ಮಂಗಳೂರು ಮಹಾನಗರ ಪಾಲಿಕೆ: ಮೇಯರ್‌-ಉಪ ಮೇಯರ್‌ ಮೀಸಲಾತಿ ಬದಲಾವಣೆ ಸಾಧ್ಯತೆ

Team Udayavani, Dec 3, 2019, 4:18 AM IST

ಮಹಾನಗರ: ಮಂಗಳೂರು ಮಹಾನಗರ ಪಾಲಿಕೆಯ ಮೇಯರ್‌-ಉಪ ಮೇಯರ್‌ಗಳಿಗಾಗಿ ಈ ಹಿಂದೆ ಪ್ರಕ ಟಿತ ಮೀಸಲಾತಿಯು ಕೆಲವೇ ದಿನಗಳಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ. ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಉಪಚುನಾವಣೆಯ ಬಳಿಕ ಪಾಲಿಕೆಯ ಹೊಸ ಮೇಯರ್‌-ಉಪ ಮೇಯರ್‌ಗಾಗಿ ಹೊಸ ಮೀಸಲಾತಿಯನ್ನು ಸರಕಾರ ಪ್ರಕಟಿಸುವ ನಿರೀಕ್ಷೆಯಿದ್ದು, ಇದು ಆಡಳಿತ ಪಕ್ಷ ಬಿಜೆಪಿಯಲ್ಲಿ ಹೊಸ ಬೆಳವಣಿಗೆಗಳಿಗೆ ವೇದಿಕೆ ಒದಗಿಸಿದೆ.

ಹಿಂದಿನ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರಕಾರದ ಅವಧಿಯಲ್ಲಿ ಮಂಗಳೂರು ಪಾಲಿಕೆಗೆ ವಾರ್ಡ್‌ ಮೀಸಲಾತಿ ಪ್ರಕಟಗೊಂಡ ಬೆನ್ನಲ್ಲೇ ಮೇಯರ್‌, ಉಪಮೇಯರ್‌ ಮೀಸಲಾತಿಯನ್ನೂ ಕೂಡ ಪ್ರಕಟಿಸಲಾಗಿತ್ತು. ಇದರಂತೆ ಈ ಬಾರಿ ಮೇಯರ್‌ ಪದವಿ “ಹಿಂದುಳಿದ ವರ್ಗ ಎ’, ಉಪಮೇಯರ್‌ “ಸಾಮಾನ್ಯ ಮಹಿಳೆ’ ಮೀಸಲಾಗಿದೆ. ಆದರೆ ಸಾಮಾನ್ಯವಾಗಿ ಯಾವುದೇ ಸರಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಆಗಿನ ಒಟ್ಟು ರಾಜಕೀಯ ಚಿತ್ರಣವನ್ನು ಗಮನದಲ್ಲಿಟ್ಟುಕೊಂಡು ಮೀಸಲಾತಿಯನ್ನು ಪ್ರಕಟಿಸುವ ಪರಿಪಾಠ ಬೆಳೆದುಬಂದಿದೆ. ಹೀಗಾಗಿ ಹಿಂದಿನ ಸರಕಾರ ನಿಗದಿಪಡಿಸಿರುವ ಮೀಸಲಾತಿಯನ್ನೇ ಮುಂದುವರಿಸುವುದು ಅಥವಾ ಬದಲಾಯಿಸುವುದು ಅಧಿಕಾರದಲ್ಲಿರುವ ಸರಕಾರದ ವಿವೇಚನೆಗೆ ಬಿಟ್ಟದ್ದಾಗಿರುತ್ತದೆ. ಈ ಕಾರಣದಿಂದ ಈ ಬಾರಿಯ ಪ್ರಕಟಿತ ಮೀಸಲಾತಿ ಬದಲಾವಣೆಗೆ ಸರಕಾರ ಮನಸ್ಸು ಮಾಡಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಅನುಭವಸ್ಥರಿಗೆ ಮಣೆ
ಆಡಳಿತ ಪಕ್ಷ ಬಿಜೆಪಿಯು ಪೂರ್ಣ ಬಹುಮತದೊಂದಿಗೆ ಪಾಲಿಕೆಯಲ್ಲಿ ಈ ಬಾರಿ ಅಧಿಕಾರಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಸಾಕಷ್ಟು ಕಾರ್ಯಚಟುವಟಿಕೆಗಳನ್ನು ಕೈಗೊಳ್ಳಬೇಕಾದ ಅನಿವಾರ್ಯ ಬಿಜೆಪಿಗಿದೆ. ಹೀಗಾಗಿ ಪಾಲಿಕೆಯ ಆಡಳಿತದ ಬಗ್ಗೆ ಪೂರ್ಣ ಅನುಭವ ಇರುವವರಿಗೆ ಈ ಬಾರಿಯ ಮೇಯರ್‌ ಹುದ್ದೆ ನೀಡುವುದು ಅನಿವಾರ್ಯ ಎಂಬ ಅಭಿಪ್ರಾಯ ಬಿಜೆಪಿ ಪಾಳಯದಲ್ಲಿ ಕೇಳಿಬಂದಿದೆ.

