ಮಕ್ಕಳ ಎದುರು ಅತಿ ಬುದ್ದಿವಂತಿಕೆ ಸಲ್ಲ

Team Udayavani, Nov 1, 2019, 6:44 PM IST

ಚಿಕ್ಕಮಗಳೂರು: ನಮಗೆ ತುಂಬಾ ಜ್ಞಾನವಿದೆ ಎಂದು ವಿದ್ಯಾರ್ಥಿಗಳ ಮೇಲೆ ಪ್ರಯೋಗ ಮಾಡಿ ಅವರನ್ನು ಪರೀಕ್ಷಿಸದೆ ಅವರ ಸ್ನೇಹಿತರಾಗಿ ಪಾಠ ಮಾಡಿ ಎಂದು ಪಪೂ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ನಾಗರಾಜ್‌ ಉಪನ್ಯಾಸಕರಿಗೆ ಸಲಹೆ ನೀಡಿದರು.

ನಗರದ ಮಲೆನಾಡು ವಿದ್ಯಾಸಂಸ್ಥೆ ಸಭಾಂಗಣದಲ್ಲಿ
ಪಿ.ಯು ರಸಾಯನಶಾಸ್ತ್ರ ಉಪನ್ಯಾಸಕರ ವೇದಿಕೆ ಹಮ್ಮಿಕೊಂಡಿದ್ದ ಒಂದು ದಿನದ ಶೈಕ್ಷಣಿಕ ಕಾರ್ಯಾಗಾರದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳ
ಫಲಿತಾಂಶ ಉನ್ನತಿಗಾಗಿ ಹೊರ ತಂದಿರುವ ಪಿಸಿಎಂಬಿ ಕೈಪಿಡಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಕೆಲವು ಕಾಲೇಜುಗಳಲ್ಲಿ ಲ್ಯಾಬ್‌ ಇನ್ನಿತರೆ ಕೊರತೆ ಇರುತ್ತದೆ. ಹಾಗಾಗಿ ಎಲ್ಲವನ್ನು ತುಲನೆ ಮಾಡಿ ಪ್ರಾಯೋಗಿಕ ಪರೀಕ್ಷೆಯಲ್ಲಿ ಎಲ್ಲೂ ಗೊಂದಲವಾಗದಂತೆ ವಿದ್ಯಾರ್ಥಿಗಳ ಭವಿಷ್ಯಕ್ಕೂ ಮಾರಕವಾಗದಂತೆ ಅತ್ಯಂತ ಸೌಹಾರ್ದಯುತವಾಗಿ ನಡೆಸಿ ಕೊಡುತ್ತೀರೆಂದು ವಿಶ್ವಾಸ ಹೊಂದಿದ್ದೇನೆ.

ವಿದ್ಯಾರ್ಥಿಗಳು ಲಿಖೀತ ಪರೀಕ್ಷೆಗೆ ಹೆಚ್ಚು ಒತ್ತು ಕೊಡಿ. ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಬೇಕೆಂಬುದು ಯಾವ ಉಪನ್ಯಾಸಕರಿಗೂ ಇರುವುದಿಲ್ಲ. ಪರೀಕ್ಷೆಗಳು ಹತ್ತಿರವಿರುವುದರಿಂದ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ವಹಿಸಿ ಚೆನ್ನಾಗಿ ಓದಿ ಕಾಲೇಜು ಮತ್ತು ಜಿಲ್ಲೆಗೆ ಉತ್ತಮ ಹೆಸರು ತಂದು ಈ ಮೂಲಕ ರಾಜ್ಯದಲ್ಲೆ ನಮ್ಮ ಜಿಲ್ಲೆಯ ಫಲಿತಾಂಶ ಉತ್ತುಂಗಕ್ಕೇರಲು ಎಲ್ಲರ ಸಹಕಾರ ಅಗತ್ಯ ಎಂದರು.

ದ್ವಿತೀಯ ಪಿಯು ಪರೀಕ್ಷೆ ಸಮೀಪಿಸುತ್ತಿದೆ. ಪ್ರಾಯೋಗಿಕ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿರುವ ಉಪನ್ಯಾಕರುಗಳೆ ಆಂತರಿಕ ಮೌಲ್ಯ ಮಾಪಕರು-ಬಾಹ್ಯ ಮೌಲ್ಯಮಾಪಕರಾಗಿರುತ್ತೀರಿ. ರಸಾಯನ ಶಾಸ್ತ್ರದ ಫೋರ್‌ಂ ಮಾಡಿರುವ ಇಂತಹ ಕಾರ್ಯಕ್ರಮ ಪದೇ ಪದೇ ಆಗುತ್ತಿರಬೇಕು.

