ಬದುಕಿ ಬಂತು ಜೋಡಿ ಹಕ್ಕಿ

•60 ಗಂಟೆ ನರಕಯಾತನೆ ಎನ್‌ಡಿಆರ್‌ಎಫ್‌ ಯಶಸ್ವಿ ಕಾರ್ಯಾಚರಣೆ

Team Udayavani, Aug 9, 2019, 11:52 AM IST

ಬೆಳಗಾವಿ: ಈ ಜೋಡಿ ಹಕ್ಕಿ 60 ಗಂಟೆಗಳಿಂದ ಮರದಲ್ಲಿ ನೆರವಿನ ಹಸ್ತಕ್ಕಾಗಿ ಕಾಯ್ದು ಕುಳಿತಿತ್ತು. ಆರಡಿ ಕೆಳಗೇ ರುದ್ರ ಭಯಂಕರ ಜಲರಾಶಿ. ತಲೆ ಮೇಲೆ ನಿರಂತರ ವರ್ಷಧಾರೆ. ಬದುಕಿ ದಡ ಸೇರುತ್ತೇವೆಂಬ ಆತ್ಮಬಲವೇ ಇಂದು ಅವರನ್ನು ಕಾಪಾಡಿದೆ.

ಡ್ರೋನ್‌, ಕ್ರೇನ್‌, ಎನ್‌ಡಿಆರ್‌ಎಫ್‌, ಸೈನಿಕರು, ಸ್ಥಳೀಯರ ಸಹಾಯ ಹಸ್ತ ಯಾವ ಪ್ರಯತ್ನವೂ ಫಲ ನೀಡದೇ 60 ತಾಸು ಅನ್ನ ನೀರಿಲ್ಲದೇ ಈ ದಂಪತಿ ಚಳಿಗೆ ನಡುಗುತ್ತ, ಸಾವಿನ ಭಯಕ್ಕೆ ಬೆದರುತ್ತ ಕಾಲ ಕಳೆದಿದೆ.

ಮಂಗಳವಾರ ಎಂದಿನಂತೆ ಬಳ್ಳಾರಿ ನಾಲಾ ಬಳಿಯ ಹೊಲದ ಕೆಲಸಕ್ಕೆ ತೆರಳಿದ ಕಬಲಾಪುರ ಗ್ರಾಮದ ನಿವಾಸಿ ಕಾಡಪ್ಪ ಹಾಗೂ ಪತ್ನಿ ರತ್ನವ್ವ ಮಳೆ ಹೆಚ್ಚಾಗಿದ್ದರಿಂದ ಮನೆ ಸೇರಿದ್ದಾರೆ. ಆದರೆ ಬೆಳಗಾವಿ ನಗರದ ನೀರೆಲ್ಲ ಹರಿದು ಹೋಗುವ ಬಳ್ಳಾರಿ ನಾಲಾ ನೀರು ನೋಡ ನೋಡುತ್ತಿದ್ದಂತೆ ಮನೆ ಸುತ್ತ ಆವರಿಸುತ್ತ ಮನೆಯಿದ್ದ ಪ್ರದೇಶವೇ ಜಲಾವೃತವಾಗಿದೆ. ಇದರಿಂದ ಆತಂಕಿತ ದಂಪತಿ ಸಹಾಯಕ್ಕಾಗಿ ಮನೆಯಿಂದಲೇ ಮೊರೆಯಿಟ್ಟಿದ್ದಾರೆ. ಮನೆಯಿಂದ 200 ಮೀಟರ್‌ ಅಂತರದಲ್ಲಿರುವ ರಸ್ತೆಯಲ್ಲಿ ಕೂಗು ಕೇಳಿದ ಗ್ರಾಮಸ್ಥರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.

ನಂತರ ನಡೆದಿದ್ದು, ದಂಪತಿ ರಕ್ಷಣೆಯ ಸಾಹಸ ಕಾರ್ಯಾಚರಣೆ. ಪೊಲೀಸರು, ಅಗ್ನಿಶಾಮಕ ದಳ, ಎನ್‌ಡಿಆರ್‌ಎಫ್‌, ಸೈನಿಕರು ಬೋಟ್ ಸಮೇತ 80 ಜನ ಕಾರ್ಯಾಚರಣೆಗಿಳಿದರು. ಈ ಮಧ್ಯೆ ನೀರಿನ ಮಟ್ಟ ಹೆಚ್ಚುತ್ತಲೇ ನಡೆದಿತ್ತು. ಮನೆಯಲ್ಲಿ ಬೆಚ್ಚಗಿದ್ದ ಜೋಡಿ ಮನೆಗೆ ನೀರು ನುಗ್ಗಿದಾಗ ಮಾಳಿಗೆಯೇರಿತು. ಅಷ್ಟಕ್ಕೂ ಅವರ ಕಷ್ಟಗಳ ಸರಮಾಲೆ ಮುಗಿಯಲಿಲ್ಲ. 24 ಗಂಟೆಗಳ ಕಾಲ ನೆನೆದ ಮಣ್ಣಿನ ಮನೆ ಸೊಂಟ ಮುರಿದುಕೊಂಡು ಕುಸಿಯಿತು. ಪುಣ್ಯಕ್ಕೆ ಮನೆ ಮೇಲಿದ್ದ ಮಾವಿನ ಮರ ದಂಪತಿ ಕೈ ಹಿಡಿಯಿತು. ಅಲ್ಲೇ ಆಶ್ರಯ ಕಂಡುಕೊಂಡ ಗಂಡ ಹೆಂಡತಿ ನೆರವಿಗಾಗಿ ಕಾಯ್ದರು.

