ಬೀದಿಗಳಲ್ಲಿ ಯಮನ ವೇಷ ಧರಿಸಿ ಕೋವಿಡ್-19 ಜಾಗೃತಿ
Team Udayavani, Apr 27, 2021, 4:58 PM IST
ವಿಜಯಪುರ: ಕೊರೊನಾ ಜಾಗೃತಿಗಾಗಿ ಸರ್ಕಾರ ಹಲವಾರು ಜಾಗೃತಿ ಕಾರ್ಯಕ್ರಮ ರೂಪಿಸಿದೆ. ಇದಕ್ಕೆ ಕೈ ಜೋಡಿಸಿದ ಕಲಾವಿದರು ಸಹ ವಿಭಿನ್ನ ಕಾರ್ಯಕ್ರಮಗಳ ಮೂಲಕ ರೋಗದ ಬಗ್ಗೆ ಜಾಗೃತಿ ಮೂಡಿಸಿದರು.
ಕಲಾವಿದ ಶಕ್ತಿಕುಮಾರ ಉಕುಮನಾಳ ಯಮಧರ್ಮನ ವೇಷ ಧರಿಸಿ ಕೋವಿಡ್ ಕುರಿತು ಜಾಗೃತಿ ಮೂಡಿಸಿದರು. ಯಮನ ವೇಷ ಧರಿಸಿ ಕೈಯಲ್ಲಿ ಗಧೆ ಹಿಡಿದು ನೀವು ಕಡ್ಡಾಯವಾಗಿ ಮಾಸ್ಕ್ ಧರಿಸಿ ವಿನಾಕಾರಣ ಅಪಾಯಕ್ಕೆ ಆಹ್ವಾನ ನೀಡದಿರಿ ಎಂಬ ಸಂದೇಶ ನೀಡಿದರು. ಹುಲು ಮಾನವರೇ ನೀವು ಮಾಸ್ಕ್ ಧರಿಸಿ ನಿಮ್ಮ ಜೀವವನ್ನು ನೀವು ಉಳಿಸಿಕೊಳ್ಳಿ ಎಂದು ಜಾಗೃತಿ ಮೂಡಿಸಿದರು. ಚಿಕ್ಕ ಮಕ್ಕಳಿಗೂ ಸಹ ಕರೆದು ಏ ತಮ್ಮ ನೀನು ಮಾಸ್ಕ್ ಧರಿಸು, ಎಲ್ಲರಿಗೂ ತಿಳಿ ಹೇಳು ಎಂದ ಯಮಧರ್ಮರಾಯನ ಸ್ಟೈಲ್ ನಲ್ಲಿ ಡೈಲಾಗ್ ಹೇಳಿ ಜಾಗೃತಿ ಮೂಡಿಸುವ ಜೊತೆಗೆ ಉಚಿತವಾಗಿ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸಿದರು.
ಪ್ರತಿಯೊಬ್ಬರು ಕೊರೊನಾ ಬಗ್ಗೆ ಜಾಗೃತಿ ವಹಿಸಬೇಕು. ಭಯ ಪರಿಹಾರವಲ್ಲ, ಜಾಗೃತಿಯೇ ಪರಿಹಾರ, ಜಾಗೃತಿಯೇ ಕೊರೊನಾ ಸೋಂಕು ನಿಗ್ರಹಕ್ಕೆ ದಿವ್ಯ ಔಷಧ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಅನವಶ್ಯಕವಾಗಿ ಮನೆಯಿಂದ ಹೊರಗೆ ಬಾರದಿರಿ, ಗುಣಮಟ್ಟದ ಮಾಸ್ಕ್ ಧರಿಸಿ, ಕಡ್ಡಾಯವಾಗಿ ಪದೇ ಪದೇ ಸಾಬೂನಿನಿಂದ ಕೈ ತೊಳೆದುಕೊಳ್ಳಿ. ಈ ಎಲ್ಲ ಆರೋಗ್ಯ ಸೂತ್ರ ಪಾಲಿಸಿ ಎಂದು ಮನವಿ ಮಾಡಿದರು.