ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ

Team Udayavani, May 12, 2019, 3:00 AM IST

ದೇವನಹಳ್ಳಿ: ತಾಲೂಕಿನ ಕೊಯಿರಾ ಗ್ರಾಮದಲ್ಲಿ ಸಾರ್ವಜನಿಕರ ಸಹಕಾರದಿಂದ 19.5ಎಕರೆ ವಿಸ್ತೀರ್ಣದ ವಿಶಾಲ ಕೆರೆ ಹೂಳೆತ್ತುವ ಕಾಮಗಾರಿಗೆ ಸ್ಥಳೀಯರಿಂದ ಚಾಲನೆ ನೀಡಲಾಯಿತು. ಈ ಹಿಂದೆ ಗ್ರಾಮದ ಸಾರ್ವಜನಿಕರು ಜಿಲ್ಲಾಧಿಕಾರಿ ಕರೀಗೌಡ ಅವರನ್ನು ಭೇಟಿ ಮಾಡಿ ಜಿಲ್ಲೆಯ ಹಲವಾರು ಕೆರೆಗಳನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡಿದ್ದರು.

ಈ ಹಿನ್ನೆಲೆಯಲ್ಲಿ ಶನಿವಾರ ಕೊಯಿರಾ ಗ್ರಾಮದ ಕೆರೆಗೆ ಪೂಜೆ ಮಾಡುವುದರ ಮೂಲಕ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಲಾಯಿತು. ಸ್ಥಳದಲ್ಲಿಯೇ ಗ್ರಾಮಸ್ಥರು 100ರೂ.ನಿಂದ 2,000ರೂ. ವರೆಗೆ ದೇಣಿ ನೀಡಿದರು. ಕೆರೆ ಹೂಳೆತ್ತುವ ಕಾರ್ಯಕ್ಕೆ ಸಂಬಂಧಿಸಿ ಜಿಲ್ಲಾಧಿಕಾರಿಗಳ ಸಹಕಾರಕ್ಕೆ ಗ್ರಾಮಸ್ಥರು ಅತೀವ ಮೆಚ್ಚುಗೆ ವ್ಯಕ್ತಪಡಿಸಿದರು.

ಗ್ರಾಮಸ್ಥರ ಕಾರ್ಯ ಶ್ಲಾಘನೀಯ: ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್‌ ಮಂಜುನಾಥ್‌, ಈ ಭಾಗದಲ್ಲಿ ಕುಡಿಯುವ ನೀರಿನ ಹಾಹಾಕಾರ ತೀವ್ರವಾಗಿದೆ. ಗ್ರಾಮದ ಕೆರೆಯ ಪುನಃಶ್ಚೇತನಕ್ಕಾಗಿ ಗ್ರಾಮಸ್ಥರು ಒಟ್ಟುಗೂಡಿ ಅಭಿವೃದ್ಧಿ ಕಾಮಗಾರಿಗೆ ದೇಣಿಗೆ ಸಂಗ್ರಹಿಸಿಕೊಂಡು ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಹೆಚ್ಚಿನ ಪ್ರಮಾಣದ ನೀರು ಸಂಗ್ರಹ: ಕೊಯಿರಾ ಗ್ರಾಪಂ ಅಧ್ಯಕ್ಷ ಶ್ರೀನಿವಾಸ್‌ ಮಾತನಾಡಿ, ಮಳೆ ಬರುವ ಸಂಭವ ಇರುವುದರಿಂದ ಕೆರೆ ಹೂಳೆತ್ತುವ ಕಾಮಗಾರಿ ಕೈಗೊಂಡು ಅಭಿವೃದ್ಧಿಪಡಿಸಿದರೆ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾಗುತ್ತದೆ. ಅದರಿಂದ, ಈ ಭಾಗದ ಎಲ್ಲರಿಗೂ ಅನುಕೂಲವಾಗಲಿದೆ. ಒಂದೂವರೆ ತಿಂಗಳಲ್ಲಿ ಕೆರೆ ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಸರಕಾರದಿಂದ ನಯಾ ಪೈಸೆ ನೆರವಿಲ್ಲ: ಕೊಯಿರಾ ಎಂಪಿಸಿಎಸ್‌ ಅಧ್ಯಕ್ಷ ಎಚ್‌.ಮುನಿರಾಜು ಮಾತನಾಡಿ, ನಮ್ಮ ಪೂರ್ವಿಕರಿಂದ ಬಳಸಿಕೊಂಡು ಬರುತ್ತಿರುವ ಕೆರೆ ಈಗ ನೀರಿಲ್ಲದೇ ಒಣಗಿಹೋಗಿದೆ. ಕೆರೆಯನ್ನು ಗ್ರಾಮಸ್ಥರು, ಮುಖಂಡರು ಮತ್ತು ದಾನಿಗಳ ಸಹಕಾರದಿಂದ ಹೂಳೆತ್ತುವ ಕಾರ್ಯ ಕೈಗೊಳಲಾಗಿದೆ. ಇದಕ್ಕೆ ಸರಕಾರದ ಒಂದು ನಯಾ ಪೈಸೆ ಸಹ ತೆಗೆದುಕೊಳ್ಳದೇ ಕೆರೆ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದು ಹೇಳಿದರು.

