ಒಳಚರಂಡಿ ಕಾಮಗಾರಿ ಮುಗಿಯೋದ್ಯಾವಾಗ?

Team Udayavani, Jun 10, 2018, 5:27 PM IST

ಚಿತ್ರದುರ್ಗ: ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅನುಷ್ಠಾನಗೊಳಿಸಿರುವ ಸಮಗ್ರ ಒಳಚರಂಡಿ ಯೋಜನೆ ಕಾಮಗಾರಿ ಕುಂಟುತ್ತಾ ಸಾಗಿದೆ. ಹೀಗಾಗಿ ಪ್ರಗತಿ ಸಾಧಿಸಲು ಇನ್ನೂ ಸಾಧ್ಯವಾಗಿಲ್ಲ.

2001ರ ಜನಗಣತಿ ಪ್ರಕಾರ ಜಿಲ್ಲೆಯ ಜನಸಂಖ್ಯೆ 1,25,170 ಇದೆ. 2043ನೇ ಸಾಲಿನ ಅಂದಾಜು ಜನಸಂಖ್ಯೆ 3,69,600 ಆಧರಿಸಿ ಯೋಜನೆ ತಯಾರಿಸಲಾಗಿದೆ. ತಲಾವಾರು 110 ಲೀಟರ್‌ನಂತೆ ಮತ್ತು 2028ಕ್ಕೆ 28.84 ದಶಲಕ್ಷ ಲೀಟರ್‌, 2043ಕ್ಕೆ 40.79 ದಶಲಕ್ಷ ಲೀಟರ್‌ ಎಂದು ಅಂದಾಜಿಸಿ ನಗರದ ಒಳಚರಂಡಿ ಯೋಜನೆ ಕಾಮಗಾರಿಯನ್ನು ನಿರ್ವಹಿಸಲಾಗುತ್ತಿದೆ.

ಚಿತ್ರದುರ್ಗ ನಗರ, ಮೆದೇಹಳ್ಳಿ, ಪಿಳ್ಳೆಕೇರನಹಳ್ಳಿ, ಮಠದ ಕುರುಬರಹಟ್ಟಿ, ಗಾರೆಹಟ್ಟಿ ಒಳಗೊಂಡಂತೆ ಐದು ವಲಯಗಳನ್ನಾಗಿ ವಿಂಗಡಿಸಲಾಗಿದೆ. ಒಳಚರಂಡಿ ಕಾಮಗಾರಿಯ ಮ್ಯಾನ್‌ಹೋಲ್‌ ನಿರ್ಮಾಣ ಮತ್ತು ಗ್ರಾಮಸಾರ ಕೊಳವೆ ಮಾರ್ಗಗಳ ಅಳವಡಿಕೆಗೆ ಟೆಂಡರ್‌ ಮೂಲಕ ಮೆ| ಶುಭಾ ಸೇಲ್ಸ್‌ ಬೆಂಗಳೂರು ಇವರಿಗೆ ವಹಿಸಿಕೊಡಲಾಗಿದೆ. ಆದರೆ ಮ್ಯಾನ್‌ಹೋಲ್‌ ಮತ್ತು ಗ್ರಾಮಸಾರ ಕೊಳವೆಗಳ ನಿಮಾರ್ಣ ಕಾರ್ಯ ವಿವಿಧ
ವಾರ್ಡ್‌ಗಳಲ್ಲಿ ಪ್ರಗತಿಯಲ್ಲಿದೆ ಎನ್ನುವುದು ಕಡತಕ್ಕಷ್ಟೇ ಸೀಮಿತವಾಗಿದೆ. 

2015ರಲ್ಲೇ ಪೂರ್ಣಗೊಳ್ಳಬೇಕಿತ್ತು: ಚಿತ್ರದುರ್ಗ ನಗರದ ಸಮಗ್ರ ಒಳಚರಂಡಿ ಯೋಜನೆಯನ್ನು ರಾಜ್ಯ ಸರ್ಕಾರ ಶೇ. 70, ಆರ್ಥಿಕ ಸಂಸ್ಥೆ ಶೇ. 20 ಹಾಗೂ ಸ್ಥಳೀಯ ನಗರಸಭೆ ಶೇ. 10 ಅನುದಾನದಂತೆ 78.47 ಕೋಟಿ ರೂ.ಗಳಲ್ಲಿ ಅನುಷ್ಠಾನಗೊಳಿಸಲಾಗಿದೆ. 2015ರ ಡಿಸೆಂಬರ್‌ ಅಂತ್ಯದ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ ಕಾಮಗಾರಿ ಅವಧಿ ಪೂರ್ಣಗೊಂಡು ಮೂರು ವರ್ಷ ಕಳೆದರೂ ಸಮಗ್ರ ಒಳಚರಂಡಿ ಯೋಜನೆ ಕಾಮಗಾರಿ ಪೂರ್ಣಗೊಳ್ಳದೇ ಇರುವುದರಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.

