ಗೆಲ್ಲುವ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ಕೊಡಿ: ಸತೀಶ ಜಾರಕಿಹೊಳಿ
Team Udayavani, Dec 9, 2022, 8:06 PM IST
ಬೆಳಗಾವಿ: ಹಿರಿಯರು ಎಂಬುದನ್ನಷ್ಟೇ ಪರಿಗಣಿಸದೆ ಗೆಲ್ಲುವ ಅಭ್ಯರ್ಥಿಗಳಿಗಷ್ಟೇ ಕಾಂಗ್ರೆಸ್ ಟಿಕೆಟ್ ಕೊಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ನಾವು ಯಾವುದೇ ಕಾರ್ಯತಂತ್ರ ರೂಪಿಸದಿದ್ದರೆ ಚುನಾವಣೆ ಗೆಲ್ಲಲು ಆಗುವುದಿಲ್ಲ. ಆದರೆ ನಮ್ಮಲ್ಲಿ ಸೋಲುತ್ತಾರೆಂದು ಗೊತ್ತಿದ್ದರೂ ಟಿಕೆಟ್ ನೀಡುತ್ತಾರೆ. ಹಿರಿಯರು ಎಂಬ ಕಾರಣಕ್ಕೆ ಟಿಕೆಟ್ ನೀಡುತ್ತೇವೆ. ಗೆಲ್ಲುವ ಹಾಗಿದ್ದರೆ ಮಾತ್ರ ಹಿರಿಯರಿಗೆ ಟಿಕೆಟ್ ನೀಡಬೇಕು. ಈಗ ಜಾತಿ ಯುಗ ಮುಗಿದಿದೆ. ಕೆಲಸ ಮಾಡುವುದನ್ನು ಜನರು ನೋಡುತ್ತಾರೆ. ರಾಜ್ಯ ಕಾಂಗ್ರೆಸ್ ಪಕ್ಷವು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಹೇಳಿದರು.
ಕುಟುಂಬ ರಾಜಕಾರಣದಲ್ಲಿ ಗೆಲ್ಲುವ ಸಾಮರ್ಥ್ಯ ಇದ್ದರೆ ಟಿಕೆಟ್ ಕೊಡಬಹುದು. ಗೆಲ್ಲುವ ಶಕ್ತಿ ಇದ್ದ ಕಡೆ ಒಂದೇ ಕುಟುಂಬಕ್ಕೆ ಎರಡು ಮೂರು ಟಿಕೆಟ್ ಕೊಟ್ಟರೂ ತಪ್ಪಲ್ಲ ಎಂದು ಹೇಳಿದರು.
ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಗೆಲುವಿಗೆ ಅಲ್ಲಿನ ಬಿಜೆಪಿ ಸರ್ಕಾರದ ಆಡಳಿತ ವಿರೋಧಿ ಅಲೆಯೇ ಕಾರಣ. ಇದಲ್ಲದೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಿಯಂಕಾ ಗಾಂಧಿ ಮತ್ತು ಕಾಂಗ್ರೆಸ್ ಚುನಾವಣಾ ಉಸ್ತುವಾರಿಗಳು ಅಲ್ಲಿ ಚುನಾವಣಾ ತಂತ್ರಗಳನ್ನು ಹೆಣೆದು ಭರ್ಜರಿ ಪ್ರಚಾರ ನಡೆಸಿದ್ದರಿಂದ ಕಾಂಗ್ರೆಸ್ ಪಕ್ಷ 40 ಸೀಟು ಪಡೆದು ಬಹುಮತ ಸಾಧಿಸಿದೆ ಎಂದರು.