ಇತ್ತ ಮೊದಲನೇ ದಿನ ಅವರನ್ನು ರಕ್ಷಿಸಲು ಅತ್ಯುತ್ಸಾಹದಿಂದ ನೀರಿಗಿಳಿದ ಯುವಕನೊಬ್ಬ ಕೊಚ್ಚಿ ಹೋಗಿ ಆತನೂ ಗಿಡವೊಂದನ್ನು ಆಶ್ರಯಿಸಿ ವಾಪಸಾಗಿದ್ದನು. ಮನೆಯ ನಾಲ್ಕೂ ಭಾಗದಲ್ಲಿ ರಭಸದಿಂದ ಹರಿಯುವ ನೀರು ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ನೀರಿನ ಭೋರ್ಗರೆತಕ್ಕೆ ಯಾರ ದನಿಯೂ ಕೇಳದಂತ ಸ್ಥಿತಿ ಇತ್ತು. ಸ್ಥಳೀಯ ಇಬ್ಬರು ಯುವಕರು ಬೋಟ್ ಮೂಲಕ ಅವರನ್ನು ತಲುಪುವ ಯತ್ನವೂ ವಿಫಲವಾಗಿ ಬೋಟ್ ಮುಗುಚಿ ಗಿಡ ಕಂಟಿಗಳಲ್ಲಿ ಅವರು ಸಿಲುಕಿಕೊಂಡಿದ್ದರು.

ಪೊಲೀಸ್‌ ಆಯುಕ್ತರು, ತಹಶೀಲ್ದಾರರು, ತಾಪಂ ಇಒ, ಶಾಸಕಿ ಲಕ್ಷ್ಮೀ ಹೆಬ್ಟಾಳಕರ, ಶಾಸಕ ಸತೀಶ ಜಾರಕಿಹೊಳಿ ಬುಧವಾರ ದಿನವಿಡೀ ಅಲ್ಲಿಯೇ ಬೀಡು ಬಿಟ್ಟು ರಕ್ಷಣಾ ಕಾರ್ಯಾಚರಣೆಗೆ ಬಲ ತುಂಬುವ ಪ್ರಯತ್ನ ಮಾಡಿದರು. ಸ್ಥಳೀಯರು ತ್ವರಿತ ಕಾರ್ಯಾಚರಣೆಗೆ ಮನವಿ ಮಾಡಿದರು. ಹೆಲಿಕಾಪ್ಟರ್‌ ಬಳಸುವಂತೆ ಸಲಹೆ ಮಾಡಿದರು. ಹೇಗಾದರೂ ಮಾಡಿ ದಂಪತಿ ರಕ್ಷಣೆ ಮಾಡಿ ಎಂದು ಆಕ್ರೋಶಗೊಂಡರು.

ಆದರೆ ಕಾರ್ಯಾಚರಣೆ ಮಾತ್ರ ವೈಫಲ್ಯಕ್ಕೆ ನಿರಾಶೆಗೊಳ್ಳದೇ ಬಿಟ್ಟೂ ಬಿಡದೇ ನಡೆಯುತ್ತಲೇ ಇತ್ತು. ಬುಧವಾರ ಸಂಜೆ ಬೆಳಗಾವಿಗೆ ಬಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗಮನಕ್ಕೆ ವಿಷಯ ತರಲಾಗಿತ್ತು. ಕೇಂದ್ರದಿಂದ ಹೆಲಿಕಾಪ್ಟರ್‌ ನೆರವಿಗಾಗಿ ಸಿಎಂ ಮನವಿ ಕೂಡ ಮಾಡಿದ್ದರು. ಗುರುವಾರ ಸಂಜೆಯೊಳಗಾಗಿ ಹೆಲಿಕಾಪ್ಟರ್‌ ಇಲ್ಲಿಗೆ ಬರುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದರು.

