ನಿಡಗುಂದಿ ಪಪಂ ಗದ್ದುಗೆ ಏರಲು ತೀವ್ರ ಪೈಪೋಟಿ
ಅಧ್ಯಕ್ಷ ಸ್ಥಾನಕ್ಕೆ ಎಸ್‌ಸಿ-ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ಅ ವರ್ಗ
Team Udayavani, Mar 18, 2020, 1:22 PM IST
ನಿಡಗುಂದಿ: ಸರಕಾರ ಸ್ಥಳೀಯ ಸಂಸ್ಥೆಗೆ ಮೀಸಲಾತಿ ಪ್ರಕಟ ಮಾಡುತ್ತಿದ್ದಂತೆ ಕಳೆದೊಂದು ವರ್ಷದಿಂದ ಸೈಲೆಂಟಾಗಿದ್ದ ಪಟ್ಟಣ ಪಂಚಾಯತ್ ಸದಸ್ಯರು ಈಗ ಗದ್ದುಗೆ ಹಿಡಿಯಲು ಪೈಪೋಟಿ ಶುರು ಮಾಡಿದ್ದಾರೆ.
ನಿಡಗುಂದಿ ಪಪಂ ಅಧ್ಯಕ್ಷ ಸ್ಥಾನಕ್ಕೆ ಎಸ್‌ಸಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ಅ ವರ್ಗಕ್ಕೆ ಮೀಸಲಾತಿ ನೀಡಿ ಸರಕಾರ ಆದೇಶ ಹೊರಡಿಸಿದೆ. ಕಳೆದ 30 ತಿಂಗಳ ಅಧಿಕಾರ ಹಿಡಿದ ಕಾಂಗ್ರೆಸ್ ಮತ್ತೂಮ್ಮೆ ಕುರ್ಚಿ ಹತ್ತುವಲ್ಲಿ ಕಸರತ್ತು ನಡೆಸಿದರೆ ಅಧಿಕಾರದಿಂದ ದೂರ ಉಳಿದ ಬಿಜೆಪಿ ಈ ಬಾರಿ ಶತಾಯ ಗತಾಯ ಗದ್ದುಗೆ ಹತ್ತುವ ಲೆಕ್ಕಾಚಾರದಲ್ಲಿ ತೊಡಗಿದೆ.
ಕೈ ಮತ್ತು ಕಮಲ ಪಕ್ಷದಲ್ಲಿ ಕುರ್ಚಿ ಹತ್ತಲು ಕಸರತ್ತು ಆರಂಭವಾಗಿದ್ದು ತಲಾ ಒಂದೊಂದು ಪಕ್ಷಕ್ಕೆ ಬೆಂಬಲ ಸೂಚಿಸಿದ್ದ ಪಕ್ಷೇತರರು ಈ ಭಾರಿ ಅದೃಷ್ಟ ಪರೀಕ್ಷೆಗೆ ಸಜ್ಜಾಗುವ ಲಕ್ಷಣಗಳು ಹೆಚ್ಚಾಗಲಿವೆ. ಮೀಸಲಾತಿ ಅಧಿ ಸೂಚನೆ ಪ್ರಕಾರ ಕೈ ಪಕ್ಷದಲ್ಲಿ ಒಬ್ಬರನ್ನು ಬಿಟ್ಟರೆ ಇಬ್ಬರು ಪಕ್ಷೇತರರಲ್ಲೆ ಪೈಪೋಟಿ ನಡೆಯಲಿದೆ. ಈ ಇಬ್ಬರು ಪರಸ್ಪರ ಎದುರಾಳಿಗಳಾಗಿ ಸ್ಪರ್ಧೆ ಮಾಡುವರೋ ಅಥವಾ ತಮ್ಮಲ್ಲಿ ಒಬ್ಬರನ್ನು ಬೆಂಬಲಿಸುವರೋ ಕಾದು ನೋಡಬೇಕು.
