ಜಾನಪದ ವಿವಿಗೆ 5 ಎಕರೆ ಭೂಮಿ: ರುದ್ರೇಶ

ವೈಜ್ಞಾನಿಕ ಯುಗ ಜಾನಪದ ಸಂಸ್ಕೃತಿಯಿಂದ ವಿಮುಖ•ಕಲಾವಿದರ ಮುಖ್ಯವಾಹಿನಿಗೆ ತರಲು ಪ್ರೋತ್ಸಾಹಿಸಿ

Team Udayavani, Aug 24, 2019, 10:50 AM IST

ಬೀದರ: ರಂಗಮಂದಿರದಲ್ಲಿ ನಡೆದ‌ ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮವನ್ನು ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ ಉದ್ಘಾಟಿಸಿದರು.

ಬೀದರ: ಜಾನಪದ ವಿಶ್ವವಿದ್ಯಾಲಯಕ್ಕೆ ಕಮಠಾಣಾ ಸಮೀಪದಲ್ಲಿ ಈಗಾಗಲೇ 5 ಎಕರೆ ಭೂಮಿ ಮಂಜೂರು ಮಾಡಲಾಗಿದೆ. ಅಲ್ಲದೆ, ನಗರದ ಚಿಕ್ಕಪೇಟೆಯಲ್ಲಿ ಜಾನಪದ ಭವನ ನಿರ್ಮಾಣಕ್ಕಾಗಿ 20 ಗುಂಟೆ ಜಮೀನು ನೀಡಬೇಕು ಎಂಬ ಬೇಡಿಕೆಗೂ ಸ್ಪಂದಿಸುವುದಾಗಿ ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ ಹೇಳಿದರು.

ನಗರದ ರಂಗಮಂದಿರದಲ್ಲಿ ಕರ್ನಾಟಕ ಜಾನಪದ ಪರಿಷತ್‌, ಕರ್ನಾಟಕ ಸಾಹಿತ್ಯ ಸಂಘ, ಜಿಲ್ಲಾ ಜಾನಪದ ಕಲಾವಿದರ ಬಳಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ವೈಜ್ಞಾನಿಕ ಯುಗದಲ್ಲಿ ಜಾನಪದ ಸಂಸ್ಕೃತಿ ಬಿಟ್ಟು ನಾವು ಬಹುದೂರ ಸಾಗಿದ್ದೇವೆ. ಮತ್ತೆ ಜಾನಪದ ವೈಭವವನ್ನು ಸಮಾಜದಲ್ಲಿ ಮೆರೆಸಬೇಕಾದರೆ ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಬೆಳೆಸಬಹುದು. ಮರೆಮಾಚಿದ ಜನಪದ ಕಲಾವಿದರನ್ನು ಸಮಾಜದ ಮುಖ್ಯವಾಹಿನಿಗೆ ತಂದು ಅವರನ್ನು ಪ್ರೋತ್ಸಾಹಿಸಿ, ಜನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಉಳಿಸಿ ಬೆಳೆಸುವ ಕಾರ್ಯವನ್ನು ಪರಿಷತ್ತಿನ ಮೂಲಕ ನಿರಂತರ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಮಾತನಾಡಿ, ನಾವು ಆಧುನಿಕತೆಗೆ ಮತ್ತು ವೈಜ್ಞಾನಿಕ ಪದ್ಧತಿಗೆ ಜೋತುಬಿದ್ದು ನಮ್ಮ ದೇಶದ ಜನಪದ ಸಂಸ್ಕೃತಿಯನ್ನು ಮರೆತುಬಿಟ್ಟಿದ್ದೇವೆ. ಆದರೆ ಕೆಟ್ಟ ಮೇಲೆ ಬುದ್ಧಿ ಬಂತು ಎನ್ನುವ ಹಾಗೆ ವಿವಿಧ ರೋಗಗಳಿಗೆ ತುತ್ತಾಗಿ ಮತ್ತೆ ಹಳೆಯ ಪದ್ಧತಿಯನ್ನೇ ಅಳವಡಿಸಿಕೊಳ್ಳುತ್ತಿದ್ದೇವೆ. ಬಿಪಿ, ಶುಗರ್‌ಗಳಂತಹ ರೋಗಗಳನ್ನು ಗುಣಪಡಿಸಿಕೊಳ್ಳಲು ಮತ್ತೆ ರಾಗಿ, ನವಣೆ, ಬರಗು ಮುಂತಾದ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳುತ್ತಿದ್ದೇವೆ. ನಾವು ಎಷ್ಟೇ ಮುಂದುವರಿದರೂ ನಮ್ಮ ಜೀವನ ಜಾನಪದ ಪದ್ಧತಿಯಿಂದಲೇ ಆರಂಭ ಮತ್ತು ಅಂತ್ಯವಾಗುತ್ತದೆ ಎಂಬುದನ್ನು ಯಾರೂ ಕೂಡ ಮರೆಯಬಾರದು ಎಂದರು.

