ಗೌರಿ- ಗಣೇಶ, ಮೊಹರಂ: ರೌಡಿಗಳ ಪರೇಡ್‌

Team Udayavani, Sep 1, 2019, 3:00 AM IST

ಚಾಮರಾಜನಗರ: ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌ ಅವರು ಗೌರಿ- ಗಣೇಶ ಹಬ್ಬ ಹಾಗೂ ಮೊಹರಂ ಹಿನ್ನೆಲೆಯಲ್ಲಿ ನಗರದ ಜಿಲ್ಲಾ ಪೊಲೀಸ್‌ ಕವಾಯತು ಮೈದಾನದಲ್ಲಿ ಉಪವಿಭಾಗದ ಎಂಟು ಪೊಲೀಸ್‌ ಠಾಣೆಗಳ ವ್ಯಾಪ್ತಿಯ ರೌಡಿ ಶೀಟರ್‌ಗಳ ಪರೇಡ್‌ ನಡೆಸಿದರು.

ಚಾಮರಾಜನಗರ ಪಟ್ಟಣ ಪೊಲೀಸ್‌ ಠಾಣೆ, ಗ್ರಾಮಾಂತರ ಪೊಲೀಸ್‌ ಠಾಣೆ, ಪೂರ್ವ ಪೊಲೀಸ್‌ ಠಾಣೆ, ಗುಂಡ್ಲುಪೇಟೆ, ತೆರಕಣಾಂಬಿ, ಬೇಗೂರು, ಸಂತೇಮರಹಳ್ಳಿ, ಕುದೇರು ಪೊಲೀಸ್‌ ಠಾಣೆಗಳ ವ್ಯಾಪ್ತಿಯ 160ಕ್ಕೂ ಹೆಚ್ಚು ರೌಡಿಶೀಟರ್‌ಗಳು ಪರೇಡ್‌ನ‌ಲ್ಲಿದ್ದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಅನಿತಾ ಬಿ.ಹದ್ದಣ್ಣವರ್‌, ಡಿವೈಎಸ್‌ಪಿ ಮೋಹನ್‌ ನೇತೃತ್ವದಲ್ಲಿ ಪರೇಡ್‌ ನಡೆಸಲಾಯಿತು.

ಠಾಣಾಧಿಕಾರಿಗಳಿಂದ ಅಪರಾಧದ ಮಾಹಿತಿ: ಸಾಲಾಗಿ ನಿಂತಿದ್ದ ರೌಡಿ ಶೀಟರ್‌ಗಳ ಪರೇಡ್‌ ನಡೆಸಿದ ಎಸ್ಪಿ ಆನಂದಕುಮಾರ್‌, ಪ್ರತಿ ರೌಡಿ ಶೀಟರ್‌ಗಳು ಮಾಡಿರುವ ಅಪರಾಧ ಕೃತ್ಯಗಳ ಬಗ್ಗೆ ಆಯಾ ಠಾಣಾಧಿಕಾರಿಗಳಿಂದ ಮಾಹಿತಿ ಪಡೆದರು. ಮುಂದಿನ ದಿನಗಳಲ್ಲಿ ಅಪರಾಧ ಕೃತ್ಯಗಳು ಹಾಗೂ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಹಾಳು ಮಾಡದಂತೆ ರೌಡಿಗಳಿಗೆ ಎಚ್ಚರಿಕೆ ನೀಡಿದರು.

ಈಗಾಗಲೇ ನೀವು ರೌಡಿಶೀಟರ್‌ ಪಟ್ಟಿಯಲ್ಲಿದ್ದು, ನಿಮ್ಮ ನಡವಳಿಕೆಗಳ ಆಧಾರದ ಮೇಲೆ ಪಟ್ಟಿಯಿಂದ ಕೈ ಬಿಡಲು ಕ್ರಮವಹಿಸಲಾಗುವುದು. ಇಲ್ಲದಿದ್ದರೆ ರೌಡಿ ಶೀಟರ್‌ನಲ್ಲಿಯೇ ಮುಂದುವರಿಸಲಾಗುವುದು. ಆದ್ದರಿಂದ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬದುಕಲು ಉತ್ತಮ ವರ್ತನೆ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಾರ್ವಜನಿಕರ ಹಿತಾಸಕ್ತಿಗೆ ತೊಂದರೆ ಬೇಡ: ಗೌರಿ-ಗಣೇಶ ಹಾಗೂ ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಚಾಮರಾಜನಗರ ಉಪವಿಭಾಗ ವ್ಯಾಪ್ತಿಯ ಠಾಣೆಗಳಲ್ಲಿನ ರೌಡಿಶೀಟರ್‌ಗಳ ಪರೇಡ್‌ ನಡೆಸಿದ್ದು, ಸಾರ್ವಜನಿಕರ ಹಿತಾಸಕ್ತಿಗೆ ತೊಂದರೆಯಾಗದಂತೆ ವರ್ತನೆಗಳನ್ನು ರೂಢಿಸಿಕೊಳ್ಳುವಂತೆ ತಿಳಿ ಹೇಳಲಾಗಿದೆ ಎಂದರು.

ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರ ನಿರ್ದೇಶನಗಳನ್ನು ಪಾಲಿಸಬೇಕು. ಕಾನೂನಿನ ಚೌಕಟ್ಟಿನಲ್ಲಿ ನಿಮ್ಮ ಹಿತಿಮಿತಿ ಇರಬೇಕು. ಹಬ್ಬದ ವಾತಾವರಣದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಕಾರಣವಾಗದಂತೆ ಇರಬೇಕು. ಇಲ್ಲದಿದ್ದರೆ ಗೂಂಡಾ ಆಕ್ಟ್‌ನಡಿ ಹೆಚ್ಚಿನ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಭಾಗವಹಿಸದ ರೌಡಿ ಶೀಟರ್‌ಗಳ ವಿರುದ್ಧ ಕ್ರಮ: ಅನಾರೋಗ್ಯ ಹಾಗೂ ಬೇರೆ ಪೊಲೀಸ್‌ ಠಾಣೆ ವ್ಯಾಪ್ತಿಗೆ ಒಳಪಡುವ ಅನೇಕ ರೌಡಿ ಶೀಟರ್‌ಗಳು ಪರೇಡ್‌ನ‌ಲ್ಲಿ ಭಾಗವಹಿಸಿಲ್ಲ. ಅಂತಹವರ ಮನೆಗಳಿಗೆ ಬೀಟ್‌ ಪೇದೆ ಭೇಟಿ ನೀಡಿ ಸೂಚನೆ ನೀಡುವ ಮೂಲಕ ಎಚ್ಚರಿಕೆ ನೀಡಲಾಗುವುದು. ಪರೇಡ್‌ನ‌ಲ್ಲಿ ಭಾಗವಹಿಸದ ರೌಡಿ ಶೀಟರ್‌ಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಅವರನ್ನು ರೌಡಿ ಶೀಟರ್‌ನಿಂದ 10 ವರ್ಷಗಳವರೆಗೆ ತೆಗೆದುಹಾಕಬಾರದು ಎಂದು ಆಯಾ ಪೊಲೀಸ್‌ ಠಾಣೆಗಳ ಸಬ್‌ ಇನ್ಸ್‌ಪೆಕ್ಟರ್‌ಗಳಿಗೆ ಎಎಸ್‌ಪಿ ಅನಿತಾ ಬಿ.ಹದ್ದಣ್ಣವರ್‌ ಸೂಚಿಸಿದರು.

ಪೂರ್ವ ಪೊಲೀಸ್‌ ಠಾಣಾ ವ್ಯಾಪ್ತಿಯ ಹೊಂಗನೂರು ಗ್ರಾಮದಲ್ಲಿ ಕೆಲ ವರ್ಷಗಳ ಹಿಂದೆ ಅಂಬೇಡ್ಕರ್‌ ಭಾವಚಿತ್ರಕ್ಕೆ ಅಪಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರೌಡಿ ಶೀಟರ್‌ ಪಟ್ಟಿಯಲ್ಲಿರುವ ಗ್ರಾಮದ ಬಸವಣ್ಣ ಕೆಲ ದಿನಗಳ ಹಿಂದೆ ತನ್ನ ಮನೆಯಲ್ಲಿ ಗೋಡೆಗೆ ಸುಣ್ಣ ಬಳಿಯುತ್ತಿದ್ದಾಗ ಸುಣ್ಣ ಎರಡು ಕಣ್ಣುಗಳಿಗೆ ಬಿದ್ದು ದೃಷ್ಟಿಯನ್ನು ಕಳೆದುಕೊಂಡಿರುವುದಾಗಿ ತಿಳಿದು ಬಂದಿತು.

