ಎಂಇಎಸ್‌ 48 ಅಭ್ಯರ್ಥಿಗಳ ಠೇವಣಿ ಜಪ್ತಿ

Team Udayavani, May 25, 2019, 11:40 AM IST

ಬೆಳಗಾವಿ: ಗಡಿ ವಿಷಯ ಮುಂದಿಟ್ಟುಕೊಂಡು ರಾಜಕಾರಣ ಮಾಡುವ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್‌)ಗೆ ಈ ಸಲದ ಲೋಕಸಭೆ ಚುನಾವಣೆಯಲ್ಲೂ ಭಾರೀ ಮುಖಭಂಗವಾಗಿದೆ. ಕಣದಲ್ಲಿದ್ದ ಎಂಇಎಸ್‌ ಬೆಂಬಲಿತ ಎಲ್ಲ 48 ಅಭ್ಯರ್ಥಿಗಳ ಠೇವಣಿ ಜಪ್ತಿ ಆಗಿದೆ.

ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ 101 ಅಭ್ಯರ್ಥಿಗಳನ್ನು ನಿಲ್ಲಿಸಿ ದೇಶದಲ್ಲಿಯೇ ಇತಿಹಾಸ ಸೃಷ್ಟಿಸಲು ಮುಂದಾಗಿದ್ದ ಎಂಇಎಸ್‌ ಕೊನೆಯ ಕ್ಷಣದಲ್ಲಿ ಕೇವಲ 48 ಜನರನ್ನು ಕಣಕ್ಕಿಳಿಸಿತ್ತು. ಆದರೆ ಈ ಎಲ್ಲರ ಠೇವಣಿ ಜಪ್ತಿ ಆಗಿದೆ. ಅತಿ ಹೆಚ್ಚು ಮತಗಳನ್ನು ಪಡೆದು ದೇಶದಲ್ಲಿ ಮರಾಠಿ ಭಾಷಿಕರ ಒಗ್ಗಟ್ಟು ಪ್ರದರ್ಶನದ ಬಗ್ಗೆ ಕನಸು ಕಾಣುತ್ತಿದ್ದ ಎಂಇಎಸ್‌ ಈಗ ಸೋತು ಸುಣ್ಣಗಾಗಿದೆ. ಮತ್ತೂಮ್ಮೆ ಇಂಥ ಸಾಹಸಕ್ಕೆ ಮುಂದಾಗದಿರಲು ನಿರ್ಧರಿಸಿದೆ.

ಮರಾಠಿ ಪ್ರದೇಶದಲ್ಲೂ ಅಪಮಾನ: ದೇಶದಲ್ಲಿ ಬೀಸಿದ ನರೇಂದ್ರ ಮೋದಿ ಅಲೆಗೆ ರಾಷ್ಟ್ರೀಯ ಪಕ್ಷಗಳು, ಪ್ರಾದೇಶಿಕ ಪಕ್ಷಗಳು ನೆಲಕ್ಕಚ್ಚಿವೆ. ಇಂಥದರಲ್ಲಿ ಎಂಇಎಸ್‌ ಕೂಡ ಧೂಳಿಪಟವಾಗಿದೆ. ಕೇವಲ ಬೆರಳೆಣಿಕೆಯಷ್ಟು ಮತಗಳನ್ನು ಪಡೆದಿರುವ ಈ ಅಭ್ಯರ್ಥಿಗಳು ಬಿಜೆಪಿಯ ಸುರೇಶ ಅಂಗಡಿ ಎದುರು ಮಕಾಡೆ ಮಲಗಿದ್ದಾರೆ. ಮರಾಠಿ ಭಾಷಿಕ ಪ್ರದೇಶಗಳಲ್ಲೂ ಎಂಇಎಸ್‌ನ ಅಭ್ಯರ್ಥಿಗಳು ಎರಡಂಕಿಗಿಂತಲೂ ಹೆಚ್ಚು ಮತಗಳನ್ನು ಗಳಿಸಲು ಸಾಧ್ಯವಾಗಲಿಲ್ಲ.

ಎಂಇಎಸ್‌ ತನ್ನ ಭದ್ರಕೋಟೆ ಎಂದೇ ಗುರುತಿಸಿಕೊಂಡಿದ್ದ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿಯೂ ಬಿಜೆಪಿ ಹೆಚ್ಚಿನ ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಕಾಂಗ್ರೆಸ್‌ ಶಾಸಕಿ ಲಕ್ಷ್ಮೀ ಹೆಬ್ಟಾಳಕರ ಗೆದ್ದಿರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಾಗೂ ಎಂಇಎಸ್‌ಗಿಂತಲೂ ಹೆಚ್ಚಿನ ಮತಗಳನ್ನು ಬಿಜೆಪಿ ಪಡೆದಿದೆ. ಸುರೇಶ ಅಂಗಡಿ ಬಗ್ಗೆ ಅಸಮಾಧಾನವಿದ್ದರೂ ಮತದಾರರು ಮಾತ್ರ ಪ್ರತಿ ಚುನಾವಣೆಯಂತೆ ರಾಷ್ಟ್ರ ಮಟ್ಟದ ಬೆಳವಣಿಗೆಗಳನ್ನು ನೋಡಿ ಬಿಜೆಪಿ ಬೆಂಬಲಿಸುವುದು ಇಲ್ಲಿಯ ರೂಢಿ.