ಉಪನ್ಯಾಸಕ ವೃತ್ತಿಯಲ್ಲಿ ಎಷ್ಟೆ ಅನುಭವವಿದ್ದರೂ
ಕೆಲವೊಂದು ವಿಷಯದಲ್ಲಿ ಅನುಮಾನಗಳಿರುತ್ತದೆ.
ಕೆಲವೊಮ್ಮೆ ನಮಗೆ ಅರ್ಥವಾಗಿರುತ್ತದೆ ಆದರೆ ಅದನ್ನು ವಿದ್ಯಾರ್ಥಿಗಳಿಗೆ ಅತ್ಯಂತ ಸುಲಭವಾಗಿ ಅರ್ಥವಾಗುವ ರೀತಿ ಹೇಗೆ ಹೇಳಬೇಕೆಂಬುದು ತಿಳಿದಿರುವುದಿಲ್ಲ. ವಿದ್ಯಾರ್ಥಿಗಳಿಗೆ ಹೊರೆಯಾಗದ ರೀತಿ ಲಾಭದ ಉದ್ದೇಶ ಹೊಂದದೆ ಶೈಕ್ಷಣಿಕ ಪ್ರಗತಿಗಾಗಿ 115 ರೂ.ಗೆ ಪಿಸಿಎಂಬಿ ನಾಲ್ಕು ಪುಸ್ತಕ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಮುದ್ರಣ ಮಾಡಲಾಗಿದೆ.

ಇಂದಿನಿಂದ ವಿತರಣೆ ಮಾಡಲಾಗುತ್ತದೆ ಎಂದರು. ಡಿಡಿಪಿಯು ಆಗಿ ಪ್ರಭಾರ ವಹಿಸಿಕೊಳ್ಳುವ ಮುನ್ನ ಬಹಳಷ್ಟು ಪೂರ್ವ ಯೋಜನೆಯನ್ನು ಹಾಕಿಕೊಂಡಿದ್ದೆ. ನನ್ನ ಇಲಾಖೆಯ ಕಾರ್ಯಾಭಾರದ ನಡುವೆಯೇ ವಿಶೇಷವಾದುದನ್ನು ಮಾಡಬೇಕೆಂದು ಯೋಚಿಸಿದ್ದೆ. ಅದರಲ್ಲಿ ಮೊದಲನೆಯದು ಜಿಲ್ಲೆಯಲ್ಲಿ ಶೈಕ್ಷಣಿಕ ಪ್ರಗತಿ ಮಾಡಿ ಫಲಿತಾಂಶವನ್ನು ಉತ್ತಮ ಪಡಿಸಲು ಸಾಕಷ್ಟು ಪ್ರಯತ್ನ ಮಾಡಬೇಕೆಂದು ಗುರಿಯಾಗಿಸಿಕೊಂಡಿದ್ದೆ. ಕಳೆದ ವರ್ಷದ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಜಿಲ್ಲೆ ಶೇ 76.5 ಫಲಿತಾಂಶದೊಂದಿಗೆ ರಾಜ್ಯದಲ್ಲಿ 5ನೇ ಸ್ಥಾನ ಪಡೆದಿತ್ತು. ಕಳೆದ ವರ್ಷದ ಫಲಿತಾಂಶವನ್ನು ಅವಲೋಕಿಸಿ ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಎಲ್ಲಾ ಕಾಲೇಜುಗಳ ಬಗ್ಗೆ ಪರಿಶೀಲನೆ ನಡೆಸಿದೆ. ಬಹಳಷ್ಟು ಕಾಲೇಜುಗಳಲ್ಲಿ ವಿಜ್ಞಾನ ವಿಭಾಗದಲ್ಲಿ ರಿಸಲ್ಟ್ ಕಡಿಮೆಯಾಗಿರುವುದು ಆ ಸಂದರ್ಭದಲ್ಲಿ ನನ್ನ ಗಮನಕ್ಕೆ ಬಂದಿತು. 37 ವರ್ಷದಿಂದ ವಿಜ್ಞಾನ ಉಪನ್ಯಾಸಕನಾಗಿ ರಸಾಯನಶಾಸ್ತ್ರವನ್ನು ಬೋಧಿಸಿದ ಅನುಭವದ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಕಾರ್ಯಯೋಜನೆ ಮಾಡಬೇಕೆಂಬ ಗುರಿಹೊಂದಿದೆ ಎಂದರು.