ಒಟ್ಟಾರೆ ಚುನಾವಣೆ ದಿನಾಂಕ ನಿಗಯಾದ ಬೆನ್ನಲ್ಲೆ ಒಮ್ಮತ ಅಭ್ಯರ್ಥಿ ಯಾರೆಂಬುದು ತಿಳಿಯಲಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಾರ ಎರಡು ಪಕ್ಷದಲ್ಲಿ ಹೆಚ್ಚಿನ ಸಂಖ್ಯೆ ಸದಸ್ಯರಿದ್ದು ಯಾರು ಸ್ಪರ್ದೆ ನೀಡುತ್ತಾರೆ ಎಂದು ಇನ್ನೂ ಹೊರಬಿದ್ದಿಲ್ಲ.
ಪಟ್ಟಣ ಪಂಚಾಯತ್‌ನಲ್ಲಿ 8 ಕಾಂಗ್ರೆಸ್, 6 ಬಿಜೆಪಿ, ಇಬ್ಬರು ಪಕ್ಷೇತರರು ಆಯ್ಕೆಯಾಗಿದ್ದಾರೆ. ಪಕ್ಷೇರರರಲ್ಲಿ ಒಬ್ಬರು ಕಾಂಗ್ರೆಸ್ ಮತ್ತೂಬ್ಬರು ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ. ಸಂಸದ ಹಾಗೂ ಶಾಸಕರ ಒಂದು ಮತ ಕೂಡಾ ಇದ್ದು ಮ್ಯಾಜಿಕ್ ಸಂಖ್ಯೆ 10 ಇರಲಿದೆ. ಇದನ್ನು ತಲುಪಲು ಎರಡು ಪಕ್ಷದಲ್ಲಿ ಲೆಕ್ಕಾಚಾರ ಶುರುವಾಗಿದೆ. ಹಿಂದಿನ 30 ತಿಂಗಳ ಅವಧಿಯಲ್ಲಿ ಕಾಂಗ್ರೆಸ್‌ನ ಇಬ್ಬರು ಅಧ್ಯಕ್ಷ ಗಾದಿಗೆ ಏರಿದ್ದರು.
ಮೊದಲ 15 ತಿಂಗಳ ಅಧಿಕಾರ ನಡೆಸಿ ರಾಜೀನಾಮೆ ನೀಡಿದ ನಂತರ ಮುಂದಿನ 15 ತಿಂಗಳ ಅವ ಧಿಗೆ ಆಡಳಿತ ಕಾಂಗ್ರೆಸ್ ಪಕ್ಷದಲ್ಲೆ ಇಬ್ಬರಲ್ಲಿ ತೀವ್ರ ಪೈಪೋಟಿ ನಡೆದಿತ್ತು. ಕಾಂಗ್ರೆಸ್‌ನಿಂದ ಇಬ್ಬರು ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್‌ನ ಸದಸ್ಯರು ಒಬ್ಬರಿಗೆ ಬೆಂಬಲಿಸಿ ಮತ ನೀಡಿದರೆ ಇನ್ನುಳಿದ ಬಿಜೆಪಿ ಸದಸ್ಯರು ಮತ್ತೂಬ್ಬರ ಬೆನ್ನಿಗೆ ನಿಂತಿದ್ದರು. ಸಂಸದರು ಮತ ಹಾಕಿದ್ದರೆ ಎರಡು ಕಡೆ ಸಮಬಲವಾಗುತ್ತಿತ್ತು. ಆದರೆ, ಸಂಸದರ ಗೈರು ಹಾಜರಿಯಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ಜಯ ದೊರೆಯಿತು.
