ವಿಸಾಜಿ ಕಲ್ಯಾಣ ನೆಲದ ಅನನ್ಯ ಪ್ರತಿಭೆ: ಶ್ರೀ

ರಸಗಂಗಾಧರ' ನಾಟಕ ಪ್ರದರ್ಶನ•ಡಾ|ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದ 43ನೇ ಉಪನ್ಯಾಸ

Team Udayavani, Sep 15, 2019, 1:14 PM IST

ಬಸವಕಲ್ಯಾಣ: ಬಿಕೆಡಿಬಿ ಸಭಾಭವನದಲ್ಲಿ ನಡೆದ ಡಾ| ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದ 43ನೇ ಉಪನ್ಯಾಸ ಹಾಗೂ ಶಂಕರಯ್ನಾ ಘಂಟಿ ನಿರ್ದೇಶನದ ರಸಗಂಗಾಧರ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಲ್ಕಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿದರು

ಬಸವಕಲ್ಯಾಣ: ವಿಕ್ರಮ ವಿಸಾಜಿ ಅವರು ಭಾಲ್ಕಿ ಮತ್ತು ಕಲ್ಯಾಣ ನೆಲದ ಅನನ್ಯ ಪ್ರತಿಭೆ. ಅವರ ಬರಹಗಳು ಅಕಾಡೆಮಿಕ್‌ ಆಗಿ ಮತ್ತು ಸಾಮಾನ್ಯರಿಗಾಗಿ ಅತ್ಯಂತ ಆಪ್ತವಾಗಿವೆ. ಅವರ ‘ರಸಗಂಗಾಧರ’ ನಾಟಕ ಪ್ರದರ್ಶನ ಮತ್ತು ವಚನ ಸಾಹಿತ್ಯದ ಪ್ರಸ್ತುತತೆ ಕುರಿತ ಉಪನ್ಯಾಸ ಎರಡೂ ಸೈದ್ಧಾಂತಿಕ ಸಮನ್ವಯದ ರೂಪವಾಗಿವೆ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಶ್ರೀ ಗುರುಬಸವ ಪಟ್ಟದೇವರು ಹೇಳಿದರು.

ನಗರದ ಬಿಕೆಡಿಬಿ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಡಾ|ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದ 43ನೇ ಉಪನ್ಯಾಸ ಹಾಗೂ ಶಂಕರಯ್ನಾ ಘಂಟಿ ನಿರ್ದೇಶನದ ‘ರಸಗಂಗಾಧರ’ ನಾಟಕ ಪ್ರದರ್ಶನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ರಸಗಂಗಾಧರ ನಾಟಕ ತತ್ವಶಾಶ÷ ಸೂಫಿ, ಕಾವ್ಯಶಾಸ್ತ್ರ ಮತ್ತು ಬದುಕಿನ ಆಳದ ದರ್ಶನ ನೀಡುತ್ತದೆ ಎಂದರು.

ವಚನ ಸಾಹಿತ್ಯ ಜೀವಸಂಕುಲದ ಸಂವೇದನೆ ಒಳಗೊಂಡಿದೆ. ಅದರ ಸೂಕ್ಷ್ಮತೆಯ ಗ್ರಹಿಕೆ ಈ ಕಾಲದ ಅಗತ್ಯ. ಮಹಿಳೆಯರು ಶಿಕ್ಷಿತರು ಹಾಗೂ ವಿಚಾರವಾದಿಗಳು ಆಗುವ ಮೂಲಕ ವಚನಗಳ ಆಶಯ ಈಡೇರಿಸುವ ಅಗತ್ಯವಿದೆ. ಮನುಷ್ಯರು ತಮ್ಮ ಹತಾಶೆಗಳನ್ನು ಮೀರಿ ನಿಲ್ಲಬೇಕಾಗಿದೆ. ವಚನಗಳಲ್ಲಿ ಪ್ರಾಯೋಗಿಕವಾಗಿ ಸ್ಥೈರ್ಯದಿಂದ ಬದುಕುವ ಶಕ್ತಿ ಅಡಕವಾಗಿದೆ. ಅವುಗಳ ಅಧ್ಯಯನದಿಂದ ಹೆಚ್ಚು ಸ್ಪಷ್ಟತೆ ಮತ್ತು ನಿಖರತೆಯ ಅರಿವಾಗುತ್ತದೆ ಎಂದರು.

ಮಾಜಿ ಶಾಸಕ ಎಂ.ಜಿ. ಮುಳೆ ಮಾತನಾಡಿ, ವೈಚಾರಿಕತೆ ಮತ್ತು ಸಾಮಾಜಿಕ ನ್ಯಾಯ ಪ್ರತಿಪಾದಿಸುತ್ತ ವಿಶ್ವ ದಾರ್ಶನಿಕ ಲೋಕದ ಭಾಗವಾಗಿ ವಚನಗಳು ನಿಲ್ಲುತ್ತವೆ. ವಚನ ಸಾಹಿತ್ಯ ಎಲ್ಲ ಕಾಲಕ್ಕೂ ಸಲ್ಲುವ ಚಿಂತನೆ ಹೊಂದಿವೆ. ಅವುಗಳ ಅಧ್ಯಯನ ನಿರಂತರ ನಡೆದರೆ ಹೊಸ ಹೊಳಹು ಸಿಗುತ್ತದೆ ಎಂದರು.