ಪರೇಡ್‌ನ‌ಲ್ಲಿ ಭಾಗವಹಿಸಿದ್ದ ಬಸವಣ್ಣ ಕುರ್ಚಿಯಲ್ಲಿ ಕುಳಿತಿದ್ದ. ಇದನ್ನು ಗಮನಿಸಿದ ಎಸ್‌ಪಿ ಆನಂದಕುಮಾರ್‌, ಬಸವಣ್ಣನ ಬಗ್ಗೆ ವಿಚಾರಿಸಿದರು. ಆತನ ಬಗ್ಗೆ ಪೂರ್ವ ಪೊಲೀಸ್‌ ಠಾಣೆಯ ಸಬ್‌ ಇನ್ಸ್‌ಪೆಕ್ಟರ್‌ ಪುಟ್ಟಸ್ವಾಮಿ, ಎಸ್‌ಪಿಗೆ ಮಾಹಿತಿ ನೀಡಿದರು. ಕೂಡಲೇ ರೌಡಿ ಶೀಟರ್‌ ಪಟ್ಟಿಯಿಂದ ಬಸವಣ್ಣ ಹೆಸರನ್ನು ತೆಗೆಯುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆನಂದ್‌ ಸೂಚಿಸಿದರು.

ರೌಡಿ ಶೀಟರ್‌ಗೆ ಎಸ್‌ಪಿ ಕಪಾಳ ಮೋಕ್ಷ: ಗೌರಿ ಗಣೇಶ ಹಬ್ಬ ಹಾಗೂ ಮೊಹರಂ ಹಿನ್ನೆಲೆಯಲ್ಲಿ ನಗರದ ಜಿಲ್ಲಾ ಪೊಲೀಸ್‌ ಕವಾಯತು ಮೈದಾನದಲ್ಲಿ ರೌಡಿ ಶೀಟರ್‌ಗಳ ಪರೇಡ್‌ ನಡೆಸಿದ ಎಸ್‌ಪಿ ಆನಂದಕುಮಾರ್‌, ಖಡಕ್‌ ಎಚ್ಚರಿಕೆ ನೀಡ್ತಿದ್ದರೂ ಹುಸಿ ನಗೆ ನಗುತ್ತಾ ನಿಂತಿದ್ದ ರೌಡಿ ಶೀಟರ್‌ ಒಬ್ಬನ ಕಪಾಳಕ್ಕೆ ಬಾರಿಸಿದ ಘಟನೆ ನಡೆಯಿತು.

ತಮ್ಮ ಮುಂದೆ ಕೈಕಟ್ಟಿ ನಿಂತಿದ್ದ ರೌಡಿಗಳಿಗೆ ಎಸ್‌ಪಿ ಎಚ್ಚರಿಕೆ ನೀಡುತ್ತಿದ್ದರು. ಹಾಗೆಯೇ ನಗರದ ಬಲ್ವಿàರ್‌ ಸಿಂಗ್‌ ಎಂಬ ರೌಡಿ ಶೀಟರ್‌ಗೂ ಎಚ್ಚರಿಕೆ ನೀಡುತ್ತಿದ್ದರು. ಬಲ್ವಿರ್‌ ಸಿಂಗ್‌ ನನ್ನು ಕೋಮು ಭಾವನೆ ಕೆರಳಿಸುವ ಫೋಟೋವೊಂದನ್ನು ಫೇಸ್‌ಬುಕ್‌ಗೆ ಅಪ್‌ಲೋಡ್‌ ಮಾಡಿದ ಪ್ರಕರಣದಲ್ಲಿ ರೌಡಿ ಶೀಟರ್‌ ಪಟ್ಟಿಗೆ ಸೇರಿಸಲಾಗಿತ್ತು. ಆತನಿಗೆ ಬುದ್ದಿವಾದ ಹೇಳಿದ ಎಸ್‌ಪಿ, ಹೀಗೆ ಹಬ್ಬದ ಸಮಯದಲ್ಲಿ ಹಿಂಗಾಡಿದ್ರೆ, ಮಿಸುಕಾಡಿದ್ರೆ ಒದೆ ಬೀಳುತ್ತೆ.

ಹೆಂಗ್‌ ಬೀಳುತ್ತೆ ಗೊತ್ತಾ? ಫೇಸ್‌ಬುಕ್‌ನಲ್ಲಿ ಅದು ಇದು ಅಪ್ಲೋಡ್‌ ಮಾಡೋದಲ್ಲ ಎಂದು ಜೋರಾಗಿ ಗದರಿದರು. ಹೀಗೆ ಹೇಳುತ್ತಿದ್ದರೂ ಬಲ್ವಿರ್‌ ಹುಸಿ ನಗೆ ನಗುತ್ತಿದ್ದ. ಇದರಿಂದ ಕೆರಳಿದ ಎಸ್ಪಿ ಆನಂದಕುಮಾರ್‌, ಇಷ್ಟಾದ್ರೂ ನಗ್ತಾನಲ್ಲ ಎಂದು ಕಪಾಳಕ್ಕೆ ಬಾರಿಸಿದರು. ಈವಾಗ ನಗು ನೋಡೋಣ. ನಗೋ ನಗ್ತಿಯಾ ಎಂದು ಮತ್ತೆ ಕಪಾಳ ಮೋಕ್ಷ ಮಾಡಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