ರೌಡಿಶೀಟರ್‌ಗಳಿಗೆ ಖಡಕ್‌ ಎಚ್ಚರಿಕೆ

Team Udayavani, May 11, 2019, 3:00 AM IST

ನೆಲಮಂಗಲ: ರೌಡಿಗಳು ಸಮಾಜದಲ್ಲಿ ಶಾಂತಿ ಕದಡುವ ಅಹಿತಕರ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ಬಿಡಬೇಕು. ರೌಡಿಸಂ ಮಾಡುವುದರಿಂದ ನಿಮ್ಮ ಕುಟುಂಬದ ಪೋಷಕರು ಹಾಗೂ ಮಕ್ಕಳಿಗೆ ಆದರ್ಶ ವ್ಯಕ್ತಿಗಳಾಗಲು ಸಾಧ್ಯವಿಲ್ಲ. ಆದ್ದರಿಂದ, ಮಾನವೀಯತೆಯಿಂದ ಬದುಕು ಸಾಗಿಸಬೇಕೆಂದು ರೌಡಿಶೀಟರ್‌ಗಳಿಗೆ ಬೆಂಗಳೂರು ಗ್ರಾಮಾಂತರ ಎಸ್ಪಿ ರಾಮ್‌ನಿವಾಸ್‌ ಸೆಪಟ್‌ ಖಡಕ್‌ ಎಚ್ಚರಿಕೆ ನೀಡಿದರು.

ಪಟ್ಟಣದ ಬಿ.ಆರ್‌.ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ಪೊಲೀಸ್‌ ಉಪವಿಭಾಗದಿಂದ ಆಯೋಜಿಸಲಾಗಿದ್ದ ರೌಡಿಗಳ ಪರೇಡ್‌ನ‌ಲ್ಲಿ ಮಾತನಾಡಿದರು.

ಉತ್ತಮ ವ್ಯಕ್ತಿಗಳಾಗಿ ಬದುಕಿ: ರೌಡಿ ಶೀಟರ್‌ಗಳು ಸಮಾಜಘಾತುಕ ಚಟುವಟಿಕೆಗಳಲ್ಲಿ ಭಾಗವಹಿಸಿ ಮಕ್ಕಳಿಗೆ ಕಲಿಸುವುದಾದರೂ ಏನು? ಮಕ್ಕಳು ನಿಮ್ಮನ್ನು ರೌಡಿಗಳಾಗಿ ಶಾಲೆ, ಕಾಲೇಜುಗಳಲ್ಲಿ ಪರಿಚಯಿಸಲು ಸಾಧ್ಯವೇ? ಮಾನವೀಯತೆಯಿಂದ ನಿಮ್ಮ ರೌಡಿಸಂ ಬಿಟ್ಟು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬದುಕಿದರೆ ರೌಡಿ ಶೀಟರ್‌ ಪಟ್ಟಿಯಿಂದ ತೆಗೆಯಲಾಗುತ್ತದೆ ಎಂದು ಹೇಳಿದರು.

ಮುಲಾಜಿಲ್ಲದೇ ಗಡಿ ಪಾರು: ಜನರನ್ನು ಹೆದರಿಸುವುದು, ಹಣ ವಸೂಲಿ ಮಾಡುವುದು, ದರೋಡೆ ಮುಂತಾದ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರ ಮಾಹಿತಿ ತಿಳಿದರೆ ಮುಲಾಜಿಲ್ಲದೇ ಗಡಿ ಪಾರು ಮಾಡಲಾಗುತ್ತದೆ. ಇನ್ನು ಮುಂದೆ ಉಪವಿಭಾಗದ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಿಮ್ಮ ಕಡೆಯಿಂದ ನಡೆಯಬಾರದು ಎಂದು ಎಚ್ಚರಿಕೆ ನೀಡಿದರು.

161 ರೌಡಿಶೀಟರ್‌: ತಾಲೂಕು ಉಪವಿಭಾಗದ ವ್ಯಾಪ್ತಿಯ 161ರೌಡಿ ಶೀಟರ್‌ಗಳು ರೌಡಿ ಪರೇಡ್‌ನ‌ಲ್ಲಿ ಭಾಗವಹಿಸಿದ್ದರು. ಮಾದನಾಯಕನಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯ 43, ಗ್ರಾಮಾಂತರ ಪೊಲೀಸ್‌ ಠಾಣೆ ವ್ಯಾಪ್ತಿಯ 35, ತ್ಯಾಮಗೊಂಡ್ಲು ಪೊಲೀಸ್‌ ಠಾಣೆ ವ್ಯಾಪ್ತಿಯ 19, ದಾಬಸ್‌ಪೇಟೆ ಪೊಲೀಸ್‌ ಠಾಣೆ ವ್ಯಾಪ್ತಿಯ 27ಹಾಗೂ ಟೌನ್‌ ಪೊಲೀಸ್‌ ಠಾಣೆ ವ್ಯಾಪ್ತಿಯ 37ರೌಡಿಶೀಟರ್‌ಗಳು ಪರೇಡ್‌ನ‌ಲ್ಲಿ ಭಾಗವಹಿಸಿದ್ದರು. ಪರೇಡ್‌ನ‌ಲ್ಲಿ ಭಾಗವಹಿಸದ ಕೆಲವು ರೌಡಿಶೀಟರ್‌ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ, ಠಾಣೆಗೆ ಕರೆಸಿ ಎಚ್ಚರಿಕೆ ನೀಡಲಾಗುವುದು ಎಂದು ತಿಳಿಸಿದರು.