ಸಾಮಾನ್ಯವಾಗಿ ಮೇಯರ್‌, ಉಪಮೇಯರ್‌ ಹುದ್ದೆ ಸಂದರ್ಭ ಅವರ್ತ ನೆಯಲ್ಲಿ (ರೊಟೇಶನ್‌) ಈ ಹಿಂದಿನ ಅವಧಿಯ ಮೀಸಲಾತಿ ಪರಿಗಣನೆಗೆ ಬರುವುದಿಲ್ಲ. ಹೊಸ ಅವಧಿಯ 5 ವರ್ಷಗಳ ಆಯ್ಕೆಯ ಸಂದರ್ಭ ಮಾತ್ರ ಅವರ್ತನೆ ಪರಿಗಣಿ ಸಲ್ಪಡುತ್ತವೆ. ಈ ಹಿನ್ನೆಲೆಯಲ್ಲಿ ಹೊಸದಾಗಿ ಮೀಸಲಾತಿ ನಿಗದಿಪಡಿಸಲು ಸರಕಾರಕ್ಕೆ ಸಮಸ್ಯೆ ಇಲ್ಲ. ಮಂಗಳೂರು ಪಾಲಿಕೆಯ ಚುನಾ ವಣೆಯ ಮತ ಎಣಿಕೆ ನ. 14ರಂದು ನಡೆದು ವಿಜಯಿ ಸದಸ್ಯರ ಘೋಷಣೆಯಾಗಿತ್ತು. ಇದರಂತೆ ಬಿಜೆಪಿಯು 44, ಕಾಂಗ್ರೆಸ್‌ 14, ಎಸ್‌ಡಿಪಿಐ 2 ಸ್ಥಾನಗಳನ್ನು ಪಡೆದಿತ್ತು.

ಕಾಂಗ್ರೆಸ್‌ ಆಡಳಿತ; 1 ವರ್ಷ ಮೇಯರ್‌ ಇರಲಿಲ್ಲ!
ಕಳೆದ ಬಾರಿಯ ಆಡಳಿತ ಅವಧಿ ಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿ ದ್ದರೂ ಪ್ರಾರಂಭದಲ್ಲಿ ಮೇಯರ್‌-ಉಪ ಮೇಯರ್‌ ಮೀಸಲಾತಿ ಬಗ್ಗೆ ಸರಕಾರ ಹೊರಡಿಸಿದ ಅಧಿಸೂಚನೆಯನ್ನು ಕೆಲವರು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ ಪರಿಣಾಮ ಮೇಯರ್‌-ಉಪಮೇಯರ್‌ ಆಯ್ಕೆ ನಡೆದಿರಲಿಲ್ಲ. ಒಂದು ವರ್ಷ ಪಾಲಿಕೆ ಸದಸ್ಯರಿಗೆ ಅಧಿಕಾರ ನಡೆಸಲೂ ಸಾಧ್ಯವಾಗಿರಲಿಲ್ಲ.

ಗಜೆಟ್‌ ನೋಟಿಫಿಕೇಷನ್‌ ಆಗಿಲ್ಲ!
ನೂತನ ಪಾಲಿಕೆಗೆ ಆಯ್ಕೆಯಾದವರ ಹೆಸರು ರಾಜ್ಯಪತ್ರದಲ್ಲಿ (ಗಜೆಟ್‌) ಪ್ರಕಟಗೊಳ್ಳಬೇಕು. ಈ ಪ್ರಕ್ರಿಯೆ ಇನ್ನೂ ಆಗಿಲ್ಲ. ಪ್ರಕಟಗೊಂಡ ಬಳಿಕವಷ್ಟೇ ನೂತನ ಸದಸ್ಯರ ಪ್ರತಿಜ್ಞಾ ಸ್ವೀಕಾರ, ಮೇಯರ್‌, ಉಪಮೇಯರ್‌ ಆಯ್ಕೆ ಕುರಿತು ದಿನ ನಿಗದಿ ಪ್ರಕ್ರಿಯೆ ನಡೆಯುತ್ತದೆ. ಇದರ ಮೊದಲೇ ಮೇಯರ್‌-ಉಪಮೇಯರ್‌ ಸ್ಥಾನದ ಮೀಸಲಾತಿಯು ಬದಲಾವಣೆಯಾಗುವ ಸಾಧ್ಯತೆಯಿದೆ. ಅನಂತರ ಮೇಯರ್‌ ಚುನಾವಣೆಗೆ ದಿನ ನಿಗದಿಗೆ ಮೈಸೂರು ಪ್ರಾದೇಶಿಕ ಆಯುಕ್ತರಿಗೆ ಮಂಗಳೂರು ಪಾಲಿಕೆಯಿಂದ ಪತ್ರ ರವಾನೆಯಾಗಲಿದ್ದು, ಇದರಂತೆ ಪ್ರಾದೇಶಿಕ ಆಯುಕ್ತರು ದಿನ ನಿಗದಿಗೊಳಿಸಲಿದ್ದಾರೆ.

ತೀರ್ಮಾನ ವಾಗಿಲ್ಲ
ಮಂಗಳೂರು ಪಾಲಿಕೆಯ ಮೇಯರ್‌-ಉಪಮೇಯರ್‌ ಮೀಸಲಾತಿ ಕುರಿತಂತೆ ಯಾವುದೇ ತೀರ್ಮಾನವನ್ನು ಇಲ್ಲಿಯವರೆಗೆ ತೆಗೆದುಕೊಂಡಿಲ್ಲ. ಸರಕಾರವೇ ಈ ಕುರಿತಂತೆ ತೀರ್ಮಾನ ಕೈಗೊಳ್ಳಲಿದೆ.
 - ವೇದವ್ಯಾಸ ಕಾಮತ್‌, ಶಾಸಕರು


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