ಎಂಪಿಸಿಎಸ್‌ ನೌಕರರ ಬೇಡಿಕೆಗೆ ಪ್ರಾಮಾಣಿಕ ಸ್ಪಂದನೆ

Team Udayavani, Jun 12, 2019, 3:00 AM IST

ಚಿಕ್ಕಬಳ್ಳಾಪುರ: ತಾಲೂಕಿನಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ತನ್ನ ಕಾಲಾವಧಿಯಲ್ಲಿ ವೈದ್ಯಕೀಯ ಸೌಲಭ್ಯ, ಪಿಂಚಣಿ ಕನಿಷ್ಠ ವೇತನ ಹೆಚ್ಚಳಕ್ಕೆ ಸ್ಪಂದಿಸಿ ಬೇಡಿಕೆಗಳನ್ನು ಈಡೇರಿಸಿದ್ದು, ವಿಶ್ವೇಶ್ವರಯ್ಯ ಎಂಪಿಸಿಎಸ್‌ ನೌಕರರ ಸಂಘದ ಸ್ಥಾಪನೆ ಹಿಂದೆ ತಮ್ಮ ಪರಿಶ್ರಮ, ಸಹಕಾರ ಇತ್ತು ಎಂದು ಕೋಚಿಮುಲ್‌ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್‌ ತಿಳಿಸಿದರು.

ಕೋಚಿಮುಲ್‌ ಚುನಾವಣೆಯಲ್ಲಿ ಸೋಲಾದ ಬಳಿಕ ಮೊದಲ ಬಾರಿಗೆ ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಮಂಗಳವಾರ ಸ್ಥಳೀಯ ವಿಶ್ವೇಶ್ವರಯ್ಯ ಎಂಪಿಸಿಎಸ್‌ ನೌಕರರ ವಿವಿಧೊದ್ದೇಶ ಸಹಕಾರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಹಿಂದಿನ ಆಡಳಿತ ಮಂಡಳಿ ನಿರ್ದೇಶಕರಿಗೆ ಬೀಳ್ಕೊಡುಗೆ ಹಾಗೂ ನೂತನ ನಿರ್ದೇಶಕರಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಭಾಗವಹಿಸಿ ಐದು ವರ್ಷಗಳ ಸಂಘದ ಪ್ರಗತಿ ನೋಟದ ಕಿರು ಹೊತ್ತಿಗೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಬೇಡಿಕೆ ಈಡೇರಿಕೆ: ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಅಲ್ಪ ವೇತನಕ್ಕೆ ದುಡಿಯುತ್ತಿರುವ ನೌಕರರು ನಿಜವಾಗಿಯು ಒಕ್ಕೂಟಗಳ ಬಲವರ್ಧನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ನಿರ್ದೇಶಕನಾಗಿ, ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಸಂದರ್ಭದಲ್ಲಿ ಎಂಪಿಸಿಎಸ್‌ ನೌಕರರ ಅನೇಕ ಬೇಡಿಕೆಗಳಿಗೆ ಸ್ಪಂದಿಸಿ ಈಡೇರಿಸಿದ್ದೇವೆ.

ಪ್ರಾಮಾಣಿಕ ಸೇವೆ: ನೌಕರರು ಅಕಾಲಿಕ ಮರಣ ಹೊಂದಿದರೆ, ನಿವೃತ್ತಿಯಾದರೆ ಅವರಿಗೆ ಕನಿಷ್ಠ ಸೌಲಭ್ಯಗಳು ಸಿಗುವಂತಾಗಬೇಕೆಂದ ಅವರು, ಇಡೀ ಜಿಲ್ಲೆಗೆ ವಿಶ್ವೇಶ್ವರಯ್ಯ ಎಂಪಿಸಿಎಸ್‌ ನೌಕರರ ವಿವಿಧೊದ್ದೇಶ ಸಹಕಾರ ಸಂಘ ತನ್ನ ಸದಸ್ಯರ ಕ್ಷೇಮಾಭಿವೃದ್ಧಿಗೆ ಪ್ರಾಮಾಣಿಕವಾಗಿ ದುಡಿಯುತ್ತಿದ್ದು, ಸಂಘದಡಿ ಕೈಗೊಂಡಿರುವ ಅನೇಕ ಕಾರ್ಯಕ್ರಮಗಳು ಇದಕ್ಕೆ ನಿದರ್ಶನ ಎಂದರು.