ಕೋಹಿನೂರಿನವರಾದ ವಿಕ್ರಮ ವಿಸಾಜಿ ಅವರ ಚಾರಿತ್ರಿಕ ಮತ್ತು ತತ್ವಶಾಸ್ತ್ರದ ವಸ್ತುವಿರುವ ನಾಟಕ ರಸಗಂಗಾಧರ ಪಠ್ಯವಾಗಿ ಓದಿದ ವಿದ್ಯಾರ್ಥಿಗಳಿಗೆ ಪ್ರದರ್ಶನವಾಗಿ ನೋಡುವ ಸುಯೋಗವಿದೆ. ಜನರಂಗದ ಪ್ರಯೋಗ ಈ ನೆಲದ ಸಂಸ್ಕೃತಿಗೆ ಒಂದು ಹೆಜ್ಜೆಗುರುತಾಗಿದೆ. ನಾಟಕವನ್ನು ಓದುವ ಮತ್ತು ನೋಡುವ ಕ್ರಿಯೆ, ಆಲೋಚಿಸುವ ಮತ್ತು ವಿಮರ್ಶಿಸುವ ಪ್ರಕ್ರಿಯೆಗಳಿಗೆ ಇಂದು ನಾವೆಲ್ಲ ಸಾಕ್ಷಿಯಾಗಿದ್ದೇವೆ ಎಂದರು.

ವಚನ ಸಾಹಿತ್ಯದ ಪ್ರಸ್ತುತತೆ ಕುರಿತು ಪ್ರೊ| ಟಿ. ರಘುಪ್ರಸಾದ ಉಪನ್ಯಾಸ ನೀಡಿ, ವಚನ ಸಾಹಿತ್ಯ ಕನ್ನಡ ಸಂಸ್ಕೃತಿಯ ಪ್ರಧಾನ ಶಕ್ತಿಯಾಗಿದೆ. ನಡೆ ನುಡಿ ಸಿದ್ಧಾಂತದ ಮೇಲಿರುವ ಸಾಹಿತ್ಯ ವೈಚಾರಿಕ ಪ್ರಜ್ಞೆ ಮಾಡಿಸಿದ್ದಕ್ಕಾಗಿ ಎಲ್ಲ ಕಾಲಕ್ಕೂ ಪ್ರಸ್ತುತವಾಗಿದೆ. ಸಂವಿಧಾನದ ಆಶಯವನ್ನು ವಚನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕಾಣುತ್ತೇವೆ. ಪ್ರಜಾ ಪ್ರಭುತ್ವದ ನಿಲುವುಗಳಾದ ಸಮಾನತೆ, ಸ್ವಾತಂತ್ರ್ಯದ ತಾತ್ವಿಕವಾಗಿ ವಚನಗಳಲ್ಲಿ ಅಡಕವಾಗಿವೆ. ಬಹುತ್ವ ಸಾರುವ ವಚನ ಸಾರ್ವಕಾಲಿಕವಾಗಿವೆ ಎಂದರು.

ತಾಪಂ ಅಧ್ಯಕ್ಷೆ ಯಶೋಧಾ ನೀಲಕಂಠ ರಾಠೊಡ, ಜಿಪಂ ಸದಸ್ಯ ಆನಂದ ಪಾಟೀಲ, ತಹಶೀಲ್ದಾರ್‌ ಸಾವಿತ್ರಿ ಶರಣು ಸಲಗರ, ಪೌರಾಯುಕ್ತರಾದ ಸುರೇಶ ಬಬಲಾದ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮೇತ್ರೆ, ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಗುರುನಾಥ ಗಡ್ಡೆ, ಕಸಾಪ ಅಧ್ಯಕ್ಷರಾದ ಡಾ|ರುದ್ರಮುಣಿ ಮಠಪತಿ, ಡಾ| ಶಿವಲೀಲಾ ಮಠಪತಿ, ಯೋಗರಾಜ ಕೆ, ನಾಗೇಂದ್ರ ಢೋಲೆ, ಡಾ|ಜಯಶೇನ ಪ್ರಸಾದ, ಚಂದ್ರಕಾಂತ ಕಿವಡೆ, ಡಾ|ಎ.ಡಿ. ಪಾಟೀಲ, ಮಲ್ಲಪ್ಪಾ ಧಬಾಲೆ, ರಾಜಕುಮಾರ ಸಿರಗಾಪೂರ, ನೀಲಕಂಠ ರಾಠೊಡ, ಅರ್ಜುನ ಕನಕ, ಚಂದ್ರಕಾಂತ ಅಕ್ಕಣ್ಣ, ಸೂರ್ಯಕಾಂತ ಪಾಟೀಲ, ಡಾ|ಕ್ಷೇಮಲಿಂಗ ಬಿರಾದಾರ ಇದ್ದರು. ದೇವೀಂದ್ರ ಬರಗಾಲೆ ನಿರೂಪಿಸಿದರು. ಪ್ರತಿಷ್ಠಾನದ ಅಧ್ಯಕ್ಷ ಎಸ್‌.ಜಿ. ಹುಡೆದ ಸ್ವಾಗತಿಸಿದರು. ಡಾ|ಭೀಮಾಶಂಕರ ಬಿರಾದಾರ ಪ್ರಾಸ್ತಾವಿಕ ಮಾತನಾಡಿದರು. ಡಾ| ಶಿವಾಜಿ ಮೇತ್ರೆ ವಂದಿಸಿದರು. ಎಸ್‌.ಬಿ.ಆರ್‌. ಶಾಲೆಯ ವಿಧ್ಯಾರ್ಥಿನಿ ಸುಧಾ ದತ್ತಾತ್ರಿ ಹಾಗೂ ನಾರಾಯಣಪೂರ ಸರಕಾರಿ ಪ್ರೌಢಶಾಲೆಯ ವಿಧ್ಯಾರ್ಥಿನಿಯರಿಂದ ವಚನ ನೃತ್ಯ ನಡೆಯಿತು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