ಬಿಟ್ ಕಾಯಿನ್ ಪ್ರಕರಣದಲ್ಲಿ ಸಿದ್ದು ಹಿಟ್ ಆಂಡ್ ರನ್: ಎನ್. ರವಿಕುಮಾರ್
Team Udayavani, Nov 12, 2021, 4:51 PM IST
ವಿಜಯಪುರ: ರಾಜ್ಯದಲ್ಲಿ ಕೇಳಿ ಬರುತ್ತಿರುವ ಬಿಟ್ ಕಾಯಿನ್ ವಿಚಾರ ಹೊಸದೇನಲ್ಲ. ಆದರೆ ಈ ವಿಷಯದಲ್ಲಿ ಸಿದ್ದರಾಮಯ್ಯ ಹಿಟ್ ಆ್ಯಂಡ್ ರನ್ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ತಿರುಗೇಟು ನೀಡಿದ್ದಾರೆ.
ಶುಕ್ರವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಿದ್ಧರಾಮಯ್ಯ ಆಡಳಿತದ ವೇಳೆಯಲ್ಲೂ ಬಿಟ್ ಕಾಯಿನ್ ಇತ್ತು. ಆಗ ಸಿದ್ಧರಾಮಯ್ಯ ಏಕೆ ತನಿಖೆ ಮಾಡಿಸಲಿಲ್ಲ. ಕಾಂಗ್ರೆಸ್ ನವರಿಗೆ ಮಾಡಲು ಬೇರೆ ಕೆಲಸ ಇಲ್ಲ. ಹೀಗಾಗಿ ಅವರ ಆರೋಪ ಗಂಭೀರವಾಗಿ ಪರಿಗಣಿಸುವಂತೆ ಇಲ್ಲ ಎಂದರು.
ಅಧಿಕಾರದಲ್ಲಿ ಇಲ್ಲದ ಕಾಂಗ್ರೆಸ್ ಮುಖಂಡರು ಆಧಾರ ರಹಿತವಾಗಿ ಏನಾದರೂ ಒಂದನ್ನು ಹುಡುಕಿಕೊಂಡು ಆರೋಪ ಮಾಡುತ್ತಾರೆ. ಮುಟ್ಟೋದು ಓಡಿ ಹೋಗೋದು ಎನ್ನುವಂತೆ ಹಿಟ್ ಆಂಡ್ ರನ್ ಕೆಲಸ ಮಾಡುತ್ತಿದ್ದಾರೆ ಎಂದು ಕುಟುಕಿದ್ದಾರೆ.
ಕಾಂಗ್ರೆಸ್ ನಾಯಕರು ಆಧಾರ ರಹಿತವಾಗಿ ಆರೋಪ ಮಾಡುವ ಬದಲು, ಈ ಬಗ್ಗೆ ಅವರ ಬಳಿ ದಾಖಲೆಗಳಿದ್ದರೆ ಬಹಿರಂಗಗೊಳಿಸಲಿ. ಸರ್ಕಾರ ಪಾರದರ್ಶಕ ತನಿಖೆ ನಡೆಸಲಿದೆ ಎಂದರು.
ಇದನ್ನೂ ಓದಿ:ಬಿಟ್ ಕಾಯಿನ್ ಪ್ರಕರಣದಲ್ಲಿ ಪೊಲೀಸರು, ಸರ್ಕಾರ ಎಲ್ಲರೂ ಇದ್ದಾರೆ: ಪ್ರಿಯಾಂಕ್ ಖರ್ಗೆ
ಕಾಂಗ್ರೆಸ್ ಆರೋಪದ ಬಗ್ಗೆ ತಲೆ ಕೆಡಸಿಕೊಳ್ಳಬೇಡಿ ಎಂದು ದೆಹಲಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ ಎಂಬ ವಿಷಯ ಪತ್ರಿಕೆಗಳ ಮೂಲಕ ತಿಳಿದಿದೆ. ಇದರ ಹೊರತಾಗಿ ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಎಂದರು. ಅಭಿವೃದ್ದಿಯತ್ತ ಗಮನ ಹರಿಸಿ ಎಂದು ಹೈಕಮಾಂಡ್ ಹೇಳಿದ್ದಾಗಿ ತಿಳಿದಿದೆ ಎಂದಷ್ಟೇ ಹೇಳಿದರು.