ಉಪ ಚುನಾವಣೆ ನಂತರ ರಾಜಕೀಯ ಚಿತ್ರಣ ಬದಲು

Team Udayavani, Nov 3, 2019, 3:00 AM IST

ಹೊಸಕೋಟೆ: ರಾಜ್ಯದಲ್ಲಿ ಮುಂಬರುವ 15 ಕ್ಷೇತ್ರಗಳ ಉಪ ಚುನಾವಣೆ ನಂತರ ರಾಜಕೀಯ ಚಿತ್ರಣ ಬದಲಾಗಲಿದೆ ಎಂದು ಮಾಜಿ ಸಚಿವ ಸಚಿವ ಕೃಷ್ಣಬೈರೇಗೌಡ ಹೇಳಿದರು. ಸಮೀಪದ ಸಮದ್‌ ಪ್ಯಾಲೇಸ್‌ನಲ್ಲಿ ಏರ್ಪಡಿಸಿದ್ದ ಉಪಚುನಾವಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರ ಪಡೆಯಲು ಪಕ್ಷಾಂತರಕ್ಕೆ ಪ್ರೋತ್ಸಾಹ ನೀಡಿದ ಬಿಜೆಪಿಗಷ್ಟೇ ಅಲ್ಲದೆ ರಾಜೀನಾಮೇ ನೀಡಿರುವವರಿಗೂ ಸಹ ಮತದಾರರು ಸೂಕ್ತ ಪಾಠ ಕಲಿಸಲಿದ್ದಾರೆ ಎಂದರು.

ರಾಜ್ಯ ಸರ್ಕಾರದ ನಿರ್ಲಕ್ಷ್ಯ: ಉತ್ತರ ಕರ್ನಾಟಕದ ನೆರೆ, ರಾಜ್ಯದಲ್ಲಿ ಉಂಟಾಗಿರುವ ಬರ ಪರಿಸ್ಥಿತಿಯಲ್ಲಿ ನಿರ್ವಹಿಸುವಲ್ಲಿ ನಿರ್ಲಕ್ಷ್ಯ ತೋರುತ್ತಿದ್ದು, ಕೇವಲ ಅಧಿಕಾರದಲ್ಲಿ ಉಳಿಯಲು ಕಸರತ್ತು ನಡೆಸುವುದರಲ್ಲಿಯೇ ಕಾಲಹರಣ ಮಾಡಲಾಗುತ್ತಿದೆ. ರಾಜ್ಯದ ಜನತೆಯ ಹಿತ ಕಾಪಾಡುವಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ವಿಫ‌ಲವಾಗಿದೆ. ಮುುಖ್ಯಮಂತ್ರಿ ಯಡಿಯೂರಪ್ಪ ಒಬ್ಬಂಟಿಗರಾಗಿದ್ದು ಕೇಂದ್ರ ಸರಕಾರವಾಗಲೀ ಸಚಿವರಾಗಲೀ ಅಗತ್ಯವಾದ ಸಹಕಾರ ನೀಡುತ್ತಿಲ್ಲ ಎಂದು ಹೇಳಿದರು.

ಎಂಟಿಬಿಗೆ ಪಾಠ ಕಲಿಸಿ: ಕ್ಷೇತ್ರ ಪ್ರತಿನಿಧಿಸಿದ್ದ ಮಾಜಿ ಸಚಿವ ಎಂಟಿಬಿ ನಾಗರಾಜ್‌ ಸಚಿವ ಸ್ಥಾನ, ಅನುದಾನ ಬಿಡುಗಡೆಯಲ್ಲಿ ಪ್ರಾತಿನಿಧ್ಯದಂತಹ ಎಲ್ಲಾ ಸೌಲಭ್ಯಗಳನ್ನು ಪಡೆದು ಸ್ವಾರ್ಥ ಸಾಧನೆಗಾಗಿ ಪಕ್ಷ ತೊರೆದು ಇದೀಗ ಸುಳ್ಳು ಹೇಳಿಕೆ ನೀಡಿ ತಮ್ಮ ನಿರ್ಧಾರ ಸರಿ ಎಂದು ಸಾಬೀತು ಮಾಡಲು ಹರಸಾಹಸ ಮಾಡುತ್ತಿ¤ದ್ದಾರೆ. ಇಂತಹ ವಿಶ್ವಾಸದ್ರೋಹಿಗಳಿಗೆ ಮತದಾರರು ಸಹ ಚುನಾವಣೆಯಲ್ಲಿ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.

ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಚುನಾವಣಾ ಪ್ರಚಾರಕ್ಕೆ ಸೀಮಿತರಾಗದೆ ಪ್ರತಿ ಮತದಾರರನ್ನು ಭೇಟಿ ಮಾಡಿ ಪಕ್ಷದ ಸಂಘಟನೆಗೆ ಶ್ರಮಿಸಿ ಮತದಾರರಿಗೆ ಸಿದ್ದರಾಮಯ್ಯ ನೇತೃತ್ವದ ಹಿಂದಿನ ಕಾಂಗ್ರೆಸ್‌ದ ಸಾಧನೆಗಳನ್ನು ಮನವರಿಕೆ ಮಾಡಿಕೊಡಬೇಕು. ನ.4ರಂದು ಸಿದ್ದರಾಮಯ್ಯನವರು ಮಂಜೂರು ಮಾಡಿದ್ದ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳು ಮತ್ತೂಮ್ಮೆ ಶಂಕುಸ್ಥಾಪನೆ ನೆರವೇರಿಸುತ್ತಿರುವುದು ಹಾಸ್ಯಾಸ್ಪದ ವ್ಯಂಗ್ಯವಾಡಿದರು.

