
ಹೊರ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಕಡ್ಡಾಯ
ವಿವಿಧ ಖಾಸಗಿ ಮೆಡಿಕಲ್ ಕಾಲೇಜು ಮುಖ್ಯಸ್ಥರಿಗೆ ಡಿಸಿ ಕೆ.ಶ್ರೀನಿವಾಸ್ ಸೂಚನೆ , 4,914 ಸಿಬ್ಬಂದಿ ಲಸಿಕೆ ಪಡೆಯಲು ಹೆಸರು ನೋಂದಣಿ
Team Udayavani, Feb 24, 2021, 12:04 PM IST

ದೇವನಹಳ್ಳಿ: ರಾಜ್ಯದಲ್ಲಿ ವಿದ್ಯಾಭ್ಯಾಸ ಮಾಡಲು ಹೊರ ರಾಜ್ಯಗಳಾದ ಕೇರಳ, ಮಹಾರಾಷ್ಟ್ರ ಹಾಗೂ ಇತರೆ ರಾಜ್ಯಗಳಿಂದ ಬರುವ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದರು.
ತಾಲೂಕಿನ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಖಾಸಗಿ ವೈದ್ಯಕೀಯ ಸಿಬ್ಬಂದಿಗೆ ಕೋವಿಡ್ ಲಸಿಕೆ ನೀಡುವ ಕುರಿತಾದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೇರಳ ಹಾಗೂ ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಈಗಾಗಲೇ ಕೋವಿಡ್ 2ನೇ ಹಂತದ ಅಲೆ ಕಾಣಿಸಿಕೊಂಡಿದ್ದು, ಕರ್ನಾಟಕದಲ್ಲಿ ಇದುವರೆಗೂ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ. ಮುಂಜಾಗ್ರತಾ ಕ್ರಮವಾಗಿ ಬೇರೆ ರಾಜ್ಯಗಳಿಂದ ಬರುವ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಬೇಕು ಎಂದು ತಿಳಿಸಿದರು.
ಲಸಿಕೆ ನೀಡಲು ಕ್ರಮ: ಕೋವಿಡ್ ಲಸಿಕೆ ಪಡೆಯಲು ಈಗಾಗಲೇ ಹೆಸರು ನೋಂದಾಯಿಸಿಕೊಂಡಿರುವ ಆರೋಗ್ಯ ಕಾಯಕರ್ತರು ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು. ಜಿಲ್ಲೆಯಲ್ಲಿ ಇಲ್ಲಿಯವರೆಗೆ ಶೇ. 42ರಷ್ಟು ನೋಂದಾಯಿತರು ಮಾತ್ರ ಲಸಿಕೆ ಪಡೆದಿದ್ದು, ಮತ್ತಷ್ಟು ಜನರಿಗೆ ಲಸಿಕೆ ನೀಡಲು ಕ್ರಮವಹಿಸಬೇಕು ಎಂದರು.
ಕೆಪಿಎಂಇ ಕಾಯ್ದೆಯಡಿ ಜಿಲ್ಲೆಯಲ್ಲಿ ನೋಂದಣಿ ಯಾಗಿರುವ ಖಾಸಗಿ ವೈದ್ಯಕೀಯ ಸಂಸ್ಥೆಗಳಲ್ಲಿ 4,914 ಸಿಬ್ಬಂದಿ ಕೋವಿಡ್ ಲಸಿಕೆ ಪಡೆಯಲು ಹೆಸರು ನೋಂದಾಯಿಸಿಕೊಂಡಿದ್ದು, ಅದರಲ್ಲಿ 2,214 ಮಂದಿ ಇನ್ನೂ ಲಸಿಕೆ ಪಡೆದಿಲ್ಲ. ಆದ್ದರಿಂದ ಅಂತಹ ವೈದ್ಯ ಕೀಯ ಸಿಬ್ಬಂದಿಗೆ ಲಸಿಕೆ ಪಡೆ ಯುವಂತೆ ಉತ್ತೇಜಿ ಸಲು ಅಧಿಕಾರಿಗಳಿಗೆ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್.ಕೆ.ನಾಯಕ ಮಾತನಾಡಿ, ಖಾಸಗಿ ಕ್ಲಿನಿಕ್ ಹಾಗೂ ಆಸ್ಪತ್ರೆಗೆ ದಾಖಲಾಗುವ ರೋಗಿಗಳಲ್ಲಿ ನೆಗಡಿ, ಕೆಮ್ಮು, ಜ್ವರದಂತಹ ರೋಗಲಕ್ಷಣಗಳು ಇದ್ದರೆ, ಅವರ ಗಂಟಲು ದ್ರವ ಸಂಗ್ರಹಿಸಿ ವರದಿ ನೀಡುವಂತೆ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರಿಗೆ ತಿಳಿಸಿದರು.
