ವಿಶ್ವಕಪ್‌ ಕ್ರಿಕೆಟ್‌ ಬೆಟ್ಟಿಂಗ್‌ ದಂಧೆ ಜೋರು!

Team Udayavani, Jun 13, 2019, 3:00 AM IST

ಚಿಕ್ಕಬಳ್ಳಾಪುರ: ಪ್ರತಿ ಬಾರಿ ಐಪಿಎಲ್‌ ಕ್ರಿಕೆಟ್‌ ಪಂದ್ಯಾವಳಿಗಳ ಸಂದರ್ಭದಲ್ಲಿ ಸದ್ದು ಮಾಡುತ್ತಿದ್ದ ಕ್ರಿಕೆಟ್‌ ಬೆಟ್ಟಿಂಗ್‌ ದಂಧೆ ಇದೀಗ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಗಳಿಗೂ ಚಾಚಿಕೊಂಡಿದ್ದು, ಜಿಲ್ಲೆಯ ಕಾಲೇಜು ವಿದ್ಯಾರ್ಥಿಗಳೇ ಕ್ರಿಕೆಟ್‌ ಬೆಟ್ಟಿಂಗ್‌ ದಂಧೆಯ ಮುಂಚೂಣಿಯಲ್ಲಿರುವುದು ಸಹಜವಾಗಿಯೇ ಪೋಷಕರನ್ನು ತೀವ್ರ ಕಂಗಾಲಾಗಿಸಿದೆ.

ಪತ್ತೆ ಹಚ್ಚುವುದು ಕಷ್ಟ: ವಿಶ್ವಕಪ್‌ ಕ್ರಿಕೆಟ್‌ ಆರಂಭಗೊಂಡ ದಿನದಿಂದಲೂ ಜಿಲ್ಲಾದ್ಯಂತ ಕದ್ದುಮುಚ್ಚಿ ಕ್ರಿಕೆಟ್‌ ಬೆಟ್ಟಿಂಗ್‌ ದಂಧೆ ಎಗ್ಗಿಲ್ಲದೇ ನಡೆಯುತ್ತಿದ್ದರೂ ಪತ್ತೆ ಹಚ್ಚುವುದು ಮಾತ್ರ ಜಿಲ್ಲೆಯ ಪೊಲೀಸರಿಗೆ ತೀವ್ರ ತಲೆ ನೋವಾಗಿ ಪರಿಣಮಿಸಿದ್ದು,ಅಡೆತಡೆ ಇಲ್ಲದೇ ಬೆಟ್ಟಿಂಗ್‌ ಭರಾಟೆ ಜಿಲ್ಲಾದ್ಯಂತ ಹರಡಿಕೊಂಡಿದೆ.

ಐಪಿಎಲ್‌ ಪಂದ್ಯಾವಳಿಗಳ ಸಂದರ್ಭದಲ್ಲಿ ನಡೆಯುತ್ತಿದ್ದ ಮಾದರಿಯಲ್ಲಿಯೇ ಬೆಟ್ಟಿಂಗ್‌ ದಂಧೆ ನಡೆಯುತ್ತಿದ್ದು, ವಿಶ್ವಾದ್ಯಂತ ತೀವ್ರ ರೋಚಕತೆಯನ್ನು ಪಡೆದಿರುವ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಗಳು ಸಹಜವಾಗಿಯೇ ಕ್ರಿಕೆಟ್‌ ಪ್ರೇಮಿಗಳ ಗಮನ ಸೆಳೆದಿವೆ.