ನೌಕರರ ಪರ ಧ್ವನಿ: ಕೋಚಿಮುಲ್‌ ನೂತನ ನಿರ್ದೇಶಕ ಎನ್‌.ಸಿ.ವೆಂಕಟೇಶ್‌ ಮಾತನಾಡಿ, ಮುಂದಿನ ಐದು ವರ್ಷಗಳ ಕಾಲ ಸಂಘದ ಅಭಿವೃದ್ಧಿ ಚಟುವಟಿಕೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತೇನೆ. ಸಂಘದ ಸದಸ್ಯರು ಅಕಾಲಿಕ ಮರಣ ಹೊಂದಿದಾಗ ಸಂಘ ನೀಡುವ 5 ಸಾವಿರ ರೂ. ಶವ ಸಂಸ್ಕಾರದ ಹಣಕ್ಕೆ ತಾವು 5 ಸಾವಿರ ರೂ. ನೀಡುವುದಾಗಿ ಭರವಸೆ ನೀಡಿದರು. ಮುಂದಿನ ದಿನಗಳಲ್ಲಿ ಒಕ್ಕೂಟದ ಸಭೆಗಳಲ್ಲಿ ನೌಕರರ ಪರವಾಗಿ ಧ್ವನಿ ಎತ್ತುವುದಾಗಿ ವೆಂಕಟೇಶ್‌ ಭರವಸೆ ನೀಡಿದರು.

ಗುರುತಿನ ಚೀಟಿ ವಿತರಣೆ: ವಿಶ್ವೇಶ್ವರಯ್ಯ ಎಂಪಿಸಿಎಸ್‌ ನೌಕರರ ವಿವಿಧೊದ್ದೇಶ ಸಹಕಾರ ಸಂಘದ ಸದಸ್ಯರಿಗೆ ಕೋಚಿಮುಲ್‌ ನಿರ್ದೇಶಕ ಎನ್‌.ಸಿ.ವೆಂಕಟೇಶ್‌ ಗುರುತಿನ ಚೀಟಿ ವಿತರಿಸಿದರು. ಇದೇ ವೇಳೆ ಸಂಘದಲ್ಲಿ ಐದು ವರ್ಷಗಳ ಕಾಲ ಆಡಳಿತ ಮಂಡಳಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಹಿಂದಿನ ಆಡಳಿತ ಮಂಡಳಿಯ ನಿರ್ದೇಶಕರನ್ನು ನೂತನ ಆಡಳಿತ ಮಂಡಳಿಯು ಶಾಲು ಹೊದಿಸಿ, ನೆನಪಿನ ಕಾಣಿಕೆ ಕೊಟ್ಟು ಹಣ್ಣು ಹಂಪಲು ನೀಡಿ ಸನ್ಮಾನಿಸಿ ಬೀಳ್ಕೊಟ್ಟರು.

ಆಡಳಿತ ಮಂಡಳಿಗೆ ಅವಿರೋಧವಾಗಿ ಆಯ್ಕೆಗೊಂಡ ಆಡಳಿತ ಮಂಡಳಿ ನಿರ್ದೇಶಕರನ್ನು ಸ್ವಾಗತಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎಂ.ರಾಮನಕೃಷ್ಣಾರೆಡ್ಡಿ ವಹಿಸಿದ್ದರು. ಸಂಘದ ಉಪಾಧ್ಯಕ್ಷ ಬಿ.ಜಿ.ನಾರಾಯಣಸ್ವಾಮಿ, ನಿರ್ದೇಶಕರಾದ ಬಿ.ಶಿವಪ್ಪ, ಎಚ್‌.ಎನ್‌.ವೇಣುಗೋಪಾಲ್‌, ಎಚ್‌.ಎನ್‌.ದೇವರಾಜ್‌, ನರಸಿಂಹಮೂರ್ತಿ, ವಿ.ನಾಗರಾಜು, ಪಿ.ವಿ.ಮುತ್ಯಾಲಪ್ಪ, ನಾಗರಾಜು, ಎಂ.ಕೆ.ಗೋವಿಂದಪ್ಪ, ಕೆ.ಮುನಿರಾಜು, ಆರ್‌.ಚಿಕ್ಕನಾರಾಯಣಪ್ಪ, ಎನ್‌.ನಾರಾಯಣಸ್ವಾಮಿ, ಎ.ಎಂ.ಪುಷ್ಪ, ಡಿ.ಶೈಲಜಾ, ಮುಖ್ಯ ಕಾರ್ಯದರ್ಶಿ ಎನ್‌.ಪಾಪಣ್ಣ ಉಪಸ್ಥಿತರಿದ್ದರು.

