ಸಿಎಂ ಬಂದು ಹೋದ್ರು ಕಷ್ಟಗಳು ಮಾತ್ರ ತಪ್ಪಿಲ್ಲ

Team Udayavani, Jun 19, 2019, 9:41 AM IST

ಬೀದರ: ಹಣಕುಣಿ ಗ್ರಾಮದಲ್ಲಿ ಕುಮಾರಸ್ವಾಮಿ ವಾಸ್ತವ್ಯ ಮಾಡಿದ್ದ ಮನೆ.

ದುರ್ಯೋಧನ ಹೂಗಾರ
ಬೀದರ
: ಮನೆಗೆ ಮುಖ್ಯಮಂತ್ರಿ ಬಂದು ಹೋದರೂ ಕಷ್ಟಕಾರ್ಪಣ್ಯಗಳು ತಪ್ಪಿಲ್ಲ. ಇಂದಿಗೂ ನಮ್ಮ ಬಾಳು ಹಸನಾಗಿಲ್ಲ. ಆದರೂ ಸರ್ಕಾರ ನೀಡಿದ ಭರವಸೆಗಳನ್ನು ಈಡೇರಿಸಲಿ ಎಂಬ ನಿರೀಕ್ಷೆಯಲ್ಲಿದ್ದೇವೆ ಎಂದು ಬೀದರ್‌ ಜಿಲ್ಲೆಯ ಹುಮನಾಬಾದ ತಾಲೂಕಿನ ಹಣಕುಣಿ ಗ್ರಾಮದ ಮೃತ ರೈತನ ಪತ್ನಿ ಆರೀಫಾ ಅವರು ಹೇಳುವ ಮಾತು.

12 ವರ್ಷಗಳ ಹಿಂದೆ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ವಾಸ್ತವ್ಯ ಹೂಡಿದ್ದ ಹಣಕುಣಿ ಗ್ರಾಮದ ಮೃತ ರೈತನ ಕುಟುಂಬದವರನ್ನು ಭೇಟಿ ಮಾಡಿದ ‘ಉದಯವಾಣಿ’ ಎದುರು ಕುಟುಂಬಸ್ಥರು ಹಲವು ಅವ್ಯವಸ್ಥೆಗಳ ಕುರಿತು ಹಳೆ ನೆನಪುಗಳನ್ನು ಮೆಲಕು ಹಾಕಿದರು.

2006-07ರಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಿನ್ನೆಲೆಯಲ್ಲಿ ಸಿಎಂ ಕುಮಾರಸ್ವಾಮಿ ಹತ್ತಾರು ಘೋಷಣೆಗಳ ಜತೆಗೆ ಮೂಲ ಸೌಕರ್ಯ ಕಲ್ಪಿಸುವ ವಾಗ್ಧಾನ ಮಾಡಿದ್ದರು. ಆಡಳಿತ ಕೇಂದ್ರವನ್ನೇ ಗ್ರಾಮಗಳ ಜನರ ಮನೆ ಮುಂದೆ ತಂದು ನಿಲ್ಲಿಸುವ ಮೂಲಕ ರಾಷ್ಟ್ರಮಟ್ಟದಲ್ಲಿ ಅಪಾರ ಜನಪ್ರಿಯತೆ ಪಡೆದುಕೊಂಡಿದ್ದರು. ಆ ಕಾರ್ಯಕ್ರಮ ಕೂಡ ಉತ್ತಮವಾಗಿತ್ತು. ಆದರೆ, ನೊಂದವರಿಗೆ ನೀಡಿದ ಭರವಸೆಗಳನ್ನು ಈಡೇರಿಸುವ ಕೆಲಸವನ್ನು ಆಡಳಿತದಲ್ಲಿ ಇರುವವರು ಮರೆಯಬಾರದು. ಅಂದು ಮನೆಗೆ ಭೇಟಿ ನೀಡಿದ ಮುಖ್ಯಮಂತ್ರಿಗಳು ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಸರ್ಕಾರದಿಂದ ಸಿಗಬೇಕಾದ ಒಂದು ಲಕ್ಷದ ಚೆಕ್‌ ನೀಡಿ ಒಂದು ಫೋಟೊ ತೆಗೆದುಕೊಂಡರೆ ಹೊರತು ನಮ್ಮ ಪೂರ್ಣ ಸಮಸ್ಯೆಗಳನ್ನು ಆಲಿಸಿಲ್ಲ. ಕುಟುಂಬದವರ ಜತೆಗೆ ಮಾತುಕತೆಗೆ ಸಮಯವನ್ನೇ ನೀಡಿಲ್ಲ ಎಂದು ಆರೀಫಾ ಅಳಲು ತೋಡಿಕೊಂಡರು.

