ಕ್ಯಾಂಪ್ಕೋದಿಂದ ಕೊಬ್ಬರಿ ಫ್ಯಾಕ್ಟರಿ: ಸತೀಶ್ಚಂದ್ರ

Team Udayavani, Jul 12, 2019, 10:07 AM IST

ಮಂಗಳೂರು: ಕಾಂಪ್ಕೋ ವತಿಯಿಂದ ಚಾಕೋಲೆಟ್‌ ಫ್ಯಾಕ್ಟರಿ ಮಾದರಿಯಲ್ಲೇ ಕೊಬ್ಬರಿ ಫ್ಯಾಕ್ಟರಿ (ಕೊಕೋನಟ್‌ ಫ್ಯಾಕ್ಟರಿ) ಸ್ಥಾಪಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಅಧ್ಯಕ್ಷ ಎಸ್‌.ಆರ್‌. ಸತೀಶ್ಚಂದ್ರ ಹೇಳಿದರು.

ಕಾಂಪ್ಕೋ ಕೇಂದ್ರ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಕ್ಯಾಂಪ್ಕೋ ಸಂಸ್ಥಾಪನ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೊಕೋನಟ್‌ ಪ್ಯಾಕ್ಟರಿಯಲ್ಲಿ ತೆಂಗಿನ ಚಾಕೊಲೆಟ್‌, ತೆಂಗಿನ ಹಾಲು, ತೆಂಗಿನ ಹುಡಿ ಸೇರಿದಂತೆ ವಿವಿಧ ಉತ್ಪನ್ನಗಳು ತಯಾರಾಗಲಿವೆ. ಹಲಸಿನ ಹಣ್ಣಿನಿಂದ ಚಾಕಲೆಟ್‌ ತಯಾರಿಯ ಪ್ರಸ್ತಾವನೆ ಕೂಡ ಆರ್‌ ಆ್ಯಂಡ್‌ ಡಿ ವಿಭಾಗದಲ್ಲಿದೆ ಎಂದರು.

50,000 ರೂ. ನೆರವು ಚಿಂತನೆ
ಕ್ಯಾಂಪ್ಕೋದ ಸಕ್ರಿಯ ಸದಸ್ಯರು ಮತ್ತು ಅವರ ತೋಟದ ಕಾರ್ಮಿಕರಿಗೆ ಅವಘಡಗಳು ಸಂಭವಿಸಿದರೆ 50,000 ರೂ. ನೆರವು ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಸಹಕಾರಿ ಹಾಗೂ ಸಾಹಿತಿ ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಮಾತನಾಡಿ, ಅಡಿಕೆ ಬೆಳೆಗಾರರನ್ನು ವ್ಯಾಪಾರಿಗಳು ನಿಯಂತ್ರಿಸುತ್ತಿದ್ದ ಕಾಲ ಘಟ್ಟದಲ್ಲಿ ವಾರಣಾಶಿ ಸುಬ್ರಾಯ ಭಟ್ಟರ ಪ್ರಯತ್ನದ ಫಲವಾಗಿ ಸ್ಥಾಪನೆ ಗೊಂಡ ಕ್ಯಾಂಪ್ಕೋ ಬೆಳೆಗಾರರನ್ನು ಸ್ವತಂತ್ರರನ್ನಾಗಿಸಿದ್ದಲ್ಲದೆ ಆರ್ಥಿಕವಾಗಿ ಸದೃಢಗೊಳಿಸಿದೆ ಎಂದರು.

ಮುಖ್ಯ ಅತಿಥಿಯಾಗಿದ್ದ ನಿವೃತ್ತ ಐಎಎಸ್‌ ಅಧಿಕಾರಿ ವಿ.ವಿ. ಭಟ್‌ ಮಾತನಾಡಿ, ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎಂಬುದಾಗಿ ಉಲ್ಲೇಖೀಸ ಲಾಗುತ್ತಿದೆ. ಈ ಬಗ್ಗೆ ದೇಶದ ವಿವಿಧ ಸಂಶೋಧನ ಸಂಸ್ಥೆಗಳು ಒಟ್ಟು ಸೇರಿ ವಾಸ್ತವಿಕ ಅಂಶಗಳ ಬಗ್ಗೆ ಸಂಘಟಿತ ಸಂಶೋಧನೆ ನಡೆಸುವ ಆಗತ್ಯವಿದೆ. ಇದರ ವರದಿ ಹೆಚ್ಚು ಮಹತ್ವ ಪಡೆದುಕೊಳ್ಳುತ್ತದೆ ಎಂದರು.