ಲಕ್ಷಾಂತರ ರೂ. ವಿನಿಯೋಗ: ಇದನ್ನೇ ಬಂಡವಾಳ ಮಾಡಿಕೊಂಡಿರುವ ಬೆಟ್ಟಿಂಗ್‌ ದಂಧೆಕೋರರು ಹೋಟೆಲ್‌ ಕಾರ್ಮಿಕರನ್ನು, ಕಾಲೇಜು ವಿದ್ಯಾರ್ಥಿಗಳನ್ನು ಹಾಗೂ ಯುವಕರ ಮನ ಸೆಳೆದು ದಂಧೆಯಲ್ಲಿ ಲಕ್ಷಾಂತರ ರೂ. ಹಣ ತೊಡಗಿಸಲಾಗುತ್ತಿದೆ. ಇದರಿಂದ ಅಮಾಯಕರು ಬೆಟ್ಟಿಂಗ್‌ನಂತಹ ಮೋಹಕ ಬಲೆಯಲ್ಲಿ ಸಿಲುಕಿ ಕೈಯಲ್ಲಿದ್ದ ಹಣ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕುವುದು ಮಾತ್ರವಲ್ಲದೇ ಸಾಲಗಾರರಾಗುತ್ತಿದ್ದಾರೆ.

ವಾರಕ್ಕೆ ನಾಲ್ಕೈದು ದೂರು: ಪೊಲೀಸ್‌ ಇಲಾಖೆ ಮಾಹಿತಿ ಪ್ರಕಾರ ವಾರಕ್ಕೆ ನಾಲ್ಕೈದು ದೂರುಗಳು ಕ್ರಿಕೆಟ್‌ ಬೆಟ್ಟಿಂಗ್‌ ದಂಧೆಯ ಬಗ್ಗೆ ಸಾರ್ವಜನಿಕರಿಂದ ಕೇಳಿ ಬರುತ್ತಿದ್ದರೂ ದಂಧೆಕೋರರನ್ನು ಹಿಡಿಯುವುದು ಸವಾಲಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಕ್ರಿಕೆಟ್‌ ಬೆಟ್ಟಿಂಗ್‌ ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಇಲಾಖೆ ಸಾಕಷ್ಟು ಪ್ರಯತ್ನ ನಡೆಸಿದರೂ ಯಶಸ್ಸು ಕಾಣುತ್ತಿಲ್ಲ.

ಹೈಟೆಕ್‌ ಮಾದರಿ: ಬೆಟ್ಟಿಂಗ್‌ ಹೈಟೆಕ್‌ ಮಾದರಿಯಲ್ಲಿ ನಡೆಯುತ್ತಿರುವುದರಿಂದ ದಂಧೆಕೋರರು ಸುಲಭವಾಗಿ ತಪ್ಪಿಸಿಕೊಳ್ಳುತ್ತಿದ್ದಾರೆ. ಎಲ್ಲವೂ ಮೊಬೈಲ್‌ಗ‌ಳ ಮೂಲಕವೇ ದಂಧೆ ನಡೆಯುತ್ತಿದೆ. ವಾಟ್ಸ್‌ಆಪ್‌ ಬಳಕೆ, ಸೈಬರ್‌ ಕೇಂದ್ರಗಳ ಮೂಲಕ ಕೂಡ ಬೆಟ್ಟಿಂಗ್‌ ದಂಧೆ ನಡೆಯುತ್ತಿದೆ. ಹೆಚ್ಚಾಗಿ ಶಾಲಾ, ಕಾಲೇಜುಗಳ ಬಳಿ ಬೆಟ್ಟಿಂಗ್‌ ವ್ಯವಹಾರ ಕುದುರಿಸುವರು ಇದ್ದು ಕಾಲೇಜು ವಿದ್ಯಾರ್ಥಿಗಳಿಗೆ ಬೆಟ್ಟಿಂಗ್‌ನಲ್ಲಿ ವಿಶೇಷ ಆಫ‌ರ್‌ಗಳನ್ನು ನೀಡಿ ಬೆಟ್ಟಿಂಗ್‌ನಲ್ಲಿ ಹಣ ತೊಡಗಿಸಲಾಗುತ್ತಿದೆ.

