಿಸಿ, ಒಟ್ಟಿಗೆ ಮನೆಗೆ ಬಂದಿದ್ದಾರೆ.

ಕೆಲ ಹೊತ್ತಿನ ಬಳಿಕ ಮದ್ಯದ ಅಮಲಿನಲ್ಲಿ ಮಧು, ರಮ್ಯಾ ಸಹೋದರಿ ಜತೆ ಅಸಭ್ಯವಾಗಿ ವರ್ತಿಸಿದಲ್ಲದೆ, ಆಕೆ ಮೇಲೆ ಹಲ್ಲೆ ನಡೆಸಿದ್ದಾನೆ. ಇದನ್ನು ಪ್ರಶ್ನಿಸಿದ ರಮ್ಯಾ ಮುಖಕ್ಕೆ ಗುದ್ದಿ ಗಾಯಗೊಳಿಸಿದ್ದ.

ಆಗ ಅಲ್ಲೇ ಇದ್ದ ಆರೋಪಿ ಮೋಹನ್‌, ಹಿಂದಿನಿಂದ ಮಧುನನ್ನು ಹೊಡೆಯದಂತೆ ಹಿಡಿದುಕೊಂಡಿದ್ದಾನೆ. ಘಟನೆಯಿಂದ ಆಕ್ರೋಶಗೊಂಡ ರಮ್ಯಾ, ಅಲ್ಲೇ ಇದ್ದ ಕಬ್ಬಿಣದ ರಾಡ್‌ನಿಂದ ಮಧು ತಲೆಗೆ ಸುಮಾರು 20ಕ್ಕೂ ಹೆಚ್ಚು ಬಾರಿ ಹೊಡೆದು, ಎದೆ, ಮುಖ, ಹೊಟ್ಟೆ ಭಾಗಕ್ಕೆ ಇರಿದಿದ್ದಾರೆ. ಪರಿಣಾಮ ತೀವ್ರ ರಕ್ತಸ್ರಾವದಿಂದ ಮಧು ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದರು.

ಮೋಹನ್‌ ಮನೆಯಲ್ಲಿ ಜೋರಾಗಿ ಗಲಾಟೆ ನಡೆಯುತ್ತಿದ್ದನ್ನು ಕೇಳಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ತೆರಳಿದ ರಾಜಗೋಪಾಲನಗರ ಪೊಲೀಸರು, ಕೃತ್ಯ ಎಸಗಿ ಪರಾರಿಯಾಗುತ್ತಿದ್ದ ದಂಪತಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪ್ರಕರಣ ರಾಜಗೋಪಾಲನಗರ ಠಾಣೆಯಲ್ಲಿ ದಾಖಲಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಹೊಸದಿಲ್ಲಿ : ಭಾರತದ ವರಿಷ್ಠ ನ್ಯಾಯಮೂರ್ತಿ (ಸಿಜೆಐ) ರಂಜನ್‌ ಗೊಗೊಯ್‌ ಅವರಿಂದು ಶನಿವಾರ ಸುಪ್ರೀಂ ಕೋರ್ಟಿನ ವಿಶೇಷ ಪೀಠದಲ್ಲಿದ್ದುಕೊಂಡು ತನ್ನ ವಿರುದ್ಧ...

  • ಇಂದು ನಿತ್ಯ ಹರಿದ್ವರ್ಣ ಕಾಡುಗಳಲ್ಲಷ್ಟೇ ಬೃಹತ್‌ ಗಾತ್ರದ ದೇವದಾರು, ತೇಗ, ಬೀಟೆ ಮೊದಲಾದ ಮರಗಳನ್ನು ಕಾಣಬಹುದು. ಆದರೆ ಸವಣೂರಿನ ಕಲ್ಮಠದಲ್ಲಿ ಸಾವಿರಾರು ವರ್ಷಗಳ...

  • Gadwall (Anas strepera) M -Duck + ಗದ್ವಾಲ್‌ ಬಾತನ್ನು ಚರ್ಲೆ ಅಥವಾ ಸರಳೆ ಬಾತು ಎಂದು ಕರೆಯಲಾಗುತ್ತದೆ. ಈ ಹಕ್ಕಿ, ನೀರಿನಲ್ಲಿ ಮುಳುಗಿ ಅಲ್ಲಿರುವ ಕ್ರಿಮಿ ಕೀಟಗಳನ್ನು ಬೇಟೆಯಾಡುತ್ತದೆ....

  • ವೃತ್ತಿಯಲ್ಲಿ ಶಿಕ್ಷಕರಾದ ಕಲ್ಯಾಣ್‌ ಕುಮಾರ್‌ ಅವರಿಗೆ ಪತ್ರಿಕೆ ಸಂಗ್ರಹಿಸುವ ಹವ್ಯಾಸ. ಇದು ಹುಟ್ಟಿದ್ದು ಪರ ಊರಿಗೆ ಪ್ರಯಾಣಿಸುವಾಗ . ಬೇಜಾರು ಕಳೆಯಲಿಕ್ಕೆ...

  • ಉದ್ದಾನ ವೀರಭದ್ರಸ್ವಾಮಿಗಳು ಈ ಆಂಜನೇಯನಿಗೆ ಲಿಂಗಧಾರಣೆ ಮಾಡಿದ್ದು, ಕೊರಳಿನಲ್ಲಿ ರುದ್ರಾಕ್ಷಿ ಮಾಲೆ ಇರುವುದು ಒಂದು ವಿಶೇಷ. ಸೊಂಟದಲ್ಲಿ ಕತ್ತಿ ಇರುವುದು...

  • ಅರಳಿಮರದ ಬುಡದಲ್ಲಿ ಕುಳಿತು ಸರ್ವಾಂತರ್ಯಾಮಿಯಾದ ಭಗವಂತನ ಸ್ವರೂಪವನ್ನು ಯೋಗಿಗಳಿಂದ ಕೇಳಿ ತಿಳಿದ ರೀತಿಯಲ್ಲೇ ಧ್ಯಾನ ಮಾಡತೊಡಗಿದ್ದರು. ಏಕಾಗ್ರಚಿತ್ತದಿಂದ...