ಡಾ| ಜಗನ್ನಾಥ ಹೆಬ್ಟಾಳೆ ಮಾತನಾಡಿ, 1846ರಲ್ಲಿ ಥಾಮ್ಸನ್‌ ಎಂಬುವವರು ಈ ಜಗತ್ತಿಗೆ ‘ಫೋಕ್ಲೋರ್‌’ ಎಂಬ ಶಬ್ದವನ್ನು ಪರಿಚಯಿಸಿದರು. ಹಾ.ಮಾ. ನಾಯಕ ಅವರು ಮೈಸೂರು ಉತ್ಸವದಲ್ಲಿ ಇದನ್ನು ಮೊಟ್ಟಮೊದಲಿಗೆ ‘ಜಾನಪದ’ ಎಂಬ ಹೆಸರನ್ನಿಟ್ಟು ಭಾರತದಲ್ಲಿ ಪರಿಚಯಿಸಿದರು. ಮುಂದೆ ಎಚ್.ಎಲ್. ನಾಗೇಗೌಡರು ಮತ್ತು ತಿಮ್ಮೇಗೌಡರು ಇದನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಿದರು. ಕರ್ನಾಟಕ ಜಾನಪದ ಪರಿಷತ್ತಿಗೆ ಸರ್ಕಾರ ಪ್ರತಿ ವರ್ಷ 2 ಕೋಟಿ ರೂ. ಅನುದಾನ ನೀಡುತ್ತಿದೆ. ಈ ನಿಟ್ಟಿನಲ್ಲಿ ಜಾನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಜಾನಪದ ದಿನಾಚರಣೆ ಹಾಗೂ ಜಾನಪದ ಝೇಂಕಾರದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಶಿವಕುಮಾರ ಪಾಂಚಾಳ ಹಾಗೂ ಸಂಗಡಿಗರಿಂದ ಪ್ರಾರ್ಥನಾಗೀತೆ ಜರುಗಿತು. ಹಿರಿಯ ಕಲಾವಿದ ರಘುನಾಥರಾವ್‌ ಪಾಂಚಾಳ ಮತ್ತು ವಿಶ್ವನಾಥ ಪಾಂಚಾಳ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ವಿಜಯಕುಮಾರ ಸೋನಾರೆ ಪ್ರಾಸ್ತಾವಿಕ ಮಾತನಾಡಿದರು. ಅಲ್ಲದೆ, ಜಾನಪದ ಝೇಂಕಾರ ಕಾರ್ಯಕ್ರಮದಲ್ಲಿ ಗಾಯಕಿ ರೇಖಾ ಸೌದಿ, ಡಿಂಗ್ರಿ ನರೇಶ, ಶಿವಾನಂದ ಬಿಜಾಪುರ, ಅಮಿತ ಜನವಾಡಕರ್‌ ಸೇರಿದಂತೆ ಇತರೆ ಕಲಾವಿದರು ಭಾಗವಹಿಸಿ ಕಾರ್ಯಕ್ರಮ ನೀಡಿದರು.

ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ, ಯೋಗೇಂದ್ರ ಯದಲಾಪೂರೆ, ನಿಜಲಿಂಗಪ್ಪ ತಗಾರೆ, ಎಸ್‌.ಬಿ.ಕುಚಬಾಳ, ಮಹಾರುದ್ರ ಡಾಕುಳಗಿ, ಪ್ರೊ| ಎಸ್‌.ಬಿ. ಬಿರಾದಾರ, ಶಕುಂತಲಾ ವಾಲಿ, ಶಂಕರೆಪ್ಪ ಹೊನ್ನಾ, ಪ್ರಕಾಶ ಕನ್ನಾಳೆ, ಶಿವಶರಣಪ್ಪ ಗಣೇಶಪುರ, ಲಕ್ಷ್ಮಣರಾವ್‌ ಕಾಂಚೆ, ಮಲ್ಲಮ್ಮ ಸಂತಾಜಿ, ಶ್ರೀಕಾಂತ ಪಾಟೀಲ, ಕಲ್ಯಾಣರಾವ್‌ ಬಂಬುಳಗೆ, ಶಿವಕುಮಾರ ಕಟ್ಟೆ, ಸಂಜೀವಕುಮಾರ ಅತಿವಾಳೆ, ಮಹೇಶಕುಮಾರ ಕುಂಬಾರ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