ತಲೆ ಕೆಳಗಾದ ಲೆಕ್ಕಾಚಾರ: ಈ ಬಾರಿ ಕಣದಲ್ಲಿದ್ದ 48 ಎಂಇಎಸ್‌ ಅಭ್ಯರ್ಥಿಗಳು ಗಡಿ ವಿಷಯವನ್ನು ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ತರುವ ಉದ್ದೇಶ ಹೊಂದಿದ್ದರು. ಜತೆಗೆ ಅತಿ ಹೆಚ್ಚು ಮತಗಳನ್ನು ಪಡೆದು ಒಗ್ಗಟ್ಟು ಪ್ರದರ್ಶಿಸುವ ಹಗಲು ಕನಸು ಎಂಇಎಸ್‌ ಕಾಣುತ್ತಿತ್ತು. ಆದರೆ ಇವರ ಲೆಕ್ಕಾಚಾರ ಎಲ್ಲವೂ ತಲೆಕೆಳಗಾಗಿದ್ದು, ಮೋದಿ ಎದುರು ಕೊಚ್ಚಿ ಹೋಗಿದ್ದಾರೆ. ಒಬ್ಬ ಅಭ್ಯರ್ಥಿಯೂ ಸಾವಿರಕ್ಕಿಂತ ಹೆಚ್ಚು ಮತಗಳನ್ನು ಪಡೆಯಲು ಸಾಧ್ಯವಾಗಲಿಲ್ಲ.

ಒಟ್ಟಾರೆ ಕಣದಲ್ಲಿದ್ದ 57 ಅಭ್ಯರ್ಥಿಗಳ ಪೈಕಿ 19 ಜನ ಮಾತ್ರ ನಾಲ್ಕಂಕಿ ದಾಟಿದ್ದು, ಇನ್ನುಳಿದವರೆಲ್ಲ ಮೂರಂಕಿಗೇ ತೃಪ್ತಿ ಪಡಬೇಕಾಗಿದೆ. ಇದರಲ್ಲಿ 48 ಜನ ಎಂಇಎಸ್‌ ಬೆಂಬಲಿತರಾಗಿದ್ದರು. ನೋಟಾ ಮತಗಳಷ್ಟೂ ಈ ಅಭ್ಯರ್ಥಿಗಳು ಪಡೆಯದಿರುವುದೇ ದುರಂತ. ಬೆಳಗಾವಿಯಲ್ಲಿ ಒಟ್ಟು 3233 ನೋಟಾ ಮತಗಳು ಚಲಾವಣೆಯಾಗಿವೆ.

ಬಿಜೆಪಿಗೆ ಬಿದ್ದ ಎಂಇಎಸ್‌-ಕಾಂಗ್ರೆಸ್‌ ಮತಗಳು

ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ತನ್ನ ಗಟ್ಟಿ ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಜತೆಗೆ ಇನ್ನುಳಿದಂತೆ ಕಾಂಗ್ರೆಸ್‌ ಹಾಗೂ ಎಂಇಎಸ್‌ನ ಮತಗಳೂ ಹೆಚ್ಚಿನ ಪ್ರಮಾಣದಲ್ಲಿ ಬಿಜೆಪಿಗೆ ಬಂದಿವೆ. ಬೆಳಗಾವಿ ಗ್ರಾಮೀಣ, ದಕ್ಷಿಣ ಹಾಗೂ ಉತ್ತರ ಮತ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮರಾಠಿ ಭಾಷಿಕರಿದ್ದಾರೆ. ಆದರೆ ಈ ಮತಗಳು ಬಿಜೆಪಿ ಬಿಟ್ಟು ಎಲ್ಲಿಯೂ ತಡಕಾಡಿಲ್ಲ. ಹೀಗಾಗಿ ಮೂರೂ ಕ್ಷೇತ್ರಗಳಲ್ಲಿಯೂ ಅಂಗಡಿ ಹೆಚ್ಚಿನ ಅಂತರ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಿಜೆಪಿ ವಿಜಯೋತ್ಸವದಲ್ಲಿ ಎಂಇಎಸ್‌ ಭಾಗಿ

ಮತ ಎಣಿಕೆ ಕೇಂದ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸಾಧುನವರ ಹಾಗೂ ಬಿಜೆಪಿಯ ಸುರೇಶ ಅಂಗಡಿ ಹೊರತುಪಡಿಸಿದರೆ ಇನ್ನುಳಿದ ಯಾವೊಬ್ಬ ಪಕ್ಷೇತರ ಅಭ್ಯರ್ಥಿಯ ಏಜೆಂಟರೂ ಕಂಡು ಬರಲಿಲ್ಲ. ಬೆಳಗ್ಗೆಯಿಂದಲೇ ಯಾರೂ ಇತ್ತ ಸುಳಿದಿರಲಿಲ್ಲ. ಆದರೆ ಎಂಇಎಸ್‌ನ ಅನೇಕ ಕಾರ್ಯಕರ್ತರು ಬಿಜೆಪಿಯ ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಇಲ್ಲಿ ಭಾಷೆ ರಾಜಕಾರಣಕ್ಕಿಂತ ಮೋದಿ ನೋಡಿ ಮತ ಹಾಕಿದ್ದೇವೆ ಎಂದು ಹೇಳಿಕೊಳ್ಳುತ್ತಿರುವುದು ಕಂಡು ಬಂತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