ಸಂಘದ ಪ್ರಗತಿಯ ನೋಟ ಬಿಡುಗಡೆ: ಸಮಾರಂಭದಲ್ಲಿ ಕೋಚಿಮುಲ್‌ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್‌, ವಿಶ್ವೇಶ್ವರಯ್ಯ ಎಂಪಿಸಿಎಸ್‌ ನೌಕರರ ವಿವಿಧೊದ್ದೇಶ ಸಹಕಾರ ಸಂಘದ 2013-2019 ಅವಧಿಯಲ್ಲಿ ಕೈಗೊಂಡಿರುವ ಕಾರ್ಯಚಟುವಟಿಕೆ ಜೊತೆಗೆ ಪ್ರಗತಿಯ ವರದಿಯ ಕುರಿತು ಸಂಘ ಹೊರ ತಂದಿದ್ದ ಸಂಘದ ಪ್ರಗತಿಯ ನೋಟವನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಸಂಘದ ನೂತನ ಆಡಳಿತ ಮಂಡಳಿ ಪದಾಧಿಕಾರಿಗಳು ಸಂಘದ ಅಭಿವೃದ್ಧಿಗೆ ಕೊಡುಗೆ ನೀಡಿರುವ ಕೆ.ವಿ.ನಾಗರಾಜ್‌ರನ್ನು ಸನ್ಮಾನಿಸಲಾಯಿತು.

ಹಾಲಿ, ಮಾಜಿ ನಿರ್ದೇಶಕರ ನಡುವೆ ಮೌನರಾಗ: ಚಿಕ್ಕಬಳ್ಳಾಪುರದ ಅಂಬೇಡ್ಕರ್‌ ಭವನದಲ್ಲಿ ನಡೆದ ವಿಶ್ವೇಶ್ವರಯ್ಯ ಎಂಪಿಸಿಎಸ್‌ ನೌಕರರ ವಿವಿಧೊದ್ದೇಶ ಸಹಕಾರ ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೋಚಿಮುಲ್‌ನ ಹಾಲಿ ನಿರ್ದೇಶಕ ಎನ್‌.ಸಿ.ವೆಂಕಟೇಶ್‌ ಹಾಗೂ ಮಾಜಿ ನಿರ್ದೇಶಕ ಕೆ.ವಿ.ನಾಗರಾಜ್‌ ನಡುವೆ ಮೌನರಾಗ ಎದ್ದು ಕಾಣುತ್ತಿತ್ತು.

ವೇದಿಕೆ ಮೇಲೆ ಇದ್ದರೂ ಸೌಜನ್ಯಕ್ಕೂ ಪರಸ್ಪರ ಇಬ್ಬರ ನಡುವೆ ಮಾತುಕತೆ ನಡೆಯಲಿಲ್ಲ. ಸಭೆ ಉದ್ದೇಶಿಸಿ ಮಾತನಾಡುವಾಗಲೂ ಕೂಡ ಇಬ್ಬರು ಪರಸ್ಪರ ಹೆಸರು ಪ್ರಸ್ತಾಪ್ತಿಸದೇ ಪ್ರತಿಷ್ಠೆ ಮೆರೆದರು. ಇತ್ತೀಚೆಗೆ ನಡೆದ ಕೋಚಿಮುಲ್‌ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಕೆ.ವಿ.ನಾಗರಾಜ್‌ರನ್ನು ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಎನ್‌.ಸಿ.ವೆಂಕಟೇಶ್‌ 3 ಮತಗಳ ಅಂತರದಿಂದ ಸೋಲಿಸಿದ್ದರು. ಸತತ 25 ವರ್ಷಗಳಿಂದ ಕೋಚಿಮುಲ್‌ ನಿರ್ದೇಶಕರಾಗಿದ್ದ ಕೆ.ವಿ.ನಾಗರಾಜ್‌ರನ್ನು ಇದೇ ಮೊದಲ ಬಾರಿಗೆ ಜೆಡಿಎಸ್‌ ಸೋಲಿಸಿತು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