ಅನುದಾನ ಬಿಡುಗಡೆ ಮಾಡಿಲ್ಲ: ಇದೇ ಸಂದರ್ಭದಲ್ಲಿ ತಹಶೀಲ್ದಾರ್‌ರಿಗೆ ಮನವಿ ಸಲ್ಲಿಸಿ ಮಾತನಾಡಿದ ಕೊಯಿರಾ ಗ್ರಾಮದ ಮುಖಂಡ ಚಿಕ್ಕೇಗೌಡ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಭಿವೃದ್ಧಿ ಪ್ರಾಧಿಕಾರ(ಬಯಪ್ಪ)ದಲ್ಲಿ 2013-14ರಲ್ಲಿ ಕರೆ ಅಭಿವೃದ್ಧಿಪಡಿಸಲು ಅನುದಾನ ಬಿಡುಗಡೆಗಾಗಿ ಅರ್ಜಿ ಸಲ್ಲಿಸಿದ್ದು, ಸುಮಾರು 24.76ಕೋಟಿ ರೂ. ಕ್ರಿಯಾಯೋಜನೆ ನೀಡಿದ್ದರೂ ಕಾರ್ಯರೂಪಕ್ಕೆ ಬಂದಿಲ್ಲ.

ತಾಲೂಕಿಗೆ 8.5ಕೋಟಿ ರೂ.ಕ್ರಿಯಾ ಯೋಜನೆ ರೂಪಿಸಲಾಗಿದೆ. ಕೊಯಿರಾ ಗ್ರಾಪಂ ವ್ಯಾಪ್ತಿಯ ಕೆರೆಗಳಿಗೆ 2.5ಕೋಟಿ ರೂ. ಬಿಡುಗಡೆಯಾಗಿದೆ. ಇದುವರೆಗೆ ಸಂಬಂಧಿಸಿದ ಜನಪ್ರತಿನಿಧಿಗಳು ಈ ಕೆರೆಗಳು ಜಿಪಂ, ಜಿಲ್ಲಾ ಪರಿಷತ್‌, ಸಣ್ಣ ನೀರಾವರಿ ಇಲಾಖೆಗೆ ಸೇರುತ್ತದೆಯೋ ಹೇಗೆ ಎಂಬುವುದನ್ನು ಗುರುತಿಸುವಲ್ಲಿ ವಿಫ‌ಲರಾಗಿದ್ದಾರೆ ಎಂದು ದೂರಿದರು.