ಚಿತ್ರದುರ್ಗ ನಗರದಲ್ಲಿ 11,840 ಮ್ಯಾನ್‌ ಹೋಲ್‌(ಆಳ ಗುಂಡಿಗಳು) ನಿರ್ಮಾಣ ಮಾಡಬೇಕಿದ್ದು, ಕೇವಲ 8818 ಮ್ಯಾನ್‌ಹೋಲ್‌ ನಿರ್ಮಾಣ ಮಾಡಲಾಗಿದೆ. ಆಂತರಿಕ ಅಥವಾ ಔಟ್‌ ಫಾಲ್‌ ಕೊಳವೆ ಮಾರ್ಗಗಳ ಉದ್ದ 284 ಕಿಮೀ ಇದ್ದು ಇದುವರೆಗೆ 252 ಕಿಮೀ ಮಾರ್ಗದಲ್ಲಿ ಪೈಪ್‌ ಲೈನ್‌ ಹಾಕಲಾಗಿದೆ. ನಗರದ 16,500 ಮನೆಗಳಿಗೆ ಯುಜಿಡಿ ಸಂಪರ್ಕ ಕಲ್ಪಿಸಬೇಕಿದ್ದು ಕೇವಲ 5000 ಮನೆಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಇನ್ನುಳಿದ 11,500 ಮನೆಗಳಿಗೆ ಮಲಿನ ನೀರಿನ ಪೈಪ್‌ಲೈನ್‌ ಸಂಪರ್ಕ ಕಲ್ಪಿಸಬೇಕಾಗಿದೆ. ಇದಕ್ಕಾಗಿ 3022 ಮ್ಯಾನ್‌ ಹೋಲ್‌(ಆಳ ಗುಂಡಿಗಳು)ತೋಡಿ ಪೈಪ್‌ಲೈನ್‌ ಸಂಪರ್ಕ ಕಲ್ಪಿಸಬೇಕಿದೆ. ಇಡೀ ಯೋಜನೆಯಲ್ಲಿ 15 ಕಡೆಗಳಲ್ಲಿ ಕೊಳವೆ ಮಾರ್ಗವಿದ್ದು, ಸ್ಥಳ ತಕರಾರು ಇರುವುದರಿಂದ ಕಾಮಗಾರಿ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಇದರ ಜೊತೆಗೆ ಮಾರುತಿ ನಗರದಲ್ಲಿ 150 ಮೀಟರ್‌ ಇದ್ದದ ಮುಖ್ಯ ಕೊಳವೆ ಮಾರ್ಗ ಅಳವಡಿಸಬೇಕಾಗಿದ್ದು ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ವಾಜ್ಯ ನಡೆಯುತ್ತಿದೆ.

ಯುಜಿಡಿ ಯೋಜನೆಯಡಿ ಬಾಕಿ ಇರುವ ಮೂರು ವೆಟ್‌ವೆಲ್‌ಗ‌ಳಿಗೆ ಪಂಪಿಂಗ್‌ ಮೆಶಿನರಿ ಕಾಮಗಾರಿಗೆ ಕಳೆ ಮಾರ್ಚ್‌ 7ರಂದು ಮೇ|| ಎಸ್‌.ಬಿ.ಎಂ ಪ್ರಾಜೆಕ್ಟ್ ಪುಣೆ ಇವರೊಂದಿಗೆ ಗುತ್ತಿಗೆ ಮಾಡಿಕೊಳ್ಳಲಾಗಿದ್ದು ಕಾಮಗಾರಿ ಆರಂಭವಾಗಬೇಕಿದೆ. ಅಲ್ಲದೆ 11 ಕೆವಿ ತ್ವರಿತ ವಿದ್ಯುತ್‌ ಮಾರ್ಗಗಳನ್ನು ಕಾಮಗಾರಿಗಳಿಗೆ ಟೆಂಡರ್‌ ಕರೆಯಲಾಗಿದ್ದು ಗುತ್ತಿಗೆದಾರರನ್ನು ನೇಮಕ ಮಾಡಲಾಗಿದೆ. ಮುಂದಿನ ವಾರ ಅಂದರೆ ಜೂನ್‌ 16ರಂದು ಕರಾರು ಒಪ್ಪಂದ ಮಾಡಿಕೊಂಡು ಆಗಸ್ಟ್‌ನಲ್ಲಿ ಕಾಮಗಾರಿ ಆರಂಭಿಸಲು ಉದ್ದೇಶಿಸಲಾಗಿದೆ.