ಕುಖ್ಯಾತ ರೌಡಿಶೀಟರ್‌ಗಳು ಪ್ರತ್ಯಕ್ಷ: ತಾಲೂಕು ಉಪವಿಭಾಗ ವ್ಯಾಪ್ತಿಯ ರೌಡಿಶೀಟರ್‌ಗಳು ಚುನಾವಣೆ ಸಂದರ್ಭದಲ್ಲಿ ಶಾಂತಿ ಕಾಪಾಡಲು ಹಾಗೂ ಸಮಾಜದ ಯಾವುದೇ ಅಹಿತಕರ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಎಚ್ಚರಿಕೆ ನೀಡಲು ಪೊಲೀಸರು ಪರೇಡ್‌ ನಡೆಸಲಾಗುತ್ತದೆ. ಆದರೆ, ಈ ಹಿಂದಿನ ರೌಡಿಗಳ ಪರೇಡ್‌ಗಳಲ್ಲಿ ಕುಖ್ಯಾತ ರೌಡಿಶೀಟರ್‌ಗಳು ಹಾಜರಾಗುತ್ತಿರಲಿಲ್ಲ. ಆದರೆ, ಈ ಬಾರಿ ಪುಡಿ ರೌಡಿಗಳ ಜೊತೆ ಕುಖ್ಯಾತ ರೌಡಿಶೀಟರ್‌ಗಳು ಸಹ ಹಾಜರಾಗಿದ್ದಾರೆ. ಕುಖ್ಯಾತ ರೌಡಿಶೀಟರ್‌ಗಳು ಕಾನೂನು ಬಾಹೀರ ಚಟುವಟಿಕೆಗಳಲ್ಲಿ ಭಾಗವಹಿಸಬಾರದೆಂದು ಎಸ್ಪಿ ಖಡಕ್‌ ಎಚ್ಚರಿಕೆ ನೀಡಿದರು.

ಜಾನುವಾರು ಕಳ್ಳತನ: ಉಪವಿಭಾಗ ವ್ಯಾಪ್ತಿಯ ದಾಬಸ್‌ಪೇಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಆರೇಳು ಜಾನುವಾರುಗಳ ಕಳ್ಳತನ ಪ್ರಕರಣಗಳು ದಾಖಲಾಗಿದ್ದು, ಖದೀಮರು ಸೆರೆಯಾಗದ ಬಗ್ಗೆ ಪ್ರತಿಕ್ರಿಯಿಸಿದ ಎಸ್ಪಿ, ಜಾನುವಾರು ಕಳ್ಳತನದ ಬಗ್ಗೆ ಮಾಹಿತಿ ಇಲ್ಲ. ಜಾನುವಾರು ಕಳ್ಳತನವಾಗಿರುವ ಗ್ರಾಮಗಳ ವ್ಯಾಪ್ತಿಯ ಪೊಲೀಸ್‌ ಠಾಣೆಯಿಂದ ಮಾಹಿತಿ ಪಡೆದು ತಕ್ಷಣ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಭಯೋತ್ಪಾದಕ ಕೃತ್ಯಗಳ ಬಗ್ಗೆ ಎಚ್ಚರಿಕೆ: ಶ್ರೀಲಂಕಾದಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಬೆಂಗಳೂರಿನ ಮೇಲೆ ಕರಿನೆರಳು ಬಿದ್ದಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಪಟ್ಟಣ ಸೇರಿದಂತೆ ನೆಲಮಂಗಲ ಉಪವಿಭಾಗ ವ್ಯಾಪ್ತಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಯಾವುದೇ ಕೃತ್ಯ ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ತಿಳಿಸಿದರು.

ಈ ಸಂದರ್ಭದಲ್ಲಿ ಡಿವೈಎಸ್‌ಪಿ ಆರ್‌.ಪಾಂಡುರಂಗ, ಪರೀಕ್ಷಾರ್ಥಿ ಡಿವೈಎಸ್ಪಿ ರೀನಾ ಸುವರ್ಣಾ, ವೃತ್ತ ನಿರೀಕ್ಷಕ ಎಚ್‌.ಆರ್‌.ಅನಿಲ್‌ಕುಮಾರ್‌, ಉಪವಿಭಾಗ ವಾಪ್ತಿಯ ಸಬ್‌ಇನ್ಸ್‌ಪೆಕ್ಟರ್‌ಗಳಾದ ಬಿ.ಆರ್‌.ಮಂಜುನಾಥ್‌, ಕುಮಾರಸ್ವಾಮಿ, ಶಂಕರ್‌ ನಾಯಕ್‌, ಮಂಜೇಗೌಡ ಮತ್ತಿತರರು ಭಾಗವಹಿಸಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