ಸಿಬ್ಬಂದಿ ಹೆಸರು ಪ್ರದರ್ಶನ: ಆಸ್ಪತ್ರೆಯಲ್ಲಿ ಈಗಾಗಲೇ ಕೋವಿಡ್ ಲಸಿಕೆ ಪಡೆದಿರುವ ವೈದ್ಯರು ಮತ್ತು ಸಿಬ್ಬಂದಿ ಹೆಸರನ್ನು ಪ್ರದರ್ಶನ ಮಾಡಬೇಕು. ಇದರಿಂದ ಸಾರ್ವಜನಿಕರಿಗೆ ಆಸ್ಪತ್ರೆಯ ಬಗ್ಗೆ ಉತ್ತಮ ಸಂದೇಶ ರವಾನೆಯಾಗುತ್ತದೆ ಹಾಗೂಹೋಟೆಲ್ ಮತ್ತು ಡಾಬಾಗಳಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗೆ ಕೋವಿಡ್ ಪರೀಕ್ಷೆ ಮಾಡಿಸಬೇಕು ಎಂದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಂಜುಳಾ ದೇವಿ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಎ. ಶ್ರೀನಿವಾಸ್, ಜಿಲ್ಲಾ ಸಂತಾನೊತ್ಪತಿ ಮತ್ತು ಮಕ್ಕಳ ಕಾರ್ಯಕ್ರಮ ಅಧಿಕಾರಿ ಡಾ. ಶರ್ಮಿಳಾ ಮತ್ತಿತರರಿದ್ದರು.
ಲಸಿಕೆ ಪಡೆಯುವ ಅಗತ್ಯವಿಲ್ಲ :
ಆರೋಗ್ಯ ಸಮಸ್ಯೆಗಳಿದ್ದವರು ಲಸಿಕೆ ಪಡೆಯುವ ಅಗತ್ಯವಿಲ್ಲ. ಸೂಕ್ತ ಕಾರಣಗಳಿಲ್ಲದೆ ಲಸಿಕೆ ಪಡೆಯುದನ್ನು ನಿರಾಕರಿಸಿದರೆ, ಅಂತಹಾ ವ್ಯಕ್ತಿಗಳ ಬಗ್ಗೆ ಲಿಖೀತ ರೂಪದಲ್ಲಿ ಜಿಲ್ಲಾಡಳಿತಕ್ಕೆ ಮಾಹಿತಿ ಸಲ್ಲಿಸಿದರೆ ಅವರ ಹೆಸರನ್ನು ಪೋರ್ಟಲ್‌ನಿಂದ ತೆಗೆಯಲಾಗುವುದು. ಕೆಲವೊಮ್ಮೆ ಹೆಸರು ಪುನರಾವರ್ತನೆಯಾದರೆ, ಅಂತಹ ಹೆಸರು ರದ್ದುಗೊಳಿಸಲು ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಹೇಳಿದರು.
ಟಾಪ್ ನ್ಯೂಸ್