ಜವಾಬ್ದಾರಿ ಹಂಚಿಕೆ: ಈಗಾಗಲೇ ಬೂತ್‌ ಮಟ್ಟದ ಪದಾಧಿಕಾರಿಗಳ ಸಮಿತಿಯನ್ನು ರಚಿಸಿ ಜವಾಬ್ದಾರಿ ಹಂಚಿಕೆ ಮಾಡಲಾದ್ದು, ಗ್ರಾಮದ ಪ್ರತಿ ಬೂತ್‌ಗೆ ಒಬ್ಬರು, ನಗರ ಪ್ರದೇಶದಲ್ಲಿ ಇಬ್ಬರು ಕಾರ್ಯಕರ್ತರನ್ನು ನೇಮಿಸಿ ತಾಲೂಕಿನ 5 ಹೋಬಳಿಗಳಿಗೂ ಉಸ್ತುವಾರಿಗಳಾಗಿ ಶಾಸಕರುಗಳಿಗೆ ಅಧಿಕಾರ ನೀಡಲಾಗಿದೆ. ಸ್ಥಳೀಯ ಮುಖಂಡರು, ಕಾರ್ಯಕರ್ತರು ಉಸ್ತುವಾರಿಗಳ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸಬೇಕು ಎಂದರು.

ಹೆಬ್ಟಾಳ ಶಾಸಕ ಬೈರತಿ ಸುರೇಶ್‌ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ವಲಸಿಗರು ಎಂದು ಟೀಕಿಸುವ ಯಾವುದೇ ನೈತಿಕ ಹಕ್ಕು ಎಂಟಿಬಿ ನಾಗರಾಜ್‌ಗಿಲ್ಲ. ಇದೀಗ ತಾಲೂಕಿನಲ್ಲಿ ಬಚ್ಚೇಗೌಡರ ಶ್ರಮಪಟ್ಟು ನಿರ್ಮಿಸಿದ ಮನೆಗೆ ಹಾವಿನಂತೆ ನುಸುಳುತ್ತಿರುವ ಎಂಟಿಬಿ ನಾಗರಾಜ್‌ ಯಾರು ಎಂದು ಪ್ರಶ್ನಿಸಿದರು. ತಮ್ಮ ಹಣ ಬಲದಿಂದ ಮತದಾರರನ್ನು ಕೊಳ್ಳಬಹುದು ಎಂಬ ವಿಶ್ವಾಸವಿರುವ ವ್ಯಕ್ತಿಗಳಿಗೆ ಮತದಾರರು ಸೂಕ್ತ ಪಾಠ ಕಲಿಸಬೇಕು.

ಪೊಲೀಸ್‌ ಇಲಾಖೆ ದುರುಪಯೋಗ ಪಡಿಸಕೊಂಡು ಕಾರ್ಯಕರ್ತರ ವಿರುದ್ಧ ಸುಳ್ಳು ಮೊಕದ್ದಮೆ ಹಾಕಿ ಬೆದರಿಕೆ ಹಾಕಿ ಅವರ ಆತ್ಮಸ್ಥೈರ್ಯ ಕುಗ್ಗಿಸಲು ಪ್ರಯತ್ನಿಸಲಾಗುತ್ತಿದೆ. ಇಂತಹ ಷಡ್ಯಂತ್ರಗಳಿಂದ ವಿಚಲಿತರಾಗದೆ ಕಾರ್ಯಕರ್ತರು ಧೈರ್ಯದಿಂದ ಪಕ್ಷದ ಸಂಘಟನೆಯಲ್ಲಿ ತೊಡಗಬೇಕು ಎಂದರು.

ವೀಕ್ಷಕರಾಗಿ ಆಗಮಿಸಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ವಿಷ್ಣುನಾಥನ್‌ ಮಾತನಾಡಿ, ರಾಜ್ಯದಲ್ಲಿ ಹಿಂದೆ ನಡೆದ ಎಲ್ಲಾ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್‌ ಪಕ್ಷ ಜಯಗಳಿಸಿದು, ಉತ್ತಮ ಸಾಧನೆ ಮಾಡಿದೆ. ಈಗಲೂ ಸಹ ಅದೇ ಹುಮ್ಮಸ್ಸಿನಿಂದ ಚುನಾವಣೆ ಎದುರಿಸಲಿದೆ ಎಂದರು. ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ, ಮಾಲೂರು ಶಾಸಕ ನಂಜೇಗೌಡ, ಕ್ಷೇತ್ರದ ಉಪ ಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ಪದ್ಮಾವತಿ ಸುರೇಶ್‌, ಎಐಸಿಸಿ ಸದಸ್ಯೆ ಕಮಲಾಕ್ಷಿ ರಾಜಣ್ಣ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಮುನಿಶಾಮಣ್ಣ ಇನ್ನಿತರರು ಉಪಸ್ಥಿತರಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