ಯೋಜನಾ ವೆಚ್ಚದಲ್ಲೂ ಏರಿಕೆ: 2011ರಲ್ಲಿ ಯುಜಿಡಿ ಯೋಜನೆಗೆ 78.47 ಕೋಟಿ ರೂ.ಗೆ ಟೆಂಡರ್‌ ಕರೆದು ಕಾಮಗಾರಿ ಆರಂಭಿಸಲಾಗಿತ್ತು. ಪೂರ್ಣಗೊಳಿಸಲು ವಿಳಂಬ ಮಾಡಿದ್ದರಿಂದ ಯೋಜನಾ ವೆಚ್ಚದಲ್ಲಿ ಏರಿಕೆಯಾಗಿದೆ. 95.78 ಕೋಟಿ ರೂ.ಗೆ ಯೋಜನಾ ವೆಚ್ಚ ಏರಿಕೆ ಆಗಿರುವುದರಿಂದ 17.31 ಕೋಟಿ ರೂ. ಅಧಿಕ ಹೊರೆ ಬಿದ್ದಿದೆ. ಇಷ್ಟೆಲ್ಲ ಆದರೂ ಸರ್ಕಾರ ಮಾರ್ಚ್‌ 12ರಂದು 95.78 ಕೋಟಿ ರೂ.ಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿರುವುದು ಸೋಜಿಗ ಮೂಡಿಸಿದೆ.

„ಹರಿಯಬ್ಬೆ ಹೆಂಜಾರಪ್ಪ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಚಳ್ಳಕೆರೆ: ಚಳ್ಳಕೆರೆ ನಗರವನ್ನು ಸುಂದರ ನಗರವನ್ನಾಗಿಸಲು ಹಾಗೂ ಪರಿಸರವನ್ನು ಸಂರಕ್ಷಣೆ ಮಾಡುವಲ್ಲಿ ಎಲ್ಲರೂ ಸಹಕಾರ ನೀಡಬೇಕಿದೆ. ವಿಶೇಷವಾಗಿ ಚಳ್ಳಕೆರೆ ನಗರವನ್ನು...

  • ಹೊಳಲ್ಕೆರೆ: ಕುಳಿತ ವ್ಯಕ್ತಿಗೆ ಅನುಭವಗಳಾಗುವುದಿಲ್ಲ. ಅನನ್ಯ ಅನುಭವಗಳಾಗಬೇಕಾದರೆ ಜಗತ್ತಿನ ಪರ್ಯಟನೆ ಮಾಡಬೇಕು. ಆಗ ಮಾತ್ರ ಅನುಭವ ಪಡೆಯಲು ಸಾಧ್ಯ ಎಂದು ಚಿತ್ರದುರ್ಗ...

  • ಚಿತ್ರದುರ್ಗ: ಮಾಜಿ ಮುಖ್ಯಮಂತ್ರಿ ದಿ| ಡಿ. ದೇವರಾಜ ಅರಸು ಧ್ವನಿ ಇಲ್ಲದವರ ಧ್ವನಿಯಾಗಿದ್ದರು. ಅವರ ಸಮಾಜಮುಖೀ ಕೆಲಸಗಳು, ಪ್ರಗತಿಪರ ಯೋಜನೆಗಳು ಅವಿಸ್ಮರಣೀಯ ಎಂದು...

  • ನಾಯಕನಹಟ್ಟಿ: ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರಕ್ಕೆ ಇದೇ ಮೊದಲ ಬಾರಿಗೆ ಬಿ. ಶ್ರೀರಾಮುಲು ಮೂಲಕ ಸಚಿವ ಸ್ಥಾನ ದೊರೆತಿದ್ದು, ಜನರ ನಿರೀಕ್ಷೆಗಳು ಗರಿಗೆದರಿವೆ. ಶಾಶ್ವತ...

  • ಚಿತ್ರದುರ್ಗ: ಡಾ| ಬಾಬು ಜಗಜೀವನರಾಮ್‌ ದೇಶದ ಪ್ರಧಾನಿಯಾಗಬೇಕಿತ್ತು. ಆದರೆ ಜಾತಿ ರಾಜಕಾರಣದ ಕಾರಣಕ್ಕೆ ಅವಕಾಶ ಕಳೆದುಕೊಂಡರು ಎಂದು ಡಾ| ಶಿವಮೂರ್ತಿ ಮುರುಘಾ...

ಹೊಸ ಸೇರ್ಪಡೆ