ಅನುದಾನ ಬಿಡುಗಡೆ ಮಾಡಿಸಿ: ಕೆರೆಗಳ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣ ಸರಕಾದ ಖಜಾನೆಯಲ್ಲಿ ಕೊಳೆಯುತ್ತಿದೆ. ಇದರ ಬಗ್ಗೆ ತಾವು ಜಿಲ್ಲಾಧಿಕಾರಿಗಳ ಮುಖೇನ ಸರಕಾರದ ಗಮನಕ್ಕೆ ತಂದು ಕೂಡಲೇ ಅನುದಾನ ಬಿಡುಗಡೆ ಮಾಡಿಸಬೇಕೆಂದು ಮನವಿ ಮಾಡಿದರು.

ಅಂತರ್ಜಲ ಮಟ್ಟ ಹೆಚ್ಚಳ: ಜಿಲ್ಲಾ ರೈತಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್‌.ಹರೀಶ್‌ ಮಾತನಾಡಿ, ಸರ್ಕಾರ ಕೆರೆಗಳ ಅಭಿವೃದ್ಧಿಪಡಿಸುವ ಕೆಲಸ ಮಾಡಬೇಕಾಗಿತ್ತು. ಆದರೆ, ಈ ಕಾರ್ಯದಲ್ಲಿ ವಿಫ‌ಲವಾಗಿದೆ. ಸ್ಥಳೀಯ ಸಾರ್ವಜನಿಕರು ಒಗ್ಗಟ್ಟಿನಿಂದ ಕೆರೆ ಅಭಿವೃದ್ಧಿಗಾಗಿ ಕೈ ಜೋಡಿಸಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಗ್ರಾಮದಲ್ಲಿ ಇದರಿಂದ ಸಾಮರಸ್ಯ ಹೆಚ್ಚಾಗಿದೆ. ದನ, ಕರುಗಳು, ಜನರು ನೀರಿಲ್ಲದೇ ಪರದಾಡುವ ಸ್ಥಿತಿ ಇದೆ. ಕೆರೆ ಹೂಳೆತ್ತಿಸಿದರೆ ಮಳೆ ನೀರು ಸಂಗ್ರಹವಾಗುತ್ತದೆ. ಅಲ್ಲದೇ, ಅಂತರ್ಜಲ ಮಟ್ಟ ಹೆಚ್ಚಳವಾಗಲು ಸಾಧ್ಯವಾಗುತ್ತದೆ ಎಂದರು.

ದೇಣಿಗೆ ಸಂಗ್ರಹ: ತಹಶೀಲ್ದಾರ್‌ ಮಂಜುನಾಥ್‌ ಮಾತನಾಡಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲಾ ಕೆರೆಗಳನ್ನು ಗುರುತಿಸಿ ಹಂತ ಹಂತವಾಗಿ ಹೂಳೆತ್ತುವ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಕೆರೆ ಒತ್ತುವರಿಗೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಈಗಾಗಲೇ ತೆರವು ಕಾರ್ಯ ಮಾಡಲಾಗುತ್ತಿದೆ. ಕೆರೆ ಹೂಳೆತ್ತುವುದರಿಂದ ಮಳೆ ನೀರು ಸಂಗ್ರಹವಾಗಿ ಅಂತರ್ಜಲಮಟ್ಟ ಹೆಚ್ಚಾಗುತ್ತದೆ. ರೈತರ ಬೆಳೆಗೆ ನೀರು ಸಿಗುವಂತಾಗುತ್ತದೆ. ಜೀವಜಲ ಇದ್ದರೆ ಪಕ್ಷಿ, ಪ್ರಭೇದಗಳಿಗೆ ಆಸರೆಯಾಗುತ್ತದೆ. ಕೆರೆ ಅಭಿವೃದ್ಧಿಗಾಗಿ ಗ್ರಾಮಸ್ಥರು, ದಾನಿಗಳಿಂದ ದೇಣಿಗೆ ಸಂಗ್ರಹ ಮಾಡಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ರಮೇಶ್‌ ಬಾಬು, ಎಂ.ಮುನಿರಾಜು, ಹಸಿರು ಸೇನೆ ಸಂಚಾಲಕ ಹರೀಶ್‌, ಗ್ರಾಮದ ಮುಖಂಡರು, ಗ್ರಾಮಸ್ಥರು ಹಾಜರಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