ಹೋಟೆಲ್‌ ಕಾರ್ಮಿಕರನ್ನು ಬಿಡತ್ತಿಲ್ಲ: ಕ್ರಿಕೆಟ್‌ ಬೆಟ್ಟಿಂಗ್‌ ದಂಧೆ ಸಾಮಾನ್ಯ ಹೋಟೆಲ್‌ ಕಾರ್ಮಿಕರನ್ನು ಬಿಡುತ್ತಿಲ್ಲ. ಇತ್ತೀಚೆಗೆ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಹೋಟೆಲ್‌ನಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ಶ್ರೀನಾಥ ಎಂಬಾತನನ್ನು ಪೊಲೀಸರು ಬಂಧಿಸಿದ್ದನ್ನು ಸ್ಮರಿಸಬಹುದು. ಅಷ್ಟರ ಮಟ್ಟಿಗೆ ಜಿಲ್ಲೆಯಲ್ಲಿ ನಡೆಯುತ್ತಿದೆ.

ರಿಯಲ್‌ ಎಸ್ಟೇಟ್‌ ಕುಳಗಳಿಂದ ಹಿಡಿದು ಚಿನ್ನದ ವ್ಯಾಪಾರಿಗಳು, ವಿಪರ್ಯಾಸವೆಂದರೆ ಸರ್ಕಾರಿ ನೌಕರರು, ಅಧಿಕಾರಿಗಳು, ಕಾಲೇಜು ವಿದ್ಯಾರ್ಥಿಗಳು, ಬಡ್ಡಿದಂಧೆಕೋರರು ಬೆಟ್ಟಿಂಗ್‌ನಲ್ಲಿ ಮುಳುಗಿರುವುದು ಜಿಲ್ಲೆಯಲ್ಲಿ ಕಂಡುಬರುತ್ತಿದೆ. ಸದ್ಯ ಜಿಲ್ಲೆಯಲ್ಲಿ ಈಗಷ್ಟೇ ಶೈಕ್ಷಣಿಕ ವರ್ಷ ಕಾರ್ಯಾರಂಭವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿಗಳು ತರಗತಿಗಳಿಗೆ ಹೋಗದೇ ಬೆಟ್ಟಿಂಗ್‌ ಹಿಂದೆ ಬಿದ್ದಿರುವುದು ಪೋಷಕರನ್ನು ಚಿಂತೆಗೀಡು ಮಾಡಿದೆ.

ಚಿಕ್ಕಬಳ್ಳಾಪುರ, ಚಿಂತಾಮಣಿ ಹೆಚ್ಚು: ಪೊಲೀಸ್‌ ಇಲಾಖೆ ಹಿಂದಿನ ಅಂಕಿ, ಅಂಶಗಳನ್ನು ಆಧರಿಸಿ ಹೇಳುವುದಾದರೆ ಜಿಲ್ಲೆಯ ವಾಣಿಜ್ಯ ನಗರಿ ಚಿಂತಾಮಣಿ ಹಾಗೂ ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರದಲ್ಲಿಯೇ ಹೆಚ್ಚು ವಿಶ್ವಕಪ್‌ ಕ್ರಿಕೆಟ್‌ ಬೆಟ್ಟಿಂಗ್‌ ದಂಧೆ ಜೋರಾಗಿ ನಡೆಯುತ್ತಿದೆ.

ನಗರದ ಮುಖ್ಯ ರಸ್ತೆಗಳಲ್ಲಿರುವ ಕಾಂಡಿಮೆಂಟ್ಸ್‌ ಅಂಗಡಿಗಳ ಜೊತೆಗೆ ಸೈಬರ್‌ ಕೇಂದ್ರಗಳೇ ಬೆಟ್ಟಿಂಗ್‌ ದಂಧೆಗೆ ಅಡ್ಡೆಗಳಾಗಿದ್ದು, ಬೆಳಗ್ಗೆ 6 ರಿಂದ ಮಧ್ಯರಾತ್ರಿ 12 ಗಂಟೆಯವರೆಗೂ ಯುವಕರು ಬೆಟ್ಟಿಂಗ್‌ನಲ್ಲಿ ತೊಡಗಿರುವುದು ಕಂಡು ಬರುತ್ತಿದ್ದಾರೆ.