ಪ್ರಾಚಾರ್ಯರ ಸಂಘದ ಜಿಲ್ಲಾಧ್ಯಕ್ಷ ಬಿ.ಆರ್‌. ಶ್ರೀನಿವಾಸ್‌ಮೂರ್ತಿ ಮಾತನಾಡಿ, ವಿಜ್ಞಾನ ವಿಷಯವೆಂದರೆ ಕಬ್ಬಣದ ಕಡಲೆ ರೀತಿ ತುಂಬಾ ಕಠಿಣ. ಒಬ್ಬ ವಿದ್ಯಾರ್ಥಿಯ ಕೈಯಲ್ಲಿ ಒಂದು ಪದವನ್ನು ತಪ್ಪಿಲ್ಲದೆ ಬರೆಸಬೇಕಾದರೆ ತುಂಬಾ ಕಷ್ಟದ ಕೆಲಸ ಅಂತಹ ವಿಜ್ಞಾನವನ್ನು ಉಪನ್ಯಾಸಕರು ಬೋಧಿಸುತ್ತೀದ್ದೀರಿ ಎಂದರೆ ಪ್ರಸಂಶನೀಯ ಎಂದರು.

ಸರ್ಕಾರಿ ಅಥವಾ ಇನ್ನಿತರೆ ಕಾಲೇಜುಗಳಿಗೆ ವಿಜ್ಞಾನ ವಿಷಯಕ್ಕೆ ಸೇರುವ ವಿದ್ಯಾರ್ಥಿಗಳ ಸಂಖ್ಯೆ ಬಹಳ ಕಡಿಮೆಯಾಗಿದೆ. ಈ ದಿಸೆಯಲ್ಲಿ ಹಲವಾರು ಪ್ರಾಂಶುಪಾಲರು ತುಂಬಾ ಕಷ್ಟಪಡುತ್ತಿದ್ದಾರೆ. ನಿಮ್ಮ ಪ್ರಯತ್ನಕ್ಕೆ ಯಶಸ್ಸು ಸಿಗಲಿ. ಈ ಕಾರ್ಯಾಗಾರದ ಸಂಪೂರ್ಣ ಪ್ರಯೋಜನ ಪಡೆದು ವಿಜ್ಞಾನ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುವಂತಾಗಲಿ ಎಂದು ಆಶಿಸಿದರು.

ರಸಾಯನಶಾಸ್ತ್ರ ಉಪನ್ಯಾಸಕರ ಫೋರ್‌ಂ ಕಾರ್ಯದರ್ಶಿ ಪ್ರಾಚಾರ್ಯ ಕೆ.ಜಿ.ಸತೀಶ್‌ ಶಾಸ್ತ್ರೀ ಮಾತನಾಡಿ, ಕಳೆದ 12 ವರ್ಷಗಳಿಂದ ಈ ಫೋರ್‌ಂನ್ನು ಉತ್ತಮ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ನಡೆಸಿಕೊಂಡು ಬರಲು ಎಲ್ಲರೂ ಸಹಕರಿಸಿದ್ದೀರಿ. ಇದೇ ರೀತಿ ಮುಂದೆ ಬರುವ ಸಂಘದ ಪದಾಧಿಕಾರಿಗಳು ಸಮಾಜಮುಖೀ ಚಿಂತನೆಯಲ್ಲಿ ಕಾರ್ಯಕ್ರಮ ರೂಪಿಸಿ ವಿದ್ಯಾರ್ಥಿಗಳ ಅನುಕೂಲಕ್ಕೆ ಸಹಕರಿಸಿ ಎಂದು ಸಲಹೆ ನೀಡಿದರು.

ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಹಾಗೂ ಜಿಲ್ಲೆಯ ಎಲ್ಲಾ ರಸಾಯನ ಶಾಸ್ತ್ರ ಉಪನ್ಯಾಸಕರು ಹಾಜರಿದ್ದರು. ರಸಾಯನಶಾಸ್ತ್ರ ಉಪನ್ಯಾಸಕರ ಫೋರ್‌ಂ ಅಧ್ಯಕ್ಷೆ ಪ್ರಾಚಾರ್ಯೆ ಜಯಶ್ರೀ ಅಧ್ಯಕ್ಷತೆ ವಹಿಸಿದ್ದರು. ಶಿವಮೊಗ್ಗದ ಸುಮಂತ್‌ರಾಜ್‌ ಹಾಗೂ ಬೆಂಗಳೂರಿನ ಡಾ.ರಾಜೇಶ್‌ ವಿಶೇಷ ಉಪನ್ಯಾಸ ನೀಡಿದರು. ಕಾರ್ಯದರ್ಶಿ ಪ್ರಾಚಾರ್ಯ ಸತೀಶ್‌ ಶಾಸ್ತ್ರಿ ಸ್ವಾಗತಿಸಿದರು. ವಸಂತಕುಮಾರ್‌ ನಿರೂಪಿಸಿದರು. ಪುರುಷೋತ್ತಮ್‌ ವಂದಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