ಅರಣ್ಯ ಸಿಬ್ಬಂದಿಯಿಂದ ಕಾಫಿ ಗಿಡ ನೆಲಸಮ
ಅರಣ್ಯ ಜಾಗ ಒತ್ತುವರಿ ತೆರವಿಗೆ ಯತ್ನ ಆರೋಪ
Team Udayavani, Mar 13, 2020, 3:17 PM IST
ಕೊಪ್ಪ: ಮೇಗುಂದ ಹೋಬಳಿ ದೇವಗೊಡು ಗ್ರಾಮದ ಮೇದಕ್ಕಿಯಲ್ಲಿ ಒತ್ತುವರಿ ಮಾಡಿದ ಹೂ ಬಿಟ್ಟ ಕಾಫಿ ಗಿಡಗಳನ್ನು ಅರಣ್ಯ ಅಧಿಕಾರಿಗಳು ನೆಲಸಮ ಮಾಡಿರುವುದು.
ಕೊಪ್ಪ: ಮೇಗುಂದ ಹೋಬಳಿ ದೇವಗೊಡ್ ಗ್ರಾಮದ ಮೇದಕ್ಕಿ ಸರ್ವೆ ನಂ.78ರಲ್ಲಿ ಅರಣ್ಯ ಜಾಗ ಒತ್ತುವರಿ ಮಾಡಿ ಕಾಫಿ ಗಿಡ ಬೆಳೆದಿದ್ದ ದಿನೇಶ್ ಎಂಬುವವರ ತೋಟಕ್ಕೆ ಭೇಟಿ ನೀಡಿದ ಆರು ಜನ ಅರಣ್ಯ ಅಧಿಕಾರಿಗಳು, ಹೂ ಬಿಟ್ಟಿದ್ದ ಮೂರು ಎಕರೆಗೂ ಅಧಿಕ ಕಾಫಿ ತೋಟವನ್ನು ಕಡಿದು ನೆಲಸಮ ಮಾಡಿದ ಘಟನೆ ನಡೆದಿದೆ.
ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿರುವ ತೋಟದ ಮಾಲಿಕ ದಿನೇಶ್ ಹೆಬ್ಟಾರ್, ಅರಣ್ಯ ಇಲಾಖೆ ಅಧಿಕಾರಿಗಳು ನಮಗೆ ಮಾಹಿತಿ ನೀಡದೆ ಏಕಾಏಕಿ ಬಂದು ಕಾಫಿ ಗಿಡಗಳನ್ನು ತೆರವುಗೊಳಿಸಿದ್ದಾರೆ. ಈ ಭೂಮಿಯ ವಿವಾದ ನ್ಯಾಯಾಲಯದಲ್ಲಿದೆ. ನ್ಯಾಯಾಲಯದ ತಡೆಯಾಜ್ಞೆಯಿದ್ದರೂ ಅಧಿಕಾರಿಗಳು ನ್ಯಾಯಾಲಯಕ್ಕೆ ಗೌರವ ನೀಡದೆ ಕಾಫಿ ಗಿಡಗಳನ್ನು ತೆರವುಗೊಳಿಸಿದ್ದಾರೆ ಹಾಗೂ ಉಪ ವಲಯ ಅರಣ್ಯಾಧಿಕಾರಿಯೊಬ್ಬರು ಹತ್ತು ದಿನದ ಹಿಂದೆ ನನ್ನನ್ನು ಸಂಪರ್ಕಿಸಿ ಇಪ್ಪತ್ತು ಸಾವಿರ ರೂ. ಪಡೆದು ಒತ್ತುವರಿ ಜಾಗವನ್ನು ಖುಲ್ಲಾ ಮಾಡುವುದಿಲ್ಲ ಎಂದಿದ್ದರು. ಬುಧವಾರ ನಮಗೆ ಮಾಹಿತಿ ನೀಡದೆ ಖುಲ್ಲಾ ಮಾಡಿದ್ದಾರೆಂದು ದೂರಿದ್ದಾರೆ.
ಆರ್‌ಎಫ್‌ಒ ಪ್ರವೀಣ್ ಕುಮಾರ್ ಪತ್ರಿಕೆಯೊಂದಿಗೆ ಮಾತನಾಡಿ, ಒತ್ತುವರಿ ಜಾಗವನ್ನು ಬಿಟ್ಟುಕೊಡುವುದಾಗಿ ಈ ಹಿಂದೆಯೇ ತೋಟದ ಮಾಲಿಕರು ಲಿಖೀತವಾಗಿ ಇಲಾಖೆಗೆ ತಿಳಿಸಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಗೆ ಸಂಬಂಧಿಸಿದ ಒತ್ತುವರಿಯನ್ನು ತೆರವುಗೊಳಿಸಲಾಗಿದೆ ಹಾಗೂ ಇಲಾಖೆಯ ಕಿರಿಯ ಅಧಿಕಾರಿಯೊಬ್ಬರು ಒತ್ತುವರಿ ತೆರವುಗೊಳಿಸುವುದಿಲ್ಲವೆಂದು ಹಣ ಪಡೆದ ಆರೋಪವಿದೆ. ಆ ಅಧಿಕಾರಿ ಮೇಲೆ ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.