ಗುರುವಾರ ಬೆಳಗ್ಗೆಯಿಂದ ಮಳೆಯ ಪ್ರಮಾಣ ಕೊಂಚ ತಗ್ಗಿದ್ದು ಕಾರ್ಯಾಚರಣೆ ತಂಡದಲ್ಲಿ ಸ್ವಲ್ಪ ಆಶಾವಾದ ಮೂಡಿಸಿತು. ಬಳ್ಳಾರಿ ನಾಲಾ ಹರಿವು ಇಳಿಮುಖವಾಗಿತ್ತು. ಆಗ ಎನ್‌ಡಿಆರ್‌ಎಫ್‌ ತಂಡ ಧೈರ್ಯ ಮಾಡಿ ಹಗ್ಗ ತೆಗೆದುಕೊಂಡು ಬೋಟ್ ಅನ್ನು ದಂಪತಿ ಇರುವ ಜಾಗಕ್ಕೆ ತಲುಪಿತು.

ಮರದ ಮೇಲಿದ್ದ ದಂಪತಿಯನ್ನು ಕೆಳಗಿಳಿಸಿ ಬೋಟ್ ನಿಂದ ದಡ ಸೇರಿಸಲಾಯಿತು. ಸಾಹಸ ಮೆರೆದ ಎನ್‌ಡಿಆರ್‌ಎಫ್‌, ಅಗ್ನಿಶಾಮಕ ದಳ ಮತ್ತು ಫೋಲೀಸ್‌ ಇಲಾಖೆಯವರು ಬೋಟ್ ಮೂಲಕ ಕಾರ್ಯಾಚರಣೆ ನಡೆಸಿ ದಂಪತಿಯ ಪ್ರಾಣ ಉಳಿಸಿದರು. ಮೂರು ದಿನದಿಂದ ಊಟ, ತಿಂಡಿ ಇಲ್ಲದೇ ಮರದಲ್ಲಿ ಕುಳಿತಿದ್ದ ದಂಪತಿ ನಿತ್ರಾಣಗೊಂಡಿದ್ದರು. ಧಾರಾಕಾರ ಮಳೆ ಹಾಗೂ ಚಳಿಯಲ್ಲಿಯೇ ಮೂರು ದಿನ ಕಾಲ ಕಳೆದಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

2-3 ದಿನದಲ್ಲಿ ಚೇತರಿಕೆ:

ರಾತ್ರಿ-ಹಗಲು ಮರದಲ್ಲಿ ಮಳೆಯ ಮಧ್ಯೆ ಇದ್ದದ್ದರಿಂದ ಇಬ್ಬರೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 2-3 ದಿನದಲ್ಲಿ ಇಬ್ಬರ ಆರೋಗ್ಯ ಸುಧಾರಿಸುತ್ತದೆ. ಜೀವಕ್ಕೆ ಅಪಾಯವಿಲ್ಲ. ಎಂದು ವೈದ್ಯರು ತಿಳಿಸಿದ್ದಾರೆ. ಜಿಲ್ಲಾಸ್ಪತ್ರೆಗೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಕೇಶ್‌ ಸಿಂಗ್‌, ನಗರ ಪೊಲೀಸ್‌ ಆಯುಕ್ತ ಲೋಕೇಶ್‌ ಕುಮಾರ್‌ ಭೇಟಿ ನೀಡಿ ದಂಪತಿಯ ಆರೋಗ್ಯ ವಿಚಾರಿಸಿದ್ದಾರೆ.
ಠಿಕಾಣಿ ಹೂಡಿದ್ದ ಶಾಸಕರು:

ಕಾರ್ಯಾಚರಣೆ ಸ್ಥಳದಲ್ಲಿ ಎರಡು ದಿನಗಳಿಂದ ಶಾಸಕರಾದ ಸತೀಶ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಟಾಳಕರ ಠಿಕಾಣಿ ಹೂಡಿದ್ದರು. ಶಾಸಕ ಜಾರಕಿಹೊಳಿ ತಮ್ಮ ಒಡೆತನದ ಸಕ್ಕರೆ ಕಾರ್ಖಾನೆಯಿಂದ ಕ್ರೇನ್‌ ತರಿಸಿದ್ದರು. ಬಳಿಕ ಅಲ್ಲಿ ಅಡ್ಡಿ ಆಗುತ್ತಿದ್ದ ಮಣ್ಣಿನ ರಸ್ತೆ ಮೇಲೆ ನಾಲ್ಕೈದು ಲಾರಿ ಕಲ್ಲು ತರಿಸಿ ಸಮತಟ್ಟು ಮಾಡಲಾಗಿತ್ತು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