ಕ್ಯಾಂಪ್ಕೋದ ಪ್ರಥಮ ವ್ಯವಸ್ಥಾಪಕ‌ ನಿರ್ದೇಶಕ ಜಿ.ಕೆ. ಸಂಗಮೇಶ್ವರ ದಿಕ್ಸೂಚಿ ಭಾಷಣ ಮಾಡಿ, 25 ಲಕ್ಷ ರೂ.ಗಳ ಸಾಲದ ಹಣದೊಂದಿಗೆ ಅಡಿಕೆ ಖರೀದಿ ವ್ಯವಹಾರ ಆರಂಭಿಸಿದ ಕ್ಯಾಂಪ್ಕೋ ಸಂಸ್ಥೆ ಇಂದು ರಾಷ್ಟ್ರ ವ್ಯಾಪಿಯಾಗಿರುವುದು ಹೆಮ್ಮೆಯ ವಿಚಾರ ಎಂದರು. ಕ್ಯಾಂಪ್ಕೋದಲ್ಲೂ ಪ್ರಸ್ತುತವಿ ರುವ ನಿವೃತ್ತಿ ವಯಸ್ಸನ್ನು 58ರಿಂದ 60 ವರ್ಷಕ್ಕೇರಿಸಬೇಕು ಎಂದವರು ಮನವಿ ಮಾಡಿದರು.

ಕೃಷಿ ಪರಿಕರ ಸಂಶೋಧಕ ನಿಟಿಲೆ ಮಹಾಬಲೇಶ್ವರ ಭಟ್ಟರನ್ನು ಸಮ್ಮಾನಿಸಲಾಯಿತು. ವ್ಯವಸ್ಥಾಪಕ ನಿರ್ದೇಶಕ ಸುರೇಶ್‌ ಭಂಡಾರಿ ಎಂ. ಸ್ವಾಗತಿಸಿ, ಉಪಾಧ್ಯಕ್ಷ ಶಂಕರನಾರಾಯಣ ಭಟ್‌ ಖಂಡಿಗೆ ವಂದಿಸಿದರು.

ಪ್ರಗತಿಯ ದಾಪುಗಾಲು
1973ರ ಜು. 11ರಂದು 3,500 ಸದಸ್ಯರೊಂದಿಗೆ ಪ್ರಾರಂಭಗೊಡ ಕ್ಯಾಂಪ್ಕೊ ಪ್ರಸ್ತುತ 1,12,000ಕ್ಕೂ ಮಿಕ್ಕಿ ಸದಸ್ಯರನ್ನು ಹೊಂದಿದೆ. ಆರಂಭದಲ್ಲಿದ್ದ 1 ಕೋ.ರೂ. ವಾರ್ಷಿಕ ವ್ಯವಹಾರ ಇಂದು 1,872 ಕೋ.ರೂ.ಗೆ ತಲುಪಿ, 150 ಶಾಖೆಗಳನ್ನು ಹೊಂದಿದೆ. ಸ್ಥಾಪನೆಯ ಮರುದಿನವೇ ಅಂದರೆ 1973ರ ಜು. 12ರಂದು ಮಂಗಳೂರಿನ ಪುರಭವನದಲ್ಲಿ ನಡೆದಿದ್ದ ಅಡಿಕೆ ಏಲಂನಲ್ಲಿ 25 ಲಕ್ಷ ರೂ. ಮೊತ್ತದಲ್ಲಿ ಅಡಿಕೆ ಖರೀದಿ ಮಾಡಿದ ಹೆಗ್ಗಳಿಕೆ ಕ್ಯಾಂಪ್ಕೋ ಸಂಸ್ಥೆಯದ್ದಾಗಿದೆ ಎಂದು ಅಧ್ಯಕ್ಷ ಎಸ್‌.ಆರ್‌. ಸತೀಶ್ಚಂದ್ರ ವಿವರಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