ಮಂಗಳೂರು ಗೋಡೆ ಬರಹ ಪ್ರಕರಣ: ಯಾರನ್ನೂ ಬಂಧಿಸಿಲ್ಲ: ಪೊಲೀಸ್ ಕಮಿಷನರ್
Team Udayavani, Dec 5, 2020, 7:20 AM IST
ಮಂಗಳೂರು: ಪ್ರಚೋದನಕಾರಿ ಗೋಡೆ ಬರಹ ಪ್ರಕರಣಗಳಿಗೆ ಸಂಬಂಧಿಸಿ ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಅವರು ತಿಳಿಸಿದ್ದಾರೆ.
“ಉದಯವಾಣಿ’ ಜತೆ ಮಾತನಾಡಿರುವ ಅವರು, “ಮಂಗಳೂರಿನಲ್ಲಿ ಕಳೆದ ವಾರ ಬೆಳಕಿಗೆ ಬಂದಿದ್ದ ಎರಡೂ ಗೋಡೆ ಬರಹ ಪ್ರಕರಣಗಳ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ಈ ಪ್ರಕರಣದಲ್ಲಿ ಸಾಕಷ್ಟು ಮಾಹಿತಿ ಸಂಗ್ರಹಿಸಲಾಗಿದೆ. ಈ ತನಿಖೆಯ ಭಾಗವಾಗಿ ಹಲವು ಮಂದಿ ಶಂಕಿತರನ್ನು ಈಗಾಗಲೇ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಆದರೆ, ಇಲ್ಲಿಯವರೆಗೆ ಯಾವುದೇ ವ್ಯಕ್ತಿಯನ್ನು ಬಂಧಿಸಿಲ್ಲ. ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಸತ್ಯಾಂಶ ಬಹಿರಂಗಪಡಿಸಲು ಸಾಧ್ಯವಾಗುತ್ತದೆ’ ಎಂದವರು ವಿವರಿಸಿದ್ದಾರೆ.
ವಿಶೇಷ ತನಿಖಾ ತಂಡಗಳು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಪ್ರಸ್ತುತ ಪ್ರಕರಣ ತನಿಖೆಯ ಹಂತದಲ್ಲಿ ಇರುವುದರಿಂದ ಹೆಚ್ಚಿನ ವಿವರಗಳನ್ನು ನೀಡುವಂತಿಲ್ಲ ಎಂದು ಆಯುಕ್ತರು ಹೇಳಿದ್ದಾರೆ.
ನ. 27ರಂದು ಬಿಜೈ ಸಮೀಪ ಕದ್ರಿ ಕಂಬಳ ಜಂಕ್ಷನ್‌ನ ಕಟ್ಟಡದ ಆವರಣ ಗೋಡೆಯಲ್ಲಿ ಹಾಗೂ ನ.29ರಂದು ಮಂಗಳೂರು ನ್ಯಾಯಾಲಯ ಆವರಣದ ಕಟ್ಟಡವೊಂದರ ಗೋಡೆಯಲ್ಲಿ ಉಗ್ರ ಪರವಾದ ಬರಹ ಕಾಣಿಸಿಕೊಂಡಿದ್ದವು.
ಮೂವರ ತೀವ್ರ ವಿಚಾರಣೆ
ಸಿಸಿ ಕೆಮರಾಗಳಲ್ಲಿ ದಾಖಲಾದ ಫುಟೇಜ್ ಹಾಗೂ ಮೊಬೈಲ್ ಟವರ್ ಲೊಕೇಶನ್ ಆಧಾರದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರತ್ಯೇಕ ಪೋಲಿಸ್ ತಂಡ ಬೆಂಗಳೂರು, ಶಿವಮೊಗ್ಗ ಮತ್ತಿತರ ಕಡೆಗೆ ತೆರಳಿ ವಿಚಾರಣೆ ನಡೆಸಿದ್ದಾರೆ. ಮೂವರು ವ್ಯಕ್ತಿಗಳ ಮೇಲೆ ಸಂಶಯ ಬಂದಿದ್ದು, ಅವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಗುತ್ತಿದೆ.