ಕುರ್ಚಿ ಯಾರಿಗೆ?: ಕಳೆದ 30 ತಿಂಗಳ ವನವಾಸ ಅನುಭವಿಸಿದ ಬಿಜೆಪಿ ಸದಸ್ಯರು, ರಾಜ್ಯದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದ್ದು ಈ ಬಾರಿ ನಾವೇ ಅಧಿ ಕಾರ ಹಿಡಿಯುತ್ತೇವೆ ಎನ್ನುತ್ತಿದ್ದರೆ. ಹೆಚ್ಚು ಸಂಖ್ಯೆಯನ್ನು ಹೊಂದಿರುವ ಕಾಂಗ್ರೆಸ್ ಯಾವುದೇ ಕಾರಣಕ್ಕೂ ಈ ಭಾರಿಯೂ ಕುರ್ಚಿ ನಮ್ಮ ಪಾಲಾಗಲಿದೆ ಎನ್ನುವ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಮೀಸಲಾತಿ ಪ್ರಕಾರ ಅಧ್ಯಕ್ಷ ಸ್ಥಾನಕ್ಕೆ (ಕಾಂಗ್ರೆಸ್ ಬೆಂಲಿತ ಪಕ್ಷೇತರ ಸೇರಿ ) ಕಾಂಗ್ರೆಸ್‌ನಲ್ಲಿ ಇಬ್ಬರು, ಬಿಜೆಪಿಯಲ್ಲಿ ಪಕ್ಷೇತರ ಬೆಂಬಲಿತ ಒಬ್ಬರು ಮಾತ್ರ ಇದ್ದಾರೆ.
ಇದರಲ್ಲಿ ಯಾರು ಯಾರ ವಿರುದ್ಧ ಒಮ್ಮತ ಅಭ್ಯರ್ಥಿಯಾಗಲಿದ್ದಾರೆ ಎನ್ನುವುದು ಇನ್ನೂ ನಿಖರವಾಗಿಲ್ಲ. ಬಿಜೆಪಿಯ ಸದಸ್ಯರಲ್ಲಿ ಸರಕಾರ ನಮ್ಮದು ಎನ್ನುವ ಅಸ್ತ್ರ ಇದ್ದರೆ, ಕಾಂಗ್ರೆಸ್ ಗೆ ಸಂಖ್ಯಾಬಲ ನಮ್ಮದು ಎನ್ನುವ ಅಸ್ತ್ರ ಇದೆ. ಇಬ್ಬರು ಪಕ್ಷೇತರರು ಕಳೆದ ಬಾರಿಯಂತೆ ತಲಾ ಒಂದೊಂದು ಪಕ್ಷಕ್ಕೆ ಬೆಂಬಲಿಸುವರೋ? ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯದಂತೆ ಯಾರು ಯಾವ ಕಡೆ ಜಂಪ್ ಮಾಡುವರೋ ಗೊತ್ತಿಲ್ಲ ಒಟ್ಟಾರೆ ಈ ಭಾರಿ ಕುರ್ಚಿ ಪಕ್ಷೇತರರ ಪಾಲಾಗುವುದು ಶತಸಿದ್ದ.
ಬಿಜೆಪಿ ಕಳೆದ ಬಾರಿ ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿಗೆ ಬೆಂಬಲ ಸೂಚಿಸಿದ್ದು ಈ ಬಾರಿ ಅವರ ಬೆಂಬಲ ಪಡೆದು ಇನ್ನೊರ್ವ ಪಕ್ಷೇತರರನ್ನು ತಮ್ಮತ್ತ ಸೆಳೆದು ಅಧಿಕಾರ ಹಿಡಿಯುವ ಲೆಕ್ಕಾಚಾರ ನಡೆಸಿದೆ. ಒಟ್ಟಾರೆ ಎರಡೂ ಪಕ್ಷದಲ್ಲಿ ತೆರೆ ಮರೆಯಾಟ ಶುರುವಾಗಿದ್ದು ಚುನಾವಣೆ ದಿನಾಂಕ ನಿಗದಿಗಾಗಿ ಕಾಯುತ್ತಿವೆ. ದಿನಾಂಕ ನಿಗಧಿ ಯಾದ ಬೆನ್ನಲ್ಲೆ ರಾಜಕೀಯ ಚಟುವಟಿಕೆ ಮತ್ತಷ್ಟು ಗರಿಗೆದರಲಿವೆ.