ತಂದಿದ್ದೆಲ್ಲ ಹೊತ್ತೂಯ್ದರು: ಬೆಳೆ ಹಾನಿ ಹಾಗೂ ಸಾಲಬಾಧೆಯಿಂದ ಗಂಡ ಆತ್ಮಹತ್ಯೆ ಮಾಡುಕೊಂಡಿದ್ದ. ಗಂಡ ಸತ್ತ 11 ದಿನಕ್ಕೆ ಮುಖ್ಯಮಂತ್ರಿಗಳು ನಮ್ಮ ಮನೆಯಲ್ಲಿ ವಾಸ್ತವ್ಯ ಮಾಡಿದ್ದರು. ಮುಖ್ಯಮಂತ್ರಿಗಳು ಬರುತ್ತಿದ್ದಾರೆ ಅಂತ ಅಧಿಕಾರಿಗಳು ಮನೆಯ ಅಂಗಳದಲ್ಲಿ ಹಾಸುಕಲ್ಲು ಹಾಕಿದ್ದರು. ಒಂದು ಶೌಚಾಲಯ ನಿರ್ಮಿಸಿ ಮನೆಯಲ್ಲಾ ಶೃಂಗರಿಸಿದ್ದರು. ಅಲ್ಲದೆ, ಮುಖ್ಯಮಂತ್ರಿಗಳಿಗೆ ಏರ್‌ ಕೂಲರ್‌, ಫ್ಯಾನ್‌, ಕುರ್ಚಿ, ಮಂಚ, ಹಾಸಿಗೆ ಎಲ್ಲಾ ತರಲಾಗಿತ್ತು. ಮುಖ್ಯಮಂತ್ರಿಗಳು ಇಲ್ಲಿಂದ ತೆರಳಿದ ತಕ್ಷಣ ತಂದಿಟ್ಟಿದ್ದ ಎಲ್ಲಾ ವಸ್ತುಗಳನ್ನು ಹೊತ್ತೂಯ್ದರು. ಚಹಾ ಕುಡಿಯುವ ಒಂದು ಕಪ್‌ ಕೂಡ ಉಳಿಯದಂತೆ ಎಲ್ಲವನ್ನೂ ತೆಗೆದುಕೊಂಡು ಹೋದರು ಎನ್ನುತ್ತ ಆಕ್ರೋಶ ವ್ಯಕ್ತಪಡಿಸಿದರು.

55.92 ಲಕ್ಷ ಅನುದಾನ: ಮುಖ್ಯಮಂತ್ರಿಗಳು ಗ್ರಾಮಕ್ಕೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಜಿಪಂ ಸುರ್ವಣ ಗ್ರಾಮೋದಯ ಯೋಜನೆಯಡಿ 55.92 ಲಕ್ಷ ರೂ.ಗಳ ವಿವಿಧ ಕಾಮಗಾರಿ ಮಾಡಲಾಗಿತ್ತು. ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣ, ರಸ್ತೆ ಮತ್ತು ಚರಂಡಿ, ಅಂಗನವಾಡಿ ಕೇಂದ್ರಗಳ ನಿರ್ಮಾಣ ಸೇರಿದಂತೆ ಇತರೆ ಕಾಮಗಾರಿಗೆ ಅನುದಾನ ಬಳಸಲಾಗಿತ್ತು. ಆದರೆ ಯಾವ ಕೆಲಸವೂ ಪೂರ್ಣಗೊಂಡಿಲ್ಲ. ಗ್ರಾಮದಲ್ಲಿ ಸೂಕ್ತ ಚರಂಡಿಗಳ ವ್ಯವಸ್ಥೆ ಇಲ್ಲ. ಸಮುದಾಯ ಭವನ ಖಾಸಗಿ ವ್ತಕ್ತಿಗಳ ಪಾಲಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

ನನಗೆ ಮೂವರು ಹೆಣ್ಣು, ಇಬ್ಬರು ಗಂಡು ಮಕ್ಕಳಿದ್ದಾರೆ. ಗಂಡ ಸತ್ತ ನಂತರ ಹೊಲದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದೇನೆ. ಇಬ್ಬರು ಹೆಣ್ಣು ಮಕ್ಕಳ ಮದುವೆ ಮಾಡಿದ್ದೇನೆ. ಆ ಸಂದರ್ಭದಲ್ಲಿ ಸಚಿವರು, ಅಧಿಕಾರಿಗಳು ಮಗನಿಗೆ ನೌಕರಿ ಕೊಡಿಸುವ ಭರವಸೆ ನೀಡಿದ್ದರು. ಇಂದಿಗೂ ಯಾರೂ ನಮ್ಮ ಕಡೆಗೆ ತಿರುಗಿ ನೋಡುತ್ತಿಲ್ಲ. ಮುಖ್ಯಮಂತ್ರಿಗಳು ಬಂದು ಹೋದ ಮನೆ ಎಂದು ಜನರು ಹೇಳುತ್ತಾರೆ. ಆದರೆ, ನಮ್ಮ ಕುಟುಂಬದ ಸ್ಥಿತಿ ಮಾತ್ರ ಸರಿ ಇಲ್ಲ.
ಆರೀಫಾ,
ಸಿಎಂ ವಾಸ್ತವ್ಯ ಮಾಡಿದ್ದ ಮನೆ ಒಡತಿ

ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಯೋಜನೆ ವಾಸ್ತವವಾಗಿ ಕಾರ್ಯ ರೂಪಕ್ಕೆ ಬರಬೇಕು. ಕೇವಲ ಪ್ರಚಾರಕ್ಕೆ ಮಾತ್ರ ಆಗಬಾರದು. ಹಣಕುಣಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅನೇಕರು ವಿವಿಧ ಬೇಡಿಕೆ ಈಡೇರಿಸಲು ಮನವಿ ಸಲ್ಲಿಸಿದ್ದರು. ಆದರೆ, ಯಾವುದೂ ಕಾರ್ಯ ರೂಪಕ್ಕೆ ಬಂದಿಲ್ಲ. ಮುಖ್ಯಮಂತ್ರಿ ಭೇಟಿ ನೀಡುವ ಗ್ರಾಮಗಳು ಮಾದರಿ ಗ್ರಾಮಗಳಾಗಬೇಕು. ನಗರ ಪ್ರದೇಶದಲ್ಲಿನ ಸೌಲಭ್ಯಗಳು ಆ ಗ್ರಾಮದಲ್ಲಿ ದೊರೆಯುವಂತೆ ಮಾಡಬೇಕು.
ಅಶೋಕ ಬಾಲಕುಂದಿ,
ಹಣಕುಣಿ ಗ್ರಾಮಸ್ಥ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