ಈ ಎರಡು ತಾಲೂಕುಗಳಲ್ಲಿ ಎಷ್ಟರ ಮಟ್ಟಿಗೆ ಪರಿಣಾಮ ಬೀರಿದೆ ಎಂದರೆ ಕಾಲೇಜುಗಳಿಗೆ ಬರುವ ಮಕ್ಕಳು ತಮ್ಮ ತಂದೆ, ತಾಯಂದಿರು ಮನೆಗಳಲ್ಲಿ ಎತ್ತಿಟ್ಟಿದ್ದ ಲಕ್ಷ ಲಕ್ಷ ಹಣವನ್ನು ಬೆಟ್ಟಿಂಗ್‌ನಲ್ಲಿ ತೊಡಗಿಸಿ ಕೊನೆಗೆ ಕೈ ಸುಟ್ಟುಕೊಂಡು ಮನೆ ಬಿಟ್ಟ ಉದಾಹರಣೆಗಳು ಇವೆ.

ಜಿಲ್ಲೆಯಲ್ಲಿ ಕ್ರಿಕೆಟ್‌ ಬೆಟ್ಟಿಂಗ್‌ ದಂಧೆ ಹೆಚ್ಚಾಗಿದೆ. ಕಾಲೇಜು ವಿದ್ಯಾರ್ಥಿಗಳು ತರಗತಿಗಳಿಗೆ ಚಕ್ಕರ್‌ ಹೊಡೆದು ಬೆಟ್ಟಿಂಗ್‌ ದಂಧೆಯಲ್ಲಿ ತೊಡಗಿರುವುದು ಎದ್ದು ಕಾಣುತ್ತಿದೆ. ಗ್ರಾಮೀಣ ವಿದ್ಯಾರ್ಥಿಳು ಬೆಟ್ಟಿಂಗ್‌ ದಂಧೆಗೆ ಬಲಿಯಗಿ ಹಣ ಕಳೆದುಕೊಂಡು ಪೋಷಕರನ್ನು ಬೀದಿಪಾಲು ಮಾಡುತ್ತಿದ್ದಾರೆ. ಪೊಲೀಸರು ಕ್ರಿಕೆಟ್‌ ಬೆಟ್ಟಿಂಗ್‌ ದಂಧೆಗೆ ಕಡಿವಾಣ ಹಾಕದಿದ್ದರೆ ಮಕ್ಕಳ ಭವಿಷ್ಯ ಹಾಳಾಗುತ್ತದೆ.
-ವೆಂಕಟರಮಣರೆಡ್ಡಿ, ಚಿಂತಾಮಣಿ ನಿವಾಸಿ

ಜಿಲ್ಲೆಯಲ್ಲಿ ಕ್ರಿಕೆಟ್‌ ಬೆಟ್ಟಿಂಗ್‌ ದಂಧೆಗೆ ಕಡಿವಾಣ ಹಾಕಲು ಇಲಾಖೆ ಶ್ರಮಿಸುತ್ತಿದೆ. ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಗಳು ಆರಂಭಗೊಂಡ ದಿನದಿಂದಲೂ ಕೂಡ ಇಲಾಖೆ ಕ್ರಿಕೆಟ್‌ ಬೆಟ್ಟಿಂಗ್‌ ದಂಧೆಕೋರರ ಮೇಲೆ ನಿಗಾ ಹೆಚ್ಚಿನ ನಿಗಾ ವಹಿಸಿದೆ. ವಾರಕ್ಕೆ ಒಂದೆರೆಡು ಪ್ರಕರಣಗಳು ದಾಖಲಾಗುತ್ತಿವೆ. ಸಾರ್ವಜನಿಕರ ದೂರು ಬಂದ ತಕ್ಷಣ ಕಾರ್ಯಾಚರಣೆ ನಡೆಸಲಾಗುತ್ತಿದೆ. ಎಲ್ಲಿಯೇ ಕ್ರಿಕೆಟ್‌ ಬೆಟ್ಟಿಂಗ್‌ ದಂಧೆ ನಡೆಯುತ್ತಿದ್ದರೂ ಸಾರ್ವಜನಿಕರು ಇಲಾಖೆ ಗಮನಕ್ಕೆ ತರಬಹುದು.
-ಕೆ.ಸಂತೋಷ ಬಾಬು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

* ಕಾಗತಿ ನಾಗರಾಜಪ್ಪ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